ಗುಲ್ಬರ್ಗ ಖಡ್ಯಾದ ಕುಸ್ತಿಯೊಳ್ಗ ಚಿತ್ ಯಾರು?

ರೂರಲ್‌ದಾಗ ಮಂದಿ ಮೋದಿ... ಮೋದಿ ಅಂತ ಕಮಲಕ್ಕೆ ಗುದ್ಯಾರ್ರಿ, ಆದ್ರ ನಗರದಾಗ ಖರ್ಗೆ ಕೆಲಸಕ್ಕ ಮನ್ನಣೆ ಕೊಟ್ಟು 'ಕೈ' ಹಿಡದಾರ ನೋಡ್ರಿ. ಶೋಷಿತರು, ಮೈನಾರಿಟಿ, ಒಬಿಸಿ ಒನ್‌ಸೈಡ್ 'ಕೈ' ಕುಲುಕ್ಯಾರ್ರಿ.
ಗುಲ್ಬರ್ಗ ಖಡ್ಯಾದ ಕುಸ್ತಿಯೊಳ್ಗ ಚಿತ್ ಯಾರು?
Updated on

-ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.19

ರೂರಲ್‌ದಾಗ ಮಂದಿ ಮೋದಿ... ಮೋದಿ ಅಂತ ಕಮಲಕ್ಕೆ ಗುದ್ಯಾರ್ರಿ, ಆದ್ರ ನಗರದಾಗ ಖರ್ಗೆ ಕೆಲಸಕ್ಕ ಮನ್ನಣೆ ಕೊಟ್ಟು 'ಕೈ' ಹಿಡದಾರ ನೋಡ್ರಿ. ಶೋಷಿತರು, ಮೈನಾರಿಟಿ, ಒಬಿಸಿ ಒನ್‌ಸೈಡ್ 'ಕೈ' ಕುಲುಕ್ಯಾರ್ರಿ. ಲಂಬಾಣಿ, ಸಿಂಹಪಾಲು ಮೇಲ್ವರ್ಗ(ಲಿಂಗಾಯತರು- ವಿಪ್ರರು) ಮಂದಿ ಹೂವಿಗೇ ಜೈ ಅಂದ್ಹಂಗ ಅದ ನೋಡ್ರಿ...
ವೋಟಿಂಗ್ ದಿನ ಕಂಡ ಈ ಸ್ಪಷ್ಟ ಮತ ವಿಭಜನೆ ಚಿತ್ರಣದ ಮ್ಯಾಗ ಹೇಳೋದಾದ್ರ ಬಿಸಲೂರಾಗ ಖರ್ಗೆ- ಬೆಳಮಗಿ ಫಿಫ್ಟಿ- ಫಿಫ್ಟಿ ಮ್ಯಾಚ್ ನಡದ್ಹಂಗ ಅದರಿ, 1 ಚೆಂಡು, 6 ರನ್, ಸಿಕ್ಸರ್ ಅದ್ಯಾರು ಬಾರಸ್ತಾರೋ...?
ಮತದಾನದ ನಂತರ ಗುಲ್ಬರ್ಗದಲ್ಲಿ ಸಾಗಿರುವ ಸ್ವಾರಸ್ಯಕರ ಚರ್ಚೆಗಳಿವು. ಮತದಾರನ ನಾಡಿಮಿಡಿತ ಅರಿಯುವ ಯತ್ನ ಸಾಗಿದೆ.
ಖಡ್ಯಾದ ಕುಸ್ತಿ: 9 ಅಸೆಂಬ್ಲಿ, 1 ಲೋಕಸಭೆ ಚುನಾವಣೆ ಎದುರಿಸಿರುವ ಖರ್ಗೆ ಸತತ ಗೆಲ್ಲುತ್ತ ಬಂದವರು. ಇದು ಅವರ 11ನೇ ಚುನಾವಣೆಯಾದರೆ 5 ಬಾರಿ ಶಾಸಕರಾಗಿ, 2 ಬಾರಿ ಸಚಿವರಾಗಿರುವ, ಕುಸ್ತಿಪಟು ರೇವುನಾಯಕ ಬೆಳಮಗಿಗೂ ಇದು ಪ್ರತಿಷ್ಠೆಯ ಕಣ. ಸೋಲಿಲ್ಲದ ಸರದಾರ- ಕುಸ್ತಿಪಟು ನಡುವಿನ 'ಜಂಗಿಕುಸ್ತಿ' ಎಂದೇ ಈ ಲೋಕ ಸಮರ ಬಣ್ಣಿಸಲ್ಪಟ್ಟಿದ್ದು ಖಡ್ಯಾದ ಕುಸ್ತಿಯಲ್ಲಿ ಚಿತ್ ಯಾರು ಎಂಬುದೇ ಸಸ್ಪೇನ್ಸ್.
ನಗರ- ಗ್ರಾಮೀಣ... ಉಲ್ಟಾಪಲ್ಟಾ ಚಿತ್ರಣ: ಹಿಂದೆಲ್ಲಾ ಗ್ರಾಮೀಣರು 'ಕೈ' ಹಿಡಿಯುತ್ತಿದ್ದದ್ದು ಸಾಮಾನ್ಯ. ಆದರೆ ಈ ಚುನಾವಣೆಯಲ್ಲಿ ಉಲ್ಟಾ. ಗ್ರಾಮೀಣರು ಕಮಲದತ್ತ ವಾಲಿದರೆ, ನಗರ ಪ್ರದೇಶದವರು 'ಕೈ' ಹಿಡಿದಿದ್ದಾರೆ. 2009ರಲ್ಲಿ ಸಂಸದರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಕಾರ್ಮಿಕ, ರೇಲ್ವೆ, ಸಮಾಜ ಕಲ್ಯಾಣ ಸಚಿವರಾಗಿ ಮಹತ್ವದ ಯೋಜನೆಗಳನ್ನು ತವರು ಕ್ಷೇತ್ರ ಗುಲ್ಬರ್ಗಕ್ಕೆ ತಂದ ಖರ್ಗೆ ಸಾಧನೆಯನ್ನು ಒರೆಗೆ ಹಚ್ಚಿರುವ ನಗರ ಪ್ರದೇಶದ ಮಂದಿ ಈ ಬಾರಿ  ಕೆಲಸ ಮಾಡಿದವರಿಗೆ ಜೈ ಎಂದಿರಬಹುದು.
ಗುಲ್ಬರ್ಗ ಉತ್ತರದಲ್ಲಿ ಕಮ್ಮಿ: ಗುಲ್ಬರ್ಗ(ಉ)ದಲ್ಲಿ ಶೇ.52.08 ಮತದಾನವಾಗಿ ಕಡಿಮೆ ಮತದಾನದ ಕ್ಷೇತ್ರವೆಂದು ಗುರುತಿಸಲ್ಪಟ್ಟಿದೆ. ಆದಾಗ್ಯೂ ಈ ಕ್ಷೇತ್ರದ ಶಾಸಕ, ಸಚಿವ ಖಮರುಲ್ ಇಸ್ಲಾಂ ಬೆಂಬಲಿಗರ ಪ್ರಕಾರ ಇಲ್ಲಿನ ಮುಸ್ಲಿಂ ಸಮುದಾಯ ಪ್ರಭಾವವಿರುವ 118 ಮತಗಟ್ಟೆಗಳಲ್ಲಿ ಶೇ.58ಕ್ಕಿಂತ ಹೆಚ್ಚು ಮತದಾನವಾಗಿದೆ. ಅಸೆಂಬ್ಲಿಯಲ್ಲೇ ಇಲ್ಲಿ ಶೇ.50ರಷ್ಟು ಮತದಾನವಾಗಿತ್ತು. ಈ ಬಾರಿಕಾಂಗ್ರೆಸ್‌ಗೆ ಹೆಚ್ಚಿನ ಬಲ ಎನ್ನುತ್ತಾರೆ.

ಲಾಡ್ಲಾಪುರ ಹಾಜಿ ಸರ್ವರ್ ದುವಾ ಯಾರಿಗೆ...?
ಲಾಡ್ಲಾಪುರದಲ್ಲಿ ಏ.17, 18ರಂದು ಹಾಜಿ ಸರ್ವರ್ ಜಾತ್ರೆ. ಈ ದೇವರಿಗೆ ಮುಸ್ಲಿಮರಿಗಿಂತ ಲಂಬಾಣಿಗಳೇ ಹೆಚ್ಚು ಪೂಜಿಸುವುದು. ಹೀಗಾಗಿ ಈ ಭಾಗದಿಂದ ಕೆಲಸಕ್ಕೆಂದು ಗುಳೆ ಹೋಗುವ ಲಂಬಾಣಿ ಸಮುದಾಯದ ಸುಮಾರು 8 ರಿಂದ 10 ಸಾವಿರ ಮಂದಿ ಜಾತ್ರೆಗೆಂದು ಊರಿಗೆ ಬರುತ್ತಾರೆ. ಜಾತ್ರೆಯಲ್ಲೇ ಮತದಾನ ಬಂದಿದ್ದರಿಂದ ಸಮುದಾಯದ ಪ್ರತಿನಿಧಿಯಾಗಿ ರೇವುನಾಯಕ ಕಣದಲ್ಲಿರುವುದರಿಂದ ಜಾತ್ರೆಗೆ ಬಂದವರೆಲ್ಲರೂ ಬಿರುಸಿನ ಮತದಾನ ಮಾಡಿದ್ದರಿಂದ ಹಾಜಿ ಸರ್ವರ್ ಜಾತ್ರೆ ಬಿಜೆಪಿಗೆ ಅಲ್ಪ ಅನುಕೂಲ ಎನ್ನಬಹುದೇನೋ.

ಮತ ವಿಭಜನೆ ಸುತ್ತ
ಜೆಡಿಎಸ್‌ನ ಸಾಗರ್, ಆಪ್‌ನ ಬಿ.ಟಿ. ಲಲಿತಾನಾಯಕ್, ಬಿಎಸ್ಪಿಯ ಮಹಾದೇವ ಧನ್ನಿ ಕಣದಲ್ಲಿದ್ದರೂ ಮತ ವಿಭಜನೆ ಅಷ್ಟಕ್ಕಷ್ಟೇ. ಇವರು ಪಡೆಯುವ ಮತ ವಿಭಜನೆಯಾಗಿದ್ದರೂ ಇಲ್ಲಿನ ಗೆಲವಿನ ಚಿತ್ರಣವೇ ಬದಲಾಗುತ್ತಿತ್ತು. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿಯ ಕಣ ಇದಾಗಿದ್ದರಿಂದ ಅನ್ಯರ ಚಿಂತೆ ಇಲ್ಲ.

'ಕೈ' ಪರಂಪರಾಗತ...
ಇಂತಹ ಹವಾ ಆಧಾರಿತ ಸಮರದಲ್ಲಿಯೂ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲಿ ತನ್ನ  ಮತಗಳನ್ನು ಬುಟ್ಟಿಯೊಳಗೆ ಹಾಕಿಕೊಳ್ಳುವಲ್ಲಿ ಯಶ ಕಂಡಿದೆ. ಅಫಜಲ್ಪುರ, ಜೇವರ್ಗಿ, ಗುಲ್ಬರ್ಗ ಗ್ರಾಮೀಣ, ಗುರುಮಠಕಲ್ ಕ್ಷೇತ್ರಗಳಲ್ಲಿ ಬಿಜೆಪಿ ಪರ ಒಲವು ವ್ಯಕ್ತವಾಗಿದ್ದರಿಂದ 'ಕೈ' ಗೆಲವಿಗೆ ಇದು ಅಲ್ಪ ಬ್ರೇಕ್ ಹಾಕಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com