ಕ.ಪ್ರ.ವಾರ್ತೆ ಬೆಂಗಳೂರು ಮೇ 20
ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ಹೊಸ ಸವಾಲುಗಳು ಎದುರಾಗಿವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಅವರ 23ನೇ ಪುಣ್ಯತಿಥಿ ಅಂಗವಾಗಿ ಭಾರತರತ್ನ ಶ್ರೀ ರಾಜೀವ್‌ಗಾಂಧಿ ಜ್ಯೋತಿ ಸಮಿತಿ ಹಮ್ಮಿಕೊಂಡಿರುವ ಜ್ಯೋತಿಯಾತ್ರೆಗೆ ಶೇಷಾದ್ರಿಪುರದ ರಾಜೀವ್ ಗಾಂಧಿ ಪ್ರತಿಮೆ ಬಳಿ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆಯೂ ಪಕ್ಷ ಸೋಲು ಕಂಡಿದೆ. ಆದರೆ ಹಿಂದಿಗಿಂತಲೂ ಈ ಬಾರಿ ರಾಜೀವ್ ಗಾಂಧಿ ಅವರ ಆದರ್ಶಗಳ ಪಾಲನೆಯ ಅಗತ್ಯವಿದೆ. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಅನುಷ್ಠಾನಕ್ಕೆ ತಂದಿದ್ದ ಚಿಂತನೆಗಳು ಈಗ ಪ್ರಸ್ತುತ ಎನಿಸಿವೆ ಎಂದರು.
ರಾಜೀವ್ ಗಾಂಧಿ 21 ನೇ ಶತಮಾನ ಕಂಡ ಧೀಮಂತ ನಾಯಕನಾಗಿದ್ದು, ರಾಜಕೀಯದಲ್ಲಿ ಬದಲಾವಣೆ ತರುವ ಹಾಗೂ ಸರ್ಕಾರಿ ವ್ಯವಸ್ಥೆಯಲ್ಲಿ ಆಧುನಿಕತೆ ತರುವ ಕನಸು ಕಂಡಿದ್ದರು. ಆದರೆ ಚಿಕ್ಕವಯಸ್ಸಿನಲ್ಲೇ ಭಯೋತ್ಪಾದಕ ದಾಳಿಗೊಳಗಾಗಿದ್ದರಿಂದ ದೇಶ ಉತ್ತಮ ನಾಯಕನನ್ನು ಕಳೆದುಕೊಳ್ಳಬೇಕಾಯಿತು. ಭವಿಷ್ಯದಲ್ಲಿ ಪಕ್ಷ ಬೆಳೆಸಲು ರಾಜೀವ್ ಗಾಂಧಿ ಆಡಳಿತದ ಮಾದರಿಯನ್ನು ಅನುಸರಿಸಲಾಗುವುದು ಎಂದು ಹೇಳಿದರು. ಬೆಂಗಳೂರಿನಿಂದ ಪೆರಂಬುತ್ತೂರಿಗೆ ಸಮಿತಿ ಕೈಗೊಂಡಿರುವ ಯಾತ್ರೆಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಲಾಯಿತು.
Advertisement