

ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್‌ಗೆ ಎಂದೂ ಕಾಣದ ಸೋಲು 11ನೇ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿತು. ಜೆಡಿಎಸ್ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಪ್ರತಿಫಲವಾಗಿ ಲೋಕಸಭೆ ಚುನಾವಣೆಯಲ್ಲಿ ವಿಜೃಂಭಿಸಿತು. ಈವರೆಗೂ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಕಾಣದ ಯಶಸ್ಸು ಈ ಚುನಾವಣೆಯಲ್ಲಿ ದಾಖಲಿಸಿತು. ಕಾಂಗ್ರೆಸ್‌ಗಿಂತ ಹೆಚ್ಚು ಮತಗಳನ್ನು ಪಡೆಯಿತು. ಬಿಜೆಪಿ ಕೂಡ ಪ್ರಥಮ ಬಾರಿಗೆ ಹೆಚ್ಚಿನ ಸ್ಥಾನಗಳ ಗೆಲವು ಕಂಡು ಕೇಕೆ ಹಾಕಿತು. ಆದರೆ ಗೆಲವಿನ ಅಂತರ ಹೆಚ್ಚೇನು ಇರಲಿಲ್ಲ. 28 ಕ್ಷೇತ್ರಗಳಲ್ಲಿ ಕೇವಲ ನಾಲ್ಕು ಮಂದಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಜನತಾದಳಕ್ಕೆ ಹೆಚ್ಚಿನ ಒಲವು ತೋರಿದ್ದರಿಂದ ಎಚ್.ಡಿ. ದೇವೇಗೌಡ ಸಂಸದರಾಗಿಲ್ಲದಿದ್ದರೂ ಪ್ರಧಾನಿಯಾದರು. ಕಾಂಗ್ರೆಸ್‌ನಿಂದ ಹೊರಬಿದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ (ಕೆಸಿಪಿ) ಕಟ್ಟಿದ ಎಸ್. ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಗೆಲವು ಸಾಧಿಸಿದ್ದರು. ಕೆಸಿಪಿಯಿಂದಲೇ ಸ್ಪರ್ಧಿಸಿದ್ದ ಇನ್ನತ್ತು ಜನ ಠೇವಣಿ ಕಳೆದುಕೊಂಡಿದ್ದರು. ಮೂರು ಪಕ್ಷಗಳ ಹೊರತಾಗಿ ಕೆಸಿಪಿ ಅತಿಹೆಚ್ಚು ಮತಗಳಿಸಿದ್ದು ಸಾಧನೆ.
1996ರಲ್ಲಿ ನಡೆದ 11ನೇ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತದಾರರ ಸಂಖ್ಯೆ ಮೂರು ಕೋಟಿ ದಾಟಿತ್ತು. 1,61,47,681 ಪುರುಷರು, 1,56,62,388 ಮಹಿಳೆಯರು ಸೇರಿ 3,18,10,069 ಮತದಾರರಿದ್ದರು. ಇವರಲ್ಲಿ 1,91,55,432 ಮತದಾರರು ಹಕ್ಕು ಚಲಾಯಿಸಿ, ಶೇ.60.22ರಷ್ಟು ಮತ ದಾಖಲಿಸಿದ್ದರು. ಶೇ. 2.28 ಮತಗಳು ಕುಲಗೆಟ್ಟಿದ್ದವು. 44,348 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. 28 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ 98, ರಾಜ್ಯ ಪಕ್ಷಗಳಿಂದ 16, ಮಾನ್ಯತೆರಹಿತ ಪಕ್ಷಗಳಿಂದ 11 ಹಾಗೂ 853 ಪಕ್ಷೇತರರು ಸೇರಿ 978 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇಷ್ಟು ಸಂಖ್ಯೆಯ ಅಭ್ಯರ್ಥಿಗಳು ಈವರೆಗಿನ ದಾಖಲೆ. ಇದಕ್ಕೆ ಕಾರಣ, ಬೆಳಗಾವಿ ಗಡಿ ಕುರಿತಂತೆ ಪ್ರತಿಭಟನೆ ಸೂಚಿಸಲು ನೂರಾರು ಜನರು ಕಣಕ್ಕಿಳಿದಿದ್ದರು. ಬೆಳಗಾವಿ ಲೋಕಸಭೆ ಕ್ಷೇತ್ರವೊಂದರಲ್ಲೇ 456 ಅಭ್ಯರ್ಥಿಗಳಿದ್ದರು. ಒಟ್ಟಾರೆ, ರಾಷ್ಟ್ರೀಯ ಪಕ್ಷಗಳ 28, ರಾಜ್ಯ ಪಕ್ಷದ 14, ಮಾನ್ಯತೆರಹಿತ ಪಕ್ಷಗಳ 11 ಹಾಗೂ 852 ಪಕ್ಷೇತರರು ಸೇರಿದಂತೆ 905 ಮಂದಿ ಠೇವಣಿ ಕಳೆದುಕೊಂಡಿದ್ದರು. 71 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಒಬ್ಬರು ಗೆದ್ದು, 68 ಮಂದಿ ಠೇವಣಿ ಕಳೆದುಕೊಂಡಿದ್ದರು.
ರಾಜ್ಯದಲ್ಲಿ ಜನತಾದಳ ಜಯಭೇರಿ ಬಾರಿಸಿತು. 16 ಕ್ಷೇತ್ರಗಳಲ್ಲಿ ವಿಜಯ ಸಾಧಿಸುವುದರೊಂದಿಗೆ ಇತಿಹಾಸ ರಚಿಸಿತು. ಬಿಜೆಪಿ 6 ಸ್ಥಾನಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸಾಧಿಸಿತು. ಕಾಂಗ್ರೆಸ್ ಎಂದೂ ಇಲ್ಲದಂತಹ ಹೀನಾಯ ಸ್ಥಿತಿಗೆ ತಲುಪಿ ಕೇವಲ 5 ಸ್ಥಾನಗಲ್ಲಿ ಮಾತ್ರ ಜಯಸಾಧಿಸಿತ್ತು. ಜೆಡಿಎಸ್ 27 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಶೇ.34.91ರಷ್ಟು ಮತಪಡೆದಿತ್ತು. 28 ಕ್ಷೇತ್ರಗಳಲ್ಲೂ ಸ್ಪರ್ಧಿಸಿದ್ದ ಕಾಂಗ್ರೆಸ್ ಶೇ.30.29 ಹಾಗೂ ಬಿಜೆಪಿ ಶೇ.24.85ರಷ್ಟು ಮತ ಪಡೆದಿದ್ದವು. ಬಂಗಾರಪ್ಪ ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಅವರೊಬ್ಬರು ಶಿವಮೊಗ್ಗದಿಂದ ಆಯ್ಕೆಯಾಗಿದ್ದರು.
ಗುಲ್ಬರ್ಗದಿಂದ ಖಮರುಲ್ ಇಸ್ಲಾಂ, ರಾಯಚೂರಿನಿಂದ ರಾಜಾ ರಂಗಪ್ಪ ನಾಯಕ್, ಕೊಪ್ಪಳದಿಂದ ಬಸವರಾಜ್ ರಾಯರೆಡ್ಡಿ, ಚಿತ್ರದುರ್ಗದಿಂದ ಪಿ. ಕೋದಂಡರಾಮಯ್ಯ, ತುಮಕೂರಿನಿಂದ ಸಿ.ಎನ್. ಭಾಸ್ಕರಪ್ಪ, ಚಿಕ್ಕಬಳ್ಳಾಪುರದಿಂದ ಆರ್.ಎಲ್. ಜಾಲಪ್ಪ, ಕನಕಪುರದಿಂದ ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಉತ್ತರದಿಂದ ಸಿ. ನಾರಾಯಣಸ್ವಾಮಿ, ಮಂಡ್ಯದಿಂದ ಕೃಷ್ಣ, ಚಾಮರಾಜನಗರದಿಂದ (ಎಸ್‌ಸಿ) ಎ. ಸಿದ್ದರಾಜು, ಹಾಸನದಿಂದ ವೈ.ಎನ್. ರುದ್ರೇಶ್‌ಗೌಡ, ಚಿಕ್ಕಮಗಳೂರಿನಿಂದ ಬಿ.ಎಲ್. ಶಂಕರ್, ಬೆಳಗಾವಿಯಿಂದ ಶಿವಾನಂದ ಕೌಜಲಗಿ, ಚಿಕ್ಕೋಡಿಯಿಂದ (ಎಸ್‌ಸಿ) ರತ್ನಮಾಲಾ ಸವಣೂರು, ಬಾಗಲಕೋಟೆಯಿಂದ ಹುಲ್ಲಪ್ಪ ಮೇಟಿ, ಬಿಜಾಪುರದಿಂದ ಬಸವನಗೌಡ ಪಾಟೀಲ್ ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು.
ಬೀದರ್‌ನಿಂದ (ಎಸ್‌ಸಿ) ರಾಮಚಂದ್ರಪ್ಪ ವೀರಪ್ಪ, ದಾವಣಗೆರೆಯಿಂದ ಜಿ. ಮಲ್ಲಿಕಾರ್ಜುನಪ್ಪ, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್, ಮಂಗಳೂರಿನಿಂದ ಧನಂಜಯಕುಮಾರ್, ಕೆನರಾದಿಂದ ಅನಂತಕುಮಾರ್ ಹೆಗ್ಡೆ, ಧಾರವಾಡ ಉತ್ತರದಿಂದ ವಿಜಯ ಸಂಕೇಶ್ವರ ಅವರು ಬಿಜೆಪಿಯಿಂದ ಗೆಲವು ಸಾಧಿಸಿದ್ದರು.
ಬಳ್ಳಾರಿಯಿಂದ ಕೆ.ಸಿ. ಕೊಂಡಯ್ಯ, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಮೈಸೂರಿನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಡುಪಿಯಿಂದ ಆಸ್ಕರ್ ಫರ್ನಾಂಡಿಸ್, ಧಾರವಾಡ ದಕ್ಷಿಣದಿಂದ ಐ.ಜಿ. ಸನದಿ ಅವರು ಕಾಂಗ್ರೆಸ್‌ನಿಂದ ಜಯ ಸಾಧಿಸಿದ್ದರು. ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಎಸ್. ಬಂಗಾರಪ್ಪ ಜಯಸಾಧಿಸಿದ್ದರು. ಬೀದರ್‌ನಿಂದ (ಎಸ್‌ಸಿ) ಬಿಜೆಪಿಯ ರಾಮಚಂದ್ರ ವೀರಪ್ಪ ಅವರು ಕಾಂಗ್ರೆಸ್‌ನ ಟಿ.ಆರ್. ಕಾಂಬ್ಲೆ ಅವರನ್ನು 1,59,413 ಮತಗಳಿಂದ ಸೋಲಿಸಿದ್ದರು. ಕನಕಪುರದಲ್ಲಿ ಜನತಾದಳದ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ ಅವರನ್ನು 1,07,404 ಮತಗಳಿಂದ ಸೋಲಿಸಿದರೆ, ಬೆಂಗಳೂರು ಉತ್ತರದಲ್ಲಿ ಜನತಾದಳದ ಸಿ. ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನ ಒಬೇದುಲ್ಲಾ ಷರೀಫ್ ಅವರನ್ನು 1,33,302 ಮತಗಳಿಂದ ಮಣಿಸಿದರು. ಚಿಕ್ಕೋಡಿಯಲ್ಲಿ ಜನತಾದಳದ ರತ್ನಮಾಲಾ ಸವಣೂರ್ ಅವರು ಕಾಂಗ್ರೆಸ್‌ನ ಬಿ. ಶಂಕರಾನಂದ ಅವರನ್ನು 1,14,759 ಮತಗಳಿಂದ ಸೋಲಿಸಿದ್ದು ಈ ಚುನಾವಣೆಯ ಹೆಚ್ಚಿನ ಅಂತರದ ಗೆಲವುಗಳಾಗಿದ್ದವು. ಉಡುಪಿಯಲ್ಲಿ ಕಾಂಗ್ರೆಸ್‌ನ ಆಸ್ಕರ್ ಫರ್ನಾಂಡೀಸ್ ಅವರು ಬಿಜೆಪಿಯ ಜಯರಾಮ ಶೆಟ್ಟಿ ಅವರನ್ನು ಕೇವಲ 2,454 ಮತಗಳಿಂದ ಸೋಲಿಸಿದ್ದು ಈ ಚುನಾವಣೆ ವಿಶೇಷ.
-ಕೆರೆ ಮಂಜು
Advertisement