

ಬಾಂಬ್ ಸದ್ದಿನಲ್ಲಿ ಯಾವುದೇ ಮಾತುಕತೆ ನಡೆಸಲಾಗದು
2002ರ ಗಲಭೆ ಬಗ್ಗೆ ಕೋರ್ಟ್ ಎಲ್ಲಾ ಹೇಳಿದೆ, ನನ್ನದೇನೂ ಮಾತಿಲ್ಲ
ರಾಜೀವ್ ಗಾಂಧಿ ನೇತೃತ್ವದ ಸರ್ಕಾರ ಬಿಟ್ಟರೆ, ಅತ್ಯಂತ ಸ್ಥಿರ, ದೃಢ ಸರ್ಕಾರವನ್ನು ನಾನು ನೀಡುತ್ತೇನೆ... ಇದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅತ್ಯಂತ ವಿಶ್ವಾಸಯುತ ಹೇಳಿಕೆ. ಚುನಾವಣಾ ಪ್ರಕ್ರಿಯೆ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಆಂಗ್ಲ ಸುದ್ದಿವಾಹಿನಿ ಟೈಮ್ಸ್‌ನೌಗೆ ನೀಡಿರುವ ಸಂದರ್ಶನದಲ್ಲಿ ಮೋದಿ ಮುಂದಿನ ಕನಸುಗಳ ಬಿಚ್ಚಿಟ್ಟಿದ್ದಾರೆ.
- ಚುನಾವಣಾ ಆಯೋಗದ ಮೇಲೆ ನಿಮಗೆ ಸಿಟ್ಯಾಕೆ? ಅದು ಜಿಲ್ಲಾ ಚುನಾವಣಾಧಿಕಾರಿಗಳು ಹೇಳಿದಂತೆ ಕೇಳುತ್ತದೆ ಅಲ್ಲವೇ, ಆದರೆ ಈಗ ನೀವು ಚುನಾವಣಾ ಆಯೋಗವನ್ನೇ ದೂರುತ್ತಿದ್ದೀರಿ, ಏಕೆ?
-ಇದುವರೆಗೆ ನಾನು ಒಂದೇ ಒಂದು ಮಾತನಾಡಿಲ್ಲ, ಹೀಗಾಗಿ ಸಿಟ್ಟಾಗುವ ಪ್ರಸಂಗ ಎಲ್ಲಿಂದ ಬಂತು?
- ಆದರೆ, ನಿಮ್ಮ ಪಕ್ಷ ಮಾಡುತ್ತಿದೆ
-ನಮ್ಮ ಪಕ್ಷ ಅವರಿಗೆ ಪತ್ರ ಬರೆದು, ಸುದೀರ್ಘ ಉತ್ತರ ನೀಡಿದೆ. ಇದು ವಾರಾಣಸಿಯ ಕುರಿತೇ ಇರುವುದರಿಂದ ನಾನು ಹೆಚ್ಚು ಮಾತನಾಡಲ್ಲ. ಈ ಬಗ್ಗೆ ನೀವು ಅರುಣ್ ಜೇಟ್ಲಿ ಅವರ ಬಳಿ ವಿವರ ಪಡೆದರೆ ಒಳಿತು. ಪ್ರಜಾಪ್ರಭುತ್ವ ನಂಬಿರುವ ನಾವು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನೂ ಗೌರವಿಸುತ್ತೇವೆ. ಈ ರೀತಿಯೇ ಚುನಾವಣಾ ಆಯೋಗವನ್ನೂ ಕೂಡ. ಹೀಗಾಗಿಯೇ ಅದರ ವಿರುದ್ಧ ಮಾತನಾಡಲು ಹೋಗಿಲ್ಲ. ಆದರೆ ನಮ್ಮ ಕಷ್ಟ ಕೇಳದಿದ್ದರೆ, ಪ್ರಜಾಪ್ರಭುತ್ವದ ಮಾರ್ಗದಲ್ಲೇ ಪ್ರತಿಭಟಿಸಲು ಹಕ್ಕಿದೆ. ಹೀಗಾಗಿ ಈ ಮಾರ್ಗ ತಡೆಯಲು ಯಾರಿಗೂ ಹಕ್ಕಿಲ್ಲ, ನಾವು ಏಕೆ ತೊಂದರೆಯಲ್ಲಿ ಸಿಲುಕಿದ್ದೇವೆ ಎಂಬುದನ್ನು ಚುನಾವಣಾ ಆಯೋಗವೇ ಉತ್ತರಿಸಬೇಕು. ವಿಶೇಷವೆಂದರೆ ನಮ್ಮನ್ನು ಬಿಟ್ಟರೆ ಬೇರಾವ ಪಕ್ಷವೂ ತೊಂದರೆಯಲ್ಲಿ ಸಿಲುಕಿಲ್ಲ, ಇಂಥವೂ ತುಂಬಾ ತೊಂದರೆಗಳಾಗಿವೆ ನನಗೆ. ಆದರೆ ಈಗ ನಾನು ತೊಂದರೆಯನ್ನು ಸ್ವೀಕರಿಸಲು ಹೋಗುವುದಿಲ್ಲ. ಚುನಾವಣಾ ಆಯೋಗವೇ ನಿರ್ಧಾರ ತೆಗೆದುಕೊಳ್ಳಲಿ.
- ಕೀಳು ಮಟ್ಟದ ಜಾತಿ ರಾಜಕಾರಣ ಬೇಕಿತ್ತೇ?
-ನಿಮ್ಮ ವಾಹಿನಿ ಏಕೆ ಒಂದು ಕುಟುಂಬದ ಹಿಂದೆ ಓಡುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಆದರೆ ನಿಮಗೆ ಜವಾಬ್ದಾರಿಯಿದೆ. ಒಂದು ಪದದಿಂದ ಇಷ್ಟೆಲ್ಲಾ ವಿವಾದ ಎಬ್ಬಿಸಿದೆ ಎಂದರೆ ನಾನು ಕ್ಷಮೆ ಕೇಳುತ್ತೇನೆ. ಆದರೆ ರಾಜೀವ್ ಗಾಂಧಿ ಕಾಲದ ಕೆಲವೊಂದು ಸತ್ಯಾಂಶಗಳನ್ನು ಹೊರಜಗತ್ತಿಗೆ ತಿಳಿಸಬೇಕಿದೆ. ಹೈದರಾಬಾದ್ ಏರ್ಪೋರ್ಟ್‌ನಲ್ಲಿ ಸಚಿವರೊಬ್ಬರನ್ನು ರಾಜೀವ್ ಗಾಂಧಿ ಅವರು ಕೆಟ್ಟದಾಗಿ ನಡೆಸಿಕೊಂಡಿರಲಿಲ್ಲವೇ? ಇದು ಸತ್ಯವಲ್ಲವೇ? ಕೆಲವೊಂದು ಸತ್ಯ ಹೇಳುವುದು ತಪ್ಪಾಗುತ್ತದೆಯೇ? ನೆಹರು ಕಾಲದ ಸಂಗತಿಗಳನ್ನು ಇಂದು ತಪ್ಪಾಗಿ ಮಾತನಾಡಿದರೆ ಅವರಿಗೆ ಅವಮಾನ ಮಾಡಿದಂತಾಗುವುದಿಲ್ಲವೇ? ಇತಿಹಾಸದ ಸಂಗತಿಗಳ ಬಗ್ಗೆ ಚರ್ಚೆ ನಡೆಸಬಾರದೇ? ಹೌದು, ರಾಜೀವ್ ಗಾಂಧಿ ಕುರಿತಂತೆ ನಾನೇನಾದರೂ ಕೆಟ್ಟದಾಗಿ ಮಾತನಾಡಿದ್ದರೆ ಇದನ್ನು ವಿರೋಧಿಸುವ ಹಕ್ಕು ಮಗಳಾಗಿ ಪ್ರಿಯಾಂಕಾ ಗಾಂಧಿಗೆ ಇದೆ. ಈ ಬಗ್ಗೆ ಯಾವುದೇ ವಿರೋಧವಿಲ್ಲ. ಆದರೆ ಈ ಬಗ್ಗೆ ಯಾವುದೇ ಚರ್ಚೆಯನ್ನೂ ನಡೆಸದೇ ನೇರವಾಗಿ ದಾಳಿ ನಡೆಸಲು ಮುಂದಾದರು. ಇದು ಸರಿಯಲ್ಲ. ನೀವು ಈ ಕುರಿತ ಸತ್ಯಾಂಶ ತಿಳಿಸಬೇಕು. ಕೆಲವೊಂದು ಬಾರಿ ಮಾತನಾಡುವಾಗ ಆಚೀಚೆ ಆಗುವುದುಂಟು. ಆದರೆ ಈ ಪ್ರಕರಣದಲ್ಲಿ ಹಾಗೆ ಆಗಿಲ್ಲ. ನೀವು ಹೇಳಿದಿರಿ, ನನ್ನನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡಬಹುದು ಅಂಥ, ಆದರೆ ನನಗೆ ಸತ್ಯ ಹೇಳುವ ಹಕ್ಕೂ ಇಲ್ಲವೇ? ಏಕೆಂದರೆ ನಾನು ಅತ್ಯಂತ ಹಿಂದುಳಿದ ಪಂಗಡದಿಂದ ಬಂದವನು, ನಾನೇನು ಪ್ರಭಾವಿ ಕುಟುಂಬದಿಂದ ಬಂದವನೇ? ನನ್ನ ದೇಶ ಒಂದು ಕುಟುಂಬದ ಹಿಂದೆಯೇ ಇರಬೇಕೇ? ಪ್ರಜಾಪ್ರಭುತ್ವ ಕೂಡ ಒಂದು ಕುಟುಂಬಕ್ಕೆ ಅಡಿಯಾಳಾಗಿದೆಯೇ? ಒಬ್ಬ ಬಡವ ಹೀಗೆ ಹೇಳಿದ ಅಂದಾಕ್ಷಣ ಅದು ತಪ್ಪಾಗಿ ಹೋಗಿಬಿಡುತ್ತದೆ.
- ಆದರೆ, ಪ್ರಿಯಾಂಕಾ ಗಾಂಧಿ ನಿಮ್ಮ ಜಾತಿ ಬಗ್ಗೆ ಮಾತನಾಡಿದ್ದಾರೆ ಎಂದು ಅನ್ನಿಸುತ್ತಿದೆಯೇ?
-ಗುಜರಾತಿ ಭಾಷೆಯ ಮೇಲೆ ನನಗೆ ಹಿಡಿತವಿದೆ. ಗುಜರಾತಿ ಭಾಷೆಯಲ್ಲಿ ನೀಚ್ ಎಂದರೆ ಕೆಳ ಜಾತಿ ಎಂಬರ್ಥ. ಸಿಡಬ್ಲ್ಯೂಜಿ ಹಗರಣ ನೀಚ ರಾಜಕೀಯವಲ್ಲವೇ? ಗೋದಾಮುಗಳಲ್ಲಿರುವ ಧಾನ್ಯ ಇಲಿ ಪಾಲಾಗುವುದಕ್ಕಿಂತ ಬಡವರಿಗೆ ಹಂಚಿ ಎಂದು ಸುಪ್ರೀಂಕೋರ್ಟ್ ಆದೇಶಿಸಿದ್ದು ನಿಮಗೆ ನೀಚ ರಾಜಕೀಯ ಅನ್ನಿಸಲಿಲ್ಲವೇ? ನಿರ್ಭಯ ಹತ್ಯೆ ಬಳಿಕ ಸರ್ಕಾರ ಒಂದು ಸಾವಿರ ಕೋಟಿ ಅನುದಾನವಾಗಿ ಇಟ್ಟಿತ್ತು. ಇದರಲ್ಲಿ ಒಂದೇ ಒಂದು ಪೈಸೆಯನ್ನೂ ಖರ್ಚು ಮಾಡಿರಲಿಲ್ಲ. ಆದರೆ ಬಜೆಟ್‌ನಲ್ಲಿ ಮಾತ್ರ ಉಲ್ಲೇಖಿಸಲಾಗಿತ್ತು. ಮಧ್ಯಂತರ ಬಜೆಟ್‌ನಲ್ಲೂ ಇದನ್ನು ಪ್ರಸ್ತಾಪಿಸಲಾಗಿತ್ತು. ಆದರೂ ವೆಚ್ಚ ಮಾಡಿರಲಿಲ್ಲ. ಇದು ನೀಚ ರಾಜಕೀಯವಲ್ಲವೇ? ಇದು ನೀಚ ಕ್ರಮವಲ್ಲವೇ? ಇತರೆಯವರು ನೀಚ ರಾಜಕೀಯ ಮತ್ತು ನೀಚ ಕ್ರಮದ ಬಗ್ಗೆ ನೀಡಿರುವ ವ್ಯಾಖ್ಯಾನವನ್ನೂ ನೀಡಿದ್ದೇನೆ. ಜಾತಿಯನ್ನು ಇದರಿಂದ ಆಚೆ ಇಡಿ, ನನ್ನದು ಯಾವುದೇ ವಿರೋಧವಿಲ್ಲ.
- ಆದರೆ ನನ್ನ ಪ್ರಶ್ನೆಯೆಂದರೆ, ಯಾವಾಗ ಜಾತಿ ಬಗ್ಗೆ ಮಾತನಾಡುತ್ತಾರೋ, ಅದು ರಾಜಕೀಯ ಚರ್ಚೆಗೆ ಪ್ರವೇಶವಾಗುತ್ತದೆ. ಹೀಗಾಗಿಯೇ ನೀವು ಜಾತಿ ಪ್ರಸ್ತಾಪಿಸಿದೀರಾ?
-ನಾನೊಂದು ವಿಚಾರ ಸ್ಪಷ್ಟಪಡಿಸುತ್ತೇನೆ, ಇದರಿಂದ ನನಗೆ ಯಾವ ಲಾಭವೂ ಇಲ್ಲ. ಆದರೆ ಅವರು ಬಳಸಿದ ಪದ ಸರಿಯಿಲ್ಲ. ಜೊತೆಗೆ ಆ ಪದದ ಹಿಂದಿನ ಭಾವನೆ ಕೂಡ ಸರಿಯಲ್ಲ. ಹೋಗಲಿ ಬಿಡಿ, ನಾನು ತಪ್ಪು ಅರ್ಥ ಮಾಡಿಕೊಂಡಿದ್ದೇನೆ ಎಂದೇ ಭಾವಿಸುತ್ತೀರಾದರೂ, ಆ ಪದ ಬಳಕೆಯ ಅವರ ಉದ್ದೇಶ ಸರಿಯಿಲ್ಲ.
- ನರೇಂದ್ರ ಮೋದಿ ಅವರದ್ದು ಒಂದು ಭಾರತ, ಆದರ್ಶ ಭಾರತ. ಆದರೂ ನಿಮ್ಮ ಪಕ್ಷದ ಅಮಿತ್ ಶಾ, ಗಿರಿರಾಜ್ ಸಿಂಗ್‌ರಂಥವರು ಕೆಲವೊಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂಥ ಮಾತನಾಡಿದರು. ನೀವು ಗಿರಿರಾಜ್ ಸಿಂಗ್ ಅವರ ಹೇಳಿಕೆಗೆ ಟ್ವೀಟರ್‌ನಲ್ಲಿ ಟೀಕಿಸಿದಿರಿ. ಆದರೆ ಇದಕ್ಕೂ ಸಮರ್ಥವಾಗಿ ವಿರೋಧಿಸಬಹುದಿತ್ತು.
-ನಾನು ಇಂಥ ಹೇಳಿಕೆಗೆ ಪ್ರತಿಭಟಿಸಲಿಲ್ಲ ಎಂದು ಹೇಗೆ ಹೇಳುತ್ತೀರಿ? ಇಂಥ ಹೇಳಿಕೆ ಕೊಡುವುದು ಮುಂದುವರಿಯಲಿಲ್ಲ ಎಂದಾದರೆ ನಾನು ಕಠಿಣ ಕ್ರಮವನ್ನೇ ತೆಗೆದುಕೊಂಡಿದ್ದೇನೆ ಎಂಬರ್ಥವಲ್ಲವೇ?
- ಕೆಲವೊಮ್ಮೆ ನೀವೂ ಧಾರ್ಮಿಕ ವಿಚಾರಗಳ ಮಾತನಾಡಿದ್ದೀರಿ. ದುರ್ಗಾಷ್ಟಮಿ ಆಚರಿಸುತ್ತಿರುವವರು ಬೆಂಗಾಳಿಗಳು, ಎಲ್ಲರೂ ಭಾರತ ಮಾತೆಯ ಮಕ್ಕಳು ಎಂದಿದ್ದೀರಿ. ಇದು ಧಾರ್ಮಿಕ ಮನೋಭಾವದ ಹೇಳಿಕೆಯಲ್ಲವೇ?
-ಈ ವಿಚಾರದಲ್ಲಿ ನಾನು ಹೊಸದಾಗಿ ಏನನ್ನೂ ಹೇಳಿಲ್ಲ. ಹಿಂದಿನಿಂದಲೂ, ಅದೂ ಮಮತಾ ಬ್ಯಾನರ್ಜಿ ಅವರೇ ಹೇಳಿದ ಮಾತುಗಳನ್ನೇ ನಾನು ಮಾತನಾಡಿದ್ದೇನೆ. ಆದರೆ ನಾನು ಮಾತನಾಡಿದ್ದು ಬಾಂಗ್ಲಾ ನುಸುಳುಕೋರರ ಬಗ್ಗೆ. ಬಾಂಗ್ಲಾದಲ್ಲಿ ಹಿಂದೂಗಳನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಆದರೆ ಇಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಅವರನ್ನು ಉತ್ತಮವಾಗಿ ನಡೆಸಿಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಎಲ್ಲರ ವಿಚಾರದಲ್ಲೂ ನ್ಯಾಯ ಒದಗಿಸುತ್ತೇವೆ ಎಂದಾದರೆ, ತಸ್ಲೀಮಾ ನಸ್ರೀನ್ ವಿಚಾರದಲ್ಲಿ ಏಕೆ ಆಗಲಿಲ್ಲ. ಕಳೆದ 40 ವರ್ಷಗಳ ಹಿಂದೆ ಪಾಕ್‌ನಿಂದ ಭಾರತಕ್ಕೆ ವಲಸೆ ಬಂದವರಿದ್ದಾರೆ, ಪಶ್ಚಿಮ ಬಂಗಾಳಕ್ಕೇ ಬಾಂಗ್ಲಾದಿಂದ ಬಂದವರಿದ್ದಾರೆ. ಇವರ್ಯಾರಿಗೂ ನಮ್ಮ ಪೌರತ್ವ ಕೊಡುವ ಕೆಲಸ ಮಾಡಲಿಲ್ಲ. ಆದರೆ ಈಗಿನ ನುಸುಳುಕೋರರ ಬಗ್ಗೆ ಮಾತನಾಡಿದರೆ ವಿರೋಧಿಸುತ್ತಾರೆ. ದೇಶದ ಪರ ಮಾತನಾಡಿದರೆ, ಭಯೋತ್ಪಾದಕರ ಬಗ್ಗೆ ಮಾತನಾಡಿದರೆ ಕೋಮುವಾದಿ ಎಂಬ ಪಟ್ಟ ಕಟ್ಟಿಬಿಡುತ್ತಾರೆ.
- ಇದಲ್ಲ ಮೋದಿ ಅವರೆ, ನೀವು ವಲಸೆ ಬಂದಿರುವ ಹಿಂದೂಗಳಿಗೆ ಎಲ್ಲಾ ವ್ಯವಸ್ಥೆ ಮಾಡುವ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ. ಆದರೆ ಕ್ರಿಶ್ಚಿಯನ್, ಮುಸ್ಲಿಂ, ಸಿಖ್ ಧರ್ಮದವರ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ನಿಮ್ಮ ಪ್ರಣಾಳಿಕೆ ಎಲ್ಲಾ ಧರ್ಮೀಯರನ್ನು ಸಮಾನವಾಗಿ ಕಾಣಬೇಕಿತ್ತಲ್ಲವೇ?
-ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ.
- ಆದರೆ ಅದು ನಿಮ್ಮ ಪ್ರಣಾಳಿಕೆಯಲ್ಲಿ ಇಲ್ಲ
-ನಾವು ನಂಬಿರುವ ಹಾಗೆ ಎಲ್ಲರೂ ನಮ್ಮ ಜನರೇ. ಹಿಂದೂ ಎಂಬುದು ಧರ್ಮವಲ್ಲ. ಅದು ಜೀವನ ಮಾರ್ಗ. ಇದನ್ನು ಸುಪ್ರೀಂಕೋರ್ಟ್ ಹೇಳಿದೆ. ನಾವು ಬೌದ್ಧರನ್ನು, ಸಿಖ್ಖರನ್ನು ವಿರೋಧಿಸಿಲ್ಲ. ಕೇರಳದಲ್ಲಿ ನಮಗೆ ಕ್ರಿಶ್ಚಿಯನ್ ಬೆಂಬಲಿಗರಿದ್ದಾರೆ. ಅವರೂ ಕೂಡ ಹಿಂದೂಗಳಂತೆಯೇ ಬದುಕುತ್ತಿದ್ದಾರೆ.
- ಆದರೆ ನಿಮ್ಮ ಪ್ರಣಾಳಿಕೆಯಲ್ಲಿ ಕೇವಲ ಹಿಂದೂಗಳ ಬಗ್ಗೆ ಉಲ್ಲೇಖಿಸಿದ್ದೀರಿ.
-ಸುಪ್ರೀಂ ಹೇಳಿರುವ ಹಿಂದೂ ಬಗ್ಗೆಯಷ್ಟೇ ಹೇಳಿದ್ದೇವೆ.
- ಜನವರಿಯಲ್ಲಿ ರಾಹುಲ್ ಗಾಂಧಿ ಸಂದರ್ಶನ ಮಾಡುವಾಗ, 1984ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ಸಿಗರ ಪಾಲಿದೆಯೇ ಎಂದು ಕೇಳಿದ್ದೆ. ಹಾಗೆಯೇ 2002ರ ಗಲಭೆಯಲ್ಲಿ ಆರ್‌ಎಸ್‌ಎಸ್, ವಿಎಚ್‌ಪಿ ಅಥವಾ ಬಿಜೆಪಿಯ ಯಾವುದೇ ಸದಸ್ಯ ಪಾಲ್ಗೊಂಡಿದ್ದಾರೆಯೇ?
-ಗುಜರಾತ್ ಗಲಭೆ ಬಗ್ಗೆ ಕೋರ್ಟ್ ಎಲ್ಲಾ ಕ್ರಮ ತೆಗೆದುಕೊಂಡಿದೆ. ಆದರೆ ಮಾಧ್ಯಮಗಳು ಈ ಬಗ್ಗೆ ಹೆಚ್ಚು ವೈಭವೀಕರಿಸಿವೆ. ನನಗೆ ಯಾರೊಬ್ಬರು ಪ್ರಮಾಣಪತ್ರ ಕೊಡಬೇಕಿಲ್ಲ.
-ಚುನಾವಣೋತ್ತರ ಮೈತ್ರಿ ಬಗ್ಗೆ?
-ನಾವೇ 300 ಸ್ಥಾನ ಗೆದ್ದರೂ ಎಲ್ಲಾ ಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ದೇಶ ನಡೆಸಲು ಅಂಕಗಣಿತ ಬೇಕಾಗಿಲ್ಲ, ಬೇಕಾಗಿರುವುದು ಪ್ರೇರಣೆ.
- ಮಾಯಾವತಿ ಮತ್ತು ಮಮತಾ ಅವರೊಂದಿಗೆ ಮೈತ್ರಿ
-ಮೇ 12ರ ನಂತರ ನೋಡಿ...
-ಮೋದಿಯವರೇ, ಜಯಲಲಿತಾರ ಬಗ್ಗೆ ನಿಮಗೆ ಏನು ಅನಿಸುತ್ತಿದೆ. ಗುಜರಾತ್‌ನಲ್ಲಿ ನೀವು ಸಾಧಿಸಿರುವ ಅಭಿವೃದ್ಧಿಯ ಮಾದರಿಯನ್ನು ಅವರು ಕಟುವಾಗಿ ಟೀಕಿಸುತ್ತಿದ್ದಾರೆ. ಆದರೆ ಕಳೆದ ತಿಂಗಳ ಮಧ್ಯಭಾಗದಲ್ಲಿ ನಡೆದಿದ್ದ ರ್ಯಾಲಿಯೊಂದರಲ್ಲಿ ನೀವು ಅವರ ಟೀಕೆಗಳಿಗೆ ಮೌನವಾಗಿದ್ದಿರಿ. ಇದರಿಂದಾಗಿ ಅಗತ್ಯ ಬಿದ್ದರೆ ಜಯಲಲಿತಾ ಅವರೂ ಕೂಡ ಚುನಾವಣೆ ಬಳಿಕ ನೆರವಾಗಬಹುದು. ಕಳೆದ ಚುನಾವಣೆಯಲ್ಲಿ ನೀವು ಗೆದ್ದಾಗ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬಂದಿದ್ದರು. ನೀವು ಅವರ ಜತೆ ಕೆಲಸ ಮಾಡಲು ಸಿದ್ಧರಿದ್ದೀರಾ?
-ಮಿತ್ರರಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಿ ನೀವು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ. ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡು ಜಯಶಾಲಿಯಾಗಲಿದೆ ಎಂದು ನಾನು ನಿಮಗೆ ಹೇಳಿದ್ದೇನೆ. ಈ ಹಿಂದೆ ರಾಜೀವ್ ಗಾಂಧಿಯವರು ದೇಶದಲ್ಲಿ ಸುಭದ್ರ ಮತ್ತು ಶಕ್ತಿಯುತವಾದ ಸರ್ಕಾರ ನೀಡಿದ್ದರು. ಈ ಬಾರಿ ಅದೇ ಮಾದರಿಯ ಸರ್ಕಾರನ್ನು ನಾವು ನೀಡುತ್ತೇವೆ. ದೇಶದ ಯಾವುದೇ ಪಕ್ಷದ ಸಂಸದನಾಗಿದ್ದರೂ ನಾನು ಅವರ ಭಾವನೆಗಳಿಗೆ ಗೌರವ ನೀಡುತ್ತೇನೆ. ಏಕೆಂದರೆ ಅವರು 125 ಕೋಟಿ ಭಾರತೀಯರ ಪ್ರತಿನಿಧಿಯಾಗಿದ್ದಾರೆ. ಅವರ ಜತೆ ಉತ್ತಮ ರೀತಿಯಿಂದ ವರ್ತಿಸಲು ಯತ್ನಿಸುತ್ತೇನೆ. ಇದೇ ವಿಚಾರವನ್ನು 50 ಬಾರಿ ಹೇಳಿದ್ದೇನೆ. ನಿಮಗೆ ಅದು ಅರ್ಥವಾಗದಿದ್ದರೆ ಬೇರೊಬ್ಬರ ಬಳಿ ಅದನ್ನು ಅನುವಾದ ಮಾಡಿಸಿಕೊಳ್ಳಲು ಹೇಳಿ.
- ಚುನಾವಣೆ ಸಮಯದಲ್ಲಿ ರಾಜಕೀಯದ ಪ್ರಶ್ನೆಗಳು ಸಾಮಾನ್ಯ ಅಲ್ಲವೇ?
-ಸರಿ ಹಾಗಿದ್ದರೆ ರಾಜಕೀಯವನ್ನು ನಿಭಾಯಿಸೋಣ.
- ದೇಶದಲ್ಲಿ ಈಗ ಚುನಾವಣೆ ನಡೆಯುತ್ತಿದೆ. ಅದರ ಜತೆಗೆ ಬೇಹುಗಾರಿಕೆ ವಿಚಾರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನೀವು ಅಮಿತ್ ಶಾ ಜತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೀರಿ. ಹಾಗಿದ್ದರೆ ಟೇಪ್‌ನಲ್ಲಿರುವ ಧ್ವನಿ ಶಾ ಅವರದ್ದೇ ಎಂದು ಗುರುತಿಸಲು ನಿಮಗೆ ಸಾಧ್ಯವೇ? ಸರ್ಕಾರದ ಅನುಮತಿ ಇಲ್ಲದೆ ಮಹಿಳೆಯೊಬ್ಬರ ಮೇಲೆ ಬೇಹುಗಾರಿಕೆ ನಡೆಸಲು ಸಾಧ್ಯವೇ
-ಪ್ರಕರಣವನ್ನು ಸುಪ್ರೀಂಕೋರ್ಟ್ ಗಮನಿಸುತ್ತಿದೆ.
- ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
-ನಾನು ಏನೆಂದು ಹೇಳಲಿ? ಸುಪ್ರೀಂಕೋರ್ಟ್ ಪ್ರಕರಣವನ್ನು ಗಮನಿಸುತ್ತಿರಬೇಕಾದರೆ ನನ್ನ ಹೇಳಿಕೆಯ ಔಚಿತ್ಯವೇನು? ನನಗೆ ಅದರ ಮೇಲೆ ವಿಶ್ವಾಸವಿದೆ.
-ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರ ತನಿಖಾ ಆಯೋಗ ರಚಿಸಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದ ಟೇಪ್‌ಗಳು ಬಹಿರಂಗವಾದವು. ಇದು ಹೇಗಾಯಿತು? ತೆಹೆಲ್ಕಾದಲ್ಲಿಯೂ ಟೇಪ್‌ಗಳು ಬಹಿರಂಗವಾದ ಬಗ್ಗೆ ಸಂಚು ಎಂದೇ ಬಿಂಬಿತವಾಯಿತು. ಇದೆಲ್ಲ ಹೇಗಾಯಿತು?
-ತೆಹೆಲ್ಕಾದಲ್ಲಿ ಏನು ವರದಿಯಾಗಿದೆ ಎಂಬ ಬಗ್ಗೆ ನನಗೇನೂ ಮಾಹಿತಿ ಇಲ್ಲ. ನೀವು ಈ ಬಗ್ಗೆ ಪದೇ ಪದೆ ಪ್ರಶ್ನೆ ಕೇಳಿದರೂ ನನ್ನಿಂದ ಸಿಗುವುದು ಒಂದೇ ಉತ್ತರ. ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ಪ್ರಕರಣವಿದೆ.
-ಕೇಂದ್ರ ಸರ್ಕಾರ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಅದಕ್ಕೆ ನಿಮ್ಮ ವಿರೋಧವೇಕೆ? ಇಂಡಿಯಾ ಟಿವಿಗೆ ಸಂದರ್ಶನ ನೀಡಿದ ವೇಳೆ ನಿಮ್ಮ ಬಳಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಲಾಗಿತ್ತು. ಈ ಸಂದರ್ಭದಲ್ಲಿ ನೀವು ಕೇಂದ್ರ ಸರ್ಕಾರ ಎಲ್ಲ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುವಂತೆ ಸವಾಲು ಹಾಕಿದಿರಿ. ಅದೇ ರೀತಿಯ ನಿರ್ಧಾರ ಬೇಹುಗಾರಿಕೆ ಪ್ರಕರಣಕ್ಕೆ ಏಕೆ ಇಲ್ಲ?
-ನಾನು ಯಾವುದನ್ನೂ ವಿರೋಧಿಸಿಲ್ಲ. ಪ್ರಕರಣ ಈಗ ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ನಾನು ಯಾವುದೇ ರೀತಿಯ ಪಾತ್ರ ವಹಿಸಲು ಬಯಸುವುದಿಲ್ಲ. ಕೆಲವು ಜನರು ವಿನಾ ಕಾರಣ ಅದನ್ನು ಪ್ರಸ್ತಾಪಿಸುತ್ತಿದ್ದಾರೆ.
-ಹಾಗಿದ್ದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಕಪಿಲ್ ಸಿಬಲ್ ಮತ್ತು ಕೇಂದ್ರ ಸರ್ಕಾರ ಬೇರೆ ಉದ್ದೇಶ ಹೊಂದಿದೆ ಎಂದು ಹೇಳಿದ್ದರ ಔಚಿತ್ಯವೇನು?
-2009ರ ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಕಪಿಲ್ ಸಿಬಲ್ ಗುಜರಾತ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು ಯುಪಿಎ ಎರಡರ ಅವಧಿಯಲ್ಲಿ ನರೇಂದ್ರ ಮೋದಿ ಜೈಲಿಗೆ ತೆರಳಲಿದ್ದಾರೆ ಎಂದು ಹೇಳಿದ್ದರು. ಈ ಹೇಳಿಕೆಯ ಬಳಿಕ ಅವರ ಪ್ರಯತ್ನಗಳೆಲ್ಲ ಸಿಬಲ್ ಹೇಳಿಕೆಯನ್ನು ಕಾರ್ಯಗತಗೊಳಿಸುವುದರಲ್ಲೇ ಕೇಂದ್ರೀಕೃತವಾಗಿದ್ದವು. ಅಂದ ಹಾಗೆ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂಬುದನ್ನು ಸಿಬಲ್ ಮಾತ್ರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಆ ಉತ್ತರ ನೀಡಿದ್ದೆ.
-ಬೇಹುಗಾರಿಕೆ ಪ್ರಕರಣ ಪ್ರಚಾರದ ಭಾಗ ಎಂದು ಭಾವಿಸುತ್ತೀರಾ?
-ಸುಪ್ರೀಂ ಈ ಪ್ರಕರಣದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಅದನ್ನು ಇಲ್ಲಿ ತರುವ ಪ್ರಯತ್ನ ಬೇಡ. ನನ್ನನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಸುವ ಪ್ರಯತ್ನವನ್ನು ನೀವು ಮಾಡಬೇಡಿ. ಅದು ನಿಮ್ಮ ಕೆಲಸವೂ ಅಲ್ಲ. ಪ್ರಶ್ನೆ ಕೇಳುವುದು ನಿಮ್ಮ ಕೆಲಸ. ಅದಕ್ಕೆ ಉತ್ತರ ನೀಡುವುದು ನನ್ನ ಕೆಲಸ. ಒಂದು ವೇಳೆ ನೀವು ನನ್ನನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ದಯವಿಟ್ಟು ಮೊದಲೇ ಹೇಳಿಬಿಡಿ. ಅದಕ್ಕೆ ತಕ್ಕಂತೆ ನನ್ನ ಉತ್ತರವನ್ನೂ ನೀಡುತ್ತೇನೆ. ಇದಕ್ಕಾಗಿ ನೀವು ಎಷ್ಟು ಜನರನ್ನು ಕರೆದುಕೊಂಡು ಬರಬಹುದು. ನಾನು ಅದನ್ನು ಎದುರಿಸಲು ಸಿದ್ಧನಿದ್ದೇನೆ. ಆದರೆ ಅದು ಸರಿಯಾದ ಕ್ರಮವಲ್ಲ. ಇನ್ನೊಬ್ಬರ ಜತೆ ಇದೇ ಪ್ರಶ್ನೆ ಕೇಳಿದರೂ ಪ್ರಕರಣ ಸುಪ್ರೀಂಕೋರ್ಟ್‌ಲ್ಲಿದೆ ಎಂದೇ ಹೇಳುತ್ತಾರೆ. ಸುಪ್ರೀಂಕೋರ್ಟ್‌ನಿಂದ ದೊಡ್ಡವರು ಎಂದು ನೀವು ಭಾವಿಸುವುದಿದ್ದರೆ ಅದು ನಿಮ್ಮ ಆಯ್ಕೆ. ಅದಕ್ಕೆ ನಾನೇನು ಮಾಡಲು ಸಾಧ್ಯ? ಆದರೆ ಒಂದು ವಿಚಾರ ಪ್ರಸ್ತಾಪಿಸಲು ಬಯಸುತ್ತೇನೆ. 2009ರಲ್ಲಿ ಕಪಿಲ್ ಸಿಬಲ್ ಏನನ್ನು ಹೇಳಿದ್ದರು, ಅದರ ನಂತರ ನಾನು ಅದನ್ನು ಪ್ರಸ್ತಾಪಿಸಿದ್ದೇನೆ.
-ದೂರದರ್ಶನ ನಿಮ್ಮ ಸಂದರ್ಶನ ನಡೆಸಿತ್ತು. ಅದನ್ನು ಸೆನ್ಸಾರ್ ಮಾಡಿದ್ದ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕವಷ್ಟೇ ನಿಮಗೆ ತಿಳಿಯಿತೇ? ಈ ಬೆಳವಣಿಗೆ ನಿಮಗೆ ಆಶ್ಚರ್ಯ ತಂದಿತೇ? ಇದಾದ ಬಳಿಕ ನಿಮ್ಮ ಕಚೇರಿಯಿಂದ ಸೆನ್ಸಾರ್ ಆದ ಭಾಗವನ್ನು ಬಿಡುಗಡೆ ಮಾಡಿತು. ಇದರ ಬಗ್ಗೆ ನಿಮಗೆ ಗೊತ್ತಿತ್ತೇ?
-ನನ್ನನ್ನು ಸಂದರ್ಶನ ಮಾಡುವ ಬಗ್ಗೆ ದೂರದರ್ಶನ ಕೊರಿಕೆ ಸಲ್ಲಿಸಿತ್ತು. ಹಾಗಾಗಿ ನಾನು ಅದಕ್ಕೆ ಒಪ್ಪಿಕೊಂಡೆ. ಸಂದರ್ಶವನ್ನು ನನ್ನ ಪಕ್ಷ ಕೂಡ ರೆಕಾರ್ಡ್ ಮಾಡಿತ್ತು. ಆದರೆ ಅದು ದೂರದರ್ಶನದಲ್ಲಿ ಪ್ರಸಾರವಾಯಿತೇ ಇಲ್ಲವೋ ಎಂಬ ಬಗ್ಗೆ ನನಗೇನೂ ತಿಳಿಯದು. ಮಾತ್ರವಲ್ಲ ಅದಕ್ಕೆ ಕತ್ತರಿ ಪ್ರಯೋಗವಾಗಿತ್ತು ಎಂಬ ವಿಚಾರವೂ ನನಗೆ ಗೊತ್ತಿಲ್ಲ. ಆದರೆ 'ಮಗಳು' ಎಂಬ ವಿಚಾರ ಹೇಳಿದ್ದು ಪ್ರಾಮುಖ್ಯತೆ ಪಡೆಯಿತು. ಆದರೆ ನಾನು ಆ ರೀತಿ ಹೇಳಿಯೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರಲ್ಲಿ ಸಂದರ್ಶನ ತೋರಿಸುವಂತೆ ಹೇಳಿದೆ. ಸಂದರ್ಶನವನ್ನು ನೋಡಿದ ಬಳಿಕ ಅವರೂ ನಾನು ಆ ರೀತಿ ಹೇಳಲಿಲ್ಲ ಎಂದರು. ಇದು ಸೆನ್ಸಾರ್‌ಶಿಪ್ ಮಾತ್ರವಲ್ಲ ಸಂಚು ಕೂಡ ಹೌದು ಎಂದು ನನಗೆ ಅನಿಸಿತು. ಸೆನ್ಸಾರ್‌ಶಿಪ್ ಒಳ್ಳೆಯದೇ. ಆದರೆ ರೀತಿಯದ್ದಲ್ಲ. ನಾನು ನಿಮ್ಮ ವಿರುದ್ಧ ಏನಾದರೂ ಹೇಳಿದ್ದರೆ ಅದನ್ನು ಪ್ರಸಾರ ಮಾಡದಂತೆ ತಡೆಯುವುದರಲ್ಲಿ ತಪ್ಪೇನಿಲ್ಲವಲ್ಲ?
- ನಾವು ನಮ್ಮ ಸಂದರ್ಶನವನ್ನು ಎಡಿಟ್ ಮಾಡುವುದಿಲ್ಲ
-ನೀವು ಅದನ್ನು ಮಾಡಿದರೂ ನನಗೇನೂ ಸಮಸ್ಯೆ ಇಲ್ಲ. ಆದರೆ ಯಾವುದೋ ಒಂದು ವಿಚಾರವನ್ನು ಹೇಳುವ ನಿಟ್ಟಿನಲ್ಲಿ ನನ್ನನ್ನು ಗುರಿಯಾಗಿರಿಸಿಕೊಂಡು ಸಂದರ್ಶನವನ್ನು ತಿರುಚಿದ್ದು ಆಶ್ಚರ್ಯತಂದಿತು. ಈ ಹಿನ್ನೆಲೆಯಲ್ಲಿ ಮೂಲ ಸಂದರ್ಶನವನ್ನು ಬಿಡುಗಡೆ ಮಾಡುವಂತೆ ಪಕ್ಷದ ನಾಯಕರಿಗೆ ತಿಳಿಸಿದೆ. ಯೂಟ್ಯೂಬ್‌ಗೆ ರಿಲೀಸ್ ಮಾಡುವಂತೆ ನಾನೇ ಅವರಿಗೆ ತಿಳಿಸಿದ್ದೆ. ಹೀಗಾಗಿ ಅದು ಎಲ್ಲರಿಗೂ ಸಿಗುವಂತಾಯಿತು. ಇದಾದ 48 ಗಂಟೆಗಳ ಬಳಿಕ 'ಮಗಳು' ಹೇಳಿಕೆ ಮೂಲಕ ನನ್ನನ್ನು ಗುರಿಯಾಗಿರಿಸಿಕೊಂಡು ಮಾತನಾಡುತ್ತಿದ್ದವರೆಲ್ಲ ಬಾಯಿಮುಚ್ಚಿ ಕುಳಿತರು. ಈ ವಿಚಾರದಲ್ಲಿ ನನ್ನನ್ನು ಅನಗತ್ಯವಾಗಿ ಗುರಿಮಾಡಲಾಯಿತು. ಇದಾದ ಬಳಿಕ ಪ್ರಸಾರ ಭಾರತಿ ಮತ್ತು ಸರ್ಕಾರವನ್ನು ಪ್ರಕರಣವನ್ನು ಮತ್ತಷ್ಟು ಜಟಿಲಗೊಳಿಸಲಾಯಿತು.
- ದೂರದರ್ಶನ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿಯವರ ಬಗ್ಗೆ ಟೀಕೆ ನಡೆಸುವುದಿಲ್ಲ ಎಂದು ಹೇಳಿದ್ದೀರಿ. ಅವರನ್ನು ನೀವು ರಾಜಕೀಯ ವಿರೋಧಿ ಎಂದು ಪರಿಗಣಿಸುವುದಿಲ್ಲ ಎಂದು ತಿಳಿಸಿದ್ದೀರಿ. ಹೀಗಾಗಿ ನನಗೆ ನಿಮ್ಮ ಪ್ರಶ್ನೆ...
-ಇಲ್ಲ ಇಲ್ಲ ನಾನು ಆ ರೀತಿ ಹೇಳಿಯೇ ಇಲ್ಲ
- ಹೌದು. ನೀವು ಹೇಳಿದ್ದೀರಿ
ಇಲ್ಲ ಇಲ್ಲ
- ನೀವು ಹೇಳಿದ್ದೀರಿ. ನಾನು ಏನು ಹೇಳುತ್ತೀದೇನೆಂದರೆ...
-ನಿಮ್ಮ ಭಾಷಾಂತರ ಸಮರ್ಪಕವಾಗಿಲ್ಲ
- ನೀವು ಏನು ಹೇಳಿದ್ದೀರಿ ಎಂದರೆ ಪ್ರಿಯಾಂಕಾ ಮಗಳಾಗಿ ಹೇಳುತ್ತಿದ್ದಾರೆ ಎಂದಿದ್ದೀರಿ. ತಾಯಿಗಾಗಿ ಕೆಲಸ ಮಾಡುತ್ತಿರುವುದು ಅವರ ಹಕ್ಕು. ಇನ್ನೂ ಹತ್ತು ಬೈಗುಳ ಪದಗಳನ್ನು ನಿಮ್ಮ ಮೇಲೆ ಪ್ರಯೋಗಿಸಿದರೂ ಸುಮ್ಮನಿರುತ್ತೀರಿ ಎಂದು ಹೇಳಿದ್ದೀರಿ. ಕೇವಲ ಮಗಳಾಗಿ ಅವರು ಅವರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ನಾನು ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿದ್ದೀರಿ. ಈಗ ನನ್ನ ಭಾಷಾಂತರ ಸರಿಯಾಗಿದೆಯೇ?
-ಈಗ ನಿಜಕ್ಕೂ ಸರಿಯಾಗಿದೆ.
- 2-3 ವಾರಗಳ ಹಿಂದೆ ಬಿಜೆಪಿ ಪತ್ರಿಕಾಗೋಷ್ಠಿ ಕರೆದು 'ದಾಮಾದ್‌ಶ್ರೀ' ಅಂದರೆ ವಾದ್ರಾ ವಿಚಾರ ಪ್ರಸ್ತಾಪಿಸಿತು. ಇದು ಗಾಂಧಿ ಕುಟುಂಬದ ವಿರುದ್ಧ ನೀವು ವೈಯಕ್ತಿಕ ದ್ವೇಷ ಸಾಧಿಸಿದಂತೆ ಅಲ್ಲವೇ?
-ನೀವು 14 ವರ್ಷಗಳ ನನ್ನ ಹಿನ್ನಲೆಯನ್ನೇ ನೋಡಿ. ಯಾರು ಕೂಡ ನಾನು ದ್ವೇಷ ಸಾಧಿಸಿದ್ದೇನೆ ಎಂದು ಆರೋಪಿಸಿಲ್ಲ. ಯಾರೂ ಆ ಬಗ್ಗೆ ಯೋಚಿಸಲೂ ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಪ್ರಮುಖ ವಿಚಾರ. ಭ್ರಷ್ಟಾಚಾರವೇ ಮುಖ್ಯ ವಿಚಾರ. ನನ್ನ ವಿರುದ್ಧ ಎಷ್ಟೋ ಸುಳ್ಳು ಆರೋಪಗಳು ಕೇಳಿಬಂದವು. ಅದರ ಬಗ್ಗೆ ಮಾತನಾಡಲು ನಿಮಗೆ ಟೈಮೇ ಸಿಗಲಿಲ್ಲ. ಆದ್ರೆ, ಬಿಜೆಪಿ ಯಾರದ್ದಾದರೂ ಸತ್ಯವನ್ನು ದೇಶಕ್ಕೆ ಬಹಿರಂಗಪಡಿಸಿತು ಎಂದಾಗ ನೀವು ಅದನ್ನು 'ದ್ವೇಷ' ಎಂದು ಬಣ್ಣಿಸುತ್ತೀರಿ. ಇದೆಂಥಾ ನ್ಯಾಯ?
- ಡಿಸೆಂಬರ್‌ನಿಂದ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರವಿದೆ. ಆದ್ರೂ ರಾಬರ್ಟ್ ವಾದ್ರಾರ ವಿರುದ್ಧ ಯಾವುದೇ ತನಿಖೆಗೆ ಸರ್ಕಾರ ಆದೇಶಿಸಿಲ್ಲ. ಹಾಗಾದರೆ ವಾದ್ರಾ ವಿಚಾರವೆತ್ತುತ್ತಿರುವುದು ಕಾಂಗ್ರೆಸ್‌ಗೆ ಹಿನ್ನಡೆ ಉಂಟು ಮಾಡಲೆಂದೇ?
-ಹಾಂ, ನಾವು ಸತ್ಯದ ಆಧಾರದಲ್ಲಿ, ನ್ಯಾಯಸಮ್ಮತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆಯೇ ಹೊರತು ತರಾತುರಿಯಲ್ಲಿ ರಾಜಕೀಯ ನಿರ್ಧಾರ ಕೈಗೊಳ್ಳುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ಕಪಿಲ್ ಸಿಬಲ್ ಮತ್ತು ಅವರ ಕಂಪನಿ ನನ್ನ ವಿರುದ್ಧ ಏನನ್ನು ಮಾಡುತ್ತಿದೆಯೋ ಅದನ್ನು ನಾವೂ ಜೈಪುರದಲ್ಲಿ ಮಾಡಬಹುದಿತ್ತು. ಆದ್ರೆ, ನಮಗೆ ಇಂಥದ್ದರಲ್ಲಿ ನಂಬಿಕೆಯಿಲ್ಲ. ನಾವು ಕಾನೂನು ಪ್ರಕ್ರಿಯೆ ಮೂಲಕವೇ ಮುಂದೆ ಸಾಗುತ್ತೇವೆ. ಆರೋಪ ಸಾಬೀತಾಗದಿದ್ರೆ ಓಕೆ, ಸಾಬೀತಾದ್ರೆ ಸತ್ಯ ದೇಶಕ್ಕೆ ಗೊತ್ತಾಗುತ್ತೆ. ಇದು ನಮ್ಮ ಹೊಣೆಗಾರಿಕೆಯನ್ನು ತೋರಿಸುತ್ತದೆ. ನಾವು ಇಂತಹ ಕ್ರಮ ಕೈಗೊಳ್ಳದಿದ್ದರೆ ನೀವದನ್ನು ಅಪರಾಧ ಎನ್ನುತ್ತೀರಿ. ಇದು ಯಾವೂರ ನ್ಯಾಯ?
- ಅಲ್ಲ, ಅಲ್ಲ, ನಾನು...
-ಒಂದು ವೇಳೆ ಇದೇ ಕೆಲಸವನ್ನು ವಸುಂಧರಾ ರಾಜೇ ಜನವರಿಯಲ್ಲೇ ಮಾಡಿದ್ದರೆ, ಅದನ್ನು ನೀವು 'ಸೇಡು' ಎನ್ನುತ್ತಿರಲಿಲ್ಲವೇ?
- ಇಲ್ಲ, ನಾವ್ಯಾಕೆ ಹಾಗೆ ಮಾಡುತ್ತೇವೆ?
-ನೀವು ಮಾಡೇ ಮಾಡುತ್ತಿದ್ರಿ. ನೀವು ಬೇರೇನು ಮಾಡ್ತಿದ್ರಿ? ರಾಜಸ್ಥಾನ ಸರ್ಕಾರ ಶಾಂತಿಯುತವಾಗಿ ಸರ್ಕಾರದ ಪ್ರಕ್ರಿಯೆಯನ್ನು ಮಾಡುತ್ತಿದೆ. ಯಾವಾಗ ಸತ್ಯ ಹೊರಬರಬೇಕೋ ಆಗ ಬಂದೇ ಬರುತ್ತದೆ.
- ಆದ್ರೆ, ಮೋದಿಯವರೇ ಯಾವಾಗ ವಾದ್ರಾ ವಿಚಾರ ಹೊರಬರುತ್ತದೋ ಕಾಂಗ್ರೆಸ್ ಅದನಿ ವಿಚಾರ ಎತ್ತುತ್ತದೆ. ನನ್ನ ಪ್ರಶ್ನೆಯೇನೆಂದರೆ, ಗುಜರಾತ್‌ನಲ್ಲಿ ಅದನಿಯವರಿಗೆ ಚದರ ಮೀಟರ್‌ಗೆ 1ರಿಂದ 31ಕ್ಕೆ ಭೂಮಿ ನೀಡಿದ್ದೀರಿ. ಆದ್ರೆ ಟಾಟಾ ಮೋಟಾರ್ಸ್‌ಗೆ ಬೇರೆ ಬೆಲೆಗೆ ಭೂಮಿ ನೀಡಿದ್ದೀರಲ್ಲವೇ? ಈ ರೀತಿ ದರದಲ್ಲಿ ವ್ಯತ್ಯಾಸವೇಕೆ?
-ಸರಿ, ಮೊದಲು ನೀವು ಉತ್ತರಿಸಿ, ಅಹಮದಾಬಾದ್‌ನಲ್ಲಿ ಭೂಮಿ ಕೊಳ್ಳುವುದಕ್ಕೂ, ಕಛ್‌ನಲ್ಲಿ ಭೂಮಿ ಕೊಳ್ಳುವುದಕ್ಕೂ ವ್ಯತ್ಯಾಸವಿಲ್ಲವೇ? ಕಛ್ ಮರುಭೂಮಿ ಪ್ರದೇಶ. ಅಲ್ಲಾ, ಅರ್ನಾಬ್ ಅವರೇ, ಇದೆಲ್ಲ ಅಂಕಿ ಸಂಖ್ಯೆಯ ವಿಚಾರ. ನಮ್ಮ ಸರ್ಕಾರ ಈ ಬಗ್ಗೆ ಎಲ್ಲ ಮಾಹಿತಿ ಕೊಟ್ಟರೆ ಅದನ್ನು ನೀವು ಪ್ರಸಾರ ಮಾಡುತ್ತೀರಾ? ಮಾಡುತ್ತೀರಾ ಹೇಳಿ? ಅದೊಂದು ಬರಡು ಭೂಮಿ. ಅಲ್ಲಿ ಏನೂ ಬೆಳೆಯುವುದಿಲ್ಲ. ಹಾಗಾಗಿ ಅದನಿ ಕಂಪನಿಗೆ ಹೆಚ್ಚಿನ ಭೂಮಿ ನೀಡಿದ್ದೇವೆ. ಸರಿ, ಇಡೀ ದೇಶದಲ್ಲಿ ಅದನಿಗೆ ಎಲ್ಲೆಲ್ಲಿ ಭೂಮಿ ಕೊಡಲಾಗಿದೆ ಎಂಬ ಬಗ್ಗೆ ನೀವೊಂದು ಅಧ್ಯಯನ ನಡೆಸುತ್ತೀರಾ? ಕಾಂಗ್ರೆಸ್ ಸರ್ಕಾರ ಅದನಿಗೆ ಎಷ್ಟು ಭೂಮಿ ಕೊಟ್ಟಿದೆ ಎಂಬುದನ್ನು ಕಂಡುಹಿಡಿಯುತ್ತೀರಾ? ಗುಜರಾತ್ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿದೆ ಎಂದು ನಿನ್ನೆಯಷ್ಟೇ ವಾಣಿಜ್ಯ ಸಚಿವಾಲಯದ ವರದಿ ತಿಳಿಸಿದೆ. ನಾವು ಯಾರನ್ನೂ ಓಲೈಸಲು ಭೂಮಿ ನೀಡುವುದಿಲ್ಲ. ಇದೆಲ್ಲ ರಾಜಕೀಯ ಗಿಮಿಕ್. ನನ್ನ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ವಿವರಣೆ ನೀಡಿದ್ದೇನೆ. ದಯವಿಟ್ಟು ಅದನ್ನೊಮ್ಮೆ ನೋಡಿ.
- ಖಂಡಿತಾ ನೋಡುತ್ತೇನೆ. ನೀವು ಗಾಂಧಿನಗರ ಮತ್ತು ಅಹಮದಾಬಾದ್‌ನ ಭೂಮಿ ಬಗ್ಗೆ ಮಾತಾಡುತ್ತಿದ್ದೀರಿ. ಆದರೆ, ಟಾಟಾ ಮೋಟಾರ್ಸ್‌ನ ಭೂಮಿ ಇರೋದು ಸನಂದ್‌ನಲ್ಲಿ, ಮಾರುತಿ ಸುಜುಕಿ ಭೂಮಿ ಹೊಂದಿರುವುದು ಹನ್ಸಾಲ್‌ಪುರದಲ್ಲಿ?
-ಈ ಎರಡೂ ಪ್ರದೇಶಗಳು ಪರಸ್ಪರ 20 ಕಿ.ಮೀ. ದೂರದಲ್ಲಿವೆ. ಕೇವಲ 20-40 ಕಿ.ಮೀ. ದೂರದಲ್ಲಿ ಅಷ್ಟೆ.
- ನಿಮ್ಮ ಕೈಗಾರಿಕಾ ಸಚಿವ ಸೌರಭ್ ಪಟೇಲ್ ಮತ್ತು ವಾಣಿಜ್ಯ ಸಚಿವ ಆನಂದ್ ಶರ್ಮಾ ನಡುವೆ ಚರ್ಚೆ ನಡೆದರೆ ಹೇಗಿರುತ್ತೆ?
-ಸರಿ, ನನ್ನ ಅಭ್ಯಂತರವೇನೂ ಇಲ್ಲ, ಅಭ್ಯಂತರವೇ ಇಲ್ಲ.
- ಹಾಗಾದ್ರೆ ಮುಕ್ತ ಚರ್ಚೆಗೆ ನೀವು ಸಿದ್ಧರಿದ್ದೀರಾ?
-ಖಂಡಿತಾ.. ನನಗೆ ಏನೂ ಸಮಸ್ಯೆಯಿಲ್ಲ. ಚರ್ಚೆ ನಡೆಸುವ ಬದಲು, ನೀವು ಕಂದಾಯ ಕಾನೂನಿನ ಬಗ್ಗೆ ಹೆಚ್ಚಿನ ಜ್ಞಾನ ಇರುವವರ ತಂಡವೊಂದನ್ನು ರಚಿಸಿ. ಸರಿ, ನೀವೊಂದು ಕೆಲಸ ಮಾಡಿ, ದೇಶಾದ್ಯಂತ ಅದನಿ ಅಸ್ತಿತ್ವದ ಬಗ್ಗೆ ಮಾಹಿತಿ ಸಂಗ್ರಹಿಸಿ. ಅವರು ಎಲ್ಲೆಲ್ಲಿ ಇದ್ದಾರೆ, ಅಲ್ಲಿ ಏನೇನು ಪಡೆದಿದ್ದಾರೆ ನೋಡಿ. ಎರಡನೆಯದಾಗಿ, ಗುಜರಾತ್ ಸರ್ಕಾರವು ಏನನ್ನಾದರೂ ತನ್ನ ನೀತಿಗೆ ವಿರುದ್ಧವಾಗಿ ನೀಡಿದೆಯಾ ಹೇಳಿ. ಒಂದು ಸರ್ಕಾರದ ನೀತಿಯು ಅರ್ನಾಬ್‌ಗೂ ಅನುಕೂಲ ಮಾಡಿಕೊಡಬಹುದು, ಟಾಟಾಗೂ ಅನುಕೂಲ ಮಾಡಬಹುದು. ಅಷ್ಟೇ ಏಕೆ, ವಾದ್ರಾ ಕೂಡ ಅದರ ಲಾಭ ಪಡೆಯಬಹುದು.
- ನೀವು ಸಬ್ಸಿಡಿಯನ್ನು ವಿರೋಧಿಸುತ್ತೀರಿ. ದರ ಏರಿಕೆ ವಿಚಾರಕ್ಕೆ ಬಂದಾಗ ನೀವು ಸಬ್ಸಿಡಿಗಳನ್ನು ವಾಪಸ್ ಪಡೆಯುತ್ತೀರಾ ಮೋದಿಯವರೇ?
-ಹಾಗಂತ ನಿಮಗೆ ಯಾರು ಹೇಳಿದ್ರು? ಈ ಬಗ್ಗೆ ನಾನು ಯಾವತ್ತಾದರೂ ಮಾತಾಡಿದ್ದಿದೆಯಾ?
-ಬೇಕಿದ್ದರೆ ನಿಮ್ಮ ಮಾತನ್ನೇ ನಾನು ಕೋಟ್ ಮಾಡುತ್ತೇನೆ.
-ನಾನು ಹೇಳುವುದೇನೆಂದರೆ, ದೇಶದ ಬೊಕ್ಕಸದ ಮೊದಲ ಅಧಿಕಾರ ದಕ್ಕಬೇಕಾದ್ದು ಬಡವರಿಗೆ. ಸರ್ಕಾರವು ಬಡವರ ಅಗತ್ಯತೆಯನ್ನು ಆಲಿಸಬೇಕು ಮತ್ತು ಪೂರೈಸಬೇಕು. ಇದು ನನ್ನ ಸ್ಪಷ್ಟ ನಿಲುವು.
- ಹಾಗಾದ್ರೆ ಸಬ್ಸಿಡಿ ಬಗ್ಗೆ ನಿಮ್ಮ ನಿಲುವೇನು?
-ಮೊದಲನೆಯದಾಗಿ, ಗುಜರಾತ್‌ನಲ್ಲಿ ಕೇಂದ್ರ ಸರ್ಕಾರ ನಮ್ಮ ಕೋಟಾವನ್ನು ಕಡಿಮೆ ಮಾಡಿದೆ. ನಾನು ರಾಜ್ಯ ಸರ್ಕಾರದ ಬಜೆಟ್‌ನಿಂದಲೇ 11 ಲಕ್ಷ ಕುಟುಂಬಕ್ಕೆ ಸೌಲಭ್ಯ ಕಲ್ಪಿಸುತ್ತಿದ್ದೇನೆ. ನಮ್ಮ ದೇಶದ ಬಡಜನರು ಹಸಿವಿನಿಂದ ಸಾಯಲು ನಾನು ಬಿಡುತ್ತೇನೆಯೇ? ಹಾಗೆ ಮಾಡಿದ್ರೆ, ಸರ್ಕಾರದ ನಿಧಿಯ ಅವಶ್ಯಕತೆಯಾದ್ರೂ ಯಾಕೆ ಬೇಕು? ಅದು ಇರುವುದೇ ಬಡವರಿಗಾಗಿ. ಅದನ್ನು ಅವರಿಗೆ ನೀಡಲು ನಾನು ಬದ್ಧನಾಗಿದ್ದೇನೆ. ದೇಶ ಸುಮ್ಮನೇ ನಡೆಯಲ್ಲ.
- ನೀವು ಚಿಲ್ಲರೆ ಕ್ಷೇತ್ರದಲ್ಲಿ ಎಫ್‌ಡಿಐ ಅನ್ನು ವಾಪಸ್ ಪಡೆಯುತ್ತೀರಾ? ಇದು ಹೂಡಿಕೆದಾರರಿಗೆ ಎಂತಹ ಸಂದೇಶ ನೀಡುತ್ತದೆ?
-ಸರ್ಕಾರವೆನ್ನುವುದು ನಿರಂತರ ಪ್ರಕ್ರಿಯೆ. ಆದರೆ, ಎಸ್ಪಿ ಒಂದು ಜಿಲ್ಲೆಯನ್ನು ರಚಿಸುತ್ತದೆ, ಬಿಎಸ್ಪಿ ಬಂದು ಅದನ್ನು ರದ್ದು ಮಾಡುತ್ತದೆ. ಎಡಿಎಂಕೆ ಒಂದು ನಿರ್ಧಾರ ಕೈಗೊಳ್ಳುತ್ತದೆ, ಡಿಎಂಕೆ ಬಂದು ಅದನ್ನು ಬದಲಾಯಿಸುತ್ತದೆ. ಇವೆಲ್ಲವೂ ದುರದೃಷ್ಟಕರ ಸಂಗತಿಗಳು. ಬಿಜೆಪಿ ಯಾವತ್ತೂ ದ್ವೇಷ ಸಾಧಿಸದು. ಸರ್ಕಾರದ ಮೊದಲ ಆದ್ಯತೆ ಉದ್ಯೋಗ ಸೃಷ್ಟಿ. ಸರಿ ನೀವೇ ಹೇಳಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಿದ್ಧವಾದ ಕೊಡೆಗಳನ್ನು ಭಾರತದಲ್ಲಿ ಮಾರಾಟ ಮಾಡಲು ಶುರುಮಾಡಿದರೆ, ನಮ್ಮಲ್ಲಿರುವ ಸಣ್ಣಪುಟ್ಟ ಕೊಡೆ ತಯಾರಿಕಾ ಉದ್ಯಮಿಗಳು ತಮ್ಮ ವ್ಯಾಪಾರ ಸ್ಥಗಿತಗೊಳಿಸಬೇಕಾಗುತ್ತದೆ, ಅಂದ್ರೆ ನಮ್ಮ ಜನರು ಜೀವನ ಸಾಗಿಸುವುದಾದರೂ ಹೇಗೆ?
- ಕದನವಿರಾಮ ಉಲ್ಲಂಘನೆ ಆಗುತ್ತಿದ್ದರೂ ಪಾಕ್‌ನೊಂದಿಗೆ ಮಾತುಕತೆ ಮುಂದುವರಿಸುತ್ತೀರಾ? ಮಾತುಕತೆ ಮತ್ತು ಭಯೋತ್ಪಾದಕತೆ ಒಟ್ಟಿಗೇ ನಡೆಯಲಿದೆಯೇ?
-ನೀವೇ ಹೇಳಿ, ಬಾಂಬ್ ಸ್ಫೋಟ ಮತ್ತು ಗುಂಡಿನ ದಾಳಿ ನಡುವೆ ಮಾತುಕತೆ ನಡೆಸಲು ಸಾಧ್ಯವೇ? ಹೇಳಿ ಸಾಧ್ಯನಾ? ಮಾತುಕತೆ ನಡೆಯಬೇಕೆಂದರೆ ಮೊದಲು ಸ್ಫೋಟ, ಗುಂಡಿನ ದಾಳಿ ನಿಲ್ಲಬೇಕು ಅಷ್ಟೆ.
- ಅಂದ್ರೆ, ಪಾಕಿಸ್ತಾನದಿಂದ ಉಗ್ರರ ರಫ್ತು, ಒಳನುಸುಳುವಿಕೆ ಮುಂದುವರಿಯುವುದಿಲ್ಲ ಎನ್ನುತ್ತೀರಾ?
-ಭಾರತೀಯ ಸಂಸತ್ ಈ ಬಗ್ಗೆ ಅವಿರೋಧ ಅಭಿಪ್ರಾಯ ಹೊಂದಿದೆ. ಈ ಅಭಿಪ್ರಾಯವನ್ನು ಬದಲಿಸಲು ಯಾವ ರಾಜಕೀಯ ಪಕ್ಷಕ್ಕೂ ಅಧಿಕಾರವಿಲ್ಲ.
- ಮಾತುಕತೆ ಮುಂದುವರಿಯುತ್ತಾ ಅನ್ನೋದು ನನ್ನ ಪ್ರಶ್ನೆ
ಇವೆಲ್ಲವೂ ಈಗ ಹೇಗಿದೆಯೋ ಹಾಗೇ ಮುಂದುವರಿಯಲಿದೆ.
- ಒಂದು ವೇಳೆ ನೀವು ಪ್ರಧಾನಿಯಾದ ಮೇಲೂ ಪಾಕ್ ತನ್ನ ವರ್ತನೆ ಬದಲಿಸದಿದ್ದರೆ, 26/11ರ ವಿಚಾರಣೆಯಲ್ಲಿ ಪ್ರಗತಿ ಕಾಣದೇ ಇದ್ದರೆ, ಭಯೋತ್ಪಾದಕರ ರಫ್ತು ಮುಂದುವರಿದರೆ ಆಗ ನಿಮ್ಮ ಸರ್ಕಾರ ಮಾತುಕತೆ ಮುಂದುವರಿಸುವುದೇ?
-ನೀವ್ಯಾಕೆ ನೆಗೆಟಿವ್ ಆಗಿ ಯೋಚನೆ ಮಾಡ್ತೀರಾ? ದೇಶವು ಬಲಿಷ್ಠವಾಗಿದ್ದು ಕಂಡಾಗ, ಅದರ ನೆರೆರಾಷ್ಟ್ರಗಳು ತನ್ನಿಂತಾನೇ ಬದಲಾಗುತ್ತವೆ, ವಾತಾವರಣವೂ ಬದಲಾಗುತ್ತದೆ.
- ಆದರೂ ಅದು ಬದಲಾಗದೇ ಇದ್ದರೆ ಮಾತುಕತೆ ನಡೆಯುತ್ತಾ? ಇದು ನನ್ನ ನೇರ ಪ್ರಶ್ನೆ
-ಅರೆ, ನಿಮ್ಮ ಪ್ರಶ್ನೆಯೇ ನಿರಾಸೆಯಿಂದ ಹುಟ್ಟಿದ್ದು. ನನ್ನ ಉತ್ತರವು ಧನಾತ್ಮಕ ಚಿಂತನೆಯಿಂದ ಕೂಡಿದ್ದು.
- ಭಯೋತ್ಪಾದಕತೆ ಮತ್ತು ಮಾತುಕತೆ ಒಟ್ಟಿಗೆ ನಡೆಯುವುದು ಅಸಾಧ್ಯ ಎಂದು ನೀವೇಕೆ ಹೇಳುತ್ತಿಲ್ಲ?
-ದೇಶದ ಸರ್ಕಾರ ಬಲಿಷ್ಠವಾಗಿದ್ದರೆ, ಪರಿಹಾರವು ತನ್ನಿಂತಾನೇ ಸಿಗುತ್ತದೆ. ಗುಂಡಿನ ದಾಳಿ, ಸ್ಫೋಟದ ನಡುವೆ ಚರ್ಚೆ ನಡೆಯುವುದು ಅಸಾಧ್ಯ ಎನ್ನುವ ಮೂಲಕ ನಾನು ಉತ್ತರವನ್ನು ಇನ್ನೊಂದು ರೀತಿಯಲ್ಲಿ ಹೇಳಿದ್ದೇನೆ.
- ದಾವೂದ್ ಇಬ್ರಾಹಿಂ ವಿಚಾರದಲ್ಲಿ ಇಷ್ಟು ದಿನ ಸರ್ಕಾರ ಏನು ಮಾಡಿತ್ತೋ ಅದನ್ನೇ ನೀವೂ ಮಾಡುತ್ತೀರಾ?
-ನನಗನಿಸುತ್ತಿದೆ, ನೀವು ವಿಚಾರವೇ ಅಲ್ಲದ್ದನ್ನು ವಿಚಾರ ಮಾಡುತ್ತಿದ್ದೀರಿ. ಅಂದ್ರೆ, ಇದೇನೂ ಅಂತಹ ಮಹತ್ವದ ವಿಚಾರವಲ್ಲ.
- ಆದ್ರೆ, ಆತ ಮೋಸ್ಟ್ ವಾಂಟೆಡ್?
-ಚುನಾವಣೆಯ ಈ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ಮಾತಾಡುವುದು ಸೂಕ್ತವಲ್ಲ. ನಾನು ಮಾತಾಡಿದ್ದು ಗೃಹ ಸಚಿವ ಶಿಂದೆ ಬಗ್ಗೆ. ಯಾವುದೇ ನಿರ್ದಿಷ್ಟ ವ್ಯಕ್ತಿ ಬಗ್ಗೆ ಮಾತನಾಡಿ ಗೊಂದಲ ಮೂಡಿಸಲು ನಾನು ಇಚ್ಛಿಸುವುದಿಲ್ಲ.
- ಮೋದಿಯವರೇ, ಇನ್ನು ಎರಡೇ ಪ್ರಶ್ನೆಗಳು. ನರೇಂದ್ರ ಮೋದಿ ಸರ್ಕಾರದಲ್ಲಿ, ರಾಜನಾಥ್‌ಸಿಂಗ್ ಮತ್ತು ಸುಷ್ಮಾ ಅವರಿಗೆ ಸ್ಥಾನ ಸಿಗುತ್ತದೆಯೇ?
-ನನ್ನ ಸರ್ಕಾರವನ್ನು ನೀವೇ ರಚಿಸಿದ್ದಕ್ಕೆ ಧನ್ಯವಾದಗಳು.. ದಯವಿಟ್ಟು ನನಗೂ ಸ್ವಲ್ಪ ಕೆಲಸ ಪೂರ್ಣಗೊಳಿಸಲು ಬಿಡಿ. ಕೆಲ ನಿರ್ಧಾರ ಕೈಗೊಳ್ಳಲು ಪಕ್ಷಕ್ಕೆ ಅವಕಾಶ ಕೊಡಿ. ಈ ವಿಚಾರಗಳ ಬಗ್ಗೆ ನಮ್ಮ ತಂಡ ಕುಳಿತು, ನಿರ್ಧರಿಸುತ್ತದೆ.
-ನನ್ನ ಪ್ರಶ್ನೆಯ ಸನ್ನಿವೇಶವನ್ನು ಅರ್ಥಮಾಡಿಕೊಳ್ಳಿ, ಅವರಿಗೆ ಸ್ಥಾನ ಸಿಗುತ್ತದೆಯೇ?
-ಅದನ್ನು ನಮ್ಮ ತಂಡ ನಿರ್ಧರಿಸುತ್ತದೆ. ಏನನ್ನು, ಹೇಗೆ ಮಾಡಬೇಕು ಎಂಬುದನ್ನು ಇಡೀ ತಂಡ ನಿರ್ಧರಿಸಲಿದೆ.
- ಮೋದಿಯವರೇ, ನನ್ನೊಂದಿಗೆ ಮಾತನಾಡಿದ್ದಕ್ಕೆ ಧನ್ಯವಾದಗಳು...
-ಎಲ್ಲ ವೀಕ್ಷಕರಿಗೂ ನನ್ನ ಅಭಿನಂದನೆಗಳು. ನಾನೇ ಹೇಳಬಯಸುವುದೇನೆಂದರೆ, 8 ಹಂತಗಳು ಪೂರ್ಣಗೊಂಡಿವೆ, 9ನೇ ಹಂತ ಇನ್ನೇನು ಶುರುವಾಗಲಿದೆ. ಪ್ರಜಾಪ್ರಭುತ್ವದ ಶಕ್ತಿಯಿರುವುದು ಜನರಲ್ಲಿ. ಅವರಿಗೆ ನನ್ನ ನಮನ.
Advertisement