
ನವದೆಹಲಿ: ಭ್ರಷ್ಟಾಚಾರ ಅಸ್ತ್ರ ಮುಂದಿಟ್ಟುಕೊಂಡು ರಾಜಕೀಯ ಎದುರಾಳಿ ಪಕ್ಷ ತೆಲುಗು ದೇಶಂ ಕಿರುಕುಳ ನೀಡಬಹುದು ಎಂದು ಭೀತಿಗೊಂಡಿರುವ ವೈಎಸ್‌ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್‌ಮೋಹನ್ ರೆಡ್ಡಿ ರಕ್ಷಣೆಗಾಗಿ ಮೋದಿ ಅವರಲ್ಲೇ ಮೊರೆ ಇಟ್ಟಿದ್ದಾರೆ. ಪಕ್ಷದ ಸಂಸದರೊಂದಿಗೆ ಸೋಮವಾರ ಮೋದಿ ಭೇಟಿ ಮಾಡಿದ್ದ ಜಗನ್, ಸೀಮಾಂಧ್ರದಲ್ಲಿ ಅಧಿಕಾರದ ಗದ್ದುಗೆ ಏರಲಿರುವ ಟಿಡಿಪಿಯು ತಮ್ಮ ಮೇಲಿರುವ ಭ್ರಷ್ಟಾಚಾರದ ಸುಳ್ಳು ಆರೋಪಗಳಿಗೆ ಮತ್ತೆ ಜೀವ ನೀಡಿ ಕಿರುಕುಳ ನೀಡದಂತೆ ಭರವಸೆ ನೀಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಟಿಡಿಪಿ ಎನ್‌ಡಿಎ ಅಂಗಪಕ್ಷವಾಗಿದೆ.
'ನೀವು ಅಧಿಕಾರ ಸ್ವೀಕರಿಸಿದ 45 ದಿನಗಳಲ್ಲಿ ಜಗನ್ ಮತ್ತೆ ಜೈಲು ಸೇರುತ್ತಾರೆ' ಎಂದು ಟಿಡಿಪಿ ಮುಖಂಡರೊಬ್ಬರು ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಅದಕ್ಕೆ ಇಂಬು ನೀಡುವಂತೆ, 'ಕಾನೂನು ತನ್ನ ಕೆಲಸ ಮಾಡುತ್ತದೆ. ನಾನು ಯಾರನ್ನೂ ರಕ್ಷಿಸುವುದಿಲ್ಲ' ಎಂದು ಸೀಮಾಂಧ್ರದ ನಿಯೋಜಿತ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹೇಳಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜಗನ್ ದೆಹಲಿಗೆ ದೌಡಾಯಿಸಿ ಮೋದಿ ಭೇಟಿ ಮಾಡಿದ್ದಾರೆ.
ಭೇಟಿ ಕುರಿತು ಪ್ರತಿಕ್ರಿಯಿಸಿದ ಜಗನ್, 'ಎನ್‌ಡಿಎಗೆ ನಮ್ಮ ಬೆಂಬಲ ಬೇಕಿಲ್ಲದಿರಬಹುದು. ಆದರೆ ಆಂಧ್ರಕ್ಕೆ ಮೋದಿ ಅಗತ್ಯವಿದೆ. ಅವರಿಗೆ ನಮ್ಮ ಪಕ್ಷದ ವಿಷಯಾಧಾರಿತ ಬೆಂಬಲವಿದೆ' ಎಂದರು.
Advertisement