

11ನೇ ಲೋಕಸಭೆ ಚುನಾವಣೆ ಅವಧಿಯಲ್ಲಿ ಮೂವರು ಪ್ರಧಾನಿಗಳನ್ನು ಕಂಡರೂ ಕೇವಲ ಎರಡು ವರ್ಷಗಳ ಒಳಗೇ ಅವಧಿ ಮುಗಿಯಿತು. ಬಿಜೆಪಿ ಅತಿಹೆಚ್ಚು ಸ್ಥಾನ ಪಡೆದರೂ ವಾಜಪೇಯಿ ಅವರು ಬಹುಮತ ಸಾಬೀತುಪಡಿಸದೆ ಕೇವಲ 13 ದಿನಗಳ ಪ್ರಧಾನಿಯಾಗಿದ್ದರು. ನಂತರದ ಇಬ್ಬರು ಪ್ರಧಾನಿಗಳು ಅವಧಿ ಪೂರೈಸಲು ವಿಫಲವಾದ್ದರಿಂದ, 11ನೇ ಲೋಕಸಭೆ ಅವಧಿ ಕೇವಲ 18 ತಿಂಗಳಲ್ಲೇ ಮುಗಿದುಹೋಯಿತು. 12ನೇ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ಗೆ ಮುಖಭಂಗವೇ ಆಯಿತು. ಮತ್ತೆ ನಾಯಕತ್ವ ಇಲ್ಲದೆ ಕಾಂಗ್ರೆಸ್ ಸೋರಗಿದ ಜತೆಗೆ, ಮತಗಳಿಕೆಯಲ್ಲಿ ಇನ್ನೂ ಕುಸಿತ ಕಂಡಿತು. ಆದರೆ ಈ 12ನೇ ಲೋಕಸಭೆ ಚುನಾವಣೆಯಲ್ಲೂ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಮತ್ತೊಮ್ಮೆ ಮೈತ್ರಿಗೇ ಶರಣಾಗಬೇಕಾಯಿತು.
12ನೇ ಲೋಕಸಭೆಗೆ 1998ರ ಫೆಬ್ರವರಿ 16, 22 ಮತ್ತು 28ರಂದು ಚುನಾವಣೆ ನಡೆಯಿತು. ಮತದಾರರ ಸಂಖ್ಯೆ 60 ಕೋಟಿ ದಾಟಿತ್ತು. 31,66,92,789 ಪುರುಷರು, 28,91,87,403 ಮಹಿಳೆಯರು ಸೇರಿದಂತೆ 60,58,80,192 ಮತದಾರರಿದ್ದರು. 37,54,41,739 ಮತದಾರರು ಹಕ್ಕು ಚಲಾಯಿಸಿ ಶೇ.61.97ರಷ್ಟು ಮತ ದಾಖಲಿಸಿದ್ದರು. ಶೇ.1.86 ಮತಗಳು ಕುಲಗೆಟ್ಟಿದ್ದವು. 7,72,681 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. ಏಳು ರಾಷ್ಟ್ರೀಯ ಪಕ್ಷಗಳು, 30 ರಾಜ್ಯ ಪಕ್ಷಗಳು, 139 ಮಾನ್ಯತೆರಹಿತ ಪಕ್ಷಗಳು ಕಣದಲ್ಲಿದ್ದವು. 543 ಸ್ಥಾನಗಳಲ್ಲಿ ಎಸ್‌ಸಿಗೆ 79, ಎಸ್‌ಟಿಗೆ 41 ಸ್ಥಾನ ಮೀಸಲಾಗಿದ್ದವು. ರಾಷ್ಟ್ರೀಯ ಪಕ್ಷಗಳ 1493, ರಾಜ್ಯ ಪಕ್ಷಗಳ 471, ಮಾನ್ಯತೆರಹಿತ ಪಕ್ಷಗಳ 871 ಹಾಗೂ 1915 ಪಕ್ಷೇತರರು ಸೇರಿದಂತೆ 3,486 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 500ನಿಂದ 10,000ಕ್ಕೆ ಠೇವಣಿ ಹಣ ಹೆಚ್ಚು ಮಾಡಿದ್ದರಿಂದ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಯಿತು. ರಾಷ್ಟ್ರೀಯ ಪಕ್ಷಗಳ 637, ರಾಜ್ಯ ಪಕ್ಷಗಳ 207, ಮಾನ್ಯತೆರಹಿತ ಪಕ್ಷಗಳ 744 ಹಾಗೂ 1898 ಪಕ್ಷೇತರರು ಸೇರಿದಂತೆ 3,486 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 274 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ, 43 ಮಂದಿ ಗೆಲವು ಸಾಧಿಸಿದರೆ 184 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ಬಿಜೆಪಿ 388ರಲ್ಲಿ ಸ್ಪರ್ಧಿಸಿ 182 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಹಿಂದಿಕ್ಕಿತ್ತು. ಬಿಜೆಪಿ 25.59ರಷ್ಟು ಮತ ಗಳಿಸಿತ್ತು. ಆದರೂ 57 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಕಾಂಗ್ರೆಸ್ 477 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 141ರಲ್ಲಿ ಗೆಲವು ಸಾಧಿಸಿ, 153ರಲ್ಲಿ ಠೇವಣಿ ಇಲ್ಲದಂತೆ ಮಾಡಿಕೊಂಡು ಮತ ಗಳಿಕೆಯಲ್ಲೂ ಇಳಿಕೆ ಕಂಡು ಶೇ. 25.82ಕ್ಕೆ ಕುಸಿಯಿತು. ಜನತಾದಳ 191ರಲ್ಲಿ ಸ್ಪರ್ಧಿಸಿ 6ರಲ್ಲಿ ಗೆದ್ದು, 156ರಲ್ಲಿ ಠೇವಣಿ ನಷ್ಟಮಾಡಿಕೊಂಡಿತ್ತು. ಸಿಪಿಎಂ 71ರಲ್ಲಿ 32, ಸಿಪಿಐ 58ರಲ್ಲಿ 9 ಜಯ ಸಾಧಿಸಿತ್ತು. ಸಮತಾಪಕ್ಷ 57ರಲ್ಲಿ ಸ್ಪರ್ಧಿಸಿ 12ರಲ್ಲಿ ಗೆದ್ದು, 35ರಲ್ಲಿ ಠೇವಣಿ ಕಳೆದುಕೊಂಡಿತ್ತು. ಬಹುಜನ ಸಮಾಜಪಕ್ಷ 251ರಲ್ಲಿ ಸ್ಪರ್ಧಿಸಿ 5ರಲ್ಲಿ ಗೆದ್ದು 176ರಲ್ಲಿ ಠೇವಣಿ ಕಳೆದುಕೊಂಡಿತ್ತು. ರಾಜ್ಯ ಪಕ್ಷಗಳು 101, ಮಾನ್ಯತೆರಹಿತ ಪಕ್ಷಗಳು 49 ಸ್ಥಾನ ಪಡೆದರೆ, 6 ಪಕ್ಷೇತರರು ಜಯಸಾಧಿಸಿದರು.
ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರಿಂದ ಮೈತ್ರಿಕೂಟಗಳು ರಚನೆಯಾದವು. ಬಿಜೆಪಿ ನೇತೃತ್ವದಲ್ಲಿ ನ್ಯಾಷನಲ್ ಡೆಮೊಕ್ರಾಟಿಕ್ ಫ್ರಂಟ್ (ಎನ್‌ಡಿಎ) ರಚನೆಯಾಯಿತು. ಎಐಎಡಿಎಂಕೆ (18), ಸಮತಾ ಪಕ್ಷ (12), ತೃಣಮೂಲ ಕಾಂಗ್ರೆಸ್, (8), ಶಿರೋಮಣಿ ಅಕಾಲಿದಳ (8), ಬಿಜು ಜನತಾದಳ (8), ಶಿವಸೇನಾ (6), ಪಿಎಂಕೆ (4), ಎಂಡಿಎಂಕೆ (3) ಈ ಮೈತ್ರಿಕೂಟದಲ್ಲಿ ಸೇರಿಕೊಂಡರು. ಒಟ್ಟಾರೆ ಎನ್‌ಡಿಎಗೆ 282 ಸ್ಥಾನಗಳ ಬೆಂಬಲ ದೊರೆಯಿತು. ಹೀಗಾಗಿ, ವಾಜಪೇಯಿ ಅವರು 1998ರ ಮಾರ್ಚ್ 19ರಂದು 19ನೇ ಅವಧಿಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜಿಎಂಸಿ ಬಾಲಯೋಗಿ ಅವರು ಸ್ಪೀಕರ್ ಆಗಿದ್ದರು. ವಾಜಪೇಯಿ ಅವರಿಗೆ ಈ ಅವಧಿಯಲ್ಲೂ ಕಂಟಕ ತಪ್ಪಲಿಲ್ಲ. ಪ್ರಥಮ ಬಾರಿಗೆ 13 ದಿನದ ಪ್ರಧಾನಿ ಆಗಿದ್ದ ವಾಜಪೇಯಿ, ಈ ಅವಧಿಯಲ್ಲಿ ಕೇವಲ 13 ತಿಂಗಳಿಗೇ ಹುದ್ದೆ ತೊರೆಯಬೇಕಾಯಿತು. ಬೆಂಬಲ ನೀಡಿದ್ದೇನೆ ಎಂಬ ಕಾರಣದಿಂದ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು ತಮಗೆ ಬೇಕಾದ ಕೆಲಸ ಆಗಲೇಬೇಕು, ತಾವು ಹೇಳಿದಂತೆಯೇ ಕೇಳಬೇಕು ಎಂಬ ಬೇಡಿಕೆ, ಆಗ್ರಹ ವಾಜಪೇಯಿ ಮುಂದಿಟ್ಟರು. ವಾಜಪೇಯಿ ಸೇರಿದಂತೆ ಅವರ ಸಚಿವ ಸಂಪುಟ ಇದನ್ನು ನಿರಾಕರಿಸಿತು. ಆದ್ದರಿಂದಲೇ ಏಪ್ರಿಲ್‌ನಲ್ಲಿ ವಾಜಪೇಯಿ ರಾಜಿನಾಮೆ ನೀಡಿದರು. 12ನೇ ಲೋಕಸಭೆ ಚುನಾವಣೆಗೆ ಇತಿಶ್ರೀ ಹಾಡಿದರು.
= ಕೆರೆ ಮಂಜು
Advertisement