

ದೇಶಾದ್ಯಂತ ವಾಜಪೇಯಿ-ಬಿಜೆಪಿ ಅಲೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರುವ ಬೆಂಬಲ ದೊರೆತರೆ, ರಾಜ್ಯದಲ್ಲಿ ನಿರೀಕ್ಷೆಯಷ್ಟು ಶಕ್ತಿ ಬಿಜೆಪಿಗೆ ದೊರೆಯಲಿಲ್ಲ. 12ನೇ ಚುನಾವಣೆಯಲ್ಲಿ ವಾಜಪೇಯಿ ಅವರಿಗೆ ಅತಿಹೆಚ್ಚು ಶಕ್ತಿ ನೀಡಿದ್ದ ರಾಜ್ಯ ಈ ಬಾರಿ ಹಿಂದೆ ಸರಿದಿತ್ತು. ಆದರೆ, ಜೆಡಿಯು ಮೂರು ಸ್ಥಾನಗಳ ಮೂಲಕ ಬಿಜೆಪಿ ಅಸ್ತಿತ್ವನ್ನು ಮರುಸ್ಥಾಪಿಸಿತ್ತು. ಬಳ್ಳಾರಿಯಲ್ಲಿ ಸೋನಿಯಾಗಾಂಧಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಬಿಜೆಪಿ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕಿಳಿಸಿತ್ತು. ಪ್ರತಿಷ್ಠೆಯ ಕಣವಾಗಿದ್ದ ಬಳ್ಳಾರಿ ಅಂತಾರಾಷ್ಟ್ರೀಯ ಗಮನ ಸೆಳೆದಿತ್ತು.
1999ರಲ್ಲಿ ನಡೆದ 13ನೇ ಲೋಕಸಭೆ ಚುನಾವಣೆಯಲ್ಲಿ 1,74,47,578 ಪುರುಷರು, 1,68,36,520 ಮಹಿಳೆಯರು ಸೇರಿ 3,42,84,098 ಮತದಾರರಿದ್ದರು. ಇವರಲ್ಲಿ 2,31,68,337 ಮತದಾರರು ಹಕ್ಕು ಚಲಾಯಿಸಿ, ಶೇ.67.58ರಷ್ಟು ಮತ ದಾಖಲಿಸಿದ್ದರು. 1989ರಲ್ಲಿ ದಾಖಲಾಗಿದ್ದ ಶೇ.67.53ರಷ್ಟು ಮತದಾನನ್ನು ಇದು ಹಿಂದಿಕ್ಕಿ, ಅತಿ ಹೆಚ್ಚು ಮತದಾನ ದಾಖಲೆಯಾಯಿತು. ಈ ಚುನಾವಣೆಯಲ್ಲಿ ಶೇ. 3.45 ಮತಗಳು ಕುಲಗೆಟ್ಟಿದ್ದವು. 44,497 ಮತಗಟ್ಟೆಗಳು ಕಾರ್ಯನಿರ್ವಹಿಸಿದ್ದವು. 28 ಕ್ಷೇತ್ರಗಳಿಗೆ ರಾಷ್ಟ್ರೀಯ ಪಕ್ಷಗಳಿಂದ 91, ರಾಜ್ಯ ಪಕ್ಷಗಳಿಂದ 8, ಮಾನ್ಯತೆರಹಿತ ಪಕ್ಷಗಳಿಂದ 5 ಹಾಗೂ 26 ಪಕ್ಷೇತರರು ಸೇರಿ 130 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ರಾಷ್ಟ್ರೀಯ ಪಕ್ಷಗಳ 31, ರಾಜ್ಯ ಪಕ್ಷದ 8, ಮಾನ್ಯತೆರಹಿತ ಪಕ್ಷಗಳ 5 ಹಾಗೂ 26 ಪಕ್ಷೇತರರು ಸೇರಿದಂತೆ 70 ಮಂದಿ ಠೇವಣಿ ಕಳೆದುಕೊಂಡಿದ್ದರು. 11 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, ಇಬ್ಬರು ಗೆದ್ದು, 6 ಮಂದಿ ಠೇವಣಿ ನಷ್ಟ ಮಾಡಿಕೊಂಡಿದ್ದರು. ರಾಜ್ಯದಲ್ಲಿ ಹಿಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ್ದ ಬಿಜೆಪಿ, ಈ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಕಳೆದುಕೊಂಡಿತ್ತು. 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ, 7ರಲ್ಲಿ ಜಯಸಾಧಿಸಿ, ಒಂದರಲ್ಲಿ ಠೇವಣಿ ಕಳೆದುಕೊಂಡಿತ್ತು. ಶೇ.27.19ರಷ್ಟು ಮತ ಪಡೆದಿತ್ತು. ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 18 ಕ್ಷೇತ್ರದಲ್ಲಿ ಗೆದ್ದು, ಶೇ.45.41ರಷ್ಟು ಮತ ಗಳಿಸಿತ್ತು. ಜೆಡಿಎಸ್ 27ರಲ್ಲಿ ಸ್ಪರ್ಧಿಸಿ ಒಂದರಲ್ಲೂ ಜಯ ಸಾಧಿಸದೆ 23ರಲ್ಲಿ ಠೇವಣಿ ಕಳೆದುಕೊಂಡು ದಾಖಲೆ ಬರೆಯಿತು. ಶೇ.10.85ರಷ್ಟು ಮತ ಪಡೆದು ಸೋಲು ಅನುಭವಿಸಿತ್ತು. ಜೆಡಿಯು 10 ಸ್ಥಾನಗಳಲ್ಲಿ ಸ್ಪರ್ಧಿಸಿ ಮೂರು ಕ್ಷೇತ್ರಗಳಲ್ಲಿ ಗೆದ್ದು, ಶೇ. 13.28ರಷ್ಟು ಮತಪಡೆದಿತ್ತು.
ಗುಲ್ಬರ್ಗದಿಂದ ಇಕ್ಬಾಲ್ ಅಹಮದ್, ರಾಯಚೂರಿನಿಂದ ಎ. ವೆಂಕಟೇಶ್ ನಾಯ್ಕ ಕೊಪ್ಪಳದಿಂದ ಎಚ್.ಜಿ.ರಾಮುಲು, ಬಳ್ಳಾರಿಯಿಂದ ಸೋನಿಯಾಗಾಂಧಿ, ತುಮಕೂರಿನಿಂದ ಜಿ.ಎಸ್. ಬಸವರಾಜು, ಚಿಕ್ಕಬಳ್ಳಾಪುರದಿಂದ ಆರ್.ಎಲ್. ಜಾಲಪ್ಪ, ಕೋಲಾರದಿಂದ (ಎಸ್‌ಸಿ) ಕೆ.ಎಚ್. ಮುನಿಯಪ್ಪ, ಕನಕಪುರದಿಂದ ಎಂ.ವಿ. ಚಂದ್ರಶೇಖರಮೂರ್ತಿ, ಬೆಂಗಳೂರು ಉತ್ತರದಿಂದ ಸಿ.ಕೆ. ಜಾಫರ್‌ಷರೀಫ್, ಮಂಡ್ಯದಿಂದ ಅಂಬರೀಶ್, ಮೈಸೂರಿನಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಉಡುಪಿಯಿಂದ ವಿನಯ್‌ಕುಮಾರ್ ಸೊರಕೆ, ಹಾಸನದಿಂದ ಜಿ. ಪುಟ್ಟಸ್ವಾಮಿಗೌಡ, ಶಿವಮೊಗ್ಗದಿಂದ ಎಸ್. ಬಂಗಾರಪ್ಪ, ಕೆನರಾದಿಂದ ಮಾರ್ಗರೇಟ್ ಆಳ್ವಾ, ಧಾರವಾಡ ದಕ್ಷಿಣದಿಂದ ಪ್ರೊ. ಐ.ಜಿ. ಸನದಿ, ಬೆಳಗಾವಿಯಿಂದ ವಸಂತರಾವ್ ಪಾಟೀಲ್, ಬಾಗಲಕೋಟೆಯಿಂದ ಆರ್.ಎಸ್. ಪಾಟೀಲ್ ಅವರು ಕಾಂಗ್ರೆಸ್‌ನಿಂದ ಜಯ ಸಾಧಿಸಿದ್ದರು.
ಬೀದರ್‌ನಿಂದ (ಎಸ್‌ಸಿ) ರಾಮಚಂದ್ರ ವೀರಪ್ಪ, ದಾವಣಗೆರೆಯಿಂದ ಜಿ. ಮಲ್ಲಿಕಾರ್ಜನಪ್ಪ, ಬೆಂಗಳೂರು ದಕ್ಷಿಣದಿಂದ ಅನಂತಕುಮಾರ್, ಮಂಗಳೂರಿನಿಂದ ವಿ. ಧನಂಜಯಕುಮಾರ್, ಚಿಕ್ಕಮಗಳೂರಿನಿಂದ ಡಿ.ಸಿ. ಶ್ರೀಕಂಠಪ್ಪ, ಧಾರವಾಡ ಉತ್ತರದಿಂದ ವಿಜಯ ಸಂಕೇಶ್ವರ, ಬಿಜಾಪುರದಿಂದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯಿಂದ ಗೆಲವು ಸಾಧಿಸಿದ್ದರು. ಚಿತ್ರದುರ್ಗದಿಂದ ಶಶಿಕುಮಾರ್, ಚಾಮರಾಜನಗರದಿಂದ (ಎಸ್‌ಸಿ) ವಿ. ಶ್ರೀನಿವಾಸಪ್ರಸಾದ್, ಚಿಕ್ಕೋಡಿಯಿಂದ (ಎಸ್‌ಸಿ) ರಮೇಶ್ ಜಿಗಜಣಗಿ ಅವರು ಸಂಯುಕ್ತ ಜನತಾದಳದಿಂದ ಆಯ್ಕೆಯಾಗಿದ್ದರು.
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ನ ಆರ್.ಎಲ್. ಜಾಲಪ್ಪ ಅವರು 2,11,186 ಮತಗಳಿಂದ ಜೆಡಿಯುನ ಎನ್. ರಮೇಶ್ ಅವರನ್ನು ಸೋಲಿಸಿದ್ದರು. ಬೆಂಗಳೂರು ಉತ್ತರದಲ್ಲಿ ಸಿ.ಕೆ. ಜಾಫರ್ ಷರೀಫ್ ಅವರು ಜೆಡಿಯುನ ಮೈಕೆಲ್ ಫರ್ನಾಂಡೀಸ್ ಅವರನ್ನು 1,75,605 ಮತಗಳಿಂದ ಸೋಲಿಸಿದ್ದರು. ರಾಯಚೂರಿನಲ್ಲಿ ಕಾಂಗ್ರೆಸ್‌ನ ವೆಂಕಟೇಶ್‌ನಾಯಕ ಅವರು ಜೆಡಿಯುನ ಅಬ್ದುಲ್ ಸಿದ್ದಿಕಿ ಅವರನ್ನು 1,72,206 ಮತಗಳಿಂದ ಮಣಿಸಿದರೆ, ಮಂಡ್ಯದಲ್ಲಿ ಕಾಂಗ್ರೆಸ್‌ನ ಅಂಬರೀಶ್ ಅವರನ್ನು 1,52,180 ಮತಗಳ ಅಂತರದಿಂದ ಜಿಡಿಎಸ್‌ನ ಕೃಷ್ಣ ಅವರ ವಿರುದ್ಧ ಗೆಲವು ಸಾಧಿಸಿದ್ದರು. ಹಾಸನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಾಂಗ್ರೆಸ್ ಮಣಿಸಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿಗೌಡ ಅವರು 1,41,757 ಮತಗಳ ಭಾರಿ ಅಂತರದಲ್ಲಿ ದೇವೇಗೌಡ ಅವರನ್ನು ಸೋಲಿಸಿದ್ದರು. ಬಿಜೆಪಿಯ ರಾಮಚಂದ್ರ ವೀರಪ್ಪ ಅವರು ಬೀದರ್‌ನಲ್ಲಿ ಕಾಂಗ್ರೆಸ್‌ನ ನರಸಿಂಗರಾವ್ ಸೂರ್ಯವಂಶಿ ಅವರನ್ನು 1,52,033 ಮತಗಳಿಂದ ಮಣಿಸಿದ್ದರು.
ಪ್ರಥಮ ಬಾರಿಗೆ ಐದು ಲಕ್ಷ ಮತಗಳನ್ನು ಇಬ್ಬರು ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಪಡೆದಿದ್ದರು. ಕನಕಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಎಂ.ವಿ. ಚಂದ್ರಶೇಖರ ಮೂರ್ತಿ 5,32,910 ಮತ ಪಡೆದು ಹೊಸ ದಾಖಲೆ ಬರೆದರು. ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ನ ಸಿ.ಕೆ. ಜಾಫರ್ ಷರೀಫ್ 5,25,523 ಮತ ಪಡೆದಿದ್ದರು. ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಸೋನಿಯಾಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಅವರ ಸ್ಪರ್ಧೆ ಅತ್ಯಂತ ಗಮನಾರ್ಹವಾಗಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿ ಬಿಟ್ಟರೆ ಜೆಡಿಎಸ್‌ನ ಕೆ. ಮಹಾಲಿಂಗಪ್ಪ ಅವರು ಮಾತ್ರ ಸ್ಪರ್ಧೆಯಲ್ಲಿದ್ದರು. ಇಬ್ಬರು ಪ್ರಭಾವಿ ಮಹಿಳೆಯರ ಮುಂದೆ ಇವರು ಮಂಕಾಗಿ ಕೇವಲ 28,855 ಮತಗಳಿಸಿದ್ದರು. ಬಿಜೆಪಿಯ ಸುಷ್ಮಾ ಸ್ವರಾಜ್ 3,58,550 ಮತಗಳನ್ನು ಗಳಿಸಿದ್ದರು. ಆದರೆ ಇವರಿಗಿಂತ 56,100 ಹೆಚ್ಚು ಮತಗಳಿಸಿದ್ದ ಸೋನಿಯಾಗಾಂಧಿ ಆಯ್ಕೆಯಾದರು.
-ಕೆರೆ ಮಂಜು
Advertisement