ತುಮಕೂರು: ಮುದ್ದಹನುಮೇಗೌಡ, ರಾಜಣ್ಣ ನಾಮಪತ್ರ ವಾಪಸ್, ದೇವೇಗೌಡರ ಹಾದಿ ಸುಗಮ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಬಂಡಾಯ ಸಾರಿದ್ದ ಹಾಲಿ ಸಂಸದ, ಹಾಗೂ ಮಾಜಿ ಶಾಸಕರು ತಣ್ಣಗಾಗಿದ್ದಾರೆ.
ರಾಜಣ್ಣ  ಮತ್ತು ಮುದ್ದಹನುಮೇಗೌಡ
ರಾಜಣ್ಣ ಮತ್ತು ಮುದ್ದಹನುಮೇಗೌಡ
ಬೆಂಗಳೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಬಂಡಾಯ ಸಾರಿದ್ದ ಹಾಲಿ ಸಂಸದ, ಹಾಗೂ ಮಾಜಿ ಶಾಸಕರು ತಣ್ಣಗಾಗಿದ್ದಾರೆ.
ನಾಮಪತ್ರ ಹಿಂಡಪೆಯಲು ಕೊನೆಯ ದಿನವಾದ ಶುಕ್ರವಾರ ನಾಮಪತ್ರ ವಾಪಸ್ ಪಡೆಯುವ ಮೂಲಕ ಮೈತ್ರಿ ಅಭ್ಯರ್ಥಿಗೆ ಎದುರಾಗಿದ್ದ ಆತಂಕವನ್ನು ದೂರ ಮಾಡಿದ್ದಾರೆ.
ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿದ್ದ ಮುದ್ದಹನುಮೇಗೌಡ, ಸಂಸದರನ್ನು ಬೆಂಬಲಿಸಿ ದೇವೇಗೌಡರನ್ನು ವಿರೋಧಿಸಿ ನಾಮಪತ್ರ ಸಲ್ಲಿಸಿದ್ದ ಕೆ.ಎನ್.ರಾಜಣ್ಣ ಅವರನ್ನು ಪಕ್ಷದ ಹೈಕಮಾಂಡ್ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. 
ತಮ್ಮ  ನಾಮಪತ್ರವನ್ನು ರಾಜಣ್ಣ ಅವರೇ ವಾಪಸ್ ಪಡೆದುಕೊಂಡರೆ ಮುದ್ದಹನುಮೇಗೌಡ ಪರವಾಗಿ ಏಜೆಂಟ್  ರಾಯಸಂದ್ರ ರವಿಕುಮಾರ್ ಆಗಮಿಸಿ ನಾಮಪತ್ರವನ್ನು ವಾಪಸ್ ಪಡೆದುಕೊಂಡರು.
ಇಬ್ಬರು  ನಾಮಪತ್ರವನ್ನು ಹಿಂಪಡೆದ ಪರಿಣಾಮ ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದು, ಮಾಜಿ  ಪ್ರಧಾನಿ ದೇವೇಗೌಡರ ಹಾದಿ ಸುಗಮವಾದಂತಾಗಿದೆ. 
ಇದಕ್ಕೂ ಮೊದಲು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಇಂದು ಸಂಜಯ್ ನಗರದ ಮುದ್ದಹನುಮೇಗೌಡರ ನಿವಾಸಕ್ಕೆ ತೆರಳಿ ಮನವೊಲಿಸಿದರು.
ನಾಮಪತ್ರ ವಾಪಸ್ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ, ನಾಮಪತ್ರ ಹಿಂಪಡೆದಿದ್ದೇನೆ. ಪಕ್ಷದ ನಾಯಕರ ಮುಂದೆ ಯಾವುದೇ  ಬೇಡಿಕೆ ಇಟ್ಟಿರಲಿಲ್ಲ. ಪಕ್ಷದ ಹೈಕಮಾಂಡ್ ಸೂಚನೆಯಂತೆ ಕೆಲಸ ಮಾಡುತ್ತೇವೆ. ಮುದ್ದಹನುಮೇಗೌಡರಿಗೆ ತಮ್ಮ ಬೆಂಬಲವಿದೆ. ಹೈಕಮಾಂಡ್ ಆದೇಶದಂತೆ ಇಡೀ ಜಿಲ್ಲೆಯಲ್ಲಿ ದೇವೇಗೌಡರ ಪರವಾಗಿ ಕೆಲಸ  ಮಾಡುತ್ತೇವೆ ಎಂದರು.
ತುಮಕೂರು ಕಾಂಗ್ರೆಸ್ ನಲ್ಲಿ ಎರಡು ಬಣಗಳಿವೆ. ಒಂದು ಬಣ ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ  ಮಾಡಲು ಹೊರಟಿದೆ. ಇನ್ನೊಂದು ಬಣ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿ ರಾಹುಲ್  ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ನಾನು ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮತ್ತು  ರಾಹುಲ್ ಗಾಂಧಿ ಪ್ರಧಾನಿ ಮಾಡುವ ಬಣವಾಗಿದ್ದೇನೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಬಡವರ ಪರ ಕೆಲಸ  ಮಾಡಿದರೆ, ಜಿ.ಪರಮೇಶ್ವರ್ ಬಡವರ ಪರ ಕೆಲಸ ಮಾಡುವುದಿಲ್ಲ. ರಾಜ್ಯದಲ್ಲಿ ಯಾರು ರೈತರ ಪರ  ಕೆಲಸ ಮಾಡುತ್ತಾರೋ ಅವರೇ ನಮ್ಮ ನಾಯಕರು. ಉಪ ಮುಖ್ಯಮಂತ್ರಿಯಾಗಿ ಆರು ತಿಂಗಳಾದರೂ ಬಡವರ ಪರ ಯಾವ ಕೆಲಸ ಮಾಡಿದ್ದಾರೆ ಎನ್ನುವ ಮೂಲಕ ಉಸ್ತುವಾರಿ ಸಚಿವ ಪರಮೇಶ್ವರ್ ವಿರುದ್ಧ ಕೆ.ಎನ್.ರಾಜಣ್ಣ ನೇರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ರಾಯಸಂದ್ರ ರವಿ, ಪಕ್ಷದ ಉಳಿವಿಗಾಗಿ, ನಾಯಕರ ಮಾತನ್ನು ನಂಬಿ ಮುದ್ದಹನುಮೇಗೌಡ ನಾಮಪತ್ರ ವಾಪಸ್ಸು ಪಡೆದಿದ್ದಾರೆ. ಅವರಿಗೆ ಚುನಾವಣೆಯಲ್ಲಿ  ಮುಂಚೂಣಿ ಸ್ಥಾನಮಾನ ನೀಡಬೇಕು. ಹಾಗಾದರೆ ಮಾತ್ರ ಕಾರ್ಯಕರ್ತರು ಮತ್ತು  ನಾಯಕರು ಶ್ರಮಿಸುತ್ತಾರೆ. ಇಲ್ಲವಾದರೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com