

ರಾಜ್ಯದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಜಯಭೇರಿ ಬಾರಿಸಿತ್ತು. 11ನೇ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ರಾಜ್ಯದ ಮತದಾರರು ವಾಲಿದ್ದರು. ಆದರೆ, 12ನೇ ಚುನಾವಣೆ ವೇಳೆಗೆ ವಾಜಪೇಯಿ ಅಲೆ ಅತಿ ಹೆಚ್ಚಾದ್ದರಿಂದ ರಾಜ್ಯದಲ್ಲಿ ಇನ್ನಾವುದೇ ಪಕ್ಷಕ್ಕೆ ಮಾನ್ಯತೆ ಇರಲಿಲ್ಲ. ಅದಕ್ಕೇ ಕಾಂಗ್ರೆಸ್ ಹಾಗೂ ಜನತಾದಳವನ್ನು ರಾಜ್ಯದ ಮತದಾರರು ಬಹುತೇಕ ನಿರ್ಲಕ್ಷಿಸಿದ್ದರು. ಇದಕ್ಕೆ ಪ್ರಮುಖ ಸಾಕ್ಷಿ ಎಂದರೆ, ಪ್ರಥಮ ಬಾರಿಗೆ ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಲಕ್ಷಕ್ಕಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲವು ಸಾಧಿಸಲೇ ಇಲ್ಲ. ಬದಲಿಗೆ ಈ ಪಾಲು ಬಿಜೆಪಿಯದ್ದಾಗಿತ್ತು. ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಜಯ ಸಾಧಿಸಿದ್ದು, ಬಿಜೆಪಿ ಅಲೆಯನ್ನು ಬಹಿರಂಗಪಡಿಸಿತ್ತು. ಅಲ್ಲದೆ, ರಾಮಕೃಷ್ಣ ಹೆಗಡೆಯವರ ಲೋಕಶಕ್ತಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು, ತನ್ನ 13 ಸ್ಥಾನಗಳ ಜತೆಗೆ ಲೋಕಶಕ್ತಿಯ ಮೂರು ಸ್ಥಾನಗಳೂ ವಾಜಪೇಯಿಗೆ ಬೆಂಬಲವಾಗಿದ್ದವು.
1998ರಲ್ಲಿ ನಡೆದ 12ನೇ ಲೋಕಸಭೆ ಚುನಾವಣೆಯಲ್ಲಿ 1,67,65,015 ಪುರುಷರು, 1,63,33,323 ಮಹಿಳೆಯರು ಸೇರಿ 3,30,98,338 ಮತದಾರರಿದ್ದರು. ಇವರಲ್ಲಿ 2,14,88,648 ಮತದಾರರು ಹಕ್ಕು ಚಲಾಯಿಸಿ, ಶೇ.64.92ರಷ್ಟು ಮತ ದಾಖಲಿಸಿದ್ದರು. ಇದು ಎರಡನೇ ಅತಿಹೆಚ್ಚು ಮತದಾನದ ದಾಖಲೆ. ಈ ಚುನಾವಣೆಯಲ್ಲಿ ಶೇ. 1.73 ಮತಗಳು ಕುಲಗೆಟ್ಟಿದ್ದವು. 44,122 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. 28 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ 86, ರಾಜ್ಯ ಪಕ್ಷಗಳಿಂದ 7, ಮಾನ್ಯತೆರಹಿತ ಪಕ್ಷಗಳಿಂದ 43 ಹಾಗೂ 64 ಪಕ್ಷೇತರರು ಸೇರಿ 200 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 23, ರಾಜ್ಯ ಪಕ್ಷದ 7, ಮಾನ್ಯತೆರಹಿತ ಪಕ್ಷಗಳ 33 ಹಾಗೂ 64 ಪಕ್ಷೇತರರು ಸೇರಿದಂತೆ 127 ಮಂದಿ ಠೇವಣಿ ಕಳೆದುಕೊಂಡಿದ್ದರು. 10 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಒಬ್ಬರೂ ಜಯ ಸಾಧಿಸದೆ, 10 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ರಾಜ್ಯದಲ್ಲಿ ಪ್ರಥಮಬಾರಿಗೆ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗಳಿಸಿತ್ತು. 18 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, 13ರಲ್ಲಿ ವಿಜಯ ಸಾಧಿಸಿ, ಒಂದರಲ್ಲಿ ಠೇವಣಿ ಕಳೆದುಕೊಂಡಿತ್ತು. ಶೇ.26.95ರಷ್ಟು ಮತ ಪಡೆದಿತ್ತು. ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 9 ಕ್ಷೇತ್ರದಲ್ಲಿ ಗೆದ್ದು, ಶೇ.36.22ರಷ್ಟು ಮತ ಗಳಿಸಿತ್ತು. ಜೆಡಿಎಸ್ 28ರಲ್ಲಿ ಸ್ಪರ್ಧಿಸಿ ಮೂರರಲ್ಲಿ ಗೆದ್ದು 10ರಲ್ಲಿ ಠೇವಣಿ ಕಳೆದುಕೊಂಡಿತ್ತು. ಶೇ.21.69ರಷ್ಟು ಪಡೆದರೂ, ಕಳೆದ ಚುನಾವಣೆಗೆ ಹೋಲಿಸಿದರೆ ಹೀನಾಯ ಸೋಲಾಗಿತ್ತು. ರಾಮಕೃಷ್ಣ ಹೆಗಡೆ ನೇತೃತ್ವದ ಲೋಕಶಕ್ತಿ ಮೂರು ಜಯದ ಸಾಧನೆ ಮಾಡಿತ್ತು. 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಮೂರರಲ್ಲಿ ಜಯ ಸಾಧಿಸಿ ಒಂದರಲ್ಲಿ ಠೇವಣಿ ನಷ್ಟ ಮಾಡಿಕೊಂಡಿತ್ತು. ಶೇ.11.50ರಷ್ಟು ಮತ ಪಡೆದಿತ್ತು.
ಬೀದರ್‌ನಿಂದ (ಎಸ್‌ಸಿ) ರಾಮಚಂದ್ರ ವೀರಪ್ಪ, ಗುಲ್ಬರ್ಗದಿಂದ ಬಸವರಾಜಪಾಟೀಲ್ ಸೇಡಂ, ತುಮಕೂರಿನಿಂದ ಎಸ್. ಮಲ್ಲಿಕಾರ್ಜನಯ್ಯ, ಕನಕಪುರದಿಂದ ಎಂ. ಶ್ರೀನಿವಾಸ್, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್, ಮೈಸೂರಿನಿಂದ ಸಿ.ಎಚ್. ವಿಜಯಶಂಕರ್, ಮಂಗಳೂರಿನಿಂದ ವಿ. ಧನಂಜಯಕುಮಾರ್, ಉಡುಪಿಯಿಂದ ಐ.ಎಂ. ಜಯರಾಮಶೆಟ್ಟಿ, ಚಿಕ್ಕಮಗಳೂರಿನಿಂದ ಡಿ.ಸಿ. ಶ್ರೀಕಂಠಪ್ಪ, ಶಿವಮೊಗ್ಗದಿಂದ ಆಯನೂರು ಮಂಜುನಾಥ್, ಕೆನರಾದಿಂದ ಅನಂತಕುಮಾರ್ ಹೆಗ್ಡೆ, ಧಾರವಾಡ ಉತ್ತರದಿಂದ ವಿಜಯಸಂಕೇಶ್ವರ್, ಬೆಳಗಾವಿಯಿಂದ ಬಾಬಾಗೌಡ ರುದ್ರಗೌಡ ಪಾಟೀಲ್ ಅವರು ಬಿಜೆಪಿಯಿಂದ ಜಯಭೇರಿ ಬಾರಿಸಿದ್ದರು.
ರಾಯಚೂರಿನಿಂದ ವೆಂಕಟೇಶ್ ನಾಯಕ್, ಕೊಪ್ಪಳದಿಂದ ಎಚ್.ಡಿ. ರಾಮುಲು, ಬಳ್ಳಾರಿಯಿಂದ ಕೆ.ಸಿ. ಕೊಂಡಯ್ಯ, ದಾವಣಗೆರೆಯಿಂದ ಶಾಮನೂರು ಶಿವಶಂಕರಪ್ಪ, ಚಿತ್ರದುರ್ಗದಿಂದ ಸಿ.ಪಿ. ಮೂಡಲಗಿರಿಯಪ್ಪ, ಚಿಕ್ಕಬಳ್ಳಾಪುರದಿಂದ ಆರ್.ಎಲ್. ಜಾಲಪ್ಪ, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಬೆಂಗಳೂರು ಉತ್ತರದಿಂದ ಸಿ.ಕೆ. ಜಾಫರ್ ಷರೀಫ್, ಬಿಜಾಪುರದಿಂದ ಮಲ್ಲನಗೌಡ ಬಸನಗೌಡಪಾಟೀಲ್ ಅವರು ಕಾಂಗ್ರೆಸ್ ಗೆಲವು ಪಡೆದಿದ್ದರು. ಮಂಡ್ಯದಿಂದ ಅಂಬರೀಶ್, ಚಾಮರಾಜನಗರದಿಂದ (ಎಸ್‌ಸಿ) ಎ. ಸಿದ್ದರಾಜು, ಹಾಸನದಿಂದ ಎಚ್.ಡಿ. ದೇವೇಗೌಡ ಅವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ಧಾರವಾಡ ದಕ್ಷಿಣದಿಂದ ಬಿ.ಎಂ. ಮೆಣಸಿನಕಾಯಿ, ಚಿಕ್ಕೋಡಿಯಿಂದ (ಎಸ್‌ಸಿ) ರಮೇಶ್ ಜಿಗಜಿಣಗಿ, ಬಾಗಲಕೋಟೆಯಿಂದ ಅಜಯ್‌ಕುಮಾರ್ ಸರ್‌ನಾಯಕ್ ಅವರು ಲೋಕಶಕ್ತಿ ಪಕ್ಷದಿಂದ ಜಯ ಸಾಧಿಸಿದ್ದರು.
ಬಿಜೆಪಿಯ ರಾಮಚಂದ್ರ ವೀರಪ್ಪ ಅವರು ಬೀದರ್‌ನಲ್ಲಿ ಜನತಾದಳದ ಬಾಬು ಹೊನ್ನನಾಯ್ಕ್ ಅವರನ್ನು 1,84,633 ಮತಗಳಿಂದ ಮಣಿಸಿದ್ದರು. ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿಯ ಅನಂತಕುಮಾರ್ ಅವರು ಕಾಂಗ್ರೆಸ್‌ನ ಡಿ.ಪಿ. ಶರ್ಮಾ ಅವರ ವಿರುದ್ಧ 1,80,047 ಮತ ಅಂತರದ ಗೆಲವು ಕಂಡಿದ್ದರು. ಗುಲ್ಬರ್ಗದಲ್ಲಿ ಬಿಜೆಪಿಯ ಬಸವರಾಜಪಾಟೀಲ್ ಸೇಡಂ 1,32,748 ಮತಗಳ ಅಂತರದಲ್ಲಿ ಜನತಾದಳದ ಖಮರುಲ್ ಇಸ್ಲಾಂ ಅವರನ್ನು ಸೋಲಿಸಿದ್ದರು. ಮೈಸೂರಿನಲ್ಲಿ ಸಿ.ಎಚ್. ವಿಜಯಶಂಕರ್ ಅವರು ಕಾಂಗ್ರೆಸ್‌ನ ಎಸ್. ಚಿಕ್ಕಮಾದು ಅವರನ್ನು 1,03,024 ಮತಗಳಿಂದ ಮಣಿಸಿದ್ದರು. ಮಂಡ್ಯದಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಅಂಬರೀಶ್ ಅವರು ಕಾಂಗ್ರೆಸ್‌ನ ಜಿ. ಮಾದೇಗೌಡ ಅವರ ವಿರುದ್ಧ 1,80,523 ಮತಗಳಿಂದ ಗೆದ್ದಿದ್ದರು.
-ಕೆರೆ ಮಂಜು
Advertisement