
ಅಹಮದಾಬಾದ್: ಹನ್ನೆರಡು ವರ್ಷಗಳ ಕಾಲ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ ನರೇಂದ್ರ ಮೋದಿ ಬುಧವಾರ ರಾಜಿನಾಮೆ ನೀಡಲಿದ್ದಾರೆ. ಗುಜರಾತ್ ವಿಧಾನಸಭೆಯಲ್ಲಿ ವಿಶೇಷ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ವಿದಾಯ ಹೇಳಲಾಗುತ್ತದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಗುಜರಾತ್ ಸರ್ಕಾರ ಕೈಗೊಂಡಿದೆ. ಗುಜರಾತ್ ವಿಧಾನಸಭೆಯ ಸೆಂಟ್ರಲ್ ಹಾಲ್‌ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಎಲ್ಲಾ ಶಾಸಕರು, ವಿವಿಧ ಪಕ್ಷಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆಂದು ಗುಜರಾತ್ ವಿಧಾನಸಭೆ ಸ್ಪೀಕರ್ ವಜು ವಾಲಾ ತಿಳಿಸಿದ್ದಾರೆ. ಮೊರಾರ್ಜಿ ದೇಸಾಯಿ ಪ್ರಧಾನಿಯಾದ ಬಳಿಕ ಗುಜರಾತ್‌ನಿಂದ ಪ್ರಧಾನಿ ಹುದ್ದೆಗೆ ಏರುವ ಎರಡನೇ ವ್ಯಕ್ತಿ ಮೋದಿಯವರಾಗಲಿದ್ದಾರೆ.
ಇಂದು ರಾಜಿನಾಮೆ: ಎನ್‌ಡಿಎ ನಾಯಕನಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಮಂಗಳ ವಾರ ರಾತ್ರಿಯೇ ಅಹಮದಾಬಾದ್‌ಗೆ ಆಗಮಿಸಿದ್ದರು. ಬುಧವಾರ ಬೆಳಗ್ಗೆ ರಾಜ್ಯಪಾಲ ಡಾ.ಕಮಲಾ ಬೇನಿವಾಲ್‌ರನ್ನು ಭೇಟಿಯಾಗಿ ತ್ಯಾಗಪತ್ರ ಸಲ್ಲಿಸಲಿದ್ದಾರೆ. ನಂತರ ಅವರು ವಿಧಾನಸಭೆಗೆ ತೆರಳಿ ವಿದಾಯ ಕೂಟದಲ್ಲಿ ಭಾಗವಹಿಸಲಿದ್ದಾರೆ.
ಇಂದು ಬಿಜೆಪಿ ಸಭೆ: ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಧಿಕಾರ ವಹಿಸಿದ ದಿನದಿಂದಲೂ ವಿವಿಧ ಖಾತೆಗಳನ್ನು ನಿರ್ವಹಿಸಿದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಹೊಸ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಬುಧವಾರ ಸಂಜೆ ಗುಜರಾತ್ ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗುವುದು. ಪಟೇಲ್ ಅವರು ಮೋದಿಯರ ವಿಶ್ವಾಸಾರ್ಹ ಸಚಿವೆ ಎಂದು ಬಣ್ಣಿಸಲಾಗುತ್ತದೆ. ಶಾಲಾ ಅಧ್ಯಾಪಕಿಯಾಗಿದ್ದ ಆನಂದಿ ಬೆನ್ ಪಟೇಲ್ ಅವರು ರಾಜಕೀಯ ಸೇರುವ ನಿಟ್ಟಿನಲ್ಲಿ ಉದ್ಯೋಗಕ್ಕೆ ರಾಜಿನಾಮೆ ನೀಡಿದ್ದರು.
Advertisement