ಏನಿದು ಈಗಲ್ ಸೆಲೆಬ್ರೇಷನ್, ಸ್ವಿಸ್ ಆಟಗಾರರಿಗೆ ಫೀಫಾ ಏಕೆ ದಂಡ ವಿಧಿಸಿದೆ?

ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್ ಆಟಗಾರರು ಈಗಲ್ ಸೆಲೆಬ್ರೇಷನ್ ಮಾಡಿದ ಕಾರಣಕ್ಕಾಗಿ ಫೀಫಾ ದಂಡ ವಿಧಿಸಿದೆ. ಹಾಗಾದರೆ ಏನಿದು ಈಗಲ್ ಸೆಲೆಬ್ರೇಷನ್.. ಫೀಫಾ ದಂಡ ಹಾಕಿದ್ದೇಕೆ.. ಸಂಪೂರ್ಣ ವಿವರ ಇಲ್ಲಿದೆ..
ಈಗಲ್ ಸೆಲೆಬ್ರೇಷನ್
ಈಗಲ್ ಸೆಲೆಬ್ರೇಷನ್
ಮಾಸ್ಕೋ: ಫುಟ್ಬಾಲ್ ವಿಶ್ವಕಪ್ 2018ರ ಟೂರ್ನಿಯಲ್ಲಿ ಸ್ವಿಟ್ಜರ್ಲೆಂಡ್ ಆಟಗಾರರು ಈಗಲ್ ಸೆಲೆಬ್ರೇಷನ್ ಮಾಡಿದ ಕಾರಣಕ್ಕಾಗಿ ಫೀಫಾ ದಂಡ ವಿಧಿಸಿದೆ. ಹಾಗಾದರೆ ಏನಿದು ಈಗಲ್ ಸೆಲೆಬ್ರೇಷನ್.. ಫೀಫಾ ದಂಡ ಹಾಕಿದ್ದೇಕೆ.. ಸಂಪೂರ್ಣ ವಿವರ ಇಲ್ಲಿದೆ..
ಪ್ರಸ್ತುತ ಸರ್ಬಿಯಾ ವಿರುದ್ಧದ ಪಂದ್ಯದ ಗೆಲುವಿನ ನೆಪದಲ್ಲಿ ಫಿಫಾ ನಿಯಮ ಉಲ್ಲಂಘಿಸಿದ ಆರೋಪಕ್ಕೆ ತುತ್ತಾಗಿ ಸ್ವಿಟ್ಜರ್ಲೆಂಡ್ ತಂಡದ ಮೂವರು ಆಟಗಾರರು ಫೀಫಾದಿಂದ ದಂಡನೆಗೆ ಒಳಗಾಗಿದ್ದಾರೆ. ಸ್ವಿಟ್ಜರ್ಲೆಂಡ್ ತಂಡದ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್‌ ಸ್ಟೀನರ್ ಫೀಫಾ ನಿಯಮ ಉಲ್ಲಂಘಿಸಿದ್ದಕ್ಕಾಗಿ 10 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ತೆರಬೇಕು ಎಂದು ಫೀಫಾ ಆದೇಶಿಸಿದೆ. ಇಷ್ಟಕ್ಕೂ ಆಟಗಾರರು ಮಾಡಿದ ತಪ್ಪೇನು? ಈಗಲ್ ಸೆಲೆಬ್ರೇಷನ್ ಗೂ ಫೀಫಾ ದಂಡಕ್ಕೂ ಇರುವ ಸಂಬಂಧವೇನು?
ಆಟಗಾರರ ಸಂಭ್ರಮಾಚರಣೆ ಹಿಂದಿದೆ ರಾಜಕೀಯ ವೈಷಮ್ಯ
ಹೌದು.. ಫೀಫಾದಿಂದ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್‌ ರ ಸಂಭ್ರಮಾಚರಣೆ ಹಿಂದೆ ರಾಜಕೀಯ ವೈಷಮ್ಯದ ನೆರಳಿದೆ. ಈ ಮೂವರೂ ಆಟಗಾರರು ಸ್ವಿಟ್ಜರ್ಲೆಂಡ್ ತಂಡದ ಪರ ಆಡುತ್ತಿದ್ದಾರೆಯಾದರೂ, ಅವರ ಮೂಲ ಶಾಕಿರಿ ಕೊಸೊವೊ ಎಂಬ ಒಂದು ಪ್ರಾಂತ್ಯ. ಇದು ಸರ್ಬಿಯಾದ ಈ ಹಿಂದಿನ ಪ್ರಾಂತ್ಯಗಳಲ್ಲೊಂದು. 1998-1999ರಲ್ಲಿ ಸರ್ಬಿಯಾ ಪಡೆ ಹಾಗೂ ಆಲ್ಬೇನಿಯನ್ ಗೆರಿಲ್ಲಾಗಳ ನಡುವಿನ ಕಾಳಗದಲ್ಲಿ ಸಾವಿರಾರು ಜನರನ್ನು ಹತ್ಯೆಗೈಯಲಾಗಿತ್ತು. ಈ ಕಾಳಗದ ವೇಳೆ ಹಲವಾರು ಮಂದಿ ತಮ್ಮ ಮನೆ ಮಠ ಬಿಟ್ಟು ಅಲೆದಾಡಿದ್ದರು.
ಡಬಲ್ ಈಗಲ್ ಅಥವಾ ಎರಡು ಹದ್ದಿನ ಚಿಹ್ನೆಯು ಆಲ್ಬೇನಿಯನ್ ಧ್ವಜವನ್ನು ಪ್ರತಿನಿಧಿಸುತ್ತದೆ. ಅಂತೆಯೇ ಕೊಸೊವೊ ಪ್ರಾಂತ್ಯದ ಚಿಹ್ನೆ ಕೂಡ ಇದೇ ಆಗಿದೆ. 2008ರಲ್ಲಿ ಕೊಸೊವೊ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಆದರೆ, ಸರ್ಬಿಯಾ ಮಾತ್ರ ಈಗಲೂ ಅದನ್ನು ಮಾನ್ಯ ಮಾಡಲು ನಿರಾಕರಿಸುತ್ತ ಬಂದಿದೆ. ಆದರೆ ಕೊಸೋವೋ ಮಾತ್ರ ತಾನು ಸ್ವಾತಂತ್ರ್ಯ ಎಂದು ಘೋಷಿಸಿಕೊಂಡಿದ್ದು, ಸರ್ಬಿಯಾ ವಿರುದ್ಧ ತೊಡೆ ತಟ್ಟಿ ನಿಂತಿದೆ. ಇನ್ನು ಇದೇ ಕೊಸೋವೋ ಪ್ರಾಂತ್ಯದ ಮೂಲದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್‌ ಸ್ವಿಟ್ಜರ್ಲೆಂಡ್ ತಂಡದ ಪರ ಆಡುತ್ತಿದ್ದು, ಇದೇ ಕಾರಣಕ್ಕೆ ಕಳೆದ ಶುಕ್ರವಾರ ನಡೆದ ಸರ್ಬಿಯಾ ವಿರುದ್ಧ ತಮ್ಮ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ತಮ್ಮ ಸ್ವತಂತ್ರ್ಯ ಪ್ರಾಂತ್ಯದ ಗುರುತಾದ ಡಬಲ್ ಈಗಲ್ ಗುರುತನ್ನು ಕೈಯಲ್ಲಿ ತೋರಿಸಿ ಸಂಭ್ರಮಾಚರಣೆ ನಡೆಸಿದ್ದರು.
ಆದರೆ ಮೈದಾನದಲ್ಲಿ ಯಾವುದೇ ರಾಜಕೀಯ ಚಿಹ್ನೆಯನ್ನು ಪ್ರತಿನಿಧಿಸುವುದನ್ನು ಫಿಫಾ ಕಡ್ಡಾಯವಾಗಿ ನಿಷೇಧಿಸಿದೆ. ಅಲ್ಲದೆ ಇಂಥಹ ಗುರುತರವಾದ ತಪ್ಪೆಸಗಿದವರನ್ನು ಅದು ನಿಷೇಧಿಸುವಂಥ ನಿಯಮವನ್ನೂ ಒಳಗೊಂಡಿದೆ. 'ಮೈದಾನದಲ್ಲಿ ಶಿಸ್ತು ಮತ್ತು ಸದ್ವರ್ತನೆ ಅಗತ್ಯವಾಗಿದ್ದು, ಇಂತಹ ನಡೆಗಳನ್ನು ಸಹಿಸಲು ಸಾಧ್ಯವಿಲ್ಲ. ಕೊಸೊವೊ ಪರ ಸಂಭ್ರಮಾಚರಣೆಯ ವೇಳೆ ಆಟಗಾರರು ನಿಯಮ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದಾಗ್ಯೂ, ಇದು ಮೊದಲ ಪ್ರಕರಣವಾಗಿರುವುದರಿಂದ ನಿಷೇಧದಂತಹ ಕಠಿಣ ಕ್ರಮ ಜರುಗಿಸದೆ ದಂಡ ವಿಧಿಸಲಾಗಿದೆ' ಎಂದು ಫಿಫಾ ತಿಳಿಸಿದೆ. 
ಏತನ್ಮಧ್ಯೆ, ಸರ್ಬಿಯಾ ಫುಟ್ಬಾಲ್ ಅಸೋಸಿಯೇಷನ್ ಪಂದ್ಯದ ವೇಳೆ ಅನುಚಿತ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಅಭಿಮಾನಿಗಳಿಗೂ 54 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com