ಅಪ್ಪ -ಮಗನ ಸಂಬಂಧದ 'ಹರಿವು'

ಅಪ್ಪ ಮತ್ತು ಮಗನ ಬಾಂಧವ್ಯವನ್ನು ಮನಮುಟ್ಟುವಂತೆ ತೋರಿಸಿದ ಈ ಚಿತ್ರದ ನಟ ಸಂಚಾರಿ ವಿಜಯ್ ಮತ್ತು ಅರವಿಂದ್ ಕುಪ್ಳೀಕರ್ ಅವರ ಅನುಭವ ಹೇಗಿತ್ತು?
ಸಂಚಾರಿ ವಿಜಯ್ ಮತ್ತು ಅರವಿಂದ್ ಕುಪ್ಳೀಕರ್
ಸಂಚಾರಿ ವಿಜಯ್ ಮತ್ತು ಅರವಿಂದ್ ಕುಪ್ಳೀಕರ್

ಹರಿವು, ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕನ್ನಡ ಪ್ರಾದೇಶಿಕ ಚಿತ್ರ. ಅಪ್ಪ ಮತ್ತು ಮಗನ ಸಂಬಂಧವನ್ನು ಮನೋಜ್ಞವಾಗಿ ತೋರಿಸಲಾಗಿರುವ ಮಂಸೋರೆ ನಿರ್ದೇಶನದ ಈ ಚಿತ್ರದಲ್ಲಿ ಒಂದೆಡೆ ಅನಾರೋಗ್ಯದಿಂದಿರುವ ಮಗನನ್ನು ಉಳಿಸಲು ಪ್ರಯತ್ನಿಸುತ್ತಿರುವ ಹಳ್ಳಿಯ ಅಪ್ಪ. ಇನ್ನೊಂದೆಡೆ ಅಪ್ಪ ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ, ಕೆಲಸದ ಒತ್ತಡದಿಂದ ಅವರತ್ತ ಹೆಚ್ಚು ಗಮನ ನೀಡಲಾಗದೇ ಒದ್ದಾಡುತ್ತಿರುವ ಮಗ. ಅಲ್ಲಿ ಮಗನನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಅಪ್ಪ ಹಳ್ಳಿಯವನು. ಇಲ್ಲಿ ಕೆಲಸದ ಒತ್ತಡದಿಂದ ಒದ್ದಾಡುವ ಮಗ ಬೆಂಗಳೂರಿನವನು. ಹಳ್ಳಿ ಮತ್ತು ನಗರಗಳ ಬದುಕು, ಅಪ್ಪ ಮತ್ತು ಮಗನ ನಡುವಿನ ಸಂಬಂಧದ ಕಥೆ ಹೇಳುವ ಈ ಚಿತ್ರದಲ್ಲಿ ಹಳ್ಳಿಯಲ್ಲಿರುವ, ಮಗನ ಚಿಕಿತ್ಸೆಗಾಗಿ ಪಟ್ಟಣಕ್ಕೆ ಬರುವ ಅಪ್ಪ ಶರಣಪ್ಪನ ಪಾತ್ರ ನಿರ್ವಹಿಸಿದ್ದು ಸಂಚಾರಿ ವಿಜಯ್. ಇತ್ತ ನಗರದ ಜೀವನದ ಪ್ರತಿನಿಧಿಯಂತೆ, ಅಪ್ಪನತ್ತ ಹೆಚ್ಚಿನ ಗಮನ ನೀಡಲಾಗದೆ ಕೆಲಸದ ಒತ್ತಡದಲ್ಲಿ ಬದುಕುವ ಮಗ ಸುರೇಶನ ಪಾತ್ರ ನಿರ್ವಹಿಸಿದವರು ಅರವಿಂದ್ ಕುಪ್ಳೀಕರ್.

ಅಪ್ಪ ಮತ್ತು ಮಗನ ಬಾಂಧವ್ಯವನ್ನು ಮನಮುಟ್ಟುವಂತೆ ತೋರಿಸಿದ ಈ ಚಿತ್ರದ ನಟ ಸಂಚಾರಿ ವಿಜಯ್ ಮತ್ತು ಅರವಿಂದ್ ಕುಪ್ಳೀಕರ್ ಅವರ ಅನುಭವ ಹೇಗಿತ್ತು? 'ಅಪ್ಪನ ದಿನಾಚರಣೆ'ಯ ಸಂದರ್ಭದಲ್ಲಿ ಈ ಇಬ್ಬರು ನಟರು ಹರಿವು ಚಿತ್ರದಲ್ಲಿ ತಮ್ಮ ಅನುಭವಗಳನ್ನು ಕನ್ನಡಪ್ರಭ ಡಾಟ್ ಕಾಂನೊಂದಿಗೆ ಹಂಚಿಕೊಂಡಿದ್ದಾರೆ

ಹರಿವು ಚಿತ್ರದಲ್ಲಿ ಹಳ್ಳಿಯಿಂದ ಮಗನ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ಅಪ್ಪ - ಶರಣಪ್ಪನ ಪಾತ್ರ ನಿರ್ವಹಿಸಿದ ಸಂಚಾರಿ ವಿಜಯ್ ಅವರ ಅನುಭವಗಳನ್ನು ಅವರ ಮಾತಿನಲ್ಲೇ ಕೇಳಿ...

'ಹರಿವು' ಚಿತ್ರದ ಆಡಿಷನ್‌ಗಾಗಿ ಹೋಗಿದ್ದೆ. ಅಲ್ಲಿ ಆಯ್ಕೆ ಆಗುತ್ತೇನೆ ಎಂಬ ನಂಬಿಕೆ ನನಗಿರಲಿಲ್ಲ. ಯಾಕೆಂದರೆ ಅಲ್ಲಿ  8 ವರ್ಷದ ಮಗನ ಅಪ್ಪನ ಪಾತ್ರ ವಹಿಸಬೇಕಾಗಿತ್ತು. ಅಂದ್ರೆ ಅಲ್ಲಿ ಆ ಪಾತ್ರಕ್ಕೆ ಪ್ರಬುದ್ಧತೆ ಅಗತ್ಯವಿತ್ತು. ನಾನು ಆಯ್ಕೆಯಾದೆ. ಪ್ರಬುದ್ಧವಾದ ಆ ಲುಕ್ ..ಅದನ್ನು ಮೇಕಪ್ ನಲ್ಲಿ ಸರಿತೂಗಿಸಿದರು. ಇನ್ನೊಂದು ವಿಷಯ ಹೇಳ್ಬೇಕು ಅಂದ್ರೆ ಅಲ್ಲಿ ಪಾತ್ರದ ತೀವ್ರತೆ ಜಾಸ್ತಿ ಆಗಿತ್ತು. ನಾನು ಕೂಡಾ ಹಳ್ಳಿಯಲ್ಲೇ ಬೆಳೆದಿರುವುದರಿಂದ ಹಳ್ಳಿ ಜೀವನದೊಂದಿಗೆ ನಂಟು, ಪಾತ್ರದೊಂದಿಗೆ ಬೆಸೆದುಕೊಂಡಿತ್ತು.
ಶರಣಪ್ಪ ಮತ್ತು ಅವನ ಮಗನ ಸಂಬಂಧ ಒಂದೆಡೆಯಾದರೆ ಇತ್ತ ನಗರದಲ್ಲಿ ಸುರೇಶ್ ಎಂಬ ಪತ್ರಕರ್ತನ ಬದುಕು. ಅಪ್ಪ ಮಗ ಪಕ್ಕದಲ್ಲೇ ಇರಬೇಕೆಂದು ಬಯಸುವಾಗ ಅವರ ಜತೆ ಕಾಲ ಕಳೆಯಲು ಸಾಧ್ಯವಾಗದ ಸ್ಥಿತಿ ಅವನದ್ದು. ಒಂದು ನಗರ ಮತ್ತು ಒಂದು ಹಳ್ಳಿಯಲ್ಲಿನ ಅಪ್ಪ - ಮಗನ ಸಂಬಂಧದ ಕಥೆ ಇದು. ನಗರ ಅಥವಾ ಹಳ್ಳಿ ಜೀವನ ಯಾವುದೇ ಆಗಿರಲಿ ಅಲ್ಲಿ ಅಪ್ಪ ಮಗನ ಪ್ರೀತಿ ಇದ್ದೇ ಇರುತ್ತದೆ. ಆದರೆ ಸಂಬಂಧಗಳ ಮೌಲ್ಯ ಹಳ್ಳಿಗಳಲ್ಲಿ ಜಾಸ್ತಿ ಇರುತ್ತದೆ. ಇಲ್ಲಿ ಸುರೇಶನ ತಂದೆ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ, ಅವರು ಸತ್ತೇ ಹೋಗುತ್ತಾರೆ ಎಂಬ ಸ್ಥಿತಿಯಲ್ಲಿ ಇರಲ್ಲ . ಆದ್ರೆ ಶರಣಪ್ಪನಿಗೆ ಗೊತ್ತಿರುತ್ತದೆ ಮಗು ಉಳಿಯುವುದು ಕಷ್ಟ ಎಂಬುದು. ಅಲ್ಲಿ ಅವ ಹೇಗಾದರೂ ಮಾಡಿ ಮಗುವನ್ನು ಉಳಿಸಲು ಪ್ರಯತ್ನ ಮಾಡುತ್ತಿರುತ್ತಾನೆ. ಈ ಎರಡೂ ಕಥೆಗಳಲ್ಲಿ ಅಪ್ಪ ಮಗನ ನಡುವಿನ ಪ್ರೀತಿ ಇದೆ. ಪರಿಸ್ಥಿತಿಗಳ ಒತ್ತಡದಲ್ಲಿ ಬಳಲುವ, ದೈನಂದಿನ ಜೀವನದ ತಾಕಲಾಟಗಳು ಎಲ್ಲವೂ ಇವೆ. ಅಪ್ಪ - ಮಗನ ನಡುವಿನ ಭಾವನಾತ್ಮಕ ಸಂಬಂಧದ ಕಥೆ ಹರಿವು.

ಅಪ್ಪನ ಜತೆ ಸಮಯ ಕಳೆಯಲು ಸಮಯ ಸಿಗದೇ ಇರುವ ಮಗ ಸುರೇಶ್‌ನದ್ದು ಒತ್ತಡಗಳಿಂದ ಕೂಡಿದ ಬದುಕು. ಆ ಪಾತ್ರವನ್ನು ನಿರ್ವಹಿಸಿದ ಅರವಿಂದ್ ಕುಪ್ಳೀಕರ್ ಅವರ ಅನುಭವ ಹೇಗಿತ್ತು ಅಂತ ಕೇಳಿದ್ದಕೆ ಅವರು ಉತ್ತರಿಸಿದ್ದು ಹೀಗೆ ...

ಓವರ್ ಟು ಅರವಿಂದ್
...

ಹರಿವು ಚಿತ್ರದಲ್ಲಿ ನಟನೆ ಮಾಡುವಾಗ ಅದು ಮಂಸೋರೆಯವರ ಜೀವನದ ಕಥೆ ಎಂಬುದು ಗೊತ್ತಿರಲಿಲ್ಲ. ಅದು ಅವರ ಕಥೆ ಎಂಬುದು ಗೊತ್ತಾದಾಗ ಅಚ್ಚರಿಯಾಯ್ತು. ತುಂಬಾ ಸೌಮ್ಯವಾಗಿರುವ ವ್ಯಕ್ತಿ ಮಂಸೋರೆ. ಅವರು ಅಪ್ಪನ ಜತೆ ಹೀಗೆ ವರ್ತಿಸಲು ಸಾಧ್ಯವೆ? ಎಂದು ಅನಿಸಿತು. ಅದೇ ವೇಳೆ ವ್ಯಕ್ತಿಯೊಬ್ಬನ ಜೀವನದಲ್ಲಿ ಹೀಗಿರಲು ಸಾಧ್ಯವೆ  ಅಂತನೂ ಅನಿಸಿದ್ದಿದೆ. ಆದರೂ ಅಲ್ಲಿ ನಡೆಯುವ ಘಟನೆಗಳೆಲ್ಲ ಈಗಿನ ಕಾಲಕ್ಕೆ ಪ್ರಸ್ತುತ ಅನಿಸಿಬಿಡುತ್ತದೆ. ಇಲ್ಲಿ ನಾವು ನಗರ ಜೀವನಕ್ಕೆ ಒಗ್ಗಿ ಹೋಗಿದ್ದೇವೆ. ನಮ್ಮ ಆಪ್ತರೊಂದಿಗೆ ಕಳೆಯಲು ನಮ್ಮಲ್ಲಿ ಸಮಯವೇ ಇರಲ್ಲ. ನಮಗೆ ನಮ್ಮ ಜೀವನವೇ ದೊಡ್ಡದು ಅನಿಸಿ ಬಿಡುತ್ತದೆ. ನಮಗೆ ನಮ್ಮದೇ ಆದ ಸ್ವಾತಂತ್ರ್ಯ ಬೇಕು. ಒತ್ತಡದಲ್ಲೇ ಬದುಕು ಸಾಗಿ ಅಪ್ಪ ಅಮ್ಮ ಇಲ್ಲಿ ಟೇಕನ್ ಫಾರ್ ಗ್ರಾಂಟೆಡ್ ಆಗಿ ಬಿಟ್ಟಿದ್ದಾರೆ. ಎಷ್ಟೇ ಬ್ಯುಸಿ ಆಗಿದ್ದರೂ ಒಂದೆರಡು ಗಂಟೆ ಅವರೊಂದಿಗೆ ಕಳೆಯಲು ಆಗಲ್ವಾ ? ಎಂಬ ಪ್ರಶ್ನೆ ನನ್ನಲ್ಲಿ ಕಾಡಿದೆ.

ನಿಜ ಜೀವನಕ್ಕೂ ನಾನು ಮಾಡಿದ ಪಾತ್ರಕ್ಕೂ ಸಾಮ್ಯತೆ ಇಲ್ಲ. ನನ್ನಪ್ಪ ನನ್ನೊಂದಿಗೆ ಗೆಳೆಯನಂತೆ ವರ್ತಿಸುತ್ತಾರೆ. ಆದರೆ ನನ್ನ ಸಂಬಂಧಿಕರೊಬ್ಬರ ಜೀವನವನ್ನು ಈ ಪಾತ್ರ ಹೋಲುತ್ತಿತ್ತು. ಒಂದು ವೇಳೆ ನನಗೆ ಇದು ಮಂಸೋರೆಯವರ ಜೀವನಕ್ಕೆ ಸಂಬಂಧಿಸಿದ ಕತೆ ಎಂದು ಮೊದಲೇ ಗೊತ್ತಿರುತ್ತಿದ್ದರೆ ಅಲ್ಲಿ ನಟಿಸುವಾಗ ಇನ್ನೇನೋ ಬದಲಾವಣೆಯಾಗುತ್ತಿತ್ತೋ ಏನೋ.

- - - - - - -
'ಹರಿವು' ಸಿನಿಮಾ ನೋಡಿದ ನಂತರ ಶರಣಪ್ಪ ಮತ್ತು ಸುರೇಶ ಈ ಎರಡು ಪಾತ್ರಗಳು ನಮ್ಮನ್ನು ಕಾಡತೊಡಗುತ್ತವೆ. ಯಾಕೆಂದರೆ ಈ ಪಾತ್ರಗಳು ಕೇವಲ ಪಾತ್ರಗಳು ಮಾತ್ರವಲ್ಲ, ಅಪ್ಪ ಮಗನ ಸಂಬಂಧಗಳನ್ನು ಬೆಸೆದ ಕೊಂಡಿಗಳಾಗಿವೆ.


-ರಶ್ಮಿ ಕಾಸರಗೋಡು



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com