
ನವದೆಹಲಿ: ದೆಹಲಿ ಗದ್ದುಗೆಯ ಮೇಲೆ ಮೋದಿ ಪಟ್ಟಾಭಿಷೇಕವಾಗುವ ದಿನ ಹತ್ತಿರವಾದಂತೆ, ಮತ್ತಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಸಂಚಲನ ಶುರುವಾಗಿದೆ. ಮೊನ್ನೆ ಶುಕ್ರವಾರದವರೆಗೂ ಮೋದಿ ಅಂದರೆ ಅವರೊಬ್ಬ ಹಿಂದೂವಾದಿ ಎನ್ನುತ್ತಿದ್ದ ಆ ದೇಶಗಳು, ಚುನಾವಣಾ ಫಲಿತಾಂಶ ಹೊರಬೀಳುತ್ತಲೇ ಅವರನ್ನು ಮಹಾನ್ ನಾಯಕನನ್ನಾಗಿ ಸ್ವೀಕರಿಸಿವೆ. ಅಷ್ಟೇ ಅಲ್ಲ... ಅಮೆರಿಕ, ಬ್ರಿಟನ್, ಇಸ್ರೇಲ್, ಆಸ್ಟ್ರೇಲಿಯಾ ಮುಂತಾದ ರಾಷ್ಟ್ರಗಳು ಮೋದಿ ಕಡೆಗೆ ನೀ ಮುಂದು, ತಾ ಮುಂದು ಎನ್ನುವಂತೆ ಸ್ನೇಹಹಸ್ತ ಚಾಚುತ್ತಿವೆ.
ಮೋದಿ ಕಡೆಗೆ ಹೀಗೆ ದೋಸ್ತಿ ಕಾ ಹಾಥ್ ಚಾಚುತ್ತಿರುವ ದೇಶಗಳಲ್ಲಿ ಮೊದಲನೆಯದು ಅಮೆರಿಕ. ಆ ದೇಶದ ಅಧ್ಯಕ್ಷ ಒಬಾಮ, ಮೋದಿಗೆ ಶುಭಾಶಯ ಕೋರಿ ತಮ್ಮ ದೇಶಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ. ಅಮೆರಿಕ ಅಷ್ಟೇ ಅಲ್ಲ, ಗುಜರಾತ್ ಗಲಭೆ ಕಾರಣಕ್ಕಾಗಿ ಯಾವ್ಯಾವ ದೇಶಗಳು ಮೋದಿಯವರನ್ನು ದ್ವೇಷಿಸುತ್ತಿದ್ದವೋ, ಅವೆಲ್ಲರೂ ಈಗ ಹಿಂದಿನದ್ದೆಲ್ಲವನ್ನೂ ಮರೆತು, ಕಳೆದ ಹತ್ತು ವರ್ಷಗಳಲ್ಲಿ ಮೋದಿ ಬಗ್ಗೆ ಮಾಡಿದ್ದ ತಪ್ಪನ್ನು ತಿದ್ದಿಕೊಳ್ಳಲು ಆರಂಭಿಸಿವೆ. ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ಮೇಲೆ ನಿಷೇಧ ಹೇರಿದ್ದರೂ, ಈಗ ಪರಿಸ್ಥಿತಿ ಬದಲಾಗಿರುವುದರಿಂದ ಮೋದಿ, ಪಾಶ್ಚಿಮಾತ್ಯ ರಾಷ್ಟ್ರಗಳ ಸ್ನೇಹವನ್ನು ತಿರಸ್ಕರಿಸಲಾರರು.
ಅಭಿವೃದ್ಧಿ ಹಿತದೃಷ್ಟಿ: ತಮ್ಮ ಬಹುತೇಕ ಭಾಷಣಗಳಲ್ಲಿ ಮೋದಿ ಅವರು ಭಾರತದ ಆರ್ಥಿಕ ವ್ಯವಸ್ಥೆ ಸದೃಢಗೊಳಿಸುವುದಾಗಿ ಹೇಳಿದ್ದಾರೆ. ಅದನ್ನು ಪ್ರಧಾನಿಯಾದ ಮೇಲೆ ಸಾಧಿಸಿ ತೋರಿಸಬೇಕಿದೆ. ಇದನ್ನು ಅವರು ಸಾಧಿಸಬೇಕೆಂದರೆ, ಪಶ್ಚಿಮದ ದೇಶಗಳ ಸ್ನೇಹ ಸಂಪಾದಿಸಲೇಬೇಕು.
ಪೂರ್ವರಾಷ್ಟ್ರಗಳಿಂದಲೂ ಮೋದಿಗೆ ಅಭಿನಂದನೆ
ಮೋದಿ ಈಗ ಸದ್ಯಕ್ಕೆ ವಿಶ್ವಮಟ್ಟದ ಗಮನ ಸೆಳೆದಿರುವುದಂತೂ ದಿಟ. ಪೂರ್ವದಲ್ಲಿನ ರಾಷ್ಟ್ರಗಳೂ ಮೋದಿಗೆ ಅಭಿನಂದನೆ ಹೇಳಿ, ಸ್ನೇಹದ ಹಸ್ತ ಚಾಚಿವೆ. ಸಿಂಗಾಪುರ ಪ್ರಧಾನಿ ಲೀ ಹ್ಸೆನ್ ಲೂಂಗ್ ಅವರು ಮೋದಿಗೆ ಪತ್ರದ ಮೂಲಕ ತಮ್ಮ ದೇಶಕ್ಕೆ ಆಮಂತ್ರಣ ನೀಡಿದ್ದಾರೆ. ಜಪಾನ್ ಕೂಡ ಮೋದಿಯವರನ್ನು ಆಹ್ವಾನಿಸಿದೆ. ಹೀಗೆ, ಪೂರ್ವದ ದೇಶಗಳೂ ನಮೋ ಎನ್ನುತ್ತಿವೆ. ಆದರೆ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿನ ಗಡಿಬಿಡಿ, ಅವಕಾಶವಾದ, ಪೂರ್ವ ರಾಷ್ಟ್ರಗಳಲ್ಲಿಲ್ಲ.
ಹಲ್ಲು ಕಿರಿಯುತ್ತಿರುವ ಪಾಕಿಸ್ತಾನ, ಚೀನಾ
ಭಾರತದ ಒಳಿತನ್ನು ಕಂಡು ಸಹಿಸದ, ಭಾರತದ ವಿರುದ್ಧ ಸದಾ ಕತ್ತಿ ಮಸೆಯುವುದನ್ನೇ ಕಾಯಕ ಮಾಡಿಕೊಂಡು, ಭಾರತದ ಪಾಲಿಗೆ ಮಗ್ಗುಲ ಮುಳ್ಳುಗಳೇ ಆಗಿರುವ ಪಾಕಿಸ್ತಾನ ಹಾಗೂ ಚೀನಾ ಈಗ ಮೋದಿ ಕಡೆಗೆ ಒಲವು ತೋರಿವೆ. ಇದು ಕೇವಲ ಔಪಚಾರಿಕ ಎಂಬುದು ಭಾರತೀಯರೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೂ ಗೊತ್ತು.
Advertisement