ಮೇಲ್ಮನೇಲಿ ಮಸೂದೆ ಅಂಗೀಕಾರಕ್ಕೆ ನರೇಂದ್ರ ಮೋದಿ ತಂತ್ರ

ರಾಜ್ಯಮಿತ್ರರ ಹುಡುಕಾಟಕ್ಕೆ ಶುರುವಾಗಿದೆ ಯತ್ನ
ಮೇಲ್ಮನೇಲಿ ಮಸೂದೆ ಅಂಗೀಕಾರಕ್ಕೆ ನರೇಂದ್ರ ಮೋದಿ ತಂತ್ರ
Updated on

ನವದೆಹಲಿ: ಕೊನೆಯ ಹಂತದ ಮತದಾನ ಮುಗಿಯುತ್ತಿದ್ದಂತೆ ಮೋದಿ ಆಪ್ತ ಅಮಿತ್ ಶಾ ಸೇರಿದಂತೆ ಬಿಜೆಪಿ ಪ್ರಮುಖರು ಒಂದು ಹೇಳಿಕೆ ತೇಲಿಬಿಟ್ಟರು- 'ಎನ್‌ಡಿಎಗೆ ಬಹುಮತ ಬಂದರೂ ನಮ್ಮನ್ನು ಬೆಂಬಲಿಸುವ ಎಲ್ಲ ಪಕ್ಷಗಳಿಗೂ ಸ್ವಾಗತ'. ಇಂಥದ್ದೊಂದು ಹೇಳಿಕೆ ಹಿಂದೆ ಮೋದಿ ಚಾಣಾಕ್ಷ ನಡೆ ಇರುವುದು ಈಗ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯ.
ಲೋಕಸಭೆಯಲ್ಲಿ ಎನ್‌ಡಿಎ ಸರಳ ಬಹುಮತಕ್ಕಿಂತ ಹೆಚ್ಚಿನ ಸ್ಥಾನಗಳನ್ನೇ ಪಡೆದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ತೊಂದರೆ ಇರುವುದು ರಾಜ್ಯಸಭೆಯಲ್ಲಿ. ಅಲ್ಲಿ ಮಿತ್ರಪಕ್ಷಗಳನ್ನು ಗಣನೆಗೆ ತೆಗೆದುಕೊಂಡರೂ ಎನ್‌ಡಿಎ ಬಲ ವಿಧೇಯಕಗಳ ಅಂಗೀಕಾರಕ್ಕೆ ಸಾಲದು. ಮೇಲ್ಮನೆಯಲ್ಲಿ ಪ್ರಮುಖ ವಿಧೇಯಕಗಳ ಅಂಗೀಕಾರಕ್ಕೆ ಇತರ ಪಕ್ಷಗಳ ಬೆಂಬಲ ಅಗತ್ಯ. ಅದನ್ನು ಊಹಿಸಿಯೇ ಮೋದಿ ಬಳಗ ಫಲಿತಾಂಶಕ್ಕೆ ಮುನ್ನವೇ ಹೊಸ ಮಿತ್ರರ ಹುಡುಕಾಟದಲ್ಲಿ ತೊಡಗಿದ್ದು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 46. ಮಿತ್ರಪಕ್ಷಗಳನ್ನೂ ಸೇರಿಸಿಕೊಂಡರೆ ಆ ಸಂಖ್ಯೆ 65. ವಿಧೇಯಕಗಳ ಅಂಗೀಕಾರಕ್ಕೆ 123 ಸದಸ್ಯರ ಬೆಂಬಲ ಅಗತ್ಯ. 68 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್ (ಯುಪಿಎ ಒಟ್ಟು ಬಲ 102) ಸಹ ಮೇಲ್ಮನೆಯಲ್ಲಿ ಪ್ರಾದೇಶಿಕ ಪಕ್ಷಗಳನ್ನೇ ಅವಲಂಬಿಸಿತ್ತು. ರಾಜ್ಯಸಭೆಯ ಮೂರನೇ ಒಂದರಷ್ಟು ಸದಸ್ಯರು ನಿವೃತ್ತರಾಗುವುದು 2016ರಲ್ಲಿ. ಆನಂತರವಷ್ಟೇ ಬಿಜೆಪಿ ತನ್ನ ಬಲ ವೃದ್ಧಿಸಿಕೊಳ್ಳಲು ಸಾಧ್ಯ. ಅಲ್ಲಿಯವರೆಗೆ ಮೋದಿ ಸರ್ಕಾರ ಪ್ರಾದೇಶಿಕ ಪಕ್ಷಗಳನ್ನೇ ಅವಲಂಬಿಸುವುದು ಅನಿವಾರ್ಯ. ಇಂಥದ್ದೊಂದು ದೂರದೃಷ್ಟಿಯಿಂದಲೇ ಮೋದಿ ಎಐಎಡಿಎಂಕೆ, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳ ಮೈತ್ರಿಯತ್ತ ಒಲವು ತೋರುತ್ತಿರುವುದು.

ಜಂಟಿ ಅಧಿವೇಶನ ಅಸ್ತ್ರ
ಮಹತ್ವದ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಹಿನ್ನಡೆಯಾದರೆ ಮೋದಿ ಜಂಟಿಅಧಿವೇಶನ ಕರೆಯುವಂತೆ ರಾಷ್ಟ್ರಪತಿಗಳನ್ನು ಕೋರಬಹುದು. ಅಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲ ಇರುವುದರಿಂದ ವಿಧೇಯಕಗಳನ್ನು ಮಂಡಿಸಿ ಅಂಗೀಕಾರವಾಗುವಂತೆ ನೋಡಿಕೊಳ್ಳಬಹುದು. ಸಂವಿಧಾನದ 118ನೇ ಪರಿಚ್ಛೇದದಲ್ಲಿ ಈ ಅವಕಾಶವಿದೆ. ಲೋಕಸಭೆಯ 545 (543 ಮತ್ತು ಇಬ್ಬರು ನಾಮನಿರ್ದೇಶಿತರು) ಮತ್ತು ರಾಜ್ಯಸಭೆಯ 245 ಸದಸ್ಯರನ್ನು ಸೇರಿಸಿದರೆ ಸದನದ ಒಟ್ಟು ಬಲ 790. ವಿಧೇಯಕ ಅಂಗೀಕಾರಕ್ಕೆ ಬೇಕಾಗುವುದು 396 ಮತ. ಎನ್‌ಡಿಎ ಬಲ 400 ಆಗುತ್ತದೆ. ಸಂವಿಧಾನ ತಿದ್ದುಪಡಿ ವಿಧೇಯಕಗಳ ಅಂಗೀಕಾರಕ್ಕೆ ಮಾತ್ರ ಜಂಟಿ ಅಧಿವೇಶನ ಕರೆಯುವಂತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com