ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಸಂಸದರು!

ಒಂದು ಜಿಲ್ಲೆ, ನಾಲ್ವರು ಸಂಸದರು! ಹೌದು, 16ನೇ ಲೋಕಸಭೆಗೆ ರಾಜ್ಯದ ಬೇರೆ ಬೇರೆ...
ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಸಂಸದರು!
Updated on

-ರಾಘವೇಂದ್ರ ಅಗ್ನಿಹೋತ್ರಿ
ಮಂಗಳೂರು:
ಒಂದು ಜಿಲ್ಲೆ, ನಾಲ್ವರು ಸಂಸದರು!
ಹೌದು, 16ನೇ ಲೋಕಸಭೆಗೆ ರಾಜ್ಯದ ಬೇರೆ ಬೇರೆ ಕ್ಷೇತ್ರಗಳಿಂದ ನಾಲ್ವರು ಸಂಸದರನ್ನು ಏಕಕಾಲದಲ್ಲಿ ಆಯ್ಕೆ ಮಾಡಿ ಕಳಿಸಿದ ದಾಖಲೆಯೀಗ ದಕ್ಷಿಣ ಕನ್ನಡದ ಮಡಿಲಿಗೆ.   ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮತದಾನದ (79.19) ದಾಖಲೆ ಬರೆದ ಈ ಜಿಲ್ಲೆಯೀಗ ಫಲಿತಾಂಶ ಬಂದ ಬಳಿಕ ಇನ್ನೊಂದು ಹೊಸ ದಾಖಲೆ ಬರೆದಿದೆ. ಪುತ್ತೂರಿನ ನಳಿನ್‌ಕುಮಾರ್ ಕಟೀಲು ದಕ್ಷಿಣ ಕನ್ನಡದಿಂದ ಆಯ್ಕೆಯಾದ ಸಂಸದ. ಹಾಗೇ ಇದೇ ಜಿಲ್ಲೆಯ ಶೋಭಾ ಕರಂದ್ಲಾಜೆಯವರೂ ಪುತ್ತೂರು ತಾಲೂಕು ಚಾರ್ವಾಕದವರು.
ಇಡೀ ರಾಜ್ಯದಿಂದ ಏಕೈಕ ಮಹಿಳಾ ಸಂಸದೆ ಶೋಭಾ ಆಯ್ಕೆಯಾಗಿದ್ದು, ಅವರು ದಕ್ಷಿಣ ಕನ್ನಡದವರು. ಇವರೀಗ ಪಕ್ಕದ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸುಳ್ಯದ ಮಂಡೆಕೋಲಿನವರು. ಬೆಂಗಳೂರು ಉತ್ತರದಿಂದ ಲೋಕಸಭೆಗೆ ಆಯ್ಕೆಯಾದವರು. ಹಾಗೇ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಮೂಡುಬಿದಿರೆಯ ಮಾರ್ಪಳ್ಳಿಯವರು. ಪ್ರಸ್ತುತ ಚಿಕ್ಕಬಳ್ಳಾಪುರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಹೀಗೆ ನಾಲ್ವರನ್ನು ಸಂಸತ್ತಿಗೆ ಕಳುಹಿಸಿದ ಕೀರ್ತಿ ಲಭಿಸಿದೆ.

ಮೂವರು ಬಿಜೆಪಿ, ಒಬ್ಬರು ಕಾಂಗ್ರೆಸ್
ಆಯ್ಕೆಯಾದ ನಾಲ್ವರು ರಾಜಕಾರಣಿಗಳಲ್ಲಿ ಮೂವರು ಬಿಜೆಪಿ ಸಂಸದರಾದರೆ, ವೀರಪ್ಪ ಮೊಯ್ಲಿ ಮಾತ್ರ ಕಾಂಗ್ರೆಸ್‌ನಿಂದ ಆಯ್ಕೆಯಾದವರು. ಅವರಲ್ಲಿ ನಳಿನ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಇಬ್ಬರೂ ಮೂಲತಃ ಪುತ್ತೂರಿನವರು. ಡೀವಿ ಮೂಲತಃ ಸುಳ್ಯದವರಾದರೂ, ಅವರ ರಾಜಕೀಯ ಪ್ರಾರಂಭವಾಗಿದ್ದು ಪುತ್ತೂರಿನಿಂದಲೇ.

6 ಸ್ನಾತಕೋತ್ತರ, 6 ಮಂದಿ ಕಾನೂನು ಪದವಿ
ಲೋಕಸಭೆಗೆ ಆಯ್ಕೆಯಾದವರಲ್ಲಿ ಮೈಸೂರು ಸಂಸದ ಪ್ರತಾಪ್‌ಸಿಂಹ ಸೇರಿದಂತೆ 6 ಮಂದಿ ಸ್ನಾತಕೊತ್ತರ ಪದವಿ ಪಡೆದವರು. ಅವರೆಂದರೆ ಬಿಜಾಪುರದ ರಮೇಶ ಜಿಗಜಿಣಗಿ, ಚಿತ್ರದುರ್ಗದ ಬಿ.ಎನ್. ಚಂದ್ರಪ್ಪ, ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ, ಚಾಮರಾಜನಗರ ಧ್ರುವನಾರಾಯಣ, ಬೆಂಗಳೂರು ದಕ್ಷಿಣದ ಅನಂತಕುಮಾರ್.  ಡಿ.ವಿ. ಸದಾನಂದ ಗೌಡ ಸೇರಿದಂತೆ ಬೆಳಗಾವಿಯ ಸುರೇಶ್ ಅಂಗಡಿ, ತುಮಕೂರಿನ ಎಸ್.ಪಿ. ಮುದ್ದಹನುಮೇಗೌಡ, ಚಿಕ್ಕಬಳ್ಳಾಪುರದಿಂದ ಆಯ್ಕೆಯಾದ ವೀರಪ್ಪ ಮೊಯ್ಲಿ, ಕೋಲಾರದ ಕೆ.ಎಚ್. ಮುನಿಯಪ್ಪ, ಬಾಗಲಕೋಟೆಯ ಪಿ. ಸಿ. ಗದ್ದಿಗೌಡರ್ ಕಾನೂನು ಪದವೀಧರರಾಗಿದ್ದಾರೆ.

ಮೂವರು ಎಸ್ಸೆಸ್ಸೆಲ್ಸಿ, ಐವರು ಪಿಯುಸಿ
ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಸೇರಿದಂತೆ ರಾಜ್ಯದಿಂದ ಆಯ್ಕೆಯಾದ ಸಂಸದರಲ್ಲಿ ಮೂವರ ವಿದ್ಯಾರ್ಹತೆ ಕೇವಲ ಎಸ್ಸೆಸ್ಸೆಲ್ಸಿ. ಇನ್ನುಳಿದ ಸಂಸದರೆಂದರೆ ಕೊಪ್ಪಳದ ಕರಡಿ ಸಂಗಣ್ಣ ಹಾಗೂ ಚಿಕ್ಕೋಡಿಯ ಪ್ರಕಾಶ ಹುಕ್ಕೇರಿ. ಮಾಜಿ ಮುಖ್ಯಮಂತ್ರಿ, ಶಿವಮೊಗ್ಗ ಸಂಸದ ಯಡಿಯೂರಪ್ಪ ಸೇರಿ ಐವರು ಕೇವಲ ಪಿಯುಸಿವರೆಗೆ ವ್ಯಾಸಂಗ ಮಾಡಿದವರು. ಉಳಿದವರೆಂದರೆ ದಾವಣಗೆರೆ, ಉತ್ತರ ಕನ್ನಡ, ಮಂಡ್ಯ, ಬೆಂಗಳೂರು ಗ್ರಾಮಾಂತರ ಸಂಸದರು.

ಒಬ್ಬರು ಮಾಜಿ ಪಿಎಂ, ಮೂವರು ಮಾಜಿ ಸಿಎಂ
ಹಾಸನದಿಂದ ಆಯ್ಕೆಯಾಗಿರುವ ಎಚ್.ಡಿ. ದೇವೇಗೌಡ ಮಾಜಿ ಪ್ರಧಾನಿಯಾದರೆ, ಡೀವಿ, ಯಡಿಯೂರಪ್ಪ ಹಾಗೂ ವೀರಪ್ಪ ಮೊಯ್ಲಿ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದವರು. ಹೀಗೆ ಹಲವು ದಾಖಲೆಗಳೂ ಸೇರಿದಂತೆ ಹಲವು ಸಾಧಕರನ್ನು ಕರ್ನಾಟಕದಿಂದ 16ನೇ ಲೋಕಸಭೆಗೆ ಆಯ್ಕೆ ಮಾಡಿದ ಕೀರ್ತಿ ರಾಜ್ಯದ ಜನತೆಗೆ.

ಹಾಸನ, ಮಂಡ್ಯದಿಂದ ತಲಾ ಇಬ್ಬರು
ಒಂದೇ ಜಿಲ್ಲೆಯ ಇಬ್ಬರು ಹಾಸನ ಮತ್ತು ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಮೈಸೂರಿನಿಂದ ಆಯ್ಕೆಯಾದ ಪ್ರತಾಪ್‌ಸಿಂಹ ಮೂಲತಃ ಹಾಸನದವರು. ಹಾಸನದಿಂದಲೇ ಆಯ್ಕೆಯಾದ ಮಾಜಿ ಪ್ರಧಾನಿ ದೇವೇಗೌಡ ಅದೇ ಜಿಲ್ಲೆಯವರು.ಶಿವಮೊಗ್ಗದಿಂದ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೂಲತಃ ಮಂಡ್ಯದ ಬೂಕನಕೆರೆಯವರು, ಈಗ ಮಂಡ್ಯದಿಂದ ಆಯ್ಕೆಯಾಗಿರುವ ಸಿ.ಎಸ್. ಪುಟ್ಟರಾಜು ಅದೇ ಜಿಲ್ಲೆಯವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com