ನಾವೇಕೆ ಡಸ್ ಹಿ ನೋ ಎ ಫಾದರ್ಸ್ ಹಾರ್ಟ್ ಎಂದು ಹೇಳುವುದಿಲ್ಲ?

ಪ್ರಪಂಚವೇ ತಾಯಿ ಹೃದಯ(mother's heart) ಎಂಬ ಅನ್ವರ್ಥವನ್ನು ಬಳಸುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಡುತ್ತಾನಲ್ಲಾ, ನಾವೇಕೆ ಒಮ್ಮೆಯಾದರೂ Does He( anybody) Know a father's Heart ಎನ್ನುವುದಿಲ್ಲ?
ನಾವೇಕೆ ಡಸ್ ಹಿ ನೋ ಎ ಫಾದರ್ಸ್ ಹಾರ್ಟ್ ಎಂದು ಹೇಳುವುದಿಲ್ಲ?
ತಂದೆ-ತಾಯಿ, ಪ್ರಪಂಚದಲ್ಲಿ ಕಾಣಸಿಗುವ ಅದ್ಭುತ ಸಂಬಂಧಗಳು, ಬೇರಾವ ಸಂಬಂಧಗಳಾದರೂ ಜೀವನದ ಒಂದೊಂದು ಹಂತಗಳಲ್ಲೂ ’ಬಂದುಹೋಗುವಂಥದ್ದು’ ಆದರೆ ತಂದೆ-ತಾಯಿಯರ ಸಂಬಂಧ ಶಾಶ್ವತ. ಇದನ್ನು ವರ್ಣಿಸಲು ಮಾತೃದೇವೋ ಭವ, ಪಿತೃದೇವೋ ಭವ ಎಂದು ಭಾರತ ಅದೆಷ್ಟೋ ಸಾವಿರ ವರ್ಷಗಳ ಹಿಂದೆಯೇ ಹೇಳಿದೆ. ಪೋಷಕರ ವಿಷಯದಲ್ಲಿ ಎಂದಿಗೂ ತಾಯಿಗೇ ಪ್ರಥಮ ಸ್ಥಾನ, ತಂದೆಯದ್ದೇನಿದ್ದರೂ ಆ ನಂತರದ್ದು. ತಾಯಿಯ ಪೀತಿ ವಾತ್ಸಲ್ಯ, ಹೊರಜಗತ್ತಿಗೆ ಕಾಣುತ್ತದೆಯಾದರೂ ತನ್ನಿಡೀ ಜೀವನವನ್ನು ಕುಟುಂಬದ ಒಳಿತಿಗೆ ಮಕ್ಕಳ ಭವಿಷ್ಯಕ್ಕಾಗಿ ಮುಡಿಪಾಗಿಡುವ ತಂದೆಯ ವಾತ್ಸಲ್ಯ ಕರ್ತವ್ಯ ಎಂಬ ಒಂದೇ ಶಬ್ದದಡಿ ಗೌಣವಾಗಿಬಿಡುತ್ತದೆ. ಗಂಡು ಮಗುವಾಗಿದ್ದರೂ ಆತನಿಗೆ ತಂದೆಗಿಂತ ತಾಯಿಯ ಮೇಲೆಯೇ ಹೆಚ್ಚು ಪ್ರೀತಿ. ಅಪ್ಪ ಎಂಬ ವ್ಯಕ್ತಿ ಬಹುತೇಕರಿಗೆ ಗದರಿಸುವ ಶಿಸ್ತಿನ ವ್ಯಕ್ತಿಯಂತೆಯೇ ಕಾಣುತ್ತಾರೆ. ಅದಕ್ಕೇ ‘Mama’s Boy’ ಎಂಬ ಮಾತಿದೆಯೇ ಹೊರತು, ಯಾರೂ ‘Papa’s son’ ಅಂತ ಯಾರನ್ನೂ ಕರೆಯುವುದಿಲ್ಲ.
ತನ್ನಿಡೀ ಜೀವನವನ್ನು ಮಕ್ಕಳ ಭವಿಷ್ಯಕ್ಕಾಗಿ ದುಡಿಯುವ ತಂದೆಯ ವೃದ್ಧಾಪ್ಯಕ್ಕೆ ಪ್ರಸ್ತುತ ದಿನಗಳಲ್ಲಿ ಮಕ್ಕಳಿಗಿಂತಲೂ ವೃದ್ಧಾಶ್ರಮಗಳೇ ಆಶ್ರಯವಾಗುತ್ತಿದೆ, ಮಕ್ಕಳು ತಮ್ಮ ಕರ್ತವ್ಯವನ್ನು ಮರೆಯಬಹುದು, ಆದರೆ ಸದಾ ಅವರ ಶ್ರೇಯಸ್ಸನ್ನೇ ಬಯಸುವ ತಂದೆ ಮಾತ್ರ ಎಂದಿಗೂ ತನ್ನ ಮಕ್ಕಳ ಬಗೆಗಿನ ಕರ್ತವ್ಯವನ್ನು ಮರೆಯುವುದಿಲ್ಲ. ಒಂದಷ್ಟು ವಯಸ್ಸಾದ ಮೇಲೆ ಮಕ್ಕಳಿಗೆ ತಂದೆ ಭಾರವಾಗಿ ಕಾಡಬಹುದು, ಆದರೆ ಅದೇ ತಂದೆಗೆ ಮಕ್ಕಳು ಎಂದಿಗೂ ಭಾರವಾಗುವುದಿಲ್ಲ. ಎಂಥಹದ್ದೇ ಕಷ್ಟವಿದ್ದರೂ ಮಕ್ಕಳಿಗೆ ತೊಂದರೆಯಾದಾಗ ತಂದೆಯಾದವನು ಅವರ ನೋವನ್ನು ತನ್ನ ನೋವೆಂದೇ ಸ್ವೀಕರಿಸುತ್ತಾನೆ. ಅದರಲ್ಲೂ ತನ್ನ ಮಗುವಿಗೆ ತೀವ್ರ ಅನಾರೋಗ್ಯ, ಹಾನಿಯುಂಟಾದರೆ ಮನಸಲ್ಲೇ ಮರುಗುವ ಆತನ ನೋವು ಹೊರಜಗತ್ತಿಗೆ ಅಷ್ಟಾಗಿ ತಿಳಿಯುವುದಿಲ್ಲ. ವಿಶೇಷ ಗಮನ ಅಗತ್ಯವುಳ್ಳ ಮಕ್ಕಳು ಜನಿಸಿದರಂತೂ ತಂದೆಯ ಮನಸ್ಸು ಆರ್ದ್ರವಾಗಿರುತ್ತದೆ, ಆದರೂ ಅದನ್ನು ಹೊರಗೆ ತೋರ್ಪಡಿಸದೇ ಕುಟುಂಬದ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯೂ ಅವನದ್ದೇ ಆಗಿರುತ್ತೆ. ಮಕ್ಕಳಿಗೆ ಏನೇ ತೊಂದರೆಯುಂಟಾದರೂ ತಂದೆಯಾದವನು ದೃತಿಗೆಡದೇ ಅದನ್ನು ನಿವಾರಿಸಲು ಮುಂದಾಗುತ್ತಾನೆ. ಪತ್ರಕರ್ತ ಅರುಣ್ ಶೌರಿ ಅವರ ಡಸ್ ಹಿ ನೋ ಎ ಮದರ್ಸ್ ಹಾರ್ಟ್(Does He Know a Mother's Heart) ಕೃತಿಯಲ್ಲಿ ಮೆದುಳಿಗೆ ಸಂಬಂಧಿಸಿದ ಪಾರ್ಶ್ವ ವಾಯುವಿಗೀಡಾದ ತಮ್ಮ ಮಗುವಿನ ಬಗ್ಗೆ ಹೇಳಿದ್ದಾರೆ. ಒಬ್ಬ ತಂದೆಯಾದನ ನಿಜವಾದ ಸವಾಲು ಹಾಗೂ ಮಗಿವಿನ ಆರೋಗ್ಯಕ್ಕೇ ಕುತ್ತು ಬಂದಾಗ ತಂದೆಯ ಯೋಚನೆಗಳು ಹೇಗಿರುತ್ತವೆ ಎಂಬುದು ಈ ಕೃತಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದೆ. 
ಮಕ್ಕಳು ಅಂಗವಿಕಲರಾದರೆ ಆ ನೋವನ್ನು ಸಹಿಸುವುದರೊಂದಿಗೆ ಇತರ ಜವಾಬ್ದಾರಿಗಳನ್ನು ನಿರ್ವಹಿಸುವುದಿದೆಯಲ್ಲಾ, ಅದು ಎಲ್ಲದಕ್ಕಿಂತಲೂ ಸವಾಲಿನ ಸ್ಥಿತಿ, ಅಂತಹ ಸ್ಥಿತಿಯನ್ನು ಬೆಂಗಳೂರಿನ ದೊರೆಸ್ವಾಮಿ ರಾಜು ಅವರೂ ಎದುರಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದಿನ ಮಾತು. 2013ರ ವಿಧಾನಸಭಾ ಚುನಾವಣೆ ಸಂದರ್ಭ, ಲಾರಿ ಸ್ಟ್ಯಾಂಡ್ ನಲ್ಲಿ ಬ್ಯಾಟರಿ ರಿಪೇರಿ ಅಂಗಡಿಯನ್ನು ನಡೆಸಿ ನೆಮ್ಮದಿಯಿಂದಿದ್ದ ದೊರೆಸ್ವಾಮಿ ಕುಟುಂಬಕ್ಕೆ 2013ರ ಏ.17ರಂದು ದೊಡ್ಡ ಅಘಾತ ಎದುರಾಗಿತ್ತು. ಇಂಜಿನಿಯರಿಂಗ್ ಓದಿ ತಂದೆ ತಾಯಿಯರ ಕನಸನ್ನು ನನಸಾಗಿಸಬೇಕಿದ್ದ ಮಗಳು ಲಿಶಾ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ದ್ವಿತೀಯ ಪಿಯು ಪರೀಕ್ಷೆ ಮುಗಿಸಿ ಸಿಇಟಿ ಪರೀಕ್ಷೆಯ ಕೋಚಿಂಗ್‌ ಗೆ ಹೋಗುತ್ತಿದ್ದ ಲಿಶಾ ವಿರಾಮದ ಅವಧಿಯಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ಸ್ಫೋಟ ಸಂಭವಿಸಿ  ಐದು ಅಡಿ ದೂರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗಾಜಿನ ಚೂರುಗಳು ಹೊಕ್ಕಿದ್ದರಿಂದ ಎಡಗಾಲಿಗೆ ತೀವ್ರತರನಾದ ಗಾಯವಾಗಿತ್ತು. ಘಟನೆ ತಿಳಿಯುತ್ತಿದ್ದಂತೆಯೇ ಪೋಷಕರು ಅಘಾತಕ್ಕೊಳಗಾದರು, ಆದರೇನಂತೆ ಇಂದಿನ ವೈಜ್ನಾನಿಕ ಯುಗದಲ್ಲಿ ಗಾಜಿನ ಚೂರುಗಳು ಹೊಕ್ಕಿದ್ದ ಕಾಲಿಗೆ ಚಿಕಿತ್ಸೆ ಕೊಡಿಸಿ ಹಿಂದಿನಂತಯೇ ಮಾಡುವುದು ಕಷ್ಟಸಾಧ್ಯವಲ್ಲ ಎಂದು ಸಾವರಿಸಿಕೊಂಡ ಪೋಷಕರು ದೃತಿಗೆಡಲಿಲ್ಲ. ಮಗಳು ಹಿಂದಿನಂತೆಯೇ ಆಗಲು ಅಗತ್ಯವಿರುವ ಸಕಲ ರೀತಿಯ ಚಿಕಿತ್ಸೆ ಕೊಡಿಸಿದರು. ಆಪರೇಷನ್ ಕೂಡ ನಡೆಯಿತು ಮೂಳೆಗೆ ಪೆಟ್ಟು ಬಿದ್ದಿದ್ದರಿಂದ ಕಾಲಿಗೆ ಬೋನ್ ಗ್ರಾಫ್ಟಿಂಗ್ ಚಿಕಿತ್ಸೆಯೂ ಆಯಿತು. 3-4 ತಿಂಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ವೈದ್ಯರಿಂದ ಭರವಸೆಯೂ ಸಿಕ್ಕಿತು, ಮುಂದಿನ ಬಾರಿ ಆಸ್ಪತ್ರೆಗೆ ಹೋದಾಗ ವೈದ್ಯರ ಭರವಸೆ ಈಡೇರಿರಲಿಲ್ಲ, ಕಾಲಿನ ಮೂಳೆಗಳು ಇನ್ನೂ ಕೂಡಿಕೊಂಡಿರಲಿಲ್ಲ. ಬಿಬಿಎಂಪಿ ಅವರು ಹಾಕಿದ್ದ ಟಾರ್ ಕಿತ್ತೋಗುತ್ತದೆ, ಅದಕ್ಕೇ ಗ್ಯಾರೆಂಟಿ ಇಲ್ಲದಾಗ ನಾವು ಮಾಡಿದ ಆಪರೇಶನ್ ಗೆ ಹೇಗೆ ಗ್ಯಾರೆಂಟಿ ಕೊಡಕ್ಕೆ ಆಗುತ್ರೀ? ಎಂಬ ವೈದ್ಯರ ಮಾತು ಲಿಶಾ ಕುಟುಂಬದವರನ್ನು ಕಂಗಾಲಾಗಿಸಿತು. ಈ ವರೆಗೂ 7 ಶಸ್ತ್ರಚಿಕಿತ್ಸೆ ನಡೆದಿದೆ, ಇನ್ನೂ 2 ಶಸ್ತ್ರಚಿಕಿತ್ಸೆ ನಡೆಯುವುದು ಬಾಕಿ ಇದೆ. ಈವರೆಗೂ 20-25 ಲಕ್ಷ ವೆಚ್ಚವಾಗಿದೆ.ಆದರೂ ಪರಿಸ್ಥಿತಿ ಅಷ್ಟೊಂದು ಸುಧಾರಿಸಿಲ್ಲ.  2 ವರ್ಷದಿಂದ ನರಕ ಅನುಭವಿಸಿದ್ದು ಈಗ 2-3 ತಿಂಗಳಿನಿಂದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ ಎನ್ನುತ್ತಾರೆ ಕನ್ನಡ ಪ್ರಭ.ಕಾಮ್ ನೊಂದಿಗೆ ಮಾತನಾಡಿರುವ ಲಿಶಾ ತಂದೆ ದೊರೆಸ್ವಾಮಿ ರಾಜು.   
"ಮಗಳ ಕಾಲಿಗೆ ಹಾನಿಯುಂಟಾದ ನಂತರ, ಇದ್ದ ಸ್ವಂತ ಅಂಗಡಿಯನ್ನೂ ಮುಚ್ಚಬೇಕಾಯಿತು. ಈಗ ಮಗಳ ಆರೋಗ್ಯ ನೋಡಿಕೊಳ್ಳುತ್ತಿರುವುದರಿಂದ ಸಮಯ ಸಿಕ್ಕಾಗ ಮಾತ್ರವೇ ಯುಪಿಎಸ್ ರಿಪೇರಿ ಕೆಲಸ ಮಾಡಲು ಸಾಧ್ಯ. ಕಾಲು ಹಾನಿಗೀಡಾದರೂ ವಿದ್ಯಾಭ್ಯಾಸವನ್ನು ಬಿಡದ ಲಿಶಾ ಬಿಸಿಎ ಓದುತ್ತಿದ್ದಾರೆ. ಕಾಲೇಜಿಗೆ ಹೋಗುವುದಕ್ಕೆ ಪ್ರತಿದಿನವೂ 1000ರೂಪಾಯಿ, ಒಂದು ಚುಚ್ಚುಮದಿಗೆ 10000 ರೂ. ವೆಚ್ಚವಾಗುತ್ತಿದೆ. ಆದರೆ ಸರ್ಕಾರದಿಂದ ಈವರೆಗೂ ಸಿಕ್ಕಿರುವ ಪರಿಹಾರ ಮೊತ್ತ 6 ಲಕ್ಷರೂಪಾಯಿ ಮಾತ್ರ"! ಎನ್ನುತ್ತಾರೆ ಲಿಶಾ ತಂದೆ. ಅತ್ತ ಹೆಚ್ಚಿನ ಪರಿಹಾರವೂ ಇಲ್ಲ, ಇತ್ತ ನೆಮ್ಮದಿಯೂ ಇಲ್ಲ. ಮಗಳಿಗೆ ಉಂಟಾಗಿರುವ ಅಂಗವೈಕಲ್ಯದಿಂದ ಮನಸ್ಸಿನ ಹೊರೆ ಒಂದೆಡೆಯಾದರೆ, ಆರ್ಥಿಕ ಮುಗ್ಗಟ್ಟು ಮತ್ತೊಂದೆಡೆ.! ಇವೆಲ್ಲದರ ಜೊತೆಗೆ ಪತ್ನಿ, ವೃದ್ಧಾಪ್ಯದಲ್ಲಿರುವ ತಾಯಿ, ಓದುತ್ತಿರುವ ಮಗನನ್ನು ನೋಡಿಕೊಳ್ಳುವ ಕರ್ತವ್ಯವನ್ನೂ ನಿರ್ವಹಿಸುವ ಜವಾಬ್ದಾರಿ. ಇಂತಹ ಸವಾಲುಗಳು,ಮನಸ್ಸಿನ ಭಾರದ ನಡುವೆಯೂ ಧೃತಿಗೆಡದೇ ತನ್ನ ಇತರ ಕರ್ತವ್ಯಗಳಿಗೂ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾನಲ್ಲಾ ಇದಕ್ಕೇ ಒಬ್ಬ ತಂದೆ ಗ್ರೇಟ್ ಎನಿಸುತ್ತಾನೆ. ಇಂತಹ ಅನೇಕ ತಂದೆಯಂದಿರು ಅದೆಷ್ಟೋ ನೋವುಗಳನ್ನು ಸಹಿಸಿಕೊಂಡು ತಮ್ಮ ಮಕ್ಕಳ, ಕುಟುಂಬದ ಭವಿಷ್ಯ ರೂಪಿಸುವುದಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುತ್ತಾರೆ.   
ಅಂಗವಿಕಲ ಪುತ್ರ ಆದಿತ್ಯ ಮತ್ತು ಪಾರ್ಕಿನ್ಸನ್ ಕಾಯಿಲೆಯಿಂದ ನರಳುತ್ತಿರುವ ಪತ್ನಿ ಅನಿತಾ ಅವರೊಂದಿಗಿನ ಘಟನೆಗಳನ್ನು ಮುಂದಿಟ್ಟುಕೊಂಡು ಡಸ್ ಹಿ ನೋ ಎ ಮದರ್ಸ್ ಹಾರ್ಟ್ ಕೃತಿಯಲ್ಲಿ ಯಾತನೆಗಳು ಮತ್ತು ಅದರ ಮೂಲವನ್ನು ಹುಡುಕಿ, ಬದುಕಿನ ಅತಿ ಕ್ಲಿಷ್ಟ ಪ್ರಶ್ನೆಗಳಿಗೆ ಉತ್ತರಿಸುವ ಯತ್ನವನ್ನು ಮಾಡಿದ್ದಾರೆ. ಅರುಣ್ ಶೌರಿ ಅವರ ಡಸ್ ಹಿ ನೋ ಎ ಮದರ್ಸ್ ಹಾರ್ಟ್ ಕೃತಿಯಲ್ಲಿ ಅಂಕಣಕಾರ, ರಾಜಕೀಯ ವ್ಯಕ್ತಿಗಿಂತಲೂ ಭಿನ್ನವಾದ ಒಬ್ಬ ಮೃದುವಾದ ಮಗನ ನೋವನ್ನು ಬಗ್ಗೆ ಆಳವಾಗಿ ಚಿಂತಿಸುವ ತಂದೆಯ ಪರಿಚಯವಾಗುತ್ತದೆ. ಅಷ್ಟಕ್ಕೂ ಮರುಗುವ, ಸಂಕಟಪಡುವ ವಿಷಯಕ್ಕೆ ಬಂದಾಗ ಪ್ರಪಂಚವೇ ತಾಯಿ ಹೃದಯ(mother's heart) ಎಂಬ ಅನ್ವರ್ಥವನ್ನು ಬಳಸುತ್ತದೆ. ಅದರಲ್ಲಿ ಕರುಣೆ, ಪ್ರೀತಿ ವಾತ್ಸಲ್ಯ, ಎಲ್ಲವೂ ತುಂಬಿರುತ್ತೆ. ಆದರೆ ತಂದೆ ಮಾತ್ರ ಬಹಿರಂಗವಾಗಿ ಯಾವುದನ್ನೂ ತೋರಿಸಿಕೊಳ್ಳದೇ, ಮಕ್ಕಳಿಗೆ ಸಂಕಷ್ಟ ಎದುರಾದಾಗ ಕುಗ್ಗದೇ ತನ್ನ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಡುತ್ತಾನಲ್ಲಾ, ನಾವೇಕೆ ಒಮ್ಮೆಯಾದರೂ Does He( anybody) Know a father's Heart ಎನ್ನುವುದಿಲ್ಲ? 
ಜೂನ್ 21 ‘ಫಾದರ್‍ಸ್ ಡೇ’. ನಾವು ತಪ್ಪು ಮಾಡಿದಾಗ ಗದರಿಸಿ, ಶಿಸ್ತಿನಿಂದ ಜೀವನ ನಡೆಸುವುದನ್ನು ಕಲಿಸುವುದು ತಂದೆ, ಮುಂದಕ್ಕೆ ಹೀಗೆಯೇ ಆಗಬೇಕು ಎಂದು ನಮ್ಮ ಜೀವನಕ್ಕೆ ಗುರಿ ಹಾಕಿಕೊಡುವುದೂ ತಂದೆಯೇ. ಕೈಹಿಡಿದು ಮುನ್ನಡೆಸಿ, ಮಗನ ಮಕ್ಕಳಿಗೂ ಹೆಜ್ಜೆಯಿಡುವುದನ್ನು ಕಲಿಸುವ ಅಪ್ಪನ ಹೊರಜಗತ್ತಿಗೆ ಗೋಚರಿಸಿದ ಪ್ರೀತಿಯನ್ನು ನೆನೆಯೋಣ, ಅಪ್ಪನಿಗೆ ಕೃತಜ್ಞತೆಯನ್ನು ಹೇಳೋಣ,Happy Father’s Day!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com