

ಪ್ರಥಮ ಬಾರಿಗೆ ಜಾಟರು ಮತ್ತು ಮುಸ್ಲಿಮರು ಸ್ಪಷ್ಟವಾಗಿ ಎದುರುಬದುರು ಪಾಳಯದಲ್ಲಿ ನಿಂತು ಮತ ಹಾಕಲಿದ್ದಾರೆ.- ಇದು ಉತ್ತರ ಪ್ರದೇಶದ ಒನ್‌ಲೈನ್ ಚುನಾವಣಾ ಸಮೀಕ್ಷೆ. ಹೀಗೇಕೆ ಎಂಬ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳಬೇಕಾದರೆ ವೆಲ್‌ಕಮ್ ಟು ಮುಜಫರ್‌ನಗರ!
'ಬಿಜೆಪಿಗೆ ಮತ ಹಾಕೋಲ್ಲ ಎನ್ನುವವರಿಗೆ ನನ್ನ ಕತೆ ಹೇಳುತ್ತೇನೆ ಕೇಳಿ. ತನ್ನ ತಂಗಿಯ ಮಾನರಕ್ಷಣೆ ಮಾಡಲು ಹೋದ ನನ್ನ ಮಗನನ್ನು ಆ ಸಮುದಾಯದವರು ಬಡಿದು ಕೊಂದರು. ಮುಂದೊಮ್ಮೆ ನನ್ನ ಗತಿ ನಿಂಗೆ ಬರಬಾರದೆಂದರೆ ಬಿಜೆಪಿಗೆ ಮತ ನೀಡಿ. 75 ವರ್ಷ ಮುದುಕರ ಮೇಲೂ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಹೊರಿಸಲಾಯಿತು. ಇದನ್ನು ಪ್ರಶ್ನಿಸಿ ನಮ್ಮ ಮಹಿಳೆಯರು ಪೊಲೀಸ್ ಠಾಣೆ ಎದುರು ಧರಣಿಗೆ ಕುಳಿತಾಗ ಅವರ ಮೇಲೆ ಲಾಠಿಚಾರ್ಜ್ ಮಾಡಲಾಯಿತು. ಬಿಜೆಪಿ ಹೊರತು ಪಡಿಸಿ ಯಾರೊಬ್ಬರೂ ನಮ್ಮ ಸಹಾಯಕ್ಕೆ ಬರಲಿಲ್ಲ' -ಇದು ದಂಗೆಯ ಪ್ರಾರಂಭದಲ್ಲಿ ಕೊಲೆಯಾದ ಜಾಟ್ ಯುವಕನ ತಂದೆ ಬಿಜೆಪಿಯ ಅಭ್ಯರ್ಥಿ ಭರತೇಂದ್ರ ಸಿಂಗ್ ಪರ ಮಾಡಿದ ಪ್ರಚಾರ ಭಾಷಣ. ಭರತೇಂದ್ರ ದಂಗೆ ಪ್ರಕರಣದ ಆರೋಪಿಯೂ ಹೌದು.
'ನಾನು ಬಿಜ್ನೋರ್‌ನಲ್ಲಿ ಎಲ್ಲ ಮುಸ್ಲಿಮರ ಮನೆ ಮನೆಗೆ ಹೋಗಿ ಮುಸ್ಲಿಂ ಮತಗಳು ವಿಭಜನೆಯಾಗದಂತೆ ಬೇಡುತ್ತಿದ್ದೇನೆ. ಎಸ್‌ಪಿ ಮಾತ್ರವೇ ಇಲ್ಲಿ ಮುಸ್ಲಿಮ್‌ಗೆ ಟಿಕೆಟ್ ನೀಡಿದೆ. ದಂಗೆಗೊಳಗಾದಾಗ ಬಿಎಸ್‌ಪಿ ಮಾಡಿದ್ದೇನು? ಅಲ್ಲದೇ ಇಲ್ಲಿ ಅದು ಗುಜ್ಜರ್ ಹಿಂದುವನ್ನು ನಿಲ್ಲಿಸಿದೆ. ನಾನು ಎಂಥ ನೋವುಂಡಿದ್ದೇನೆ ಎಂಬುದನ್ನು ಮುಸ್ಲಿಮರು ನೋಡಿದ್ದಾರೆ.' -ಇದು ಎಪ್ಪತ್ತು ವರ್ಷದ ಮೊಹಮದ್ ಸಲೀಮ್‌ನ ಮಾತು. ದಂಗೆಯಲ್ಲಿ ಆತನ ಮಗ ಶಹನವಾಜ್ ಹತ್ಯೆಯಾಗಿದ್ದಾನೆ.
ಮೊದಲಿಂದಲೂ ಉತ್ತರ ಪ್ರದೇಶವೆಂಬುದು ಜಾತಿ ರಾಜಕಾರಣದ ಅಖಾಡವೇ. ಮೋದಿ ವರ್ಸಸ್ ರಾಹುಲ್ ಎಂಬಂತಾಗಿರುವ ಈ ಸಮರದಲ್ಲಾದರೂ ಅಭಿವೃದ್ಧಿ, ಭ್ರಷ್ಟಾಚಾರ ತುಸು ಚರ್ಚೆಯಾಗುತ್ತಿತ್ತೇನೋ? ಮುಜಫರ್‌ನಗರದ ದಂಗೆ ಅವ್ಯಾವುದಕ್ಕೂ ಅವಕಾಶವನ್ನೇ ಒದಗಿಸುತ್ತಿಲ್ಲ. ಅದರ ಕಾವು ಉ.ಪ್ರ.ದ ಹೆಚ್ಚಿನ ಪ್ರದೇಶಗಳಿಗೆ ಹರಡಿದೆ. 'ಬದ್ಲಾ, ಸೇಡು' ಅನ್ನೋದು ಅಮಿತ್ ಷಾ ಬಾಯಿಂದ ಬಂದಿರುವುದಷ್ಟೇ ಅಲ್ಲ, ಜನಗಳ ವಿಚಾರವೇ ಹಾಗಿದೆ ಅಲ್ಲಿ.
2009ರ ಚುನಾವಣೆಗೂ 2014 ಚುನಾವಣೆಗೂ ಬದಲಾದ ಸನ್ನಿವೇಶ ಎಂದರೆ, ಒಬಿಸಿ ಮತ್ತು ದಲಿತ ಮತಗಳು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಪೂರ್ಣ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವುದು. ಇದನ್ನು ಬೇಕಾದ್ರೆ 'ಮಹಾವಲಸೆ' ಅನ್ನಿ!. ಕಳೆದ ಚುನಾವಣೆಯಲ್ಲಿ ದಲಿತ ಹಾಗೂ ಒಬಿಸಿ ಮತಗಳೇ ಹೆಚ್ಚಾಗಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದು ಸಮಾಜವಾದಿ ಪಾರ್ಟಿ. 'ದಲಿತೋದ್ಧಾರ'ವೇ ಧ್ಯೇಯವಾಗಿಟ್ಟುಕೊಂಡಿದ್ದ ಬಿಎಸ್ಪಿ ಲೆಕ್ಕಾಚಾರ ಕೂಡಾ ಬುಡಮೇಲಾಗಿತ್ತು. ಆದರೆ, ಈ ಬಾರಿ ಎಸ್‌ಪಿ ಲೆಕ್ಕಾಚಾರ ತಲೆಗೆಳಗಾಗುವ ಎಲ್ಲ ಲಕ್ಷಣಗಳಿವೆ.
ದಂಗೆಯ ಕೇಂದ್ರವಾಗಿದ್ದ ಮುಜಫರ್‌ನಗರ ಕ್ಷೇತ್ರವನ್ನು ಹಾಲಿ ಪ್ರತಿನಿಧಿಸುತ್ತಿರುವುದು ಬಿಎಸ್ಪಿಯ ಖಾದಿರ್ ರಾಣಾ. ಹೀಗಿದ್ದಾಗ್ಯೂ, ಬಿಜ್ನೋರ್, ಕೈರಾನ್, ನಗಿನಾ ಕ್ಷೇತ್ರಗಳಲ್ಲಿ ಮುಸ್ಲಿಂ-ದಲಿತ-ಮೇಲ್ಚಾತಿ ಮತಗಳು ಬಿಜೆಪಿ ಮತ್ತು ಬಿಎಸ್ಪಿ ಪಾಲಾಗುವ ಸಾಧ್ಯತೆಗಳಿವೆ. ಆಸಕ್ತಿಕರ ಸಂಗತಿ ಎಂದರೆ, ದಂಗೆಗೆ ಎಸ್‌ಪಿ ಮತ್ತು ಬಿಎಸ್‌ಪಿಗಳೇ ಕಾರಣ ಎಂಬ ಮಾತು ಇಲ್ಲಿನವರದ್ದು. ಹೀಗಿದ್ದಾಗ್ಯೂ, ದಲಿತ ಅನ್ನುವ ಟ್ರಂಪ್‌ಕಾರ್ಡ್‌ನಿಂದಾಗಿ ಬಿಎಸ್‌ಪಿ ಕಡೆ ಅವರು ವಾಲುತ್ತಿದ್ದಾರೆ! 'ಮಾಯಾವತಿ ದಲಿತ ನಾಯಕಿ ಹೇಗಾಗುತ್ತಾರೆ? ನಾವು 17 ಒಬಿಸಿಗಳಿಗೆ ಉ.ಪ್ರ.ದಲ್ಲಿ ಟಿಕೆಟ್ ನೀಡಿದ್ದೇವೆ.' ಅಂತ ಹೋದಲ್ಲೆಲ್ಲ ಅಮಿತ್ ಷಾ ಸಹ ಒಂದಿಷ್ಟು ಮಂದಿಯನ್ನು ಸೆಳೆಯುತ್ತಿದ್ದಾರೆ.
"ಮುಸ್ಲಿಮ ಬಂಧುಗಳೇ ನಾನು ನಿಮ್ಮ ಭೇಟಿಗೆ ಆಗಮಿಸಬೇಕು ಎಂದುಕೊಂಡಿದ್ದೆ. ಆದರೆ, ಬರಲಿಲ್ಲ. ಯಾಕೆಂದರೆ, ನಾನೇನಾದರೂ ಅಂದು ಬಂದಿದ್ದರೆ, ಕೋಮು ದಂಗೆ ಪ್ರಚೋದಿಸಿ ಅದನ್ನು ಬಿಎಸ್ಪಿ ತಲೆಗೆ ಕಟ್ಟುವ ಷಡ್ಯಂತ್ರವನ್ನು ಎಸ್ಪಿ ರೂಪಿಸಿತ್ತು ಎಂಬುದರ ಬಗ್ಗೆ ನನಗೇ ಮಾಹಿತಿ ಇತ್ತು. ಹಾಗಾಗಿ ಬರಲಿಲ್ಲ. ಆದರೆ, ನಿಮ್ಮ ಬಗ್ಗೆ ನನಗೆ ನಿಜವಾದ ಕಾಳಜಿ ಇದೆ. ನನ್ನ ಹತ್ತಿರ ಈಗ ದಲಿತ ಮತಗಳಿವೆ. ಅವುಗಳಿಗೆ ನಿಮ್ಮ ಮತಗಳು ಸೇರಿದರೆ ಗೆಲವು ಸಾಧ್ಯ. ಐ ಛಟ ಉಛಟ್ಝಡಿ, ಐ ಛಟ ಡ್ಝಟ್ಜಿಟಜ, ಐ ಛಟ ಣ್ಟ್ಡ್ಠಡ"- ಹೀಗೆಂದು ಬಿಜ್ನೋರ್ ರ್ಯಾಲಿಯಲ್ಲಿ ಮಾಯಾವತಿ ಆಡಿದ ಮಾತುಗಳು ಅಲ್ಲಿನ ತಲ್ಲಣಕ್ಕೆ ಕನ್ನಡಿ ಹಿಡಿಯುತ್ತಿವೆ.
ಇಂಥ ಪರಿಸ್ಥಿತಿಯನ್ನು ತುಂಬಾ ನಾಜೂಕಾಗಿ ಬಿಜೆಪಿ ತನ್ನ ಪರವಾಗಿ ಬಳಸಿಕೊಳ್ಳಲು ಮುಂದಾಗಿದೆ. ಮತ್ತು ಅದರಲ್ಲಿ ಸ್ವಲ್ಪ ಯಶಸ್ವಿಯೂ ಆಗಿದೆ. ವಿಷಮ ಗಳಿಗೆಯನ್ನು ಅನುಕೂಲಕರ ಅವಕಾಶವನ್ನಾಗಿಸಿಕೊಳ್ಳುವಲ್ಲಿ ನಿಸ್ಸೀಮರಾಗಿರುವ ಅಮಿತ್ ಶಾ ಅವರು ಮುಜಫರ್‌ನಗರ ದಂಗೆ ಲಾಭವನ್ನು ಗರಿಷ್ಠ ಪ್ರಮಾಣದಲ್ಲಿಪಡೆಯಲು ತಂತ್ರ ರೂಪಿಸಿದ್ದಾರೆ. 'ದಂಗೆಯ ಫಲ'ವಾಗಿ ಜಾಟ್ ಸಮುದಾಯದ ಮತಗಳು ಸಂಪೂರ್ಣವಾಗಿ ಬಿಜೆಪಿಯತ್ತ ವಾಲಿಸಿದ್ದರೆ(ಈ ಜಾಟ್ ಸಮುದಾಯ ಮೊದಲು ಆರ್‌ಎಲ್‌ಡಿಯನ್ನೇ ಹೆಚ್ಚಾಗಿ ಬೆಂಬಲಿಸಿತ್ತು), ಒಬಿಸಿ ಮತಬುಟ್ಟಿಗೆ ಕೂಡ ಬಿಜೆಪಿ ಕೈ ಹಾಕಿದೆ. ಕೈರಾನ್, ಮುಜಫರ್‌ನಗರ, ಷಹರಾನ್‌ಪುರ ಸೇರಿದಂತೆ ಇನ್ನೂ ಕೆಲವು ಕ್ಷೇತ್ರಗಳ ಹಿಂದುಳಿದ ವರ್ಗಗಳು, ದಲಿತರ ನಾಯಕರ ಜತೆ ಅಮಿತ್ ಶಾ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ದಲಿತ ಮತ್ತು ಒಬಿಸಿಗೆ ಸೇರಿದ 17 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ! ವಿಶೇಷ ಅಂದರೆ, ಇಷ್ಟೇ ಪ್ರಮಾಣದಲ್ಲಿ ಬಿಎಸ್‌ಪಿ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಿದೆ.
ಇದೆಲ್ಲದರಿಂದ ಗೊತ್ತಾಗುವ ನಿಚ್ಚಳ ಸಂಗತಿ ಎಂದರೆ, "ಮೇಲ್ಜಾತಿ-ದಲಿತ-ಮುಸ್ಲಿಂ-ಒಬಿಸಿ" ಕಾಂಬಿನೇಷನ್ ಈ ಬಾರಿ ಎಸ್ಪಿಗೆ ಕೆಲಸ ಮಾಡುತ್ತಿಲ್ಲ. ಬದಲಾಗಿ ಅದು ಬಿಜೆಪಿ ಮತ್ತು ಬಿಎಸ್ಪಿಗೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ. ಇಲ್ಲಿನ ಈ ಬದಲಾವಣೆಗೆ ಮೇಲ್ನೋಟಕ್ಕೆ ದಂಗೆಯೇ ಕಾರಣವೆನಿಸಿದರೂ ಮೋದಿಯ ಪರಿಣಾಮವನ್ನು ಕೂಡಾ ಅಲ್ಲಗಳೆಯಲಾಗದು.
ಇನ್ನೂ ಇಂಟರೆಸ್ಟಿಂಗ್ ಅಂದ್ರೆ, ಈಗ ಬದ್ಧ ವೈರಿಗಳಾಗಿರುವ ಜಾಟ್ ಮತ್ತು ಮುಸ್ಲಿಮರು ಒಂದು ಕಾಲದಲ್ಲಿ ತುಂಬಾ ಸೌಹಾರ್ದತೆಯಿಂದ ಇದ್ದರು. ಅಂದರೆ, ಚರಣ್ ಸಿಂಗ್ ಇರೋವರೆಗೂ ಇವರಿಬ್ಬರ ಸಂಬಂಧಕ್ಕೆ ಧಕ್ಕೆ ಬಂದಿರಲಿಲ್ಲ. 1987ರ ನಂತರ, ಅಂದರೆ, ಚರಣಸಿಂಗ್ ತೀರಿದ ಬಳಿಕ, ಮುಸ್ಲಿಮರನ್ನು ಮುಲಾಯಂ ಸಿಂಗ್ ಯಾದವ್ ತುಸು ಹೆಚ್ಚಾಗಿ ಓಲೈಸಿದರೆ, ಜಾಟ್ ಸಮುದಾಯದ ಚರಣ್ ಸಿಂಗ್ ಪುತ್ರ ಅಜಿತ್‌ಸಿಂಗ್ ಅವರ ಬೆನ್ನಿಗೆ ನಿಂತು ಬಿಟ್ಟಿತು. ಇದು ಮೊನ್ನೆವರೆಗೂ ಅಂದರೆ ದಂಗೆಯಾಗೋವರೆಗೂ ಹಾಗೇ ಇತ್ತು. ಈಗ ಬದಾಲಾವಣೆ ಗಾಳಿ ಬೀಸಿದೆ.
ಮೇಲ್ನೋಟಕ್ಕೆ ಸಾಮಾಜಿಕ-ರಾಜಕೀಯ ಕಾರಣಗಳು ಅಂತಿಟ್ಟುಕೊಂಡರೂ ಅಂತರಾಳದ ಸಾಮಾಜಿಕ-ಆರ್ಥಿಕ ಕಾರಣಗಳೇ ಈ ಎರಡೂ ಸಮುದಾಯಗಳ ಹಗೆತನಕ್ಕೆ ಕಾರಣ. ಸಾಚಾರ್ ಸಮಿತಿಯ ಪ್ರಕಾರ ಪಶ್ಚಿಮ ಉತ್ತರ ಪ್ರದೇಶದಲ್ಲಿರುವ ಜಾಟ್ ಸಮುದಾಯ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿದ್ದರೆ, ಮುಸ್ಲಿಮ್ ಸಮುದಾಯ ಇತರೆ ವಲಯ ಅಂದರೆ, ವಾಹನ ರಿಪೇರಿ, ಕಟ್ಟಡ ನಿರ್ಮಾಣ, ವ್ಯಾಪಾರ, ಹಣ್ಣು ವ್ಯಾಪಾರ ಸೇರಿದಂತೆ ಎಲ್ಲ ತರಹದ ಕೆಲಸಗಳಲ್ಲೂ ಮುಂದಿದೆ. ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣ ವಲಯದಲ್ಲಾದ ಬೆಳವಣಿಗೆ ಲಾಭ ಸಹಜವಾಗಿಯೇ ಇವರಿಗೆ ದಕ್ಕಿದೆ. ಆದರೆ, ಸಮಾಜವಾದಿ ಪಕ್ಷದ ಸರ್ಕಾರದ ತಪ್ಪು ಸಕ್ಕರೆ ನೀತಿಗಳಿಂದಾಗಿ ಹೆಚ್ಚಾಗಿ ಕಬ್ಬು ಬೆಳೆಯುವ ಜಾಟ್ ಸಮುದಾಯ ಸಂಕಷ್ಟಕ್ಕಿಡಾಗಿದೆ. ಈ ಬಾರಿ ಅವರಿಗೆ ಎಸ್‌ಪಿಯ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಅಂದರೆ, ಎರಡೂ ಕಡೆಯಿಂದಲೂ ಎಸ್‌ಪಿ ತಿರಸ್ಕೃತವಾಗುವ ಸಾಧ್ಯತೆ ಇದೆ. ಇದರ ಲಾಭವನ್ನು ಬಿಎಸ್‌ಪಿ ಮತ್ತು ಬಿಜೆಪಿ ಗರಿಷ್ಠ ಪ್ರಮಾಣದಲ್ಲಿ ಪಡೆಯುವ ಹುನ್ನಾರದಲ್ಲಿವೆ. ರಾಜಕೀಯ ಪಂಡಿತರು ಕೂಡಾ ಇದನ್ನೇ ಹೇಳುತ್ತಿದ್ದಾರೆ.
ಇನ್ನು ಕಾಂಗ್ರೆಸ್‌ನ ರಾಹುಲ್ ಗಾಂಧಿ ಮುಜಫರ್‌ನಗರಕ್ಕೆ ಭೇಟಿ ಕೊಟ್ಟು, ಅಲ್ಲಿನ ಮುಸ್ಲಿಮರ ಸಹಾನುಭೂತಿ ಗಳಿಸಲು ಯತ್ನಿಸುತ್ತಿದ್ದಾರೆ. ಆದರೆ, ಅವರನ್ನು ನಂಬುವ ಸ್ಥಿತಿಯಲ್ಲಿ ಮುಸ್ಲಿಮರಿಲ್ಲ. ಮುಜಫರ್‌ನಗರ ಹೊರತು ಪಶ್ಚಿಮ ಉತ್ತರ ಪ್ರದೇಶದ ಇತರೆ ಭಾಗಗಳಲ್ಲಿ ದಲಿತರು, ಒಬಿಸಿ ಕೂಡಾ ಕಾಂಗ್ರೆಸ್ ಕೈ ಹಿಡಿಯುವ ಲಕ್ಷಣಗಳಿಲ್ಲ. ರಾಹುಲ್ ಬಹುಶಃ ಮತ್ತೊಂದು ಅವಧಿಯವರೆಗೂ ಕಾಯಬೇಕೇನೋ. ಆದರೆ, ಮತ್ತೊಂದು ಚುನಾವಣೆ ಹೊತ್ತಿಗೆ ಮತ್ತೇನು ಬದಲಾವಣೆ ಕಾದಿರುತ್ತದೆ ಯಾರಿಗೆ ಗೊತ್ತು?
= ಮಲ್ಲಿಕಾರ್ಜುನ ತಿಪ್ಪಾರ
Advertisement