ನಾಮಪತ್ರ ಸಲ್ಲಿಕೆಗೂ ಮುನ್ನವೇ ಸಿಎಂ ಕುಮಾರಸ್ವಾಮಿ ನಿಖಿಲ್ ಕ್ರಮಸಂಖ್ಯೆ ಘೋಷಣೆ: ಸುಮಲತಾ ಅಂಬರೀಷ್

ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುತ್ತದೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ...
ಸುದ್ದಿಗೋಷ್ಠಿಯಲ್ಲಿ ಸುಮಲತಾ ಅಂಬರೀಷ್
ಸುದ್ದಿಗೋಷ್ಠಿಯಲ್ಲಿ ಸುಮಲತಾ ಅಂಬರೀಷ್
ಮಂಡ್ಯ: ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುತ್ತದೆ ಎಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ತಮ್ಮ ಅಭ್ಯರ್ಥಿ ಗೆಲ್ಲಲು ಬೇಕಾದ ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಜಿಲ್ಲಾ ಚುನಾವಣಾಧಿಕಾರಿಯನ್ನು ಬದಲಾವಣೆ ಮಾಡಬೇಕು ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ಮಂಡ್ಯದ ತಮ್ಮ ಬಾಡಿಗೆ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾರ್ಚ್ 20ರಂದು ತಾವು ನಾಮಪತ್ರ ಸಲ್ಲಿಕೆ ಮಾಡಿದ ನಂತರ ಇಂದಿನವರೆಗಿನ ಬೆಳವಣಿಗೆಗಳ ಬಗ್ಗೆ ಮಾತನಾಡಿ ರಾಜ್ಯದಲ್ಲಿಯೇ ಮಂಡ್ಯ ಲೋಕಸಭಾ ಕ್ಷೇತ್ರ ಅತ್ಯಂತ ಸೂಕ್ಷ್ಮ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಜೆಡಿಎಸ್ ಅಭ್ಯರ್ಥಿ ನಿಖಿಲ್ ಕೆ. ನಾಮಪತ್ರ ಸಲ್ಲಿಸಿದ ದಿನ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ನಿಖಿಲ್ ಅವರ ಕ್ರಮಸಂಖ್ಯೆ 1 ಎಂದು ಅವತ್ತೇ ಪ್ರಕಟಿಸಿದ್ದರು. ನನ್ನ ಹೆಸರಿನಲ್ಲಿ ಮೂರು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಕ್ರಮಸಂಖ್ಯೆ ನೀಡುವಲ್ಲಿ ಆಗಿರುವ ಲೋಪ ಪ್ರಶ್ನಿಸಿದರೆ ದೆಹಲಿಯತ್ತ ಕೈ ತೋರಿಸುತ್ತಾರೆ. ನನ್ನ ಹೆಸರು ಸುಮಲತಾ ಎ. ಎಂದು. ನನ್ನ ಕ್ರಮಸಂಖ್ಯೆ 20 ಆಗಿದೆ. 19 ರಿಂದ 20ರ ಕ್ರಮಸಂಖ್ಯೆ ವರೆಗೂ ಸುಮಲತಾ ಎಂಬ ಹೆಸರಿನ ಬೇರೆ ಮೂರು ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆಯ ಕಾಲಂ 26ರಲ್ಲಿ ಅವಿಭಕ್ತ ಕುಟುಂಬದ ಸದಸ್ಯರ ಸ್ಥಿರಾಸ್ತಿ, ಚರಾಸ್ತಿ ವಿವರಗಳನ್ನು ಘೋಷಿಸಿಕೊಳ್ಳಬೇಕು. ಅದನ್ನು ಘೋಷಿಸಿಕೊಂಡಿಲ್ಲ. ನನ್ನ ಏಜೆಂಟ್ ಮದನ್‍ಕುಮಾರ್ ಅವರು ನಾಮಪತ್ರ ಪರಿಶೀಲನೆ ವೇಳೆ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಅದನ್ನು ಪರಿಗಣಿಸಿಲ್ಲ. ಮಂಡ್ಯದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ನಿಖಿಲ್ ಕುಮಾರಸ್ವಾಮಿ ಅಫಿಡವಿಟ್ ಸಲ್ಲಿಸುವಾಗ ಗೋಲ್​ಮಾಲ್​ ನಡೆದಿದೆ ಎಂಬುದನ್ನು ಸಾಬೀತುಪಡಿಸಲು ಜಿಲ್ಲಾಧಿಕಾರಿಯ ಬಳಿ ನಾಮಪತ್ರ ಸಲ್ಲಿಕೆ ವೇಳೆ ಮಾಡಲಾದ ವಿಡಿಯೋ ಚಿತ್ರೀಕರಣ ನೋಡಬೇಕೆಂದು ಕೇಳಿದವು. 2 ದಿನ ಕಾದರೂ ವಿಡಿಯೋ ಸಿಗಲಿಲ್ಲ.
ಈ ಬಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಕೇಳಿದಾಗ ನಾಮಪತ್ರ ಸಲ್ಲಿಕೆ ವೇಳೆ ಮಾಡಲಾದ ವಿಡಿಯೋ ಇರುವ ಕ್ಯಾಮೆರಾವನ್ನು ಮದುವೆ ಸಮಾರಂಭದ ವಿಡಿಯೋ ಚಿತ್ರೀಕರಣಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು. ಚುನಾವಣೆಗೆ ಸಂಬಂಧಿಸಿದ ಮಹತ್ವದ ದಾಖಲೆಯುಳ್ಳ ಕ್ಯಾಮೆರಾ ಬಗ್ಗೆ ಹೇಗೆ ಇಷ್ಟು ನಿರಾಸಕ್ತಿ ವಹಿಸುತ್ತಾರೆ? ಎಂದು ಸುಮಲತಾ ಅವರ ಚುನಾವಣಾ ಏಜೆಂಟ್​ ಮದನ್​ ಆಕ್ಷೇಪಿಸುವ ಮೂಲಕ ಜಿಲ್ಲಾಧಿಕಾರಿ ಮಂಜುಶ್ರೀ ಅವರ ಯಡವಟ್ಟನ್ನು ಬಯಲಿಗೆಳೆದಿದ್ದಾರೆ.
ನಾಮಪತ್ರ ಪರಿಶೀಲನೆಯ ಸಂಪೂರ್ಣ ವಿಡಿಯೋ ಕವರೇಜ್ ಮಾಡಬೇಕು. ಆದರೆ, ಕ್ರಮಸಂಖ್ಯೆ 19ರ ವರೆಗೆ ಮಾತ್ರ ವಿಡಿಯೋ ಕವರೇಜ್ ಆಗಿದೆ. ಮಧ್ಯ ಒಂದೂವರೆ ನಿಮಿಷ ವಿಡಿಯೋ ಕಟ್ ಆಗಿದೆ. ಇದು ಆಘಾತಕಾರಿ ವಿಷಯ. ಐಟಿ ದಾಳಿ ನಡೆದಾಗ ಮುಖ್ಯಮಂತ್ರಿಯವರು ಆದಾಯ ತೆರಿಗೆ ಕಚೇರಿ ಎದುರು ಕುಳಿತು ಧರಣಿ ನಡೆಸಿ ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು.
ಮುಖ್ಯಮಂತ್ರಿಗಳು ಚುನಾವಣಾಧಿಕಾರಿಗಳ ಕಚೇರಿಯನ್ನು ತಮ್ಮ ಕಚೇರಿಯಂತೆ ನಡೆಸಿಕೊಳ್ಳುತ್ತಿದ್ದಾರೆ. ನಮ್ಮ ಆರೋಪಗಳನ್ನು ಆಧಾರರಹಿತ ಎನ್ನುತ್ತಿದ್ದಾರೆ. ಹಾಗಿದ್ದರೆ ಚುನಾವಣಾಧಿಕಾರಿಗಳು ನಾಮಪತ್ರ ಪರಿಶೀಲನೆ ಮಾಡಿದ ವಿಡಿಯೋ ಮಾಡಿದ ಸಲಕರಣೆಗಳನ್ನು ಮದುವೆ ಸಮಾರಂಭಕ್ಕೆ ಕಳುಹಿಸಲಾಗಿದೆ ಎಂದು ಹೇಳಿರುವುದು ತಮಾಷೆ ವಿಷಯವೇ ಎಂದು ಪ್ರಶ್ನಿಸಿದರು.
ನಾನು ಹೋದ ಕಡೆಯಲ್ಲೆಲ್ಲ ನಿರಂತರವಾಗಿ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರತಿಯೊಂದಕ್ಕೂ ಆಕ್ಷೇಪಿಸಲಾಗುತ್ತಿದೆ. ಮಹತ್ವದ ವಿಡಿಯೋವನ್ನೇ ಸಂರಕ್ಷಿಸದಿರುವುದು ಬೇಜವಾಬ್ದಾರಿತನ. ನನಗೆ ನ್ಯಾಯ ಕೊಡಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ ಎಂದರು.
'ನಾನು ಮಂಡ್ಯದಲ್ಲಿ ಪ್ರಚಾರ ನಡೆಸಿದ ದಿನ ಇಡೀ ಮಂಡ್ಯದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಗಿತ್ತು. ಅದೇ ಜೆಡಿಎಸ್​ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪ್ರಚಾರದ ದಿನ ಸರ್ಕಾರದಿಂದಲೇ ಅಧಿಕೃತ ಆದೇಶ ಬಂದಿತ್ತು. ಯಾವುದೇ ಕಾರಣಕ್ಕೂ ಮಂಡ್ಯದಲ್ಲಿ ವಿದ್ಯುತ್​ ಸಂಪರ್ಕ ಕಡಿತಗೊಳಿಸುವಂತಿಲ್ಲ. ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಮಾಡುವುದರಿಂದ ವಿದ್ಯುತ್​ ಸಂಪರ್ಕ ಕಡಿತಗೊಳಿಸುವಂತಿಲ್ಲ ಎಂದು ಎಸ್​ಪಿ ಮೂಲಕ ಅಧಿಕೃತ ಆದೇಶ ಹೊರಡಿಸಿದ್ದರು.
ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್​ ಜೊತೆಗೂ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿ ಕೂಡ ರಾಜಕೀಯ ನಾಯಕನೇ. ಹೀಗಾಗಿ, ನೀತಿಸಂಹಿತೆಯ ಉಲ್ಲಂಘನೆ. ಮುಖ್ಯಮಂತ್ರಿಗಳು ಈ ರೀತಿಯ ಆದೇಶ ಮಾಡುವಂತಿಲ್ಲ ಎಂದು ಹೇಳಿದ್ದಾರೆ. ಇಂದು ನನ್ನ ಸುದ್ದಿಗೋಷ್ಠಿಯ ಲೈವ್​ ಪ್ರಸಾರವಾಗಬಾರದೆಂದು ಇಂದು ಕೂಡ ಕೇಬಲ್ ಸಂಪರ್ಕ ಕಡಿತಗೊಳಿಸಲಾಗಿದೆ' ಎಂದು ಸುಮಲತಾ ಆರೋಪಿಸಿದ್ದಾರೆ.
ಸುಮಲತಾ ಅಂಬರೀಶ್​ ಅವರ ಚುನಾವಣಾ ಏಜೆಂಟ್​ ಮದನ್ ಕುಮಾರ್ ಮಾತನಾಡಿ​, ನಾಮಪತ್ರ ಸಲ್ಲಿಕೆ ವೇಳೆ ಆಕ್ಷೇಪ ಸಲ್ಲಿಕೆ ಮಾಡಲು ಕಾನೂನಿನಲ್ಲಿಯೇ ಅವಕಾಶವಿದೆ. ಆ ಪ್ರಕಾರ ನಿಖಿಲ್ ಕುಮಾರಸ್ವಾಮಿ ಅವರ ಅಫಿಡವಿಟ್​ ಫಾರ್ಮಾಟ್​ ಪ್ರಕಾರ ಇರಲಿಲ್ಲ. ಹೀಗಾಗಿ, ನಾವು ಆಕ್ಷೇಪ ಸಲ್ಲಿಸಿದ್ದೆವು. ಆದರೆ, ಅವರು ಅದನ್ನು ಲಿಖಿತ ರೂಪದಲ್ಲಿ ಆಕ್ಷೇಪ ಸಲ್ಲಿಸಬೇಕೆಂದು ಹೇಳಿದ್ದರು. ಆ ರೀತಿ ನಾವು ದೂರು ನೀಡಿದ್ದೆವು. ಆದರೆ, ಜಿಲ್ಲಾಧಿಕಾರಿ ನಿಖಿಲ್ ಅರ್ಜಿಯನ್ನು ಅಪ್ರೂವ್​ ಮಾಡಲಾಗಿದೆ ಎಂದು ಹೇಳಿದರು. ರಾತ್ರಿಯ ವೇಳೆ 'ನಿಮ್ಮಿಂದ ಯಾವುದೇ ಆಕ್ಷೇಪಣೆಗಳು ಬಂದಿಲ್ಲ' ಎಂದು ಚುನಾವಣಾಧಿಕಾರಿ ನನಗೆ ಮರುಉತ್ತರ ಬರೆದಿದ್ದಾರೆ. ಹೀಗೆ ಜಿಲ್ಲಾಧಿಕಾರಿ ಮಂಜುಶ್ರೀ ಅವರು ಕಾನೂನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com