ತೇಜಸ್ವಿ ಸೂರ್ಯ ತೇಜೋವಧೆ ಆರೋಪದ ಪ್ರಕರಣ: ಮಾಧ್ಯಮಗಳ ಮೇಲಿನ ನಿರ್ಬಂಧ ತೆರವು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್ .ಎಸ್. ತೇಜಸ್ವಿ ಸೂರ್ಯ ಅವರ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ನಗರದ ಸಿವಿಲ್ ಕೋರ್ಟ್ ವಿಧಿಸಿರುವ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿದೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು:  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ  ಅಭ್ಯರ್ಥಿ ಎಲ್ .ಎಸ್. ತೇಜಸ್ವಿ ಸೂರ್ಯ ಅವರ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ  ನಗರದ ಸಿವಿಲ್ ಕೋರ್ಟ್ ವಿಧಿಸಿರುವ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿದೆ.

ಸಿವಿಲ್ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ದೆಹಲಿಯ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯ ಅಧ್ಯಕ್ಷ ಪ್ರೊಫೆಸರ್ ತ್ರಿಲೋಚನ ಶಾಸ್ತ್ರೀ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಕುರಿತಂತೆ ಕಾಯ್ದಿರಿಸಿದ ಮಹತ್ವದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್ ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ  ನ್ಯಾಯಪೀಠ ಇಂದು ಪ್ರಕಟಿಸಿದೆ.
ವಾದ  ಪ್ರತಿವಾದ ಆಲಿಸಿದ ನ್ಯಾಯಪೀಠ, ಪ್ರತಿಯೊಬ್ಬ ಮತದಾರನೂ ಕಣದಲ್ಲಿರುವ  ಅಭ್ಯರ್ಥಿ ಬಗೆಗಿನ ಮಾಹಿತಿಯನ್ನು ಅರಿಯುವ ಹಕ್ಕನ್ನು ಹೊಂದಿದ್ದಾನೆ. ಸಂವಿಧಾನದ 19(1) ಎ ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯ ಕೊಡಲಾಗಿದೆ. ಮಾನಹಾನಿ ಹೇಳಿಕೆ ಅಥವಾ ದೃಶ್ಯ ಬಿತ್ತರಗೊಳ್ಳುತ್ತದೆ ಎಂಬ ಅಂಶವನ್ನು ಪರಿಶೀಲಿಸಿದಾಗ ಯಾವುದೇ ಕ್ರಿಯೆ ಜರುಗಿದ ಮೇಲೆಯೇ ಅದು ಮಾನಹಾನಿಕಾರ ಹೌದೋ ಅಲ್ಲವೊ ಎಂಬುದನ್ನು ನಿರ್ಧರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟಿತು.
ಈ ಕಾರಣಗಳಿಗಾಗಿ ಪತ್ರಿಕೆ, ಟಿವಿ ಚಾನೆಲ್ ಗಳು, ಫೇಸ್ ಬುಕ್ , ಯುಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳು ತೇಜಸ್ವಿ ಸೂರ್ಯ ಅವರಿಗೆ ಸಂಬಂಧಿಸಿದ ಸುದ್ದಿ ಪ್ರಕಟಿಸುವ ಅಥವಾ ಕಾರ್ಯಕ್ರಮ ಪ್ರದರ್ಶಿಸುವುದಕ್ಕೆ ನಗರದ ಸಿವಿಲ್ ನ್ಯಾಯಾಲಯ ನಿರ್ಬಂಧ ವಿಧಿಸಿರುವುದು ಸರಿಯಲ್ಲ ಎಂದು ತೀರ್ಪು ಪ್ರಕಟಿಸಿತು.
ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.ಇದರಿಂದಾಗಿ  ತೇಜಸ್ವಿ ಸೂರ್ಯ ಸಿವಿಲ್ ನ್ಯಾಯಾಲಯದಲ್ಲಿ ಅಸಲು ದಾವೆ ಸಲ್ಲಿಸುವ ಮೂಲಕ ನನ್ನ ವಿರುದ್ಧ ಮಾಧ್ಯಮಗಳು ಯಾವುದೇ ತಪ್ಪು, ದುರುದ್ದೇಶಪೂರಿತ, ಮಾನಹಾನಿಗೊಳಿಸುವ ಮತ್ತು ನನ್ನ ಘನತೆಗೆ ಕುಂದು ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ನೀಡಬೇಕು ಎಂದು ಕೋರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com