ಕಾಂಗ್ರೆಸ್‌ಗೆ ಎರಡಂಕಿ ದಾಟುವುದಕ್ಕೂ ಸಾಧ್ಯವಿಲ್ಲ

ನಾನೊಬ್ಬ ಶ್ರಮಿಕ. ಚಿಕ್ಕಂದಿನಿಂದಲೂ ಕಷ್ಟಪಟ್ಟು ಕೆಲಸ ಮಾಡುತ್ತಲೇ ಬಂದಿದ್ದೇನೆ.
ಕಾಂಗ್ರೆಸ್‌ಗೆ ಎರಡಂಕಿ ದಾಟುವುದಕ್ಕೂ ಸಾಧ್ಯವಿಲ್ಲ
Updated on

ಕೆಲವು ದಿನಗಳ ಹಿಂದೆ "ಆಜ್‌ತಕ್‌" ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮನ್ನು ಸುತ್ತುವರಿದಿರುವ ವಿವಾದಗಳು, ಬಿಜೆಪಿಯ ಅಜೆಂಡಾ ಮತ್ತು ಇನ್ನಿತರ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ
ಈ ವರ್ಷ ಸುಮಾರು 300,000 ಕಿ.ಮಿ. ಸಂಚರಿಸಿದ್ದೀರಿ. ನಿಮಗೆ ದಣಿವಾಗುವುದಿಲ್ಲವೇ? ಇಷ್ಟೊಂದು ಶಕ್ತಿ ಎಲ್ಲಿಂದ ಬರುತ್ತದೆ?
ಬಹುಶಃ ಜನರ ಆಶೀರ್ವಾದದಿಂದ. ನಾನೊಬ್ಬ ಶ್ರಮಿಕ. ಚಿಕ್ಕಂದಿನಿಂದಲೂ ಕಷ್ಟಪಟ್ಟು ಕೆಲಸ ಮಾಡುತ್ತಲೇ ಬಂದಿದ್ದೇನೆ. ಯಾವುದೇ ಕೆಲಸವಾಗಲಿ ಮನಸ್ಸು ತೊಡಗಿಸಿ ಮಾಡುತ್ತೇನೆ. ಪಕ್ಷ ನನಗೆ ಕೊಟ್ಟಿರುವ ಜವಾಬ್ದಾರಿಯನ್ನೂ ಕೂಡ ಸಮರ್ಪಣಾ ಭಾವದಿಂದ ಹೊತ್ತಿದ್ದೇನೆ.  

ಯೋಗ ಅಥವಾ ಪ್ರಾಣಾಯಾಮ ಮಾಡುತ್ತಿದ್ದೀರಾ?
ಚಿಕ್ಕವಯಸ್ಸಿನಲ್ಲೇ ಆರ್‌ಎಸ್‌ಎಸ್ ಶಾಖೆಗಳಿಗೆ ಹೋಗುತ್ತಿದ್ದ ನಾನು, ಆ ಅಭ್ಯಾಸವನ್ನು ಅಲ್ಲಿಂದಲೇ ರೂಢಿಸಿಕೊಂಡಿದ್ದೇನೆ. ಆದರೆ ಇತ್ತೀಚೆಗೆ ಯೋಗ ಮಾಡಲು ಬಿಡುವು ಸಿಗುತ್ತಿಲ್ಲ. ಆದರೆ 365 ದಿನದಲ್ಲಿ ಕನಿಷ್ಠ 300 ದಿನವಾದರೂ ಯೋಗ ಮಾಡುತ್ತೇನೆ.

7ನೇ ಹಂತದ ಮತದಾನ ಮುಗಿದ ಮೇಲೆ, ದೆಹಲಿಯ ಗದ್ದುಗೆ ಎಷ್ಟು ದೂರದಲ್ಲಿದೆ ಎಂದು ಅನಿಸುತ್ತಿದೆ?
ನಾನು ಈ ಚುನಾವಣೆಯನ್ನು ಕೇವಲ ರಾಜಕಾರಣಿಯಾಗಿಯಷ್ಟೇ ಅಲ್ಲದೆ, ರಾಜಕೀಯ ಶಾಸ್ತ್ರದ ವಿದ್ಯಾರ್ಥಿಯಾಗಿಯೂ ಗಮನಿಸುತ್ತಿದ್ದೇನೆ. ಚುನಾವಣೆಗಳು ಘೋಷಣೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಹಿರಿಯ ನಾಯಕರು ಅಖಾಡ ಬಿಟ್ಟು ಓಡತೊಡಗಿದರು. ಅಲ್ಲದೆ ಭಾರತದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಗೂ ಮುನ್ನವೇ 25 ಪಕ್ಷಗಳ ಮೈತ್ರಿಕೂಟವೊಂದು ಸಿದ್ಧವಾಯಿತು. ಇನ್ನೊಂದೆಡೆ ಕಾಂಗ್ರೆಸ್ ಗೆಲ್ಲುವ ವಿಷಯ ಒತ್ತಟ್ಟಿಗಿರಲಿ, ಕಡೇಪಕ್ಷ 100 ಸ್ಥಾನಗಳನ್ನಾದರೂ ಗಳಿಸಬೇಕು ಎಂದು ಒದ್ದಾಡುತ್ತಿದೆ. ಆದರೆ ಅದು ಎರಡಂಕಿಯೂ ದಾಟಲಾರದು ಎಂದು ಅನಿಸುತ್ತಿದೆ.

ಆಡಳಿತ ಮತ್ತು ಅಭಿವೃದ್ಧಿಯ ಮಾರ್ಗಸೂಚಿ ನಿಮ್ಮ ಬಳಿ ಇದೆಯೇ?
ಸಂಶಯವೇ ಬೇಡ. ದೇಶ ಅದಾಗಲೇ ಕಾಂಗ್ರೆಸ್ ಮಾದರಿ ಆಡಳಿತ, ಪ್ರಾದೇಶಿಕ ಪಕ್ಷಗಳ ಅಧಿಕಾರ, ಕುಟುಂಬ ರಾಜಕಾರಣ, ಎಡಪಂಥೀಯ ಮತ್ತು ಬಿಜೆಪಿ ಮಾದರಿ ಆಡಳಿತವನ್ನು ನೋಡಿದೆ.
ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿಗೇ ಹೆಚ್ಚು ಒತ್ತುಕೊಡಲಾಗಿದೆ. ದಿಗ್ವಿಜಯ್ ಸಿಂಗ್ ಮಧ್ಯಪ್ರದೇಶದಲ್ಲಿ ಬಹುಕಾಲದ ವರೆಗೆ ಆಡಳಿತ ನಡೆಸಿದರು. ಏನಾಯಿತಲ್ಲಿ? ಆ ರಾಜ್ಯ ಅವರ ಅವಧಿಯಲ್ಲಿ ಕುಸಿಯುತ್ತಲೇ ಸಾಗಿತು. ಆದರೆ ಯಾವಾಗ ಶಿವರಾಜ್ ಸಿಂಗ್ ಚೌಹಾಣ್ ಬಂದರೋ, ಕಡಿಮೆ ಸಮಯದಲ್ಲೇ ಅತ್ಯಂತ ವೇಗದಲ್ಲಿ ಅಲ್ಲಿ ಅಭವೃದ್ಧಿ ಕೆಲಸಗಳಾದವು. ಛತ್ತೀಸ್‌ಗಢ ಹೊಸ ರಾಜ್ಯವಾಗಿ ರೂಪತಾಳಿದಾಗ ನಕ್ಸಲರಿಂದ ಪೀಡಿತವಾಗಿತ್ತು, ಆದರೆ ಈಗಲ್ಲಿ ಅತ್ಯಂತ ಅಚ್ಚುಕಟ್ಟಾದ ಆರ್ಥಿಕ ಮಾದರಿಯನ್ನು ನಾವು ನೋಡುತ್ತಿದ್ದೇವೆ. ವಾಜಪೇಯಿಯವರ ಅವಧಿಯಲ್ಲಿ ದೇಶ ಅತ್ಯಂತ ವೇಗದಿಂದ ಅಭಿವೃದ್ಧಿ ಪಥದಲ್ಲಿ ಸಾಗಿತ್ತಲ್ಲವೇ? ಬಿಜೆಪಿಯ ಮಾದರಿ ಮತ್ತು ಉದ್ದೇಶ ಸ್ಪಷ್ಟವಾಗಿದೆ. ಈ ಬಾರಿಯ ನಮ್ಮ ಪ್ರಣಾಳಿಕೆಯಲ್ಲೂ ಅಭಿವೃದ್ಧಿಗೇ ಮಹತ್ವ ನೀಡಿದ್ದೇವೆ.

ಬೆಲೆ ಏರಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹೊಸ ಸರ್ಕಾರಕ್ಕೆ ವಿಳಂಬಿತ ಮಳೆಗಾಲ ಎದುರಾಗಬಹುದು. ನಿಮ್ಮ ಪಕ್ಷ ಈ ಬಗ್ಗೆ ಯೋಚಿಸಿದೆಯೇ?
ನೀವು ಇಷ್ಟು ಋಣಾತ್ಮಕವಾಗಿ ಯೋಚಿಸುತ್ತಿರುವುದು ಆಶ್ಚರ್ಯ ತರಿಸುತ್ತದೆ. ಈಗ ಎದುರಾಗಿರುವ ಪರಿಸ್ಥಿತಿಗೆ ಕಳೆದ ಹತ್ತು ವರ್ಷಗಳ ಆಡಳಿತವೇ ಕಾರಣ. ಎಲ್ಲವನ್ನೂ ಸರಿಪಡಿಸಲು ಸಮಯ ಹಿಡಿಯುತ್ತದೆ. ಕಳೆದ 10 ವರ್ಷಗಳಲ್ಲಿ ಗುಜರಾತ್ 7 ವರ್ಷ ಬರಪೀಡಿತವಾಗಿತ್ತು ಎನ್ನುವುದು ನಿಮಗೆ ಗೊತ್ತೆ? ದೇವರ ದಯೆ ನಮ್ಮ ಮೇಲಿದೆ. ಈ ಬಾರಿ ಉತ್ತಮ ಮಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಮೋದಿ ಬರೀ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಮಾತನಾಡುತ್ತಾರೆ, ಆದರೆ ಪರಿಹಾರವನ್ನು ಸೂಚಿಸುವುದಿಲ್ಲ ಎನ್ನುತ್ತಾರೆ ರಾಹುಲ್?
ಯುವಕರಿಗೆ ಉದ್ಯೋಗ ಬೇಕಿದೆ. ಒಬ್ಬ ಯುವಕ ಲಿಖಿತ ಪರೀಕ್ಷೆಯನ್ನು ಪಾಸು ಮಾಡಿ ಸಂದರ್ಶನಕ್ಕೆ ಹಾಜರಾಗುತ್ತಾನೆ ಎಂದುಕೊಳ್ಳಿ. ಸಂದರ್ಶನದ ಬಗ್ಗೆ ಆತನಿಗೆ ಚಿಂತೆಯಿರುವುದಿಲ್ಲ. ಆದರೆ ತನ್ನ ಕೆಲಸವನ್ನು ಶಿಫಾರಸು ಪಡೆದ ಮೂರನೆಯ ವ್ಯಕ್ತಿಯೊಬ್ಬ ಎಲ್ಲಿ ಲಪಟಾಯಿಸಿ ಬಿಡುತ್ತಾನೋ ಎನ್ನುವ ಭಯವಿರುತ್ತದೆ. ಹಾಗಾಗೇ ಸಂದರ್ಶನದಲ್ಲಿ ಪಾಸಾಗಿ ಕೆಲಸ ಪಡೆಯಲು ಆತ ಮಧ್ಯವರ್ತಿಯೊಬ್ಬನನ್ನು ಹುಡುಕುತ್ತಾನೆ! ಬಡಜನರ ಸಹಾಯಕ್ಕಾಗಿ ಉಪಯೋಗವಾಗಬೇಕಿರುವ ಹಣವೆಲ್ಲ ಭ್ರಷ್ಟಾಚಾರಿಗಳ ಬೇಬು ಸೇರುತ್ತದೆ. ಗುಜರಾತ್‌ನಲ್ಲಿ ನಾನು 13,000 ಶಿಕ್ಷಕರಿಗೆ ಕೆಲಸ ಒದಗಿಸಿಕೊಟ್ಟೆವು. ನಮ್ಮಲ್ಲಿ ಅಂತರ್ಜಾಲದಲ್ಲೇ ಅರ್ಜಿ ಲಭ್ಯವಿದೆ, ಅಲ್ಲೇ ತುಂಬಿ ಕಳುಹಿಸಿ ಎಂದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಹೇಳಿದ್ದೆ ಶೈಕ್ಷಣಿಕ ವೃತ್ತಿ, ಅನುಭವ ಇತ್ಯಾದಿ ವಿಭಾಗಗಳನ್ನು ಸೃಷ್ಟಿಸಿ, ನಾವು ಪ್ರತಿ ವಿಭಾಗಕ್ಕೂ ಮಾರ್ಕ್ಸ್ ನಿಗದಿ ಮಾಡಿದ್ದೆವುವು. ಆ 13,000 ಜನರ ಆಯ್ಕೆ ಮಾಡಿದ್ದು ಕಂಪ್ಯೂಟರ್ ಸಾಫ್ಟ್‌ವೇರ್ ಹೊರತು ಯಾವೊಬ್ಬ ಮನುಷ್ಯನ ಕಾರುಬಾರೂ ಅಲ್ಲಿಲ್ಲ. ಮಧ್ಯವರ್ತಿಗಳಿಗೆ, ಭ್ರಷ್ಟಾಚಾರಕ್ಕೆ ಅಲ್ಲಿ ಅವಕಾಶವೇ ಇರಲಿಲ್ಲ. ಭ್ರಷ್ಟಾಚಾರ ಇಳಿಮುಖವಾಗಬೇಕೆಂದರೆ ತಂತ್ರಜ್ಞಾನದ ಬಳಕೆ ಹೆಚ್ಚಬೇಕು. ಜಯಂತಿ ನಟರಾಜನ್ ಕೇಂದ್ರ ಸಚಿವರಾಗಿದ್ದಾಗ ಪರಿಸರ ಸಚಿವಾಲಯದ ಕ್ಲಿಯರೆನ್ಸ್ ಫೈಲುಗಳ್ಯಾವುವೂ ಪಾಸಾಗದೇ ಅಲ್ಲೇ ಕೊಳೆಯುತ್ತಿದ್ದವು. ಸಚಿವರು ಹೊರನಡೆದಾಗ ಸುಮಾರು 200 ಸಹಿ ಹಾಕಿದ ಫೈಲುಗಳು ಅವರ ಕಪಾಟಿನಲ್ಲಿ ಸಿಕ್ಕವೆಂದು ನೀವು ಮಾಧ್ಯಮದವರೇ ಹೇಳಿದ್ದೀರಿ. ಸಚಿವಾಲಯ ಈ ರೀತಿ ವಿಳಂಬ ನೀತಿ ಅನುಸರಿಸಲು ಕಾರಣವೇನು? ಅವರಿಗೆ ಹಣಬೇಕಿತ್ತಲ್ಲವೇ? ಆದರೆ ನಾವು ಗುಜರಾತ್‌ನಲ್ಲಿ ಏನು ಮಾಡಿದ್ದೇವೆಂದರೆ, ನೀವು ಮನೆಯಲ್ಲೇ ಕುಳಿತು ನಿಮ್ಮ ಫೈಲುಗಳ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ವೇಳೆ ಅದನ್ನು ತಡೆಹಿಡಿಯಲಾಗಿತ್ತೆಂದರೆ, ಏಕೆ ಮತ್ತು ಎಲ್ಲಿ ಹಾಗಾಗಿದೆ ಎನ್ನುವುದನ್ನೂ ಪತ್ತೆಹಚ್ಚಬಹುದು. ತಂತ್ರಜ್ಞಾನದ ಬಳಕೆಯಿಂದಾಗಿಯೇ ನಮ್ಮಲ್ಲಿ ಪಾರದರ್ಶಕತೆ ಹೆಚ್ಚಿದೆ.
ಆದರೂ ನೀವು ಬಾಬುಭಾಯ್ ಬೋಖಾರಿಯಾ ಮತ್ತು ಪುರುಷೋತ್ತಮ್ ಸೋಲಂಕಿಯಂಥ ಕಳಂಕಿತ ನಾಯಕರನ್ನು ತೆಗೆದುಹಾಕಲು ವಿಫಲವಾಗಿದ್ದೀರಿ ಎಂದು ಕಾಂಗ್ರೆಸ್ ಹೇಳುತ್ತಿದೆ.
ಇಲ್ಲಿ ನೀವು ಕಾಂಗ್ರೆಸ್ ಪರ ಪ್ರಚಾರ ಮಾಡಬೇಕೆಂದು ನಿರ್ಧರಿಸಿದ್ದರೆ ನಾನೇನೂ ಹೇಳಲಾರೆ. ಆದರೆ ಬೋಖಾರಿಯಾ ವಿರುದ್ಧದ ಕೇಸ್ ಅನ್ನು ಕೋರ್ಟ್ ತಡೆಹಿಡಿದಿದೆ. ಇನ್ನು ಪುರುಷೋತ್ತಮ್ ಸೋಲಂಕಿ ವಿರುದ್ಧ ಯಾವ ಕೇಸೂ ದಾಖಲಾಗಿಲ್ಲ. ಈ ರೀತಿ ಪ್ರಶ್ನೆ ಕೇಳುತ್ತಿರುವ ಪಕ್ಷದ ನಾಯಕರೇ ಭ್ರಷ್ಟಾಚಾರವೆಸಗಿ ಜೈಲು ಸೇರಿದ್ದಾರಲ್ಲವೇ? ಕಪ್ಪು ಹಣದ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಬಂದು ಕಾಂಗ್ರೆಸ್‌ಗೆ ಎಚ್ಚರಿಸಬೇಕಾಯಿತು. ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್ 18 ಜನರ ಪಟ್ಟಿಯನ್ನು ಸಲ್ಲಿಸಿದೆ. ಭ್ರಷ್ಟಾಚಾರ ಕಾಂಗ್ರೆಸ್‌ನ ಅಂಗವಾಗಿಬಿಟ್ಟಿದೆ.

ಕಪ್ಪು ಹಣದ ವಿಷಯವಾಗಿ ತನಿಖಾ ಆಯೋಗವೊಂದನ್ನು ರಚಿಸಬೇಕೆಂದು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ನಿಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೀರಿ?
ಎಲ್.ಕೆ. ಆಡ್ವಾಣಿಯವರು ಕಪ್ಪು ಹಣವನ್ನು ವಾಪಸ್ ಭಾರತಕ್ಕೆ ತರಬೇಕೆಂದು ದೇಶಾದ್ಯಂತ ಆಂದೋಲನವನ್ನೇ ನಡೆಸಿದರು. ನಮ್ಮ ಪ್ರಣಾಳಿಕೆಯಲ್ಲೂ ಈ ವಿಚಾರ ಸ್ಪಷ್ಟಪಡಿಸಿದ್ದೇವೆ. ಸುಪ್ರೀಂ ಕೋರ್ಟ್‌ನ ಬಗ್ಗೆ ತಲೆಕೆಡಿಸಿಕೊಳ್ಳದಿರುವವರು ನಮ್ಮತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ ನೋಡಿ!

ಸ್ನೂಪ್‌ಗೇಟ್ ಪ್ರಕರಣದ ವಿಚಾರಣೆಗಾಗಿ ಮೇ 16ಕ್ಕೂ ಮುಂಚೆ ನ್ಯಾಯಾಂಗವನ್ನು ಸ್ಥಾಪಿಲಾಗುವುದು ಎನ್ನುತ್ತಿದ್ದಾರೆ ಸಿಬಲ್
ಅವರಿಗೇನು ಬೇಕೋ ಅದನ್ನು ಮಾಡಿಕೊಳ್ಳಲಿ.

ಗುಜರಾತ್‌ನದ್ದು ಟಾಫಿ ಮಾಡಲ್ ಎಂದು ಕಾಂಗ್ರೆಸ್ ಹೇಳುತ್ತಿದೆ. ಅದಾನಿಯಂಥವರಿಗೆ ಟಾಫಿ ಬೆಲೆಯಲ್ಲಿ(ಕಡಿಮೆ ಬೆಲೆಯಲ್ಲಿ) ಜಾಗ ಕೊಡಲಾಯಿತು ಎನ್ನುತ್ತಿದೆ
ನಿಮಗೊಂದು ಕ್ರಾಂತಿಕಾರಿ ಮಾರ್ಗವನ್ನು ಹೇಳಲೇ? ಏಕೆಂದರೆ ನಿಮ್ಮದು 'ಕ್ರಾಂತಿಕಾರಿ' ಸುದ್ದಿ ವಾಹಿನಿಯಾದ್ದರಿಂದ ನಿಮಗೆ ಈ ಕೆಲಸ ಸಾಧ್ಯವೆನಿಸುತ್ತದೆ. ನಾವು ಈ ಕುರಿತು ಪವರ್‌ಪಾಯಿಂಟ್ ಪ್ರೆಸೆಂಟೇಷನ್ ತಯಾರಿಸಿದ್ದೇವೆ. ನಿಮ್ಮ ವಾಹಿನಿಯಲ್ಲಿ ಅದನ್ನು ಪ್ರಸಾರ ಮಾಡಬೇಕೆಂದು ಕೋರುತ್ತೇವೆ. ನಿಮಗೆ ಬೇಕಿರುವ ಉತ್ತರವೆಲ್ಲ ಅದರಲ್ಲಿದೆ. ಗುಜರಾತ್‌ನ ಭೂ ಸ್ವಾಧೀನ ಮಾದರಿಯನ್ನು ಉಳಿದ ರಾಜ್ಯಗಳೂ ಅಳವಡಿಸಿಕೊಳ್ಳಬೇಕೆಂದು ಖುದ್ದು ಸುಪ್ರೀಂ ಕೋರ್ಟ್ ಹೇಳಿದೆ. ನಿಮ್ಮವು ತಲೆಬುಡವಿಲ್ಲದ ಆರೋಪಗಳು. ಕಳೆದ ವಾರವಷ್ಟೇ ಟಾಟಾ ನ್ಯಾನೋ ಕಾರ್ ಯೋಜನೆಯ ಕುರಿತ ತನ್ನ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಸರ್ಕಾರದ ಕಾರ್ಯನೀತಿಯನ್ನು ಬೆಂಬಲಿಸಿದೆ. ಆದರೆ ನಿಮಗೆಲ್ಲ ಇದು ಸುದ್ದಿಯೇ ಅಲ್ಲವಲ್ಲ? ಯಾರೋಬ್ಬರೂ ಆ ಬಗ್ಗೆ ಮಾತನಾಡಲಿಲ್ಲ.
 
ಪ್ರಿಯಾಂಕಾ ಗಾಂಧಿಯವರು ಪ್ರಚಾರ ಶುರುಮಾಡಿದ ದಿನದಿಂದ ನಿಮ್ಮ ಮೇಲಿನ ವೈಯಕ್ತಿಕ ದಾಳಿಗಳು ಹೆಚ್ಚಾಗಿವೆಯಲ್ಲ?
ಈಗಲ್ಲ ಸ್ವಾಮಿ, ಕಳೆದ 12 ವರ್ಷಗಳಿಂದ ಕಾಂಗ್ರೆಸ್ ನನ್ನ ಮೇಲಿ ನಿರಂತರವಾಗಿ ದಾಳಿ ಮಾಡುತ್ತಾ ಬಂದಿದೆ.  ಅವರ ಬೈಗುಳಗಳ ನಿಘಂಟಿನಲ್ಲಿ ಪದಗಳೇ ಖಾಲಿಯಾಗಿಬಿಟ್ಟಿವೆ.

ಸೋನಿಯಾ ಮತ್ತು ರಾಹುಲ್‌ಗೆ ಹೋಲಿಸಿದರೆ, ಪ್ರಿಯಾಂಕಾ ಬಗ್ಗೆ ತುಸು ಮೃದು ಧೋರಣೆ ತೋರಿಸುತ್ತಿದ್ದೀರಿ
ರಾಜಕೀಯದಲ್ಲಿರುವವರು ಮಾತ್ರ ರಾಜಕೀಯ ಎದುರಾಳಿಗಳಾಗಲು ಸಾಧ್ಯ.

ನೀವು ಅಧಿಕಾರಕ್ಕೆ ಬಂದರೆ ಕಾಶ್ಮೀರದ ಪರಿಸ್ಥಿತಿ ಹದಗೆಡುತ್ತದೆ ಎಂದು ಪಾಕಿಸ್ತಾನದ ಸೇನಾ ನಾಯಕ ಹೇಳಿದ್ದಾರೆ. ದಾವೂದ್ ವಿಷಯದಲ್ಲಿ ಪಾಕ್ ನೆಡೆಗೆ ನಿಮ್ಮ ನಿಲುವು ಹೇಗಿರಲಿದೆ?
ಭಾರತದಂಥ ಬೃಹತ್ ರಾಷ್ಟ್ರ ಭಯದಲ್ಲಿ ಬದುಕಬಾರದು. ಸೌಹಾರ್ದಯುತ ಸಂಬಂಧ ಬೆಳೆಸಬೇಕೆಂದರೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕಾಗುತ್ತದೆ.

ನೀವು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದಾಗ, ಆಡ್ವಾಣಿ ಅಸಮಾಧಾನಗೊಂಡಿದ್ದರಲ್ಲ?
ಅದು ನಿಮ್ಮ ಸಮಸ್ಯೆಯಷ್ಟೆ. ನಮ್ಮಲ್ಲಿ ಎಲ್ಲವೂ ಸರಿಯಿದೆ. ಧನ್ಯವಾದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com