

ರಾಜಕಾರಣ, ಜನಸೇವೆಯಷ್ಟೇ ಕುಟುಂಬಕ್ಕೂ ಗೌರವ
ಜನಬೆಂಬಲದಿಂದ ಈ ಬಾರಿ ಯಜಮಾನ್ರಿಗೆ ಗೆಲವು ಖಚಿತ
-ಶಶಿಧರ ಮೇಟಿ
ಬಳ್ಳಾರಿ: ನಮ್ಮ ಮನೆಯವರು ಜನರೊಂದಿಗೆ ಹೊಂದಿರುವುದು ಕೇವಲ ರಾಜಕಾರಣಿ-ಮತದಾರ ಎಂಬ ಸಂಬಂಧ ಮಾತ್ರವಲ್ಲ, ಅದು ಭಾವನಾತ್ಮಕ ಸಂಬಂಧ. ಅದರಿಂದಲೇ ಮತದಾರರು ನಮ್ಮೆಜಮಾನರನ್ನು ಚುನಾವಣೆಯಲ್ಲಿ ಕೈ ಹಿಡಿಯುತ್ತಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಅವರ ಪತ್ನಿ ಭಾಗ್ಯಲಕ್ಷ್ಮಿ ಅವರು ತಮ್ಮ ಪತಿ ಬಗ್ಗೆ ಆಡಿದ ಮನದಾಳದ ಮಾತುಗಳಿವು. ರಾಜ್ಯ ರಾಜಕಾರಣದಿಂದ ರಾಷ್ಟ್ರೀಯ ರಾಜಕಾರಣಕ್ಕೆ ಹೋಗುತ್ತಿರುವ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಪತ್ನಿ ಭಾಗ್ಯಲಕ್ಷ್ಮಿ 'ಕನ್ನಡಪ್ರಭ'ಕ್ಕೆ ನೀಡಿದ ಸಂದರ್ಶನದ ಪೂರ್ಣಪಾಠ ಇಲ್ಲಿದೆ.
ನಮ್ಮ ಯಜಮಾನರು 18ನೇ ವಯಸ್ಸಿನಿಂದಲೇ ರಾಜಕಾರಣ ಮಾಡುತ್ತಾ ಬಂದಿದ್ದು, 25 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಇದು ಅವರ ರಾಜಕೀಯ ಅನುಭವ ಅನ್ನುವುದಕ್ಕಿಂತ ಅವರು ಜನರೊಂದಿಗೆ ಹೊಂದಿರುವ ಸಂಬಂಧವೇ ಗೆಲವಿಗೆ ಶ್ರೀರಕ್ಷೆಯಾಗಿದೆ. 1996ರಲ್ಲಿ ಬಳ್ಳಾರಿ ನಗರಸಭೆ ಸದಸ್ಯರಾದಾಗಿನಿಂದ ಅವರ ರಾಜಕೀಯ ಜೀವನ ಆರಂಭವಾಯಿತು. ಅದೇ ವರ್ಷ ನಮ್ಮ ಮದುವೆಯಾಯಿತು. ಆಗಿನಿಂದಲೂ ಅವರ ರಾಜಕೀಯಕ್ಕೆ ನಾವು ಸಹಕಾರ ನೀಡುತ್ತಾ ಬಂದಿದ್ದೇವೆ. ಯಜಮಾನರು ಕುಟುಂಬದ ಬಗ್ಗೆ ಗಮನ ಕೊಡುವುದಿಲ್ಲ ಎಂಬ ಕೊರಗು ಎಂದೂ ಕಾಡಿಲ್ಲ. ಏಕೆಂದರೆ ಅವರು ಜನರಿಗೆ ಮಾಡಿದ ಸೇವೆಯೇ ನಮ್ಮ ಕುಟುಂಬ ಇಷ್ಟೊಂದು ಸುಖ, ಸಂತೋಷದಿಂದ ಇರಲು ಸಾಧ್ಯವಾಗಿದೆ.
ನಾನು ಪತಿ ಪರವಾಗಿ ಪ್ರಚಾರ ಮಾಡುವ ಅಗತ್ಯವಿಲ್ಲ. ಚುನಾವಣೆ ಪ್ರಚಾರಕ್ಕೆ ಹೋದವರು ಮನೆಗೆ ಬಂದಿಲ್ಲ. ಅವರೊಂದಿಗೆ ಫೋನಿನಲ್ಲಿ ಮಾತನಾಡುತ್ತೇನೆ. ದಿನದ 15 ಗಂಟೆಗಳ ಕಾಲ ಪ್ರಚಾರದಲ್ಲಿ ತೊಡಗಿರುತ್ತಾರೆ. ಇನ್ನು ನಾನು ಪ್ರಚಾರ ಮಾಡುವ ಅಗತ್ಯವೇನಿದೆ? ನನ್ನನ್ನು ಶ್ರೀರಾಮುಲು ಪತ್ನಿ ಎಂದು ಸಮಾಜದಲ್ಲಿ ಗುರುತಿಸುತ್ತಾರೆ. ನನಗದೇ ವರ್ಚಸ್ಸು. ಕುಟುಂಬದ ಕಡೆಗೆ ಗಮನ ಕೊಡುವುದರಿಂದ ಪ್ರಚಾರಕ್ಕೆ ಹೋಗಿಲ್ಲ ಎನ್ನುತ್ತಾರೆ ಭಾಗ್ಯಲಕ್ಷ್ಮೀ.
ಫೋನ್ ಮಾಡಿ ಅವರ ಆರೋಗ್ಯ ವಿಚಾರಿಸುತ್ತಿರುತ್ತೇನೆ, ಸರಿಯಾದ ಸಮಯಕ್ಕೆ ಊಟ ಮಾಡಿ, ಆರೋಗ್ಯದ ಕಡೆಗೆ ಜೋಪಾನ ಎನ್ನುತ್ತೇನೆ. ಅವರೂ ಕುಟುಂಬದ ಕುಶಲೋಪರಿಯನ್ನು ಫೋನಿನಲ್ಲಿಯೇ ವಿಚಾರಿಸುತ್ತಾರೆ. ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಕೇಳುತ್ತಿರುತ್ತಾರೆ. ರಾಮುಲು ಆರೋಗ್ಯ, ಯೋಗಕ್ಷೇವುದ ಬಗ್ಗೆ ನನಗೆ ಹೆಚ್ಚು ಚಿಂತೆ, ಕಾಳಜಿ. ಆದರೆ, ಅವರಿಗೆ ಜನರ ಬಗ್ಗೆ ಹೆಚ್ಚು ಕಾಳಜಿ ಇರುವುದು ಸಂತೋಷ ತಂದಿದೆ. ಸೇವೆ ಬಗ್ಗೆ ಧನ್ಯತಾ ಭಾವ ಇದೆ ಎಂದು ಮಾತು ಮುಗಿಸಿದರು.
Advertisement