ಮೊಬೈಲ್ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳಲು ಇಲ್ಲಿನ ಗ್ರಾಮಸ್ಥರು 6 ಕಿ.ಮೀ ದೂರ ಹೋಗಬೇಕು!

ನಾಲ್ಕು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಶಿಲ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ...
ವೆಂಕಟಪ್ಪ ಮಲೆಕುಡಿ ಕುಟುಂಬ
ವೆಂಕಟಪ್ಪ ಮಲೆಕುಡಿ ಕುಟುಂಬ
ಬೆಳ್ತಂಗಡಿ: ನಾಲ್ಕು ವರ್ಷಗಳ ಹಿಂದೆ ಕೇರಳದ ಕಾಸರಗೋಡು ಜಿಲ್ಲೆಯ ಶಿಲ್ಪ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ವೆಂಕಟಪ್ಪ ಮಲೆಕುಡಿಯರನ್ನು ವಿವಾಹವಾಗಿ ತನ್ನ ಅತ್ತೆ ಮನೆಗೆ ಬಂದಿದ್ದಳು.
ತಾಯಿ ಮನೆಯಲ್ಲಿ ಮಿಕ್ಸರ್ ಗ್ರೈಂಡರ್ ನ್ನು ಅಡುಗೆಗೆ ಬಳಸಿಕೊಂಡು ಟಿವಿ ನೋಡಿಕೊಂಡಿದ್ದ ಶಿಲ್ಪಾಗೆ ಅತ್ತೆ ಮನೆಗೆ ಬಂದಾಗ ನಿಜಕ್ಕೂ ಆಘಾತವಾಗಿತ್ತು. ಅತ್ತೆ ಮನೆಯಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲ ಎಂದ ಮೇಲೆ ಟಿವಿ, ಮಿಕ್ಸರ್ ಗ್ರೈಂಡರ್, ಟ್ಯೂಬ್ ಲೈಟ್ ಮಾತೆಲ್ಲಿಂದ? ಬೆಳ್ತಂಗಡಿಯ ಸುಲ್ಕೇರಿ-ಮೊಗ್ರುವಿನಲ್ಲಿರುವ ಮಲ್ಗೆಬೈಲು  ಮಲೆಕುಡಿಯರ ಜನಾಂಗದವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಈ ಗ್ರಾಮದಲ್ಲಿ ಸುಮಾರು 27 ಮಲೆಕುಡಿಯರ ಕುಟುಂಬಗಳಿವೆ. ಅರಣ್ಯ ಭಾಗದಲ್ಲಿರುವ ಈ ಗ್ರಾಮಸ್ಥರು ದಶಕಗಳಿಂದ ತಮ್ಮ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಹೋರಾಡುತ್ತಿದ್ದಾರೆ. ಹಳೆ ಕಾಲದಲ್ಲಿ ಜನರು ಜೀವನ ಸಾಗಿಸುತ್ತಿದ್ದಂತೆ ಇಂದಿಗೂ ಇವರ ಪರಿಸ್ಥಿತಿಯಿದೆ.
ಪರಿಶಿಷ್ಟ ಜನಾಂಗದ ಈ ಜನರು ತಮ್ಮ ಜನಪ್ರತಿನಿಧಿಗಳಲ್ಲಿ ಕೇಳುವುದು ಎರಡನ್ನೇ, ಅದು ವಿದ್ಯುತ್ ಸಂಪರ್ಕ ಮತ್ತು ರಸ್ತೆ. ಸಮಾಜ ಕಲ್ಯಾಣ ಇಲಾಖೆ ನೀಡಿದ ಸೌರವಿದ್ಯುತ್ ನಿಂದಲೇ ಪ್ರತಿ ಮನೆಯಲ್ಲಿ 3ರಿಂದ 4 ಬಲ್ಬ್ ಗಳು ಉರಿಯುತ್ತವೆ. ಪ್ರತಿ ಮನೆಗೆ ಒಂದು ನೀರಿನ ಟ್ಯಾಪ್ ಇದೆ. ನಕ್ಸಲ್ ಪೀಡಿತ ಈ ಗ್ರಾಮಕ್ಕೆ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ನೀರಿನ ಸಂಪರ್ಕಕ್ಕೆ ಟ್ಯಾಪ್ ಒದಗಿಸಿದ್ದಾರೆ.
ರೇಡಿಯೊದಲ್ಲಿ ವಿದ್ಯುತ್ ಸಂಪರ್ಕವನ್ನು ಆನ್ ಲೈನ್ ನಲ್ಲಿ ಪಡೆಯಿರಿ ಎಂಬ ಮಾಹಿತಿ ಬರುತ್ತದೆ. ಆದರೆ ನಮಗೆ ಯಾವುದೇ ಅಧಿಕಾರಿಗಳು ಸಹಕಾರ ಮಾಡುತ್ತಿಲ್ಲ ಎನ್ನುತ್ತಾರೆ ವೆಂಕಟಪ್ಪ ಮಲೆಕುಡಿ. ಗ್ರಾಮದಲ್ಲಿ ಮೊಬೈಲ್ ಬಳಸುವವ ಕೆಲವರ ಪೈಕಿ ವೆಂಕಟಪ್ಪ ಮಲೆಕುಡಿ ಕೂಡ ಒಬ್ಬರು. ಆದರೆ ಮೊಬೈಲ್ ನ ಬ್ಯಾಟರಿ ಚಾರ್ಜ್ ಮಾಡಬೇಕೆಂದರೆ ಪ್ರತಿಸಲ 6 ಕಿಲೋ ಮೀಟರ್ ದೂರ ಹೋಗಿ ಚಾರ್ಚ್ ಮಾಡಿಕೊಂಡು ಬರಬೇಕು.
ಈ ಗ್ರಾಮಸ್ಥರ ಮನೆಗಳಿಗೆ ಹೋಗಲು ಧೂಳು ತುಂಬಿದ ಕಿರಿದಾದ ದಾರಿಯಿದೆ. 200 ಮೀಟರ್ ಉದ್ದಕ್ಕೆ ಸಿಮೆಂಟ್ ರಸ್ತೆಯಿದೆ. ಒಂದು ಆಟೋರಿಕ್ಷಾ ಹೋಗುವಷ್ಟು ಮಾತ್ರ ರಸ್ತೆ ಅಗಲವಾಗಿದೆ. ಗ್ರಾಮದ ಬಹುತೇಕ ಮಂದಿ ಪ್ರಯಾಣಕ್ಕೆ ಆಟೋರಿಕ್ಷಾವನ್ನೇ ನಂಬಿಕೊಂಡಿರುವುದು. ಒಮ್ಮೆ ಹೋಗಿ ಬರಬೇಕೆಂದರೆ 100ರಿಂದ 150 ರೂಪಾಯಿ ನೀಡಬೇಕು ಎನ್ನುತ್ತಾರೆ ಆಟೋಚಾಲಕ ಸಂತೋಷ್. ಹತ್ತಿರದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 6 ಕಿಲೋ ಮೀಟರ್ ಉದ್ದದ ಹಾದಿಯಲ್ಲಿ ಸಣ್ಣ ಸೇತುವೆಯಿದ್ದು ಅದು ಯಾವ ಕ್ಷಣದಲ್ಲಿಯಾದರೂ ಮುರಿದು ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲ ಬಂತೆಂದರೆ ಸಾಕು, ಈ ಗ್ರಾಮಸ್ಥರ ಬದುಕು ಯಾತನಾಮಯ.
2014ರಲ್ಲಿ ಸಂಸದ ನಳೀನ್ ಕುಮಾರ್ ಕಟೀಲು ಇಲ್ಲಿಗೆ ವೋಟು ಕೇಳಿಕೊಂಡು ಬಂದಿದ್ದರು. ರಸ್ತೆ ಮತ್ತು ವಿದ್ಯುತ್ ಸಂಪರ್ಕ ಬಿಟ್ಟು ಬೇರೆ ಏನು ಬೇಕಾದರೂ ಕೇಳಿ ಎಂದು ಹೇಳಿದರು. ಆದರೆ ನಮಗೆ ಬೇಕಿರುವುದು ಅದು ಎರಡೇ ಎನ್ನುತ್ತಾರೆ ವೆಂಕಟಪ್ಪ ಮಲೆಕುಡಿ. ಇವರು ಓದಿದ್ದು ಕೇವಲ 8ನೇ ತರಗತಿಯವರೆಗೆ, ಆದರೂ ಆನ್ ಲೈನ್ ಪೋರ್ಟಲ್ ನಲ್ಲಿ ಗ್ರಾಮದಲ್ಲಿ ವಿದ್ಯುತ್ ಸಂಪರ್ಕ ಪಡೆಯುವುದು ಹೇಗೆ ಎಂದು ತಿಳಿದುಕೊಳ್ಳುವ ಕುತೂಹಲ ಹೊಂದಿದ್ದಾರೆ. ಕಳೆದ 15 ವರ್ಷಗಳಿಂದ ಅದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಕಾರ್ಕಳದ ಶಾಸಕ ಸುನಿಲ್ ಕುಮಾರ್ ಮಲೆಕುಡಿಯ ಗ್ರಾಮಸ್ಥರಿಗೆ ವಿದ್ಯುತ್ ಒದಗಿಸಿಕೊಡುವುದಾಗಿ ಹೇಳುತ್ತಾರೆ, ಹಾಗಾದರೆ ನಮ್ಮ ಕ್ಷೇತ್ರದ ಶಾಸಕರು, ಸಂಸದರಿಗೆ ಏಕೆ ಸಾಧ್ಯವಾಗುವುದಿಲ್ಲ, ಇದು ಅರಣ್ಯ ಪ್ರದೇಶವಾಗಿರುವುದರಿಂದ ಇತಿಮಿತಿಗಳಿವೆ, ಆದರೆ ಮನಸ್ಸಿದ್ದರೆ ಎಲ್ಲದಕ್ಕೂ ಮಾರ್ಗವಿದೆ, ಜನಪ್ರತಿನಿಧಿಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ಕೃಷ್ಣಪ್ಪ ಮಲೆಕುಡಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com