ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸೋಮಣ್ಣ ಆಪ್ತ ಲಕ್ಷ್ಮೀನಾರಾಯಣ್ ಆ್ಯಂಡ್ ಟೀಂ

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿಯಾಗಿ ಟಿಕೆಟ್ ಪಡೆದ ತೇಜಸ್ವಿ ಸೂರ್ಯ ಅವರ ಆಯ್ಕೆ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಬಿಜೆಪಿ...
ಕಾಂಗ್ರೆಸ್ ಸೇರಿದ ಸೋಮಣ್ಣ ಆಪ್ತ ಲಕ್ಷ್ಮೀನಾರಾಯಣ್ ಆ್ಯಂಡ್ ಟೀಂ
ಕಾಂಗ್ರೆಸ್ ಸೇರಿದ ಸೋಮಣ್ಣ ಆಪ್ತ ಲಕ್ಷ್ಮೀನಾರಾಯಣ್ ಆ್ಯಂಡ್ ಟೀಂ
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿಯಾಗಿ ಟಿಕೆಟ್ ಪಡೆದ ತೇಜಸ್ವಿ  ಸೂರ್ಯ ಅವರ ಆಯ್ಕೆ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದ ಬೆನ್ನಲ್ಲೇ ಬಿಜೆಪಿ ನಾಯಕ ವಿ. ಸೋಮಣ್ಣ ಅವರ ಪರಮಾಪ್ತ ಮಾಜಿ ಉಪ ಮೇಯರ್ ಎಂ ಲಕ್ಷ್ಮೀನಾರಾಯಣ್ ಹಾಗೂ ಅವರ ತಂಡ ಸೋಮವಾರ ಬಿಜೆಪಿ ತೊರೆದು ಕಾಂಗ್ರೆಸ್‍ ಸೇರ್ಪಡೆಯಾದರು.
ಇಂದು ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್  ಅವರು ಎಂ.ಲಕ್ಷ್ಮೀ ನಾರಾಯಣ್ ಅವರಿಗೆ ಕಾಂಗ್ರೆಸ್ ಶಾಲು ಹೊದಿಸಿ, ಪಕ್ಷದ ಬಾವುಟ ನೀಡಿ ಸ್ವಾಗತ ಕೋರಿದರು. 
ವಿ ಸೋಮಣ್ಣ ಅವರ ಪರಮಾಪ್ತರಾಗಿದ್ದ ಅವರು ಬಿಬಿಎಂಪಿ ಉಪ ಮಹಾಪೌರರಾಗಿ ಸೇವೆ ಸಲ್ಲಿಸಿದ್ದಾರೆ.  ಅವರೊಂದಿಗೆ 100ಕ್ಕೂ ಹೆಚ್ಚು ಸ್ಥಳೀಯ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಆ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.
ಈ ವೇಳೆ ಮಾತನಾಡಿದ ದಿನೇಶ್ ಗುಂಡೂರಾವ್, ಲಕ್ಷ್ಮೀ ನಾರಾಯಣ ಅವರು ವಿಜಯನಗರ,  ಚಿಕ್ಕಪೇಟೆಯಲ್ಲಿ ಪ್ರಭಾವ ಹೊಂದಿದ್ದು, ಈ ಬಾರಿ ಅವರ ನಾಯಕತ್ವವು ನಮ್ಮ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಅವರಿಗೆ ಹೆಚ್ಚಿನ ಬಲ ತುಂಬಲಿದೆ ಎಂದರು.
ಎಂ.ಲಕ್ಷ್ಮೀನಾರಾಯಣ್ ಮಾತನಾಡಿ, ಬಿಜೆಪಿಯ ನಾಯಕರೊಬ್ಬರನ್ನು ನಂಬಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದೆ. ಆದರೆ ಬಿಜೆಪಿಯಲ್ಲಿ ಉತ್ತಮ ವಾತಾವರಣವಿಲ್ಲ. ಸರ್ವಾಧಿಕಾರಿ ಧೋರಣೆಯಿಂದ ಬೇಸತ್ತು ಬಿಜೆಪಿ ತೊರೆದಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಅವರ ಋಣ ನನ್ನ ಮೇಲಿದೆ. ಅದಕ್ಕಾಗಿ ವಾಪಸ್ ಮಾತೃಪಕ್ಷ ಕಾಂಗ್ರೆಸ್ ಗೆ ಬಂದಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಕಾಂಗ್ರೆಸ್ ಪಕ್ಷ ತಮಗೆ ಎಲ್ಲಾ ಅಧಿಕಾರ, ಸ್ಥಾನಮಾನಗಳನ್ನು ನೀಡಿತ್ತು. ಆದರೆ ತಾವು ನಂಬಿದ ನಾಯಕ ತಮಗೆ ಕೈಕೊಟ್ಟರು ಎಂದು ಪರೋಕ್ಷವಾಗಿ ವಿ.ಸೋಮಣ್ಣ ವಿರುದ್ಧ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಲಕ್ಷ್ಮೀ ನಾರಾಯಣ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com