

ಹಳೆ ನೆನಪು ಬಿಚ್ಚಿಟ್ಟ ಹಿರಿಯ ಪತ್ರಕರ್ತ ಎಂ.ವಿ.ಕಾಮತ್
ಉಡುಪಿ: ಮಹಾತ್ಮ ಗಾಂಧೀಜಿ ಮಾಡಿದ ದೊಡ್ಡ ತಪ್ಪು ಜವಾಹರಲಾಲ್ ನೆಹರು ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಿದ್ದು ಎಂದು ಪ್ರಸಾರ ಭಾರತಿ ಮಾಜಿ ಅಧ್ಯಕ್ಷ, ಹಿರಿಯ ಪತ್ರಕರ್ತ ಡಾ. ಎಂ.ವಿ. ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಉಡುಪಿಯ ಪತ್ರಿಕಾಭವನದಲ್ಲಿ ಯುವ ಅಂಕಣಕಾರ ಆದಿತ್ಯ ಭಟ್ ಅವರ 'ಗಾಂಧಿ ಟೋಪಿ, ಗೋಡ್ಸೆ ನೆರಳು ಹಾಗೂ ಇತರ ಲೇಖನಗಳು' ಅಂಕಣಗಳ ಸಂಕಲನ ಅನಾವರಣಗೊಳಿಸಿ ಮಾತನಾಡಿ, ಅಪ್ಪಟ ದೇಶಭಕ್ತ ಸುಭಾಶ್ಚಂದ್ರ ಬೋಸ್ ಇರುತ್ತಿದ್ದರೆ ನೆಹರು ಎಂದೂ ಪ್ರಧಾನಿಯಾಗುತ್ತಿರಲಿಲ್ಲ. ಗಾಂಧಿ ಅವರಾದರೂ ನೆಹರು ಬದಲಿಗೆ ಸರ್ದಾರ್ ವಲ್ಲಭ್‌ಭಾಯಿ ಪಟೇಲ್ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕಾಗಿತ್ತು. ಪಟೇಲ್ ಪ್ರಧಾನಿಯಾಗಿದ್ದರೆ ಇಂದಿಗೂ ಬಿಕ್ಕಟ್ಟಾಗಿಯೇ ಉಳಿದಿರುವ ಕಾಶ್ಮೀರ ಸಮಸ್ಯೆ, ಚೀನಾ ಸಮಸ್ಯೆ, ಟಿಬೆಟ್ ಸಮಸ್ಯೆಗಳೇ ಇರುತ್ತಿರಲಿಲ್ಲ. ನೆಹರು ಅವರಿಗೆ ಇವುಗಳನ್ನು ಪರಿಹಾರ ಮಾಡುವ ಮನಸ್ಸೇ ಇರಲಿಲ್ಲ ಎಂದರು.
ರಾಜಕೀಯ ಸ್ಥಿತ್ಯಂತರ: ನಾನು ಪತ್ರಕರ್ತನಾಗಿ ಅಂದು ವರದಿ ಮಾಡುತ್ತಿದ್ದ ರಾಜಕೀಯಕ್ಕೂ ಇಂದಿನ ರಾಜಕೀಯಕ್ಕೂ ಅಜಗಜಾಂತರ ಬಂದು ಬಿಟ್ಟಿದೆ. ಇಂದಿನ ರಾಜಕಾರಣಿಗಳಿಗೆ ಮಾತನಾಡುವ ರೀತಿ ನೀತಿಗಳೇ ಗೊತ್ತಿಲ್ಲ. ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತಿತರರು ನರೇಂದ್ರ ಮೋದಿ ಅವರನ್ನು ನಾಝಿ, ಫ್ಯಾಸಿಸ್ಟ್, ರ್ಯಾಸ್ಕಲ್ ಎಂದೆಲ್ಲಾ ಕರೆಯುತ್ತಿದ್ದಾರೆ. ಯಾಕೆ? ಇದು ಪ್ರಜಾಪ್ರಭುತ್ವ ವ್ಯವಸ್ಥೆಯಾ? ಎಂದು ವಿಷಾದಿಸಿದರು.
ಗೋಡ್ಸೆ ಗಾಂಧೀಜಿಯನ್ನು ದ್ವೇಷಿಸುತ್ತಿರಲಿಲ್ಲ!
ಗೋಡ್ಸೆ ಗಾಂಧೀಜಿಯನ್ನು ಕೊಂದದ್ದು ತಪ್ಪು, ಆದರೆ ಆತ ಗಾಂಧೀಜಿಯನ್ನು ದ್ವೇಷಿಸುತ್ತಿರಲಿಲ್ಲ, ಆದರೆ ಗಾಂಧೀಜಿ ಅವರ ನಿಲುಗಳನ್ನು ವಿರೋಧಿಸುತ್ತಿದ್ದ, ಅದಕ್ಕಾಗಿ ಗಾಂಧೀಜಿಯನ್ನು ಕೊಂದೆ ಎಂದು ಒಪ್ಪಿಕೊಂಡಿದ್ದ ಎಂದ ಡಾ. ಕಾಮತ್, ಗೋಡ್ಸೆಗೆ ಮರಣದಂಡನೆ ವಿಧಿಸಿದ ನ್ಯಾಯಾಲಯದ ತೀರ್ಪಿನ ಕಲಾಪಗಳನ್ನು ತಾವು ಕಣ್ಣಾರೆ ಕಂಡಿದ್ದನ್ನು ವಿವರಿಸಿದರು.
ಏಳೆಂಟು ಮಂದಿ ಪತ್ರಕರ್ತರು, ನಾಲ್ಕೈದು ನ್ಯಾಯಾಧೀಶರು, ಪೊಲೀಸ್ ಅಧಿಕಾರಿ, ಗೋಡ್ಸೆ ಸೇರಿ 20 ಮಂದಿ ಇದ್ದ ಚಿಕ್ಕ ಕೋಣೆಯಲ್ಲಿ ಈ ಕಲಾಪ ನಡೆಯಿತು.
ನ್ಯಾಯಾಧೀಶರು ಗೋಡ್ಸೆಗೆ ಮರಣದಂಡನೆ ವಿಧಿಸಿದಾಗ ಗೋಡ್ಸೆ, ಅತ್ಯಂತ ನಿರ್ಲಿಪ್ತನಾಗಿ ಕೈ ಎತ್ತಿ ಸೆಲ್ಯೂಟ್ ಹೊಡೆದು ತೀರ್ಪಿಗೆ ಗೌರವ ನೀಡಿ ಹೊರ ನಡೆದ.
ಈ ಘಟನೆಯನ್ನು ನಾನು ಮಾಡಿದ್ದ ವರದಿಯ ಭಾಷಾಂತರ ಮುಂಬೈಯ ಮರಾಠಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಅದಕ್ಕೆ ಪ್ರತಿಯಾಗಿ ಗೋಡ್ಸೆ ತನ್ನ ಬಗ್ಗೆ ಅದುವರೆಗೆ ಪ್ರಕಟವಾದ ಅತ್ಯುತ್ತಮ ವರದಿ ಇದು ಎಂದು ಪತ್ರ ಬರೆದಿದ್ದ ಎಂದು ಕಾಮತ್ ನೆನಪಿಸಿದರು.
Advertisement