
ಅಪ್ಪ ಅಂದ್ರೆ
ಕಿರು ಬೆರಳು ಹಿಡಿದು ಜಗತ್ತು ತೋರಿಸಿದವ
ನಂಬಿಕೆಗಳಿಂದಾಚೆ ಬದುಕು ಕಲಿಸಿದ ಗುರು...
ಅವನ ಕಿರು ಬೆರಳು ಹಿಡಿದು ನಡೆಯುವಾಗ ಸಿಗುವ ಧೈರ್ಯ, ದೊಡ್ಡ ಚಪ್ಪಲಿಯೊಳಗೆ ನಮ್ಮ ಪುಟ್ಟ ಕಾಲು ತುರುಕಿ ಓಡಾಡುವಾಗ ಸಿಗುವ ಖುಷಿ, ಎದೆಗೊರಗಿ ನಿದ್ರಿಸುವಾಗ ಸಿಗುವ ಸಂತೃಪ್ತಿ ಬೇರೆಲ್ಲೂ ಸಿಗಲ್ಲ. ಅವನಿಗೆ ಅಮ್ಮನಂತೆ ಮುದ್ದು ಮಾಡಲು ಬರುವುದಿಲ್ಲ, ಆದರೆ ಮನಸ್ಸಿನೊಳಗೆ ಕಾಳಜಿ, ಮಮತೆ ತುಂಬಿಕೊಂಡಿರುತ್ತದೆ. ತನ್ನ ಪ್ರೀತಿಯನ್ನು ವ್ಯಕ್ತ ಪಡಿಸುವಲ್ಲಿ ಆತ ಕಂಜೂಸ್ ಮಾಡಿದರೂ ಮಕ್ಕಳ ಏಳ್ಗೆಯ ಬಗ್ಗೆ ಸದಾ ಚಿಂತಿತನಾಗಿರುತ್ತಾನೆ. ಒಂದೆಡೆ ಜಗತ್ತು ಹಿರಿದಾಗುತ್ತಿದ್ದಂತೆ ಸಂಸಾರಗಳು ಕಿರಿದಾಗುತ್ತಿದೆ. ಇನ್ನೊಂದೆಡೆ ಬದಲಾವಣೆಯೇ ಜಗದ ನಿಯಮ ಎಂಬಂತೆ ಅಪ್ಪ -ಅಮ್ಮ ಮಕ್ಕಳ ಸಂಬಂಧಗಳಲ್ಲಿಯೂ ಬದಲಾವಣೆಗಳು ಕಾಣತೊಡಗಿವೆ. ಹೆಣ್ಣು-ಗಂಡು ಮದುವೆಯಾಗುತ್ತಾರೆ ಆಮೇಲೆ ಅವರಿಗೆ ಮಕ್ಕಳಾಗುತ್ತದೆ. ಅಲ್ಲೊಂದು ಸಂಸಾರ ರೂಪುಗೊಳ್ಳುತ್ತದೆ. ಹೀಗಿತ್ತು ನಮ್ಮ ಸಮಾಜದ ವ್ಯವಸ್ಥೆ. ಆದರೆ ಈಗ ಹೆಣ್ಣು ಮದುವೆಯ ಬಂಧಕ್ಕೊಳಗಾಗದೆಯೇ, ಬಸುರಿ, ಹೆರಿಗೆ , ಬಾಣಂತನ ಅನುಭವಿಸದೆಯೇ ಮಗುವೊಂದರ ಅಮ್ಮನಾಗಬಹುದು. ಅವಿವಾಹಿತನಾಗಿದ್ದು ಕೊಂಡೇ ಮಗುವೊಂದನ್ನು ದತ್ತು ಪಡೆದು ಪುರುಷನೊಬ್ಬ ಅಪ್ಪನಾಗ ಬಹುದು.
ಹೌದು...ಅದೇ ಸಿಂಗಲ್ ಮದರ್, ಸಿಂಗಲ್ ಫಾದರ್ ಪದ್ಧತಿ. ಇಂಥಾ ಪದ್ಧತಿಗಳ ಉಗಮ ಸ್ಥಾನ ಪಾಶ್ಚಾತ್ಯ ದೇಶಗಳೇ ಆಗಿದ್ದರೂ, ಕ್ರಮೇಣ ಇದು ಭಾರತಕ್ಕೂ ಕಾಲಿರಿಸಿತು ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯುವ ಕಾಯ್ದೆಯ ಪ್ರಕಾರ ಮಹಿಳೆ ಅಥವಾ ದಂಪತಿಗಳಿಗೆ ಮಾತ್ರ ಮಕ್ಕಳನ್ನು ದತ್ತು ಪಡೆಯಬಹುದಾಗಿದೆ. ಇಲ್ಲಿ ಅವಿವಾಹಿತೆಯಾಗಿರುವ ಮಹಿಳೆ ಮಗುವೊಂದನ್ನು ದತ್ತು ಪಡೆಯಬಹುದೇ ವಿನಾ ಅವಿವಾಹಿತ ಪುರುಷ ಮಗುವನ್ನು ದತ್ತು ಪಡೆಯುವಂತಿಲ್ಲ! ಆದರೆ 2007ರಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸಂದೀಪ್ ಸೋಪಾರ್ಕರ್ ಗಂಡು ಮಗುವೊಂದನ್ನು ದತ್ತು ಪಡೆಯುವ ಮೂಲಕ ಭಾರತದ ಮೊದಲ ಸಿಂಗಲ್ ಫಾದರ್ ಎನಿಸಿಕೊಂಡರು.ಮದುವೆ, ಕುಟುಂಬದ ಕಟ್ಟು ಪಾಡುಗಳಿಗೆ ಬಂಧಿಯಾಗದೆ ಅವಿವಾಹಿತರಾಗಿಯೇ ಆಗಿ ಉಳಿದುಕೊಂಡು ಮಗುವೊಂದರ ಅಪ್ಪನಾಗುವುದು ವಿಶೇಷ ಎಂದೆನಿಸಿದರೂ, ಅದು ಅಷ್ಟು ಸುಲಭದ ಮಾತಲ್ಲ!. ಮಗುವಿನ ಪಾಲನೆ ಪೋಷಣೆ ಆರೈಕೆ ಎಲ್ಲವನ್ನೂ ಹೆಣ್ಣೊಬ್ಬಳ ಸಹಾಯವಿಲ್ಲದೆ ಮಾಡುವುದು ಅವಿವಾಹಿತ ಪುರುಷನಿಗೆ ಸಾಧ್ಯವಾ? ಎಂಬ ಹುಬ್ಬೇರಿಸುವ ಪ್ರಶ್ನೆಗೆ ಉತ್ತರವಾದವರು ಈ ಸಿಂಗಲ್ ಫಾದರ್ ಗಳು.
ಸಿಂಗಲ್ ಫಾದರ್ ನ ದುನಿಯಾ
ಮದುವೆಯಾಗಿ ಮಕ್ಕಳನ್ನು ಪಡೆದು ಅಪ್ಪ ಎಂದು ಕರೆಯಲ್ಪಡುವುದಕ್ಕಿಂತ ಭಿನ್ನವಾಗಿ ಅವಿವಾಹಿತರಾಗಿಯೇ ಇದ್ದು ಮಗುವೊಂದನ್ನು ದತ್ತು ಪಡೆದು ಅಪ್ಪನಾಗುವ ರೀತಿಯಿದು. ತಾನು
ಮಗುವೊಂದನ್ನು ದತ್ತು ಪಡೆದು ಅದರ ಆರೈಕೆ,ಪಾಲನೆ , ಪೋಷಣೆ ಮಾಡಲು ಶಕ್ತ ಎಂದು ಕಾನೂನಿಗೆ ಮನವರಿಕೆ ಮಾಡಿಕೊಟ್ಟರೆ ಮಾತ್ರ ಪುರುಷನೊಬ್ಬನಿಗೆ ಸಿಂಗಲ್ ಫಾದರ್ ಆಗಲು
ಸಾಧ್ಯ. ಪುರುಷನೊಬ್ಬ ಸಿಂಗಲ್ ಫಾದರ್ ಆಗಬೇಕಾದರೆ ಆತನ ವಯಸ್ಸು 30-50ರೊಳಗಿರಬೇಕು. ಆದಾಗ್ಯೂ, ಇತ್ತೀಚಿಗೆ ಅವಿವಾಹಿತ ಪುರುಷರು ಮಕ್ಕಳನ್ನು ದತ್ತು ಪಡೆಯುವಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದು, ಪಾಶ್ಚಾತ್ಯ ದೇಶಗಳಲ್ಲಿ ಸಿಂಗಲ್ ಮದರ್ ಗಳಂತೆಯೇ ಸಿಂಗಲ್ ಫಾದರ್ ಗಳ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುತ್ತಿವೆ ವರದಿಗಳು. ಹಾಲಿವುಡ್ ನಲ್ಲಿ ಟ್ರೆಂಡ್ ಎಂಬಂತೆ ಅವಿವಾಹಿತ ಪುರುಷರು ಮಕ್ಕಳನ್ನು ದತ್ತು ಪಡೆದು ಸಿಂಗಲ್ ಫಾದರ್ ಗಳಾಗಿ ಬಡ್ತಿ ಪಡೆಯುತ್ತಿದ್ದರೂ, ಭಾರತದಲ್ಲಿ ಸಿಂಗಲ್ ಫಾದರ್ ಗಳಾಗುವುದು ಕಷ್ಟವೇ. ಭಾರತದಲ್ಲಿ ಮಕ್ಕಳನ್ನು ದತ್ತು ಪಡೆಯುವ ನಿಯಮದ ಪ್ರಕಾರ ಅವಿವಾಹಿತ ಗಂಡಸರಿಗೆ ದತ್ತು ಪಡೆಯುವ ಹಕ್ಕುಗಳು ಇರುವುದಿಲ್ಲ ಹಾಗು ಅವಿವಾಹಿತನಾಗಿರುವ ಗಂಡಸರು ಹೆಣ್ಣು ಮಕ್ಕಳನ್ನು ದತ್ತು ಪಡೆಯುವಂತಿಲ್ಲ.
ಆದರೆ, 2007ರಲ್ಲಿ ಸಂದೀಪ್ ಸೋಪಾಕ೯ರ್ ಎಲ್ಲ ಸವಾಲುಗಳನ್ನೆದುರಿಸಿ ಭಾರತದ ಮೊದಲ ಸಿಂಗಲ್ ಫಾದರ್ ಎನಿಸಿಕೊಂಡರು. ಅವಿವಾಹಿತನಾಗಿರುವ ಸಂದೀಪ್ ಸೋಪಾಕ೯ರ್ ಮಗುವೊಂದನ್ನು ದತ್ತು ಪಡೆಯುವುದಕ್ಕಾಗಿ ಹೋರಾಟ ಮಾಡಿದ್ದು ಬರೋಬ್ಬರಿ ನಾಲ್ಕು ವಷ೯!. ಈ ನಾಲ್ಕು ವಷ೯ಗಳಲ್ಲಿ ಆತನ ಬ್ಯಾಂಕ್ ಬ್ಯಾಲೆನ್ಸ್, ಆರೋಗ್ಯ ಪರೀಕ್ಷೆ ಇನ್ನಿತರ ತಪಾಸಣೆಗಳನ್ನು ಮಾಡಿಸಿ ಎಲ್ಲದಕ್ಕೂ ಓಕೆ ಸಟಿ೯ಫಿಕೇಟ್ ಸಿಕ್ಕ ನಂತರವೇ ಮಗುವನ್ನು ದತ್ತು ಪಡೆಯಲು ಅನುಮತಿ ನೀಡಲಾಗಿತ್ತು. ಸಿಂಗಲ್ ಮದರ್ ಗಳಂತೆಯೇ ಸಿಂಗಲ್ ಫಾದರ್ ಕೂಡಾ . ಇಲ್ಲಿ ಅಂಥಾ ದೊಡ್ಡ ವ್ಯತ್ಯಾಸಗಳೇನೂ ಇರುವುದಿಲ್ಲ ಅಂತಾರೆ ಸಂದೀಪ್.
ಈ ಬಗ್ಗೆ ಸಂದಶ೯ನವೊಂದರಲ್ಲಿ ಮಾತನಾಡಿದ ಸಂದೀಪ್, ಮದುವೆಯಾಗಿ ಮಕ್ಕಳನ್ನು ನೋಡಿಕೊಳ್ಳುವ ಗಂಡಸರಿಗೂ ನನಗೂ ಏನೂ ವ್ಯತ್ಯಾಸ ಇದೆ ಅಂತ ಅನಿಸುತ್ತಿಲ್ಲ.
ನನ್ನ ಕೆಲಸ ಸಂಜೆ ಹೊತ್ತಿಗೆ ಶುರುವಾಗುವುದರಿಂದ ಮಗನ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿದೆ.ಮಗುವಿನ ಅಪ್ಪನಾದ ಮೇಲೆ ನಾನು ತುಂಬಾ ಜವಾಬ್ದಾರಿಯುತ ಹಾಗು ಶಿಸ್ತಿನ ವ್ಯಕ್ತಿಯಾಗಿದ್ದೇನೆ ಎಂದು ಹೇಳಿದ್ದರು.
ಏತನ್ಮಧ್ಯೆ, ಸಿಂಗಲ್ ಫಾದರ್ ಆಗಲು ಬಯಸುವವರು ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆದುಕೊಳ್ಳಬಹುದು. ವಷ೯ಗಳ ಹಿಂದೆ ಕಿರುತೆರೆ ಕಲಾವಿದ ರಾಜೀವ್ ಕಂಡೇಲ್ವಾಲ್ ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಹಂಬಲಿಸಿದ್ದು, ಅವರಿಗೆ ಅನುಮತಿ ನಿರಾಕರಿಸಲಾಗಿತ್ತು. ಮುಂಬೈ ಹಾಗು ಚೆನ್ನೈ ನ್ಯಾಯಾಲಯಗಳಲ್ಲಿ ಮಕ್ಕಳನ್ನು ದತ್ತು ಪಡೆಯಲು ಬಯಸಿ ಅವಿವಾಹಿತ ಪುರುಷರು
ಸಲ್ಲಿಸಿದ ಹಲವಾರು ಅಜಿ೯ಗಳು ಇನ್ನೂ ಹಾಗೇ ಬಾಕಿ ಉಳಿದುಕೊಂಡಿವೆ. ಮದುವೆಯಾಗದೇ ಅಪ್ಪನಾಗಲು ನಮ್ಮಿಂದ ಸಾಧ್ಯ ಅದೊಂದು ವಿಭಿನ್ನ ಅನುಭವ ಎಂದು ಯುವಕರು ಅಭಿಪ್ರಾಯ ಪಡುತ್ತಿದ್ದಾರೆ. ಈ ವಿದ್ಯಮಾನಗಳನ್ನೆಲ್ಲಾ ಗಮನಿಸಿದರೆ ಇಂದಿನ ಯುವಕರು ಮದುವೆ ಸಂಪ್ರದಾಯವನ್ನು ಸ್ಕಿಪ್ ಮಾಡುವ ಮೂಲಕ ಸಿಂಗಲ್ ಆಗಿದ್ದುಕೊಂಡೇ ಅಪ್ಪನ ಜವಾಬ್ದಾರಿಯನ್ನು ನಿವ೯ಹಿಸಲು ಆಸಕ್ತಿವಹಿಸುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.
ಮೈ ಡ್ಯಾಡಿ ಸ್ಟ್ರಾಂಗೆಸ್ಟ್!
ಸಿಂಗಲ್ ಮದರ್ ಅಥವಾ ಸಿಂಗಲ್ ಫಾದರ್ ಆಗೋದು ಸುಲಭದ ವಿಷಯವೇನೂ ಅಲ್ಲ. ಅದರಲ್ಲೂ ಸಿಂಗಲ್ ಮದರ್ ಗೆ ಎಷ್ಟು ಕಷ್ಟವಿದೆಯೋ ಸಿಂಗಲ್ ಫಾದರ್ ಕೂಡಾ ಅಷ್ಟೇ ಕಷ್ಟವನ್ನು
ಅನುಭವಿಸಬೇಕಾಗುತ್ತದೆ. ಒಂದು ಮಗುವಿನ ಆರೈಕೆ, ಬೇಕು ಬೇಡಗಳನ್ನು ಪೂರೈಸಲು, ಅವರ ಮನಸ್ಸನ್ನು ಅರಿತುಕೊಳ್ಳಲು ಹೆಣ್ಣಿನಿಂದ ಸಾಧ್ಯ. ಆದರೆ ಮಹಿಳೆಯೊಬ್ಬಳು ಅಮ್ಮನಾಗಿ ನಿವ೯ಹಿಸುವ ಕೆಲಸಗಳನ್ನು ಒಬ್ಬ ಪುರುಷನಿಂದ ಮಾಡಲು ಸಾಧ್ಯವೆ? ಸಿಂಗಲ್ ಫಾದರ್ ವಿಷಯಕ್ಕೆ ಬಂದಾಗ ಈ ಇಂಥಾ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ನಮ್ಮಿಂದ ಎಲ್ಲವೂ ಸಾಧ್ಯ. ನಾವೂ ಹೆಂಗಸರಿಗೆ ಸಮಾನವಾಗಿಯೇ ಮಕ್ಕಳನ್ನು ಆರೈಕೆ, ಪಾಲನೆ, ಪೋಷಣೆ ಮಾಡಬಲ್ಲೆವು. ಹೆಣ್ಣೊಬ್ಬಳು ಸಿಂಗಲ್ ಮದರ್ ಆದಾಗ ಅಲ್ಲಿ ಅಪ್ಪನ ಸ್ಥಾನವನ್ನು ಹೇಗೆ ನಿಭಾಯಿಸುತ್ತಾಳೋ, ಅದೇ ರೀತಿ ನಾವೂ ಮಗುವಿಗೆ ಅಪ್ಪನ ಜತೆಗೆ ಅಮ್ಮನ ಮಮತೆಯನ್ನೂ ನೀಡುತ್ತೇವೆ ಎಂಬುದು ಸಿಂಗಲ್ ಫಾದರ್ಗಳ ದಿಟ್ಟ ನುಡಿ. ನಾನು ನನ್ನ ಮಗನಿಗೆ ತಿಂಡಿ ಮಾಡಿಕೊಡ್ತೀನಿ, ಅವನಿಗೆ ಸ್ನಾನ ಮಾಡಿಸ್ತೀನಿ, ಅವನ ಜತೆ ಆಟ ಆಡ್ತೀನಿ, ಅವನ ಬೇಕು ಬೇಡಗಳೆಲ್ಲವೂ ನನಗೆ ಗೊತ್ತು. ನಮ್ಮಿಬ್ಬರ ಲೋಕ ಇದು ಅಂತಾರೆ ಸಂದೀಪ್. ಆದರೆ ಭಾರತೀಯ ಸಮಾಜ ಸಿಂಗಲ್ ಮದರ್ ಗಳನ್ನು ಒಪ್ಪಿಕೊಂಡಂತೆ ಸಿಂಗಲ್ ಫಾದರ್ ಗಳನ್ನು ಒಪ್ಪಿಕೊಳ್ಳೋಕೆ ಇನ್ನೂ ರೆಡಿಯಾಗಿಲ್ಲ. ಹೆಂಗಸರಷ್ಟು ತಾಳ್ಮೆ ಗಂಡಸರಿಗೆ ಇರಲ್ಲ. ಮಗುವನ್ನು ಯಾವಾಗ ಮುದ್ದಿಸಬೇಕು? ಯಾವಾಗ ದಂಡಿಸಬೇಕು? ಎಂಬುದು ಗಂಡಸರಿಗೆ ಗೊತ್ತಿರಲ್ಲ. ತಮ್ಮ ಜೀವನದ ಜತೆ ಮಕ್ಕಳ ಜೀವನವನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವಲ್ಲಿ ಗಂಡಸರು ಎಡವುತ್ತಾರೆ. ಆದ್ದರಿಂದಲೇ ಭಾರತದಲ್ಲಿ ಸಿಂಗಲ್ ಫಾದರ್ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದಿಲ್ಲ ಅಂತಾರೆ ತಜ್ಞರು. ಅದೇ ವೇಳೆ ಮಗು ಎಲ್ಲವನ್ನೂ ಕಲಿತುಕೊಳ್ಳುವ ಹಂತಕ್ಕೆ ಬಂದಾಗ ಅಮ್ಮ ಎಲ್ಲಿ ಎಂಬ ಪ್ರಶ್ನೆ ಕಾಡತೊಡಗುತ್ತದೆ. ಆವಾಗ ಮಗುವಿನ ಪ್ರಶ್ನೆಗೆ ನೀವು ಯಾವ ರೀತಿ ಉತ್ತರ ಕೊಡುತ್ತೀರಿ? ಸಮಾಜದಲ್ಲಿ ಮಗುವನ್ನು ಹೇಗೆ ಬೆಳೆಸುತ್ತೀರಿ? ಆ ಮಗುವಿಗೆ ಯಾವ ರೀತಿಯ ರಕ್ಷಣೆ ನೀಡುತ್ತೀರಿ? ನಿಮ್ಮ ಮಕ್ಕಳು ಸೇಫ್ ಆಗಿದ್ದಾರೆ ಎಂಬ ಭಾವನೆಯನ್ನು ಅವರಲ್ಲಿ ಮೂಡಿಸುವುದು ಮುಖ್ಯವಾಗುತ್ತದೆ ಅಂತಾರೆ ಮಕ್ಕಳ ಖ್ಯಾತ ಮನೋರೋಗ ತಜ್ಞ ಪುಣೆಯ ಡಾ.ಭೂಷಣ್ ಶುಕ್ಲಾ.
ಬಾಡಿಗೆ ತಾಯಿಯಿಂದಲೂ ಮಗು ಪಡೆಯಬಹುದು
ಸಿಂಗಲ್ ಫಾದರ್ ಆಗಲು ಇಚ್ಛಿಸುವ ಪುರುಷರು ದತ್ತು ಪಡೆಯುವ ಮೂಲಕ ಮಾತ್ರ ಅಲ್ಲ ಬಾಡಿಗೆ ತಾಯಿ ಮೂಲಕವೂ ಮಗುವನ್ನು ಪಡೆದು ಅಪ್ಪನಾಗಬಹುದು. ಬಾಡಿಗೆ ತಾಯಂದಿರ
ಮೂಲಕ ತಮ್ಮದೇ ಮಗುವನ್ನು ಪಡೆಯಬಹುದು ಎಂಬ ಕಾರಣದಿಂದ ಸಿಂಗಲ್ ಫಾದರ್ ಗಳು ಬಾಡಿಗೆ ತಾಯಂದಿರ ಮೊರೆ ಹೋಗುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ದತ್ತು ಪಡೆಯುವುದಕ್ಕಿಂತ ಹೆಚ್ಚಾಗಿ ಸಿಂಗಲ್ ಫಾದರ್ ಗಳು ಬಾಡಿಗೆ ತಾಯಂದಿರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜಾಗತೀಕರಣದ ಫಲವಾಗಿ ಫಟಿ೯ಲಿಟಿ ಟೂರಿಸಂ ಕೂಡಾ ಜಾಸ್ತಿಯಾಗುತ್ತಿದ್ದು, ಬಾಡಿಗೆ ತಾಯಂದಿರಿಂದ ಮಕ್ಕಳನ್ನು ಪಡೆಯುವುದು ಕೂಡಾ ಸುಲಭವಾಗಿ ಬಿಟ್ಟಿದೆ.
ನೆಟ್ ನಲ್ಲಿದೆ ಸಲಹೆ
ಮಕ್ಕಳನ್ನು ಆರೈಕೆ ಮಾಡುವುದು ಹೇಗೆ? ಸಿಂಗಲ್ ಪೇರೆಂಟ್ಗಳಿಗಿರುವ ಸಲಹೆ ಸೂಚನೆ, ಅನುಭವ ಎಲ್ಲವನ್ನು ಹಂಚಿಕೊಳ್ಳಲು ಹಲವಾರು ವೆಬೆ ಸ್ಟೈಟ್ ಗಳು ವೇದಿಕೆಯನ್ನೊದಗಿಸುತ್ತವೆ. ಸಿಂಗಲ್ ಪೇರೆಂಟ್ ಎಂಬ ಕೀವಡ್೯ ಬಳಸಿ ಸಚ್೯ ಮಾಡಿದರೆ ಹಲವಾರು ವೆಬ್ ಸೈಟ್ ಗಳು ತೆರೆದುಕೊಳ್ಳುತ್ತವೆ. ಇಲ್ಲಿ ಸಿಂಗಲ್ ಪೇರೆಂಟ್ ಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಸಮಾನ ಮನಸ್ಕರ ಅಭಿಪ್ರಾಯಗಳನ್ನು ಆಲಿಸಬಹುದು. ಇಂಥಾ ವೆಬ್ ಸೈಟ್ ಗಳಲ್ಲಿ ಒಬ್ಬಂಟಿಯಾಗಿ ಮಕ್ಕಳ ಆರೈಕೆಯಲ್ಲಿ ತೊಡಗಿರುವ ಅಪ್ಪ ಅಮ್ಮಂದಿರೂ ಕೂಡಾ ಪರಸ್ಪರ ವಿಚಾರ ವಿನಿಮಯ ನಡೆಸಬಹುದಾಗಿದ್ದು, ಇದರ ಜತೆಗೆ ಕಾನೂನು ಸಲಹೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.
-ರಶ್ಮಿ
Advertisement