
ಪಟನಾ: ಬಿಹಾರಕ್ಕೆ ಹೊಸ ನಾಯಕನ ಆಯ್ಕೆ. ಜಿತನ್ ರಾಮ್ ಮಾಂಝಿ ನೂತನ ಮುಖ್ಯಮಂತ್ರಿ.
ಚುನಾವಣೆಯ ಸೋಲಿನ ಹೊಣೆಹೊತ್ತು ಶನಿವಾರವಷ್ಟೇ ರಾಜಿನಾಮೆ ಸಲ್ಲಿಸಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್ ಸೋಮವಾರ ತಮ್ಮ ಆಪ್ತ ಜಿತನ್ ರಾಮ್ ಮಾಂಝಿ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.
ಇದಕ್ಕೂ ಮುನ್ನ ಜೆಡಿಯು ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಈ ವೇಳೆ ರಾಜಿನಾಮೆ ಹಿಂಪಡೆಯುವಂತೆ ಜೆಡಿಯು ಶಾಸಕರು ಹಾಗೂ ಬೆಂಬಲಿಗರು ನಿತೀಶ್‌ರನ್ನು ಎಷ್ಟು ಒತ್ತಾಯಿಸಿದರೂ ಅದಕ್ಕೆ ಮಣಿಯದ ಅವರು ತನ್ನ ನಿರ್ಧಾರಕ್ಕೆ ಬದ್ಧ ಎಂದಿದ್ದರು. ಜತೆಗೆ, ಹೊಸ ನಾಯಕನ ಆಯ್ಕೆಯನ್ನು ಮಂಗಳವಾರ ನಡೆಸುವುದಾಗಿಯೂ ತಿಳಿಸಿದ್ದರು. ಇದಾದ ಸ್ವಲ್ಪ ಸಮಯದಲ್ಲೇ ಬಿಹಾರ ರಾಜ್ಯಪಾಲರನ್ನು ಭೇಟಿಯಾಗಿ, ಜಿತನ್ ರಾಮ್‌ರನ್ನು ಬಿಹಾರ ಸಿಎಂ ಎಂದು ಘೋಷಿಸಿಯೇ ಬಿಟ್ಟರು.
ಮಹಾದಲಿತ್ ಜಾತಿ ಮೇಲೆ ಕಣ್ಣು: ಜಿತನ್ ರಾಮ್ ಅವರು ಬಿಹಾರದ ಅತ್ಯಂತ ಕೆಳಜಾತಿಯೆಂದೇ ಪರಿಗಣಿಸಲಾದ ಮುಸಾಹರ್ ಸಮುದಾಯದ ಮಹಾದಲಿತ್ ಜಾತಿಗೆ ಸೇರಿದವರು. ಕೆಳಜಾತಿಯ ಮತದಾರರನ್ನು ಸೆಳೆಯಲೆಂದೇ ನಿತೀಶ್ ಅವರು ಜಿತನ್ ಹೆಸರನ್ನು ಸಿಎಂ ಸ್ಥಾನಕ್ಕೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಂದಿನ ವರ್ಷವೇ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ಮೇಲೆ ಕಣ್ಣಿಟ್ಟು ನಿತೀಶ್ ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ತಾನು ಎಂದಿಗೂ ಕೆಳಜಾತಿಯವರ, ದುರ್ಬಲರ ಪರ ಎಂಬುದನ್ನು ಸಾಬೀತುಪಡಿಸಲು ನಿತೀಶ್ ಹೊರಟಿದ್ದಾರೆ.
ಬಹುಮತವಿದೆ: ಇದೇ ವೇಳೆ ಮಾತನಾಡಿದ ನಿತೀಶ್, ವಿಧಾನಸಭೆಯಲ್ಲಿ ಜೆಡಿಯುಗೆ ಬಹುಮತ ಸಾಬೀತುಪಡಿಸುವಷ್ಟು ಸಂಖ್ಯಾಬಲವಿದೆ. ಸಿಪಿಐನ ಒಬ್ಬ ಮತ್ತು ಇಬ್ಬರು ಪಕ್ಷೇತರ ಶಾಸಕರು ನಮಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ನಿರ್ಧಾರಕ್ಕೆ ಸ್ವಾಗತ: ಜಿತನ್‌ರನ್ನು ಸಿಎಂ ಆಗಿ ಘೋಷಿಸಿದ ನಿತೀಶ್ ನಿರ್ಧಾರವನ್ನು ಜೆಡಿಯು ನಾಯಕ ಅನಿಲ್ ಆನಂದ್ ಸ್ವಾಗತಿಸಿದ್ದಾರೆ. ಜಿತನ್ ಅನುಭವಿಗಳು. ಮಹಾದಲಿತ್‌ವೊಬ್ಬರನ್ನು ಸಿಎಂ ಆಗಿ ಆಯ್ಕೆ ಮಾಡುವ ಮೂಲಕ ನಿತೀಶ್ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.
Advertisement