ಮತದಾರರ ಪಟ್ಟಿಯಿಂದ ಲಕ್ಷಾಂತರ ಹೆಸರು ರದ್ದು, ತನಿಖೆಗೆ ಆರ್ ಅಶೋಕ್ ಆಗ್ರಹ

ರಾಜ್ಯದಲ್ಲಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದು, ಈ ಬಗ್ಗೆ ಚುನಾವಣಾ....
ಆರ್ ಅಶೋಕ್
ಆರ್ ಅಶೋಕ್
ಬೆಂಗಳೂರು: ರಾಜ್ಯದಲ್ಲಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಒತ್ತಾಯಿಸಿದ್ದಾರೆ.
ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಠ 50 ರಿಂದ 60 ಸಾವಿರ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ. ಕೆಲವೆಡೆ ಹೆಂಡತಿ, ಮತ್ತೆ ಕೆಲವೆಡೆ ಗಂಡನ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಆಡಳಿತಾರೂಢ ಮೈತ್ರಿ ಸರ್ಕಾರದ ಒತ್ತಡಕ್ಕೆ ಮಣಿದು ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಹೆಸರು ಅಳಿಸಿಹಾಕಿದ್ದಾರೆ ಎಂದು ಆರೋಪಿಸಿದರು. 
ಚುನಾವಣೆಯಲ್ಲಿ ಮತ ಚಲಾಯಿಸಲು ಅಮೆರಿಕಾದಿಂದ ಬಂದಿದ್ದವರಿಗೆ ನಿರಾಶೆಯಾಗಿದೆ. ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಮತಹಾಕಲು ಬಂದವರು ಮತದಾನ ಮಾಡದಿದ್ದರೆ ಹೇಗೆ?. ಇದರಲ್ಲಿ ಅಧಿಕಾರಿಗಳ ಕೈವಾಡವಿದ್ದು, ಇದಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುಬೇಕು. ಹೆಸರು ತೆಗೆಸುವ ಮುನ್ನ ನೋಟೀಸ್ ನೀಡಬೇಕಿತ್ತು. ಯಾರೂ ಕೂಡ ತಮ್ಮ ಹೆಸರನ್ನು ತೆಗೆದುಹಾಕಿ ಎಂದು ಕೇಳಿಲ್ಲ. ಹೀಗಿರುವಾಗ ಯಾಕೆ ಡಿಲೀಟ್ ಮಾಡಲಾಗಿದೆ ಎಂಬ ಬಗ್ಗೆ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು. 
ಏಪ್ರಿಲ್ 16 ರಂದು ಮತದಾರರ ಪಟ್ಟಿಯಲ್ಲಿದ್ದ ಹೆಸರುಗಳನ್ನು ಮರುದಿನ ತೆಗೆಹಾಕಲಾಗಿದೆ. ಎಲ್ಲೆಲ್ಲಿ ವಿದ್ಯಾವಂತ ಹಾಗೂ ಬಿಜೆಪಿ ಪರ ಒಲವಿರುವ ವ್ಯಕ್ತಿಗಳಿದ್ದಾರೋ ಅಂತಹ ಕಡೆಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಈ ರೀತಿ ಮಾಡಲಾಗಿದೆ. ಚುನಾವಣಾ ಆಯೋಗ ಈ ಕೂಡಲೇ ತನಿಖೆ  ನಡೆಸಿ ತಪ್ಪಿತಸ್ತರಿಗೆ ಶಿಕ್ಷೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು.  ಈ ಕುರಿತು ಆಯೋಗಕ್ಕೆ ನಮ್ಮ ಪಕ್ಷದಿಂದ ದೂರು ನೀಡುವ ಜತೆಗೆ ಕಾನೂನು ಹೋರಾಟ ನಡೆಸಲಾಗುವುದು ಎಂದರು. 
ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಬೆಂಗಳೂರಿನ ನಾಲ್ಕೂ ಕ್ಷೇತ್ರಗಳು ಸೇರಿದಂತೆ 10ಕ್ಕೂ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ಎರಡನೇ ಹಂತದಲ್ಲೂ 12 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು. 
ಮಂಡ್ಯದಲ್ಲಿ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿ ಸುಮಲತಾ  ಗೆಲುವು ಸಾಧಿಸಲಿದ್ದಾರೆ. ಮಂಡ್ಯ, ಹಾಸನದಲ್ಲಿ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತ ಕಚ್ಚಾಟ ಬಿಜೆಪಿಗೆ ಲಾಭವಾಗಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸೋಲಿನ ಭೀತಿಯಿಂದ ಹತಾಶೆಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ನಂತರ  ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯ ಅವರಿಂದಲೇ ಪತನಗೊಳ್ಳುತ್ತದೆ. ಇದಕ್ಕೆ ಅವರೇ ಮಹೂರ್ತ (ಟೈಮ್ ಬಾಂಬ್) ಕೂಡ ನಿಗದಿ ಮಾಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com