ಮತಯಂತ್ರದಲ್ಲಿ ನನ್ನ ಕ್ರಮಸಂಖ್ಯೆ ಪತ್ತೆಹಚ್ಚಲು 5 ನಿಮಿಷ ತೆಗೆದುಕೊಂಡೆ: ಸುಮಲತಾ ಅಂಬರೀಷ್

ಇದೇ ಮೊದಲ ಸಲ ನನಗೆ ನಾನೇ ಮತ ಹಾಕಿಕೊಂಡಿದ್ದೇನೆ. ಇದೊಂದು ಹೊಸ ಅನುಭವವಾಗಿದ್ದು ಹೊಸ ಪ್ರಯಾಣ ಇಂದು...
ಮತದಾನದ ಹಕ್ಕು ಚಲಾಯಿಸಿದ ಗಣ್ಯರು
ಮತದಾನದ ಹಕ್ಕು ಚಲಾಯಿಸಿದ ಗಣ್ಯರು
ಬೆಂಗಳೂರು/ ಮಂಡ್ಯ: ಇದೇ ಮೊದಲ ಸಲ ನನಗೆ ನಾನೇ ಮತ ಹಾಕಿಕೊಂಡಿದ್ದೇನೆ. ಇದೊಂದು ಹೊಸ ಅನುಭವವಾಗಿದ್ದು ಹೊಸ ಪ್ರಯಾಣ ಇಂದು ಆರಂಭವಾಗಲಿದೆ ಇದು ಮಂಡ್ಯದಲ್ಲಿ ಗುರುವಾರ ಹಕ್ಕು ಚಲಾಯಿಸಿದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಹೇಳಿರುವ ಮಾತು. ಅವರು ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಮತ ಚಲಾಯಿಸಿದರು.
ಮಂಡ್ಯ ಜನರು ಕೊಳೆ, ನಿಷ್ಕಲ್ಮಷವನ್ನು ಕೊಚ್ಚಿ ಹಾಕಿದ್ದು ಇನ್ನು ಮುಂದೆ ಒಳ್ಳೆಯ ದಿನಗಳನ್ನು ಕಾಣಲಿದ್ದಾರೆ. ಮತಯಂತ್ರದಲ್ಲಿ ತಮ್ಮ ಕ್ರಮ ಸಂಖ್ಯೆ ಮತ್ತು ಹೆಸರು ಹುಡುಕಲು 5 ನಿಮಿಷ ತೆಗೆದುಕೊಂಡೆ ಎಂದು ಹೇಳಿದರು.
ಜಿಲ್ಲಾಡಳಿತ ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ಉತ್ತಮ ವ್ಯವಸ್ಥೆ ಮಾಡಿದ್ದು ಅದರ ಕಾರ್ಯವೈಖರಿ ತೃಪ್ತಿ ತಂದಿದೆ. ಆದರೂ ಕೂಡ ಕೆಲವರು ತಮ್ಮ ಬೆಂಬಲಿಗರನ್ನು ಗುರಿಯಾಗಿಟ್ಟುಕೊಂಡು ಕಾನೂನು ಸುವ್ಯವಸ್ಥೆಯನ್ನು ತಮ್ಮ ಕೈಗೆತ್ತಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಅವರ ಪತ್ನಿ ಚಿನ್ನಮ್ಮ ಹಾಸನ ಜಿಲ್ಲೆಯ ಪಡುವಲಹಿಪ್ಪೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಮಗ ಯತೀಂದ್ರ ಸಿದ್ದರಾಮಯ್ಯ ಮೈಸೂರಿನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ನಿಮ್ಮ ಒಂದು ಮತ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುತ್ತಿದೆ. ಹೀಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ವಾಸವಿ ವಿದ್ಯಾನಿಕೇತನಕ್ಕೆ ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾನು ಹಾಗೂ ಕುಟುಂಬದ ಸದಸ್ಯರೆಲ್ಲರೂ ಅನಂತ್ ಕುಮಾರ್ ಜೊತೆಯೇ ಬಂದು ಮತದಾನ ಮಾಡುತ್ತಿದ್ದೆವು. ಆ ಒಂದು ಸಂದರ್ಭ ಇದೀಗ ನನಗೆ ನೆನಪಾಗುತ್ತಿದೆ ಎಂದು ತನ್ನ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.
ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಅವರ ಕುಟುಂಬದವರು ಜಯನಗರ ಬಿಇಎಸ್ ಕಾಲೇಜಿಗೆ ಬಂದು ಮತದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ದಯವಿಟ್ಟು ನಿಮ್ಮ ಮತವನ್ನು ಚಲಾಯಿಸಿ. ವೋಟ್ ಮಾಡುವ ಮೂಲಕ ನಿಮ್ಮ ನಾಯಕರನ್ನೂ ನೀವು ಆಯ್ಕೆ ಮಾಡಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ಕೊಡಿ ಎಂದು ಭಾರತದ ಎಲ್ಲ ಪ್ರಜೆಗಳಲ್ಲೂ ನನ್ನದೊಂದು ವಿನಂತಿ ಎಂದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್, ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಇಂದು ಬೆಳಗ್ಗೆ ಮತದಾನ ಮಾಡಿದರು. ಪಿ.ಸಿ.ಮೋಹನ್‌  ಮತಗಟ್ಟೆ ಸಂಖ್ಯೆ 143ರಲ್ಲಿ  ಕುಟುಂಬ ಸಮೇತವಾಗಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.  ಪ್ರಕಾಶ್ ರಾಜ್ ಸೈಂಟ್ ಜೋಸೆಫ್ ಸ್ಕೂಲ್ ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com