ಸದಾನಂದಗೌಡರಿಗೆ 'ಉತ್ತರ'ದಾಯಿತ್ವ

Updated on

-ವಿಶೇಷ ವರದಿ
ಬೆಂಗಳೂರು:
ಬೆಂಗಳೂರು ಉತ್ತರಲೋಕಸಭೆ ಕ್ಷೇತ್ರ ಸದಾನಂದಗೌಡ ಅವರಿಗೇ 'ಉತ್ತರ' ನೀಡಲಿದೆ ಎಂಬುದು ಚುನಾವಣೆ ಮತದಾನದ ನಂತರವೂ ಕೇಳಿಬರುತ್ತಿರುವ ಗಟ್ಟಿ ಮಾತಾಗಿದೆ.
ಬೆಂಗಳೂರು ಉತ್ತರದಲ್ಲಿ ಈ ಬಾರಿ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಕಡಿಮೆ ಮತದಾನವಾಗಿದೆ ನಿಜ. ಆದರೆ, ಇಲ್ಲಿರುವ ಮತದಾರರ ಸಂಖ್ಯೆ ಅಧಿಕ ಎಂಬುದನ್ನೂ ಒಪ್ಪಬೇಕಿದೆ. 6 ಮತದಾರರ ಕೊರತೆಯಿಂದ 24 ಲಕ್ಷ ಮತದಾರರ ಗಡಿಯನ್ನು ತಪ್ಪಿಸಿಕೊಂಡಿರುವ ಉತ್ತರ ಕ್ಷೇತ್ರದಲ್ಲಿ, ಈ ಬಾರಿ ಶೇ.56.47ರಷ್ಟು ಮತದಾನವಾಗಿದೆ. ಅಂದರೆ 13 ಲಕ್ಷ ಮತದಾರರು ಹಕ್ಕು ಚಲಾಯಿಸಿದ್ದಾರೆ. ಮತದಾರರ ಸಂಖ್ಯೆಗೆ ಹೋಲಿಸಿದರೆ ಇದು ಅಧಿಕವೇ. ಹೀಗಾಗಿ, ಕಳೆದ ಬಾರಿ ಫಲಿತಾಂಶಕ್ಕೆ ಯಾವುದೇ ತೊಂದರೆ ಇಲ್ಲ, ಅಂತರ ಇನ್ನಷ್ಟು ವಿಸ್ತರಣೆ ಬಗ್ಗೆಯೂ ಬಿಜೆಪಿ ಭರವಸೆ ಹೊಂದಿದೆ.
ಉತ್ತರ ಲೋಕಸಭೆಯಲ್ಲಿ ಬಿಜೆಪಿಗೆ ಈ ಬಾರಿ ಕೊರತೆ ಕಂಡಿರುವುದು ಕೆ.ಆರ್. ಪುರದಲ್ಲಿ. ಕಳೆದ ಬಾರಿ 40 ಸಾವಿರ ಲೀಡ್ ನೀಡಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಶಾಸಕರಿರುವುದರಿಂದ ಅದರಲ್ಲೂ ಬೈರತಿ ಬಸವರಾಜ್ ಶಾಸಕರಾಗಿರುವುದರಿಂದ ಬಿಜೆಪಿಗೆ ಹೆಚ್ಚಿನ ಲೀಡ್ ಸಿಗುವುದಿಲ್ಲ. ಕಾಂಗ್ರೆಸ್- ಬಿಜೆಪಿಗೆ ಸಮಾನ ಮತಲಭ್ಯವಾಗುವ ಸಾಧ್ಯತೆಗಳೇ ಹೆಚ್ಚು.
ಈ ಕ್ಷೇತ್ರದ ಹೊರತಾಗಿ ಕಾಂಗ್ರೆಸ್ ಮುನ್ನಡೆ ಸಾಧಿಸುವ ಕ್ಷೇತ್ರ ಎಂದರೆ ಬ್ಯಾಟರಾಯನಪುರ. ಸಚಿವ ಕೃಷ್ಣಬೈರೇಗೌಡ ಈ ಕ್ಷೇತ್ರದವರೆಂಬುದೇ ಕಾರಣ. ಆದರೆ, ಕಳೆದ ಬಾರಿ ಅವರೇ ಶಾಸಕರಾಗಿದ್ದರೂ, ಬಿಜೆಪಿಗೇ ಲೀಡ್ ಬಂದಿತ್ತು. ಇದನ್ನು ಹೊರತುಪಡಿಸಿದರೆ, ದಾಸರಹಳ್ಳಿಯಲ್ಲಿ ಅತಿಹೆಚ್ಚು ಲೀಡ್ ಕಳೆದ ಬಾರಿ ದೊರೆತಿತ್ತು. 40 ಸಾವಿರ ಮಗಳ ಲೀಡ್ ಇಲ್ಲಿ ದೊರೆತಿದ್ದು, ಶಾಸಕ ಎಸ್. ಮುನಿರಾಜು ಈ ಬಾರಿ ಅದನ್ನು ಇನ್ನಷ್ಟು ಹೆಚ್ಚು ಮಾಡಿದ್ದಾರೆ ಎಂಬ ಲೆಕ್ಕಾಚಾರವಿದೆ.
ಇನ್ನು, ಹೆಬ್ಬಾಳದಲ್ಲಿ 10 ಸಾವಿರ, ಮಲ್ಲೇಶ್ವರದಲ್ಲಿ 26 ಸಾವಿರದ ಹಿಂದಿನ ಲೀಡ್ ಈ ಬಾರಿ ಇನ್ನಷ್ಟು ಹೆಚ್ಚಾಗುವ ಆಶಾಭಾವವಿದೆ. ಪುಲಿಕೇಶಿನಗರದಲ್ಲಿ ಜೆಡಿಎಸ್ ಶಾಸಕರಿರುವುದು ಬಿಜೆಪಿಗೆ ಇಲ್ಲಿ ಮೂರನೇ ಸ್ಥಾನ ಸಿಗುವುದು ಗ್ಯಾರಂಟಿ. ಮಹಾಲಕ್ಷ್ಮಿ ಬಡಾವಣೆಯಲ್ಲೂ ಜೆಡಿಎಸ್ ಶಾಸಕರಿದ್ದರೂ ಇಲ್ಲಿ ಕಾಂಗ್ರೆಸ್- ಬಿಜೆಪಿಗೇ ಹೋರಾಟ. ಬಿಜೆಪಿ ಒಂದು ಕೈ ಮುಂದಿದೆ. ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿರುವುದು ನಾರಾಯಣಸ್ವಾಮಿ ಅವರಿಗೆ ಬಲ ಎನ್ನಲಾಗುತ್ತಿತ್ತು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಹಿಂದೆಲ್ಲ ಸೋತಿದ್ದ ಅನುಕಂಪದಿಂದ ಸೋಮಶೇಖರ್‌ಗೆ ಮತ ಬಂದಿತ್ತು. ಲೋಕಸಭೆ ಚುನಾವಣೆಯಲ್ಲಿ ಚಿತ್ರಣ ಬದಲಾಗಿದೆ ಎಂಬುದು ಮತಗಟ್ಟೆಯ ವಾತಾವರಣ.
ಕಾಂಗ್ರೆಸ್ ವೋಟ್‌ಬ್ಯಾಂಕ್ ಇಲ್ಲೂ ಕೈಕೊಟ್ಟಿದೆ. ಎಲ್ಲಿ ಅತಿಹೆಚ್ಚು ಮತಪಡೆಯುತ್ತೇವೆ ಎಂದು ನಂಬಲಾಗಿತ್ತೋ ಅಲ್ಲಿ ಹೆಚ್ಚಿನ ಮತದಾನವೇ ಆಗಿಲ್ಲ. ಕಾಂಗ್ರೆಸ್‌ಗೆ ಎದುರಾಗಿರುವುದು ಜೆಡಿಎಸ್‌ನ ಅಬ್ದುಲ್ ಅಜೀಂ. ಅವರು ಕಾಂಗ್ರೆಸ್‌ನ ಕೆಲವು ಸಾವಿರ ಮತಗಳನ್ನು ಪಕ್ಷಾಧಾರದಲ್ಲಿ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಇದು ಕಾಂಗ್ರೆಸ್‌ಗೆ ಹಲವು ಪ್ರದೇಶದಲ್ಲಿ ಹಿನ್ನಡೆಯಾಗಿದ್ದು, ಮತ ಗಳಿಕೆಗೆ ಚ್ಯುತಿಯಾಗಿದೆ.
ಜತೆಗೆ ಕೆಲವು ಮತಗಳು ಆಪ್ ಪಾಲಾಗಿವೆ. ಕೆಲವು ಪಕ್ಷೇತರರು ಮತ ಪಡೆದಿದ್ದಾರೆ. ಈ ಪ್ರಕ್ರಿಯೇ ಕಾಂಗ್ರೆಸ್‌ಗೆ ಮುಳುವಾಗಿದ್ದು, ಬಿಜೆಪಿಗೆ ವರದಾನವಾಗಿದೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ಉತ್ತರ ಹಿಂದಿಗಿಂತ ಮತ್ತಷ್ಟು ಹೆಚ್ಚಿನ ಲೀಡ್ ನೀಡಿ ಆಯ್ಕೆ ಮಾಡಲಿದೆ ಎಂಬುದು ಮತಗಟ್ಟೆ ಏಜೆಂಟರ ಲೆಕ್ಕಾಚಾರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com