-ಪಾ.ಶ್ರೀ.ಅನಂತರಾಮ್
ಕನ್ನಡಪ್ರಭವಾರ್ತೆ, ಕೋಲಾರ, ಏ.20
ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಗುರುವಾರ ಚುನಾವಣೆ ನಡೆದ ಬಳಿಕ ಸೋಲು-ಗೆಲವಿನ ಲೆಕ್ಕಾಚಾರ ಆರಂಭವಾಗಿದೆ.2009ರಲ್ಲಿ ನಡೆದ ಚುನಾವಣೆಯಲ್ಲಿ ಶೇ.69.35ರಷ್ಟು ಮತದಾನವಾಗಿದ್ದರೆ ಈ ಸಲ ಶೇ.75.50 ರಷ್ಟು ಮತದಾನವಾಗಿದ್ದು ಕಳೆದ ಚುನಾವಣೆಗೆ ಹೊಲಿಕೆ ಮಾಡಿದಲ್ಲಿ ಶೇ.6.15ರಷ್ಟು ಮತದಾನ ಪ್ರಮಾಣ ಹೆಚ್ಚಾಗಿದೆ.
ಈ ಹೆಚ್ಚಳಕ್ಕೆ ಸ್ವೀಪ್ ಸಮಿತಿಯ ಕಾರ್ಯಕ್ರಮಗಳ ಜೊತೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಅಲೆಯೂ ಕಾರಣವಾಗಿರಬಹುದು. ಈ ಬಾರಿ ಯುವಕರು ಬಿಜೆಪಿ ಅಭ್ಯರ್ಥಿಗಿಂತ ಮೋದಿಯ ನಾಯಕತ್ವದ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಚುನಾವಣೆಯ ವಿಶೇಷ. ಆದರೆ, ಎಲ್ಲ ವರ್ಗದ ಮತದಾರರನ್ನು ಸೆಳೆಯಲು ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟ, ಸಂಘಟನೆಯ ಕೊರತೆ, ಮುಖಂಡರಲ್ಲಿನ ಪ್ರತಿಷ್ಠೆಯಿಂದ ಗುರಿ ತಪ್ಪಿದೆ.
ಮತದಾನ ಪ್ರಮಾಣ ಹೆಚ್ಚಿರುವ ಆಧಾರದಲ್ಲಿ ಇಂತಹ ಅಭ್ಯರ್ಥಿಯೇ ಗೆಲ್ಲಬಹುದೆಂದು ನಿಖರವಾಗಿ ಹೇಳುವುದಕ್ಕೆ ಕಷ್ಟವಾದರೂ ಕ್ಷೇತ್ರಕ್ಕೆ ಸಂಬಂಧಿಸಿದ ವಿಧಾನಸಭೆ ಕ್ಷೇತ್ರಗಳಲ್ಲಿನ ಪಕ್ಷಗಳ ಬಲಾಬಲ, ರಾಜಕೀಯ ವಾತಾವರಣ, ಅಭ್ಯರ್ಥಿಗಳು ಅನುಸರಿಸಿರುವ ತಂತ್ರಗಾರಿಕೆ ಹಾಗೂ ಕಳೆದ ಆರು ಚುನಾವಣೆಗಳ ಫಲಿತಾಂಶವನ್ನು ವಿಶ್ಲೇಷಣೆ ಮಾಡಿದಲ್ಲಿ ಕಾಂಗ್ರೆಸ್ ಈ ಬಾರಿ ಅತ್ಯಂತ ಕಡಿಮೆ ಅಂತರದಲ್ಲಿ ಗೆಲ್ಲಬಹುದು ಇಲ್ಲವೇ ಸೋಲುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು.
ತಂತ್ರ-ಪ್ರತಿತಂತ್ರ: ಪರಿಶಿಷ್ಟ ಜಾತಿಗೆ ಮೀಸಲಾದ ಕೋಲಾರ ಕ್ಷೇತ್ರದಲ್ಲಿ ಡಬಲ್ ಹ್ಯಾಟ್ರಿಕ್ ಸಾಧಿಸಿ ಏಳನೇ ಬಾರಿ ಸಂಸತ್ ಪ್ರವೇಶಕ್ಕೆ ಹಂಬಲಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರಿಗೆ ವಿಶ್ರಾಂತಿ ನೀಡಲು ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಪ್ರಬಲ ಪೈಪೋಟಿ ನೀಡಿವೆ.
ತ್ರಿಕೋನ ಸ್ಪರ್ಧೆ ಏರ್ಪಟ್ಟಾಗಲೆಲ್ಲ ಕೆ.ಎಚ್.ಮುನಿಯಪ್ಪ ಲಾಭ ಮಾಡಿಕೊಂಡಿದ್ದಾರೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಾಗಿರುವುದರಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳಾದ ಎಂ.ನಾರಾಯಣಸ್ವಾಮಿ ಮತ್ತು ಕೇಶವರವರು ಒಂದಿಷ್ಟು ಮತಗಳನ್ನು ಹಂಚಿಕೊಂಡಿರಬಹುದೇ ಹೊರತು ಕಾಂಗ್ರೆಸ್ ಪಕ್ಷ ನಂಬಿರುವ ಸಾಂಪ್ರದಾಯಿಕ ಮತಗಳ ಮೇಲೆ ಯಾವುದೇ ಪರಿಣಾಮ ಬೀರದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ ಅಂಬೋಣ.
ಜೆಡಿಎಸ್ ಶಾಸಕರಿರುವ ಚಿಂತಾಮಣಿಯಲ್ಲಿ ಶೇ.77.37ರಷ್ಟು ಮತದಾನವಾಗಿದೆ. ಇಲ್ಲಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಲೇಬೇಕೆಂದು ಪಣತೊಟ್ಟು ಮಾಜಿ ಶಾಸಕ ಡಾ.ಸುಧಾಕರ್ ಕೆಲಸ ಮಾಡಿದ್ದಾರೆ. ಜೊತೆಗೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಶಾಸಕ ಕೃಷ್ಣಾರೆಡ್ಡಿ ಸಹ ಕೆಲಸ ಮಾಡಿರುವುದರಿಂದ ಜೆಡಿಎಸ್ ಅಭ್ಯರ್ಥಿ ಮುನ್ನಡೆ ಸಾಧಿಸುವ ಲಕ್ಷಣಗಳಿವೆ.
ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಅವರ ತವರು ತಾಲೂಕಾದ ಶಿಡ್ಲಘಟ್ಟದಲ್ಲೂ ಜೆಡಿಎಸ್ ಶಾಸಕರಿದ್ದಾರೆ, ಇಲ್ಲಿನ ಪ್ರಭಾವಿ ಕಾಂಗ್ರೆಸ್ ಮುಖಂಡ ವಿ.ಮುನಿಯಪ್ಪ ಹಾಗೂ ಕೆ.ಎಚ್.ಮುನಿಯಪ್ಪ ಅವರ ನಡುವೆ ಉಂಟಾಗಿರುವ ರಾಜಕೀಯ ಮುಸುಕಿನ ಗುದ್ದಾಟದಿಂದ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಅರಿತ ಕೆ.ಎಚ್.ಮುನಿಯಪ್ಪ ತಮ್ಮ ರಾಜಕೀಯ ಗುರುಗಳನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನ ವಿಫಲವಾದ ಮೇಲೆ ವಿರೋಧ ಪಕ್ಷಗಳ ಮುಖಂಡರನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲ ಹೋರಾಟ ನೀಡಿರುವುದು ಕಂಡು ಬರುತ್ತಿದೆ.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಜೆಡಿಎಸ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಸಮಬಲ ಹೋರಾಟ ನಡೆಸಿದೆ. ಒಂದು ವೇಳೆ ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದರೆ ಅದಕ್ಕೆ ಶಾಸಕ ರಮೇಶ್ ಕುಮಾರ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದು ಕಾರಣವಾಗಬಹುದು.
ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಸಾಂಪ್ರದಾಯಿಕ ಮತಗಳು ಇವೆ. ಜತೆಗೆ ಶಾಸಕರಾದ ಕೆ.ಎಂ.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್, ಕೆ.ಎಚ್.ಮುನಿಯಪ್ಪನವರ ಪುತ್ರಿ ರೂಪಾಶಶಿಧರ್ ಅವರ ಪ್ರಾಮಾಣಿಕ ಯತ್ನದಿಂದಾಗಿ ಮುನ್ನಡೆ ಸಿಗುವ ಸಾಧ್ಯತೆಗಳಿವೆ.
ಇನ್ನು ಮಾಲೂರಿನಲ್ಲಿ ಜೆಡಿಎಸ್ ಶಾಸಕ ಕೋಡಿಹಳ್ಳಿ ಮಂಜುನಾಥ್, ಕೇಶವ ಪರವಾಗಿ ಸಾಕಷ್ಟು ಪ್ರಚಾರ ಮಾಡಿದ್ದಾರೆ, ಇಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ಮತಗಳು ಇದ್ದರೂ ಮುಖಂಡರ ಕೊರತೆ ಇತ್ತು, ಮಾಜಿ ಶಾಸಕ ಎ.ನಾಗರಾಜ್ ಜೆಡಿಎಸ್ ಪರವಾಗಿ ಕೆಲಸ ಮಾಡಿದ್ದಾರೆ, ಇದಕ್ಕೆ ಪರ್ಯಾಯವಾಗಿ ಕೆ.ಎಚ್.ಮುನಿಯಪ್ಪ ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯಶೆಟ್ಟಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಚೆನ್ನಕೇಶವ ಮುತ್ತಿರರನ್ನು ಬಳಕೆ ಮಾಡಿಕೊಂಡು ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಮುನ್ನಡೆ ಸಿಗಬಹುದೆಂದು ನಿರೀಕ್ಷಿಸಲಾಗಿದೆ.
ಒಳೇಟಿನ ಭಯ: ಮಾಲೂರು ಪಟ್ಟಣದಲ್ಲಿ ಬಿಜೆಪಿ ಪರವಾಗಿ ಯುವಕರು ಒಲವು ತೋರಿದ್ದರೆ, ಒಕ್ಕಲಿಗರ ಮತಗಳನ್ನು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಹಂಚಿಕೊಂಡಿವೆ. ಇದೇ ಪರಿಸ್ಥಿತಿ ಕ್ಷೇತ್ರದ ಎಲ್ಲಾ ಕಡೆ ಉಂಟಾಗಿದೆ. ಕೋಲಾರ ಕ್ಷೇತ್ರದಲ್ಲಿ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ. ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್ ವಿಧಾನಸಭೆ ಚುನಾವಣೆಯಲ್ಲಿ ಸೋಲುವುದಕ್ಕೆ ಕೆ.ಎಚ್.ಮುನಿಯಪ್ಪ ಕಾರಣವೆಂದು ಅಲ್ಪಸಂಖ್ಯಾತರು ಮುನಿಸಿಕೊಂಡಿದ್ದಾರೆ. ಕೆಲವರು ಜೆಡಿಎಸ್‌ಗೆ ಕೆಲಸ ಮಾಡಿದ್ದಾರೆ. ಕಾಲು ಭಾಗದಷ್ಟು ಮತದಾರರು ಮತದಾನ ಮಾಡದೆ ತಟಸ್ಥರಾಗಿದ್ದರು, ಇದರಿಂದ ಆಗುವ ನಷ್ಟ ತಪ್ಪಿಸಲೆಂದೇ ಶಾಸಕ ವರ್ತೂರ್ ಪ್ರಕಾಶ್ ಸಹಾಯ ಪಡೆದಿರುವ ಕೆ.ಎಚ್.ಮುನಿಯಪ್ಪನವರಿಗೆ ಯಾವ ರೀತಿಯ ಲಾಭವಾಗಿದೆ ಎಂಬುದನ್ನು ತಿಳಿಯಲು ಮೇ.16ರವರೆಗೆ ಕಾಯುವುದು ಅನಿವಾರ್ಯವಾಗಿದೆ.
ಬಹುತೇಕ ಕಡೆ ಮುಸ್ಲಿಮರ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲಾಗಿವೆ.ಬಂಗಾರಪೇಟೆ, ಮಾಲೂರು, ಕೆಜಿಎಫ್ ಹಾಗೂ ಕೋಲಾರದಲ್ಲಿ ಬಿಜೆಪಿ ಪರವಾಗಿ ಪ್ರಾರಂಭದಲ್ಲಿ ಇದ್ದ ಅಲೆ ಮತದಾನದ ದಿನ ಕಂಡು ಬರಲಿಲ್ಲ, ಅನೇಕ ಕಡೆ ಮತಗಟ್ಟೆಗಳಲ್ಲಿ ಏಜೆಂಟರು ಇರಲಿಲ್ಲ, ಜೆಡಿಎಸ್ ಅಭ್ಯರ್ಥಿ ಕೇಶವ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ನೀಡಲು ಕೊಟ್ಟಿದ್ದ ಹಣವನ್ನು ಅನೇಕ ಮುಖಂಡರು ವಿತರಣೆ ಮಾಡದಿದ್ದರಿಂದ ಕಾರ್ಯಕರ್ತರು ಅಸಹಾಯಕರಾಗಿದ್ದರು.
ಗುಣಾಕಾರ-ಭಾಗಾಕಾರ
ಒಟ್ಟಾರೆಯಾಗಿ ಗುರುವಾರ ನಡೆದ ಮತದಾನ ಗಮನಿಸಿದರೆ ಕಾಂಗ್ರೆಸ್ ಪಕ್ಷ ಎಲ್ಲ ಎಂಟು ಕ್ಷೇತ್ರಗಳಲ್ಲಿ ಸಾಂಪ್ರದಾಯಿಕ ಮತಗಳು ಮಾತ್ರವಲ್ಲದೆ ಅಹಿಂದ ಮತಗಳಿಗೂ ಕೈ ಹಾಕಿರುವುದು ಗೋಚರಿಸುತ್ತಿದೆ, ಜೆಡಿಎಸ್ ಮತ್ತು ಬಿಜೆಪಿ ಮೇಲ್ವರ್ಗದ ಹಾಗೂ ಯುವ ಮತಗಳನ್ನು ಹಂಚಿಕೊಂಡಿದ್ದು ಬಲಗೈ ಜನಾಂಗ, ಮುಸ್ಲಿಮರ ಮತಗಳು ಯಾರಿಗೆ ಹೆಚ್ಚು ಬಂದಿರುತ್ತದೋ ಆ ಅಭ್ಯರ್ಥಿಯ ಗೆಲುವು ಸುಲಭವಾಗಬಹುದು.
ಕೋಲಾರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 14,90,848 ಮತದಾರರ ಪೈಕಿ 11,25,529 ಮಂದಿ ಮತದಾನ ಮಾಡಿದ್ದು ಜೆಡಿಎಸ್ ಮತ್ತು ಬಿಜೆಪಿ 4 -5 ಲಕ್ಷ ಮತಗಳನ್ನು ಸಮಬಲವಾಗಿ ಹಂಚಿಕೆ ಮಾಡಿಕೊಂಡಿದ್ದೇ ಆದಲ್ಲಿ ಕಾಂಗ್ರೆಸ್ ಪಕ್ಷದ ಕೆ.ಎಚ್.ಮುನಿಯಪ್ಪ ಸಾಂಪ್ರದಾಯಿಕ ಮತಗಳು ಸೇರಿದಂತೆ ಚಲಾವಣೆಯಾಗಿರುವ ಮತಗಳ ಪೈಕಿ 4 ರಿಂದ 4.50ಲಕ್ಷ ಮತಗಳು ಗಳಿಸಿದಲ್ಲಿ ಗೆಲುವಿನ ನಗು ಬೀರಬಹುದು.
Advertisement