

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮತದಾನ ಹೆಚ್ಚಾದಂತೆ ಗೆಲವಿನ ಅಂತರ ಕುಸಿತ
- ಕಳೆದ ಬಾರಿ ಕೇವಲ 37 ಸಾವಿರ ಮತಗಳ ಅಂತರದಿಂದ ಗೆಲವು ಸಾಧಿಸಿದ್ದ ಹಾಲಿ ಸಂಸದ
- ಅನಂತಕುಮಾರ್-ನಂದನ್ ನಿಲೇಕಣಿ ಜಿದ್ದಾಜಿದ್ದಿನ ಕಣದಲ್ಲಿ ಈ ಬಾರಿ ಶೇ. 10 ಹೆಚ್ಚು ವೋಟ್
- ಹೊಸ ಮತದಾರ ಯಾರಿಗೆ ಆಶೀರ್ವದಿಸಿದ್ದಾನೆ ಎಂಬುದರ ಮೇಲೆಯೇ ಜಯ ನಿರ್ಧಾರ
- ರಾಘವೇಂದ್ರ ಭಟ್
ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿದಂತೆ ಹಾಲಿ ಸಂಸದರ ಗೆಲವಿನ ಅಂತರ ಕಡಿಮೆಯಾಗುತ್ತದೆ ಎಂದು ವ್ಯಾಖ್ಯಾನಿಸಲ್ಪಡುತ್ತಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮತದಾನ ಪ್ರಮಾಣದಲ್ಲಿ ಏರಿಕೆಯಾಗಿದೆ....!
ಆರನೇ ಬಾರಿಗೆ ಅದೃಷ್ಟವನ್ನು ಪಣಕ್ಕಿಟ್ಟಿರುವ ಹಾಲಿ ಸಂಸದ ಅನಂತ್‌ಕುಮಾರ್, ಜನರಿಂದ ಭಾರೀ ಟೀಕೆಗೆ ಗುರಿಯಾಗಿರುವ ಆಧಾರ್ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಮಧ್ಯೆ ಜಿದ್ದಾಜಿದ್ದಿ ಕಣವಾಗಿರುವ ಬೆಂಗಳೂರು ದಕ್ಷಿಣದಲ್ಲಿ ಈ ಬಾರಿ ಕಳೆದ ಚುನಾವಣೆಗಿಂತ ಶೇ.10ರಷ್ಟು ಹೆಚ್ಚು ಮತದಾನವಾಗಿದೆ.
ರಾಜ್ಯದ ಇತರೆ ಲೋಕಸಭಾ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರವನ್ನೂ ಒಳಗೊಂಡಂತೆ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದೆ. ಆದರೆ ಹಿಂದಿನ ಚುನಾವಣೆಗಳಿಗೆ ತಾಳೆ ಹಾಕಿದಾಗ ನಾಗರಿಕರಲ್ಲಿ ಹಕ್ಕು ಚಲಾವಣೆ ಬಗ್ಗೆ ಜಾಗೃತಿ ಹೆಚ್ಚಿದೆ.
ಕಳೆದ ಬಾರಿ ಬೆಂ. ದಕ್ಷಿಣ ಕ್ಷೇತ್ರದಲ್ಲಿ ಶೇ.44.74ರಷ್ಟು ಮತದಾನವಾಗಿತ್ತು. 20,31,030 ಮತದಾರರ ಪೈಕಿ 9,08,590 ಮಂದಿ ಮಾತ್ರ ಹಕ್ಕು ಚಲಾಯಿಸಿದ್ದರು. ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ವಿರುದ್ಧ ಬಿಜೆಪಿಯ ಅನಂತ್‌ಕುಮಾರ್ 37,612 ಮತಗಳ ಅಂತರದಿಂದ ಗೆಲವು ಸಾಧಿಸಿದ್ದರು. 1999 ಹಾಗೂ 2004ರ ಲೋಕಸಭಾ ಚುನಾವಣೆ ಪ್ರತಿಶತ ಮತದಾನಕ್ಕಿಂತ 2009ರಲ್ಲಿ ಹೆಚ್ಚು ಮಂದಿ ಹಕ್ಕು ಚಲಾಯಿಸಿದ್ದರು. ಬೆಂಗಳೂರು ದಕ್ಷಿಣದಲ್ಲಿ ಸರಾಸರಿ ಮತದಾನ ಹೆಚ್ಚಾದಂತೆ ಹಾಲಿ ಸಂಸದರ ಗೆಲವಿನ ಅಂತರ ಕಡಿಮೆಯಾಗುತ್ತಲೇ ಬಂದಿದೆ.
1999ರಲ್ಲಿ ಅನಂತ್‌ಕುಮಾರ್ ಅವರ ವಿರುದ್ಧ ಬಿ.ಕೆ.ಹರಿಪ್ರಸಾದ್ ಸೆಣೆಸಿದ್ದಾಗ, ಬಿಜೆಪಿಯ ಗೆಲವಿನ ಅಂತರ 66,054ರಷ್ಟಿತ್ತು. 2004ರ ಚುನಾವಣಾ ಕಣದಲ್ಲಿ ಅನಂತ್‌ಕುಮಾರ್ ಅವರಿಗೆ ಕಾಂಗ್ರೆಸ್‌ನ ಎಂ.ಕೃಷ್ಣಪ್ಪ
ಎದುರಾಳಿಯಾಗಿದ್ದರು. ಆಗ ಪ್ರತಿಶತ ಮತದಾನ ಪ್ರಮಾಣದಲ್ಲಿ ಮತ್ತೆ ಏರಿಕೆಯಾಯಿತಾದರೂ ಗೆಲವಿನ ಅಂತರ 62,271ಕ್ಕೆ ಇಳಿಯಿತು. 2009ರ ಚುನಾವಣೆಯಲ್ಲಿ ಈ ಅಂತರ ಹೆಚ್ಚು ಕಡಿಮೆ ಶೇ. 50ರಷ್ಟು ಇಳಿಕೆಯಾಗಿತ್ತು.
ಒಂದೆಡೆ ಮೋದಿ ಅಲೆಯಲ್ಲಿ ಯುಪಿಎ ಸರ್ಕಾರದ ವಿರುದ್ಧ ವಾಗ್ಬಾಣ ಎಸೆಯುತ್ತಿರುವ ಹಳೆಯ ಹುಲಿ ಅನಂತ್‌ಕುಮಾರ್, ಇನ್ನೊಂದೆಡೆ ಐಟಿ ದಿಗ್ಗಜ ನಂದನ್ ನೀಲೇಕಣಿ, ಮತ್ತೊಂದೆಡೆ ಕೊಳೆಗೇರಿಯಲ್ಲಿ ಕಾಂಗ್ರೆಸ್ ಮತ ಕತ್ತರಿಸಲು ನಿಂತಿರುವ ಜೆಡಿಎಸ್‌ನ ರುತ್ ಮನೋರಮಾ. ಇವರ ಜತೆಗೆ ಹಿಂದುತ್ವ ವಿಚಾರಕ್ಕೆ ನಿಮ್ಮ ಕೊಡುಗೆಯೇನು ಎಂದು ಪ್ರಶ್ನಿಸುತ್ತಿರುವ ಪ್ರಮೋದ್ ಮುತಾಲಿಕ್. ಏರಿಕೆಯಾದ ಮತ ಈ ಪೈಕಿ ಯಾರಿಗೆ ಹಂಚಿಕೆಯಾಗಿರಬಹುದೆಂಬುದು ಸದ್ಯದ ಕುತೂಹಲ. ಹಾಗಾದರೆ ಮತಗಟ್ಟಗೆ ಹೆಚ್ಚುವರಿಯಾಗಿ ಬರುತ್ತಿರುವ ಹೊಸ ಮತದಾರನ ಆಶೀರ್ವಾದ ಯಾರಿಗೆ? ಇವರು ಹಾಲಿ ಸಂಸದರ ಸಾಧನೆಯನ್ನು ನಿಜವಾಗಿಯೂ ಒರೆಗಲ್ಲಿಗೆ ಹಚ್ಚುವವರೇ? ಎಂಬುದಕ್ಕೆ ಮೇ 16ಕ್ಕೆ ಉತ್ತರ ದೊರಕಲಿದೆ.
Advertisement