
ನವದೆಹಲಿ: ಲೋಕಸಭಾ ಫಲಿತಾಂಶ ಹೊರಬೀಳುತ್ತಲೇ ತಮ್ಮನ್ನು ಅಭಿನಂದಿಸಿದ ಜಗತ್ತಿನ ಹಲವು ರಾಷ್ಟ್ರಗಳ ನಾಯಕರಿಗೆ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. ಆದರೆ, ಅಚ್ಚರಿಯ ಸಂಗತಿಯೆಂದರೆ, ಎಲ್ಲರಿಗಿಂತ ಮೊದಲು ಅಭಿನಂದನೆ ಸಲ್ಲಿಸಿದ್ದ ಅಮೆರಿಕಕ್ಕೆ ಮೋದಿ ಧನ್ಯವಾದ ಹೇಳಿಲ್ಲ. ಇದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ಬಳಸಿಕೊಂಡಿರುವ ಮೋದಿ, ತಮಗೆ ಅಭಿನಂದನೆ ಸಲ್ಲಿಸಿದ್ದ ಎಲ್ಲಾ ದೇಶಗಳಿಗೆ ಧನ್ಯವಾದ ಹೇಳಿದ್ದಾರೆ. ಆದರೆ, ಅಮೆರಿಕದ ಹೆಸರನ್ನು ಅವರೆಲ್ಲಿಯೂ ಉಲ್ಲೇಖಿಸಿಲ್ಲ. ಗುಜರಾತ್ ನರಮೇಧದ ನಂತರ ಅಮೆರಿಕ ಮೋದಿ ಅವರನ್ನು ತನ್ನ ನೆಲದಲ್ಲಿ ಬಿಟ್ಟುಕೊಳ್ಳಲು ನಿರಾಕರಿಸಿತ್ತು. ಯೂರೋಪ್‌ನ ಕೆಲ ರಾಷ್ಟ್ರಗಳೂ ಮೋದಿ ವಿಚಾರದಲ್ಲಿ ಅಮೆರಿಕವನ್ನೇ ಅನುಸರಿಸಿದ್ದವು. ಇದೀಗ, ಮೋದಿ ಪ್ರಧಾನಿಯಾಗುವುದು ಖಾತ್ರಿಯಾಗುತ್ತಲೇ ಈ ಎಲ್ಲಾ ರಾಷ್ಟ್ರಗಳು ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿವೆ.
Advertisement