ಎನ್‌ಡಿಎಗೆ ಬಹುಮತ, ವಾಜಪೇಯಿ ಪೂರ್ಣಾವಧಿ ಪ್ರಧಾನಿ

ಎನ್‌ಡಿಎಗೆ ಬಹುಮತ, ವಾಜಪೇಯಿ ಪೂರ್ಣಾವಧಿ ಪ್ರಧಾನಿ
ಎನ್‌ಡಿಎಗೆ ಬಹುಮತ, ವಾಜಪೇಯಿ ಪೂರ್ಣಾವಧಿ ಪ್ರಧಾನಿ
Updated on

12ನೇ ಲೋಕಸಭೆಯಲ್ಲಿ 13 ತಿಂಗಳ ಅಧಿಕಾರ ನಡೆಸಿದ ಬಿಜೆಪಿಯ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಎಐಎ ಡಿಎಂಕೆ ನಾಯಕಿ ಜಯಲಲಿತಾ ಕಾಟ ಹೆಚ್ಚಾಗಿತ್ತು. ಬೆಂಬಲ ಹಿಂತೆಗೆತದ ಧಮಕಿಗೂ ವಾಜಪೇಯಿ ಹೆದರದೆ, ಬಹುಮತ ಸಾಬೀತುಪಡಿಸಲು ಮುಂದಾದರು. ಕೇವಲ ಒಂದೇಒಂದು ಮತದಿಂದ ವಾಜಪೇಯಿ ಬಹುಮತ ಸಾಬೀತಿನಲ್ಲಿ 1999ರ ಏಪ್ರಿಲ್ 17ರಂದು ವಿಫಲರಾದರು. ಹೀಗಾಗಿ 12ನೇ ಲೋಕಸಭೆ ಅಂತ್ಯಗೊಂಡು, ಕಾರ್ಗಿಲ್ ಯುದ್ಧ ನಡೆದ ಕೆಲವು ತಿಂಗಳ ನಂತರ 13ನೇ ಲೋಕಸಭೆಗೆ ಚುನಾವಣೆ ನಡೆಯಿತು. ಈ ಚುನಾವಣೆಗೆ ಮುನ್ನವೇ ಬಿಜೆಪಿ ನೇತೃತ್ವದಲ್ಲಿ ಮೈತ್ರಿಕೂಟ (ಎನ್‌ಡಿಎ) ರಚನೆಯಾಗಿ, ಆ ಮೂಲಕವೇ ಚುನಾವಣೆ ಎದುರಿಸಲಾಯಿತು. ಸ್ಪಷ್ಟಬಹುಮತದ ಹಿನ್ನೆಲೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದು, ವಾಜಪೇಯಿ ಪೂರ್ಣಾವಧಿಯಲ್ಲಿ ಪ್ರಧಾನಿ ಪಟ್ಟ ಅಲಂಕರಿಸಿದ್ದರು. ಕಾಂಗ್ರೆಸ್‌ಗೆ ಸೋನಿಯಾಗಾಂಧಿ ನಾಯಕತ್ವ ದೊರೆತರೂ 'ವಿದೇಶಿ ಫ್ಯಾಕ್ಟರ್‌'ನಿಂದ ಹಿನ್ನಡೆಯಾಯಿತು.
13ನೇ ಲೋಕಸಭೆಗೆ 1999ರ ಸೆಪ್ಟೆಂಬರ್ 5, 11, 18, 25 ಹಾಗೂ ಅಕ್ಟೋಬರ್ 3ರಂದು ಚುನಾವಣೆ ನಡೆಯಿತು. 32,38,13,667 ಪುರುಷರು, 29,57,23,180 ಮಹಿಳೆಯರು ಸೇರಿದಂತೆ 61,95,36,847 ಮತದಾರರಿದ್ದರು. 37,16,69,104 ಮತದಾರರು ಹಕ್ಕು ಚಲಾಯಿಸಿ ಶೇ.59.99ರಷ್ಟು ಮತ ದಾಖಲಿಸಿದ್ದರು. ಶೇ.1.91 ಮತಗಳು ಕುಲಗೆಟ್ಟಿದ್ದವು. 7,74,651 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. ಏಳು ರಾಷ್ಟ್ರೀಯ ಪಕ್ಷಗಳು, 40 ರಾಜ್ಯ ಪಕ್ಷಗಳು, 122 ಮಾನ್ಯತೆರಹಿತ ಪಕ್ಷಗಳು ಕಣದಲ್ಲಿದ್ದವು. 543 ಸ್ಥಾನಗಳಲ್ಲಿ ಎಸ್‌ಸಿಗೆ 79, ಎಸ್‌ಟಿಗೆ 41 ಸ್ಥಾನ ಮೀಸಲಾಗಿದ್ದವು. ರಾಷ್ಟ್ರೀಯ ಪಕ್ಷಗಳ 1299, ರಾಜ್ಯ ಪಕ್ಷಗಳ 750, ಮಾನ್ಯತೆರಹಿತ ಪಕ್ಷಗಳ 654 ಹಾಗೂ 1945 ಪಕ್ಷೇತರರು ಸೇರಿದಂತೆ 4648 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 437, ರಾಜ್ಯ ಪಕ್ಷಗಳ 411, ಮಾನ್ಯತೆರಹಿತ ಪಕ್ಷಗಳ 624 ಹಾಗೂ 1928 ಪಕ್ಷೇತರರು ಸೇರಿದಂತೆ 3,400 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. 284 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿ, 49 ಮಂದಿ ಗೆಲವು ಸಾಧಿಸಿದರೆ 183 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು.
ಮೈತ್ರಿ ಕೂಟದ ರಚನೆಯಿಂದ ಬಿಜೆಪಿ 339ರಲ್ಲಿ ಮಾತ್ರ ಸ್ಪರ್ಧಿಸಿ ಹಿಂದಿನ ಲೋಕಸಭೆಯಲ್ಲಿ ಗಳಿಸಿದ್ದ ಸ್ಥಾನಗಳನ್ನೇ ಗಳಿಸಿತ್ತು. 182 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ಹಿಂದಿಕ್ಕಿತ್ತು. ಬಿಜೆಪಿ 23.75ರಷ್ಟು ಮತ ಗಳಿಸಿತ್ತು. 24 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು. ಕಾಂಗ್ರೆಸ್ 453 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 114ರಲ್ಲಿ ಗೆಲವು ಸಾಧಿಸಿತ್ತು. ಇದು ಕಾಂಗ್ರೆಸ್ ಚುನಾವಣೆಯಲ್ಲಿ ಈವರೆಗೆ ಗಳಿಸಿರುವ ಅತ್ಯಂತ ಕಡಿಮೆ ಸ್ಥಾನ. 88ರಲ್ಲಿ ಠೇವಣಿ ಇಲ್ಲದಂತೆ ಮಾಡಿಕೊಂಡು, ಶೇ. 28.30ರಷ್ಟು ಮತಗಳಿಸಿತ್ತು. ಜನತಾದಳ ಎರಡು ಹೋಳಾಗಿತ್ತು. ಸಂಯುಕ್ತ ಜನತಾದಳ 96ರಲ್ಲಿ ಸ್ಪರ್ಧಿಸಿ ಒಂದರಲ್ಲಿ ಗೆದ್ದು, 88ರಲ್ಲಿ ಠೇವಣಿ ಕಳೆದುಕೊಂಡಿತ್ತು. ಜಾತ್ಯತೀತ ಜನತಾಳ 60ರಲ್ಲಿ ಸ್ಪರ್ಧಿಸಿ 21ರಲ್ಲಿ ಗೆದ್ದು, 24ರಲ್ಲಿ ಠೇವಣಿ ನಷ್ಟಮಾಡಿಕೊಂಡಿತ್ತು. ಸಿಪಿಎಂ 72ರಲ್ಲಿ 33, ಸಿಪಿಐ 54ರಲ್ಲಿ 4 ಜಯ ಸಾಧಿಸಿತ್ತು. ಬಹುಜನ ಸಮಾಜ ಪಕ್ಷ 225ರಲ್ಲಿ ಸ್ಪರ್ಧಿಸಿ 14ರಲ್ಲಿ ಗೆದ್ದು, 154ರಲ್ಲಿ ಠೇವಣಿ ಕಳೆದುಕೊಂಡಿತ್ತು. ರಾಜ್ಯ ಪಕ್ಷಗಳು ಪ್ರಥಮ ಬಾರಿಗೆ ಪ್ರಾಬಲ್ಯ ಮೆರೆದವು. 750ರಲ್ಲಿ 158 ಸ್ಥಾನ ಗೆದ್ದು, ಶೇ.26.93ರಷ್ಟು ಮತ ಪಡೆದಿದ್ದವು. ಮಾನ್ಯತೆರಹಿತ ಪಕ್ಷಗಳು 654ರಲ್ಲಿ 10 ಸ್ಥಾನ ಪಡೆದರೆ, 6 ಪಕ್ಷೇತರರು ಜಯಸಾಧಿಸಿದರು.
13ನೇ ಲೋಕಸಭೆ ಚುನಾವಣೆಗೆ ಮುನ್ನವೇ ಮೈತ್ರಿಕೂಟದ ರಚನೆಗೆ ಮುಂದಾಗಿ ಸ್ಥಾನಗಳನ್ನು ಹಂಚಿಕೊಂಡಿದ್ದ ಬಿಜೆಪಿ, ಯಶಕಂಡಿತು. ಬಿಜೆಪಿ ನೇತೃತ್ವದ 20 ಪಕ್ಷಗಳ ಎನ್‌ಡಿಎಗೆ 269 ಸ್ಥಾನ ಬಂದಿತ್ತು. ಆಂಧ್ರ ಪ್ರದೇಶದ ತೆಲಗುದೇಶಂ ಪಕ್ಷ ತನ್ನ 29 ಸ್ಥಾನಗಳ ಬೆಂಬಲವನ್ನು ವಾಜಪೇಯಿ ನೇತೃತ್ವಕ್ಕೇ ಘೋಷಿಸಿದ್ದರಿಂದ ಬಹುಮತಕ್ಕೆ ತೊಂದರೆಯಾಗಲಿಲ್ಲ. ಎಂ.ಸಿ. ಬಾಲಯೋಗಿ, ಮನೋಹರ ಜೋಶಿ ಅವರು ಸ್ಪೀಕರ್ ಆಗಿದ್ದರು. ವಾಜಪೇಯಿ ಅವರು ಐದು ವರ್ಷದ ಪ್ರಧಾನಿ ಪಟ್ಟದ ಅಂತಿಮ ಎರಡು ವರ್ಷದಲ್ಲಿ ಅಂದರೆ 2002ರಿಂದ 2004ರವರೆಗೆ ಬಿಜೆಪಿಯ ಲಾಲ್‌ಕೃಷ್ಣ ಆಡ್ವಾಣಿ ಉಪ ಪ್ರಧಾನಿ ಆಗಿದ್ದರು. 2002ರ ಜೂನ್ 29ರಂದು ಆಡ್ವಾಣಿ ಅವರು ಉಪ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಲಾಲ್‌ಕೃಷ್ಣ ಆಡ್ವಾಣಿ ಅವರು ಈ ದೇಶ ಕಂಡ ಏಳನೇ ಉಪ ಪ್ರಧಾನಿಯಾಗಿದ್ದರು. ಇವರಾದ ನಂತರ ಈವರೆಗೆ ಯಾರೂ ಉಪ ಪ್ರಧಾನಿ ಪಟ್ಟ ಅಲಂಕರಿಸಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಥಮ ಉಪ ಪ್ರಧಾನಿಯಾಗಿದ್ದರು. (1947 ಆಗಸ್ಟ್ 15ರಿಂದ 1950ರ ಡಿಸೆಂಬರ್ 15). ಆಗ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದರು. ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಮೊರಾರ್ಜಿ ದೇಸಾಯಿ (1967 ಮಾರ್ಚ್ 21ರಿಂದ 1969ರ ಡಿಸೆಂಬರ್ 6) ಉಪಪ್ರಧಾನಿಯಾಗಿದ್ದರು. ಜನತಾಪಾರ್ಟಿ ಅಧಿಕಾರದಲ್ಲಿದ್ದಾಗ ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಚರಣ್‌ಸಿಂಗ್ (1977 ಮಾರ್ಚ್ 24ರಿಂದ 1979 ಜುಲೈ 28) ಹಾಗೂ ಜಗಜೀವನರಾಂ (1977 ಮಾರ್ಚ್ 24ರಿಂದ 1979 ಜುಲೈ 28) ಉಪಪ್ರಧಾನಿಯಾಗಿದ್ದರು. ಚರಣ್‌ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಯಶವಂತರಾವ್ ಚೌವ್ಹಾಣ್ (1979 ಜುಲೈ 28ರಿಂದ 1980 ಜನವರಿ 14) ಉಪ ಪ್ರಧಾನಿಯಾಗಿದ್ದರು. ಜನತಾದಳದ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇವಿಲಾಲ್ ಅವರು (1989 ಡಿಸೆಂಬರ್ 2ರಿಂದ 1991 ಜೂನ್ 21) ಉಪಪ್ರಧಾನಿಯಾಗಿದ್ದರು.

-ಕೆರೆ ಮಂಜು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com