

ಸಲ್ವಾಡರ್: ಬದಲಿ ಗೋಲ್ಕೀಪರ್ ಆಗಿ ಬಂದ ಟಿಮ್ ಕ್ರೂಲ್ ಅವರು ಪೆನಾಲ್ಟಿ ಶೂಟೌಟ್ನಲ್ಲಿ ಕೋಸ್ಟ್ ರಿಕಾ ತಂಡದ ಎರಡು ಪ್ರಯತ್ನಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಹಾಲೆಂಡ್ ತಂಡವನ್ನು ಸೆಮಿಫೈನಲ್ ರಹದಾರಿಗೆ ಕರೆದೊಯ್ದಿದ್ದಾರೆ.
ಎರೆನಾ ಫಾಂಟೆ ನೋವಾ ಕ್ರೀಡಾಂಗಣದಲ್ಲಿ ಭಾನುವಾರ ನಸುಕಿನಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಹಾಲೆಂಡ್ ಆಟಗಾರರು ಪೆನಾಲ್ಟಿ ಶೂಟೌಟ್ ಮೂಲಕ ಕೋಸ್ಟ ರಿಕಾ ತಂಡವನ್ನು 4-3 ಗೋಲುಗಳಿಂದ ಸದೆಬಡಿದು ನಾಲ್ಕರಘಟ್ಟಕ್ಕೆ ಪ್ರವೇಶ ಗಿಟ್ಟಿಸಿದರು.
ನಿಗದಿತ ಅವಧಿ ಹಾಗೂ 30 ನಿಮಿಷಗಳ ಹೆಚ್ಚುವರಿ ಸಮಯದ ಆಟದಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಹೆಚ್ಚುವರಿ ಅವಧಿಯ ಗಾಯದ ಅವಧಿಯ ಆಟದಲ್ಲಿ (1201ನೇ ನಿಮಿಷ) ಹಾಲೆಂಡ್ ಕೋಚ್ ಲೂಯಿಸ್ ವ್ಯಾನ್ ಗಾಲ ಅವರು ಗೋಲ್ಕೀಪರ್ ಜಾಸ್ಪರ್ ಸಿಲೆಸೆನ್ ಅವರನ್ನು ಬದಲಾಯಿಸಿ ಟಿಮ್ ಕ್ರೂಲ್ ಅವರಿಗೆ ಅವಕಾಶ ಕಲ್ಪಿಸಿದರು. ಸುಮಾರು 6 ಅಡಿ 3 ಇಂಚು ಎತ್ತರದ ಸಿಲೆಸೆನ್ ಅವರನ್ನು ಬದಲಾಯಿಸಿದಾಗ ಒಂದು ಕ್ಷಣ ಎಲ್ಲರಿಗೂ ಅಚ್ಚರಿ ಕಾದಿತ್ತು. ನಂತರ ಫಲಿತಾಂಶ ನಿರ್ಧಾರಿಸಲು ಪೆನಾಲ್ಟಿ ಶೂಟೌಟ್ ಅವಕಾಶಕ್ಕೆ ಪಂದ್ಯ ತಿರುಗಿತು. ಮೊದಲ ಶೂಟೌಟ್ತೆಗೆದುಕೊಂಡ ಕೋಸ್ಟ ರಿಕಾ ಪರ ಸೆಲ್ಸೊ ಬೋರ್ಗ್ಸ್ ಗೋಲು ಗಳಿಸಿ ತಮ್ಮ ತಂಡಕ್ಕೆ 1-0 ಮುನ್ನಡೆ ದೊರಕಿಸಿಕೊಟ್ಟರು. ಬಳಿಕ ಹಾಲೆಂಡ್ ಪರ ರಾಬಿನ್ ವ್ಯಾನ್ ಪರ್ಸಿ ಗೋಲು ಗಳಿಸಿದಾಗ ಪುನಃ ಉಭಯ ತಂಡಗಳು 1-1 ಸಮಸ್ಥಿತಿ ತಲುಪಿದವು.
ಆದರೆ, ಕೋಸ್ಟ ರಿಕಾ ಪರ ಎರಡನೇ ಪೆನಾಲ್ಟಿ ಶೂಟೌಟ್ನಲ್ಲಿ ಬ್ರಯಾನ್ ರ್ಯೂಜ್ ಹಾಗೂ ಐದನೇ ಶೂಟೌಟ್ನಲ್ಲಿ ಮೈಕೆಲ್ ಉಮಾನ ಗೋಲುಗಳಿಸಲು ವಿಫಲರಾಗುತ್ತಲೇ ಹಾಲೆಂಡ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಎದುರಾಳಿಯ ಈ ಎರಡೂ ಪ್ರಯತ್ನಗಳನ್ನು ವಿಫಲಗೊಳಿಸಿದ ಗೋಲ್ಕೀಪರ್ ಟಿಮ್ ಕ್ರೂಲ್ ಹಾಲೆಂಡ್ ತಂಡದ ಗೆಲವಿನ ರೂವಾರಿಯಾದರು.
ಮತ್ತೊಂದೆಡೆ ಹಾಲೆಂಡ್ ತಂಡ ಮೊದಲ ನಾಲ್ಕೂ ಪೆನಾಲ್ಟಿ ಶೂಟೌಟ್ಗಳಲ್ಲಿ ಗೋಲು ಸಂಪಾದಿಸುವಲ್ಲಿ ಸಫಲವಾಗುವುದರೊಂದಿಗೆ ನಿರೀಕ್ಷೆಯಂತೆ ಮುಂದಡಿ ಇಟ್ಟಿತು. ಆರ್ಜೆನ್ ರಾಬೆನ್ ಎರಡನೇ ಪ್ರಯತ್ನದಲ್ಲಿ ಗೋಲು ದಾಖಲಿಸಿ ಹಾಲೆಂಡ್ಗೆ 2-1 ಮುನ್ನಡೆ ತಂದುಕೊಟ್ಟರೆ, ನಂತರದಲ್ಲಿ ವೆಸ್ಲೆ ಸ್ನೈಡರ್ ಮತ್ತು ಡರ್ಕ್ ಕ್ಯೂಟ್ ಕ್ರಮವಾಗಿ ಗೋಲು ಬಾರಿಸಿ ಡಚ್ಗೆ ಮುನ್ನಡೆಯ ಭಾಗ್ಯ ಖಚಿತಪಡಿಸಿದರು. ಇದಕ್ಕೂ ಮುನ್ನ ನಿಗದಿತ ಮತ್ತು ಹೆಚ್ಚುವರಿ ಸಮಯದ ಆಟದಲ್ಲಿ ಹಾಲೆಂಡ್ ಮತ್ತು ಕೋಸ್ಟ ರಿಕಾ ಪಡೆಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಿತು. ಪಂದ್ಯದಲ್ಲಿ ಹಾಲೆಂಡ್ ತಂಡ ಪ್ರತಿಶತ 64ರಷ್ಟು ಹಿಡಿತ ಸಾಧಿಸಿದ್ದರೂ ಸಹ ಗೋಲಿನ ರುಚಿ ಕಾಣಲಾಗಲಿಲ್ಲ. ಕೋಸ್ಟ ರಿಕಾ ತಂಡದ ಪ್ರಬಲ ರಕ್ಷಣಾ ಗೋಡೆಯನ್ನು ಬೇದಿಸಲು ಹಾಲೆಂಡ್ ಆಟಗಾರರು ನಡೆಸಿದ ಪ್ರಯತ್ನವೆಲ್ಲ ವ್ಯರ್ಥವಾಯಿತು. ಕೋಸ್ಟ ರಿಕಾ ಗೋಲ್ಕೀಪರ್ ಕೀಲೋರ್ ನೋವಾಸ್ ಡಚ್ ಆಟಗಾರರ ಕೆಲವು ಉತ್ತಮ ಅವಕಾಶಗಳನ್ನು ಹಾಳುಗೆಡವುವ ಮೂಲಕ ತಮ್ಮ ತಂಡಕ್ಕೆ ಆಘಾತ ತಗುಲದಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಮಧ್ಯೆ ಕೋಸ್ಟ ರಿಕಾ ಕೂಡ ಎದುರಾಳಿ ಕೋಟೆಯ ಮೇಲೆ ದಂಡೆತ್ತಿ ಹೋಗುವ ಮೂಲಕ ಮೂರ್ನಾಲ್ಕು ಬಾರಿ ಗೋಲು ಗಳಿಸಿಯೇ ಬಿಟ್ಟಿತು ಎಂಬ ಸ್ಥಿತಿಯಲ್ಲಿತ್ತು. ಆದರೆ, ಡಚ್ನ ರಕ್ಷಣಾ ಗೋಡೆಯನ್ನು ಕೆಡವಲು ಸಾಧ್ಯವಾಗದೇ ವಾಪಸ್ ಹೋಗುವಂತಾಯಿತು.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಳೆದ 2010ರ ವಿಶ್ವಕಪ್ ಫೈನಲ್ನಲ್ಲಿ ಸ್ಪೇನ್ ಎದುರು ಸೋತು ಚೊಚ್ಚಲ ಬಾರಿಗೆ ವಿಶ್ವಕಪ್ ಎತ್ತಿಹಿಡಿಯುವ ಅವಕಾಶದಿಂದ ವಂಚಿತವಾಗಿದ್ದ ಹಾಲೆಂಡ್ ತಂಡ ಈ ಬಾರಿ ಸೆಮಿಫೈನಲ್ ತಲುಪಿ ಪುನಃ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆದರೆ, ಸೆಮಿಫೈನಲ್ ಪಂದ್ಯದಲ್ಲಿ ಹಾಲೆಂಡ್ ತಂಡಕ್ಕೆ ಪ್ರಬಲ ಅರ್ಜೆಂಟೀನಾ ತಂಡದ ಸವಾಲು ಎದುರಾಗಲಿದ್ದು, ತೀರ ಎಚ್ಚರಿಕೆಯಿಂದ ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ.
ಹಾಲೆಂಡ್ 4
= ರಾಬಿನ್ ವ್ಯಾನ್ ಪರ್ಸಿ ಗೋಲು
= ಆರ್ಜೆನ್ ರಾಬೆನ್ ಗೋಲು
= ವೆಸ್ಲೆ ಸ್ನೈಡರ್ ಗೋಲು
= ಡರ್ಕ್ ಕ್ಯುಟ್ ಗೋಲು
ಕೋಸ್ಟ ರಿಕಾ 3
= ಸೆಲ್ಸೊ ಬೋರ್ಗ್ಸ್ ಗೋಲು
= ಬ್ರಯಾನ್ ರ್ಯೂಜ್ ವಿಫಲ
= ಜಿಯಾನ್ಕಾರ್ಲೊ ಗೋಂಜಾಲೆಜ್ ಗೋಲು
= ಕ್ರಿಸ್ಟಿಯಾನ್ ಬೋಲಾನೋಸ್ ಗೋಲು
= ಮೈಕೆಲ್ ಉಮಾನ ವಿಫಲ