
ರಿಯೊ ಡೀ ಜನೈರೊ: ಜಾಗತಿಕ ಫುಟ್ಬಾಲ್‌ನಲ್ಲಿ ತಮ್ಮದೇಯಾದ ಹಲವು ವೈಶಿಷ್ಟ್ಯತೆಗಳನ್ನು ಹೊಂದಿರುವ ಎರಡು ಬಲಾಢ್ಯ ತಂಡಗಳ ಶ್ರೇಷ್ಠ ಆಟಗಾರರು ಈಗ ಪ್ರತಿಷ್ಠಿತ ಕದನವೊಂದರಲ್ಲಿ ಪರಸ್ಪರ ಯುದ್ಧಕ್ಕೆ ಅಖಾಡದಲ್ಲಿ ಸನ್ನದ್ಧರಾಗಿ ನಿಂತಿದ್ದಾರೆ.
ಸರ್ವಶ್ರೇಷ್ಠ ಕ್ರೀಡಾಂಗಣಗಳಲ್ಲಿ ಒಂದಾದ ಬ್ರೆಜಲ್‌ನ ಐತಿಹಾಸಿಕ ಎಸ್ಟಾಡಿಯೊ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ ತಡರಾತ್ರಿ ನಡೆಯಲಿರುವ 2014ನೇ ಸಾಲಿನ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜರ್ಮನಿ ಮತ್ತು ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗಲಿದ್ದು, ಜಾಗತಿಕ ಫುಟ್ಬಾಲ್‌ನಲ್ಲಿ ಆಧಿಪತ್ಯ ಸ್ಥಾಪಿಸುವ ಕನಸು ಹೊತ್ತು ಹೋರಾಟಕ್ಕಿಳಿಯುತ್ತಿವೆ.
ಇದೊಂದು ರೀತಿಯಲ್ಲಿ ಯೂರೋಪ್ ಮತ್ತು ದಕ್ಷಿಣ ಅಮೆರಿಕನ್ನರ ನಡುವಿ ಸಮರವೆಂದೇ ಭಾವಿಸಲಾಗಿದೆ. ಪ್ರತಿಷ್ಠಿತ ಈ ಪಂದ್ಯಾವಳಿಯಲ್ಲಿ ಜರ್ಮನಿ ಗೆದ್ದರೆ, ಅಮೆರಿಕನ್ ರಾಷ್ಟ್ರದಲ್ಲಿ ವಿಶ್ವಕಪ್ ಗೆದ್ದ ಮೊದಲ ಯೂರೋಪ್ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ. ಹಾಗೆಯೇ 24 ವರ್ಷಗಳ ನಂತರ ಫೈನಲ್ ಪ್ರವೇಶಿಸಿರುವ ಅರ್ಜೆಂಟೀನಾ ಕೂಡ ಐತಿಹಾಸಿಕ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದೆ. ಮೂರು ಬಾರಿಯ ಚಾಂಪಿಯನ್ ಜರ್ಮನಿಗೆ ಈ ಹಿಂದಿನ ತನ್ನ ಸಾಧನೆ ಪುನರಾವರ್ತಿಸುವ ಉತ್ತಮ ಅವಕಾಶ ಹೊಂದಿದೆ. ಅದೇ ರೀತಿ ಅರ್ಜೆಂಟೀನಾ ಕೂಡ ಮೂರನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಳ್ಳಲು ಕಾದು ಕುಳಿತಿದೆ.
ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ 7-1 ಗೋಲುಗಳ ಭಾರಿ ಅಂತರದಲ್ಲಿ ದಾಖಲೆಯ ಗೆಲವು ಕಂಡಿರುವ ಜರ್ಮನಿ ಕೈ ಸ್ವಲ್ಪ ಮೇಲಾಗಿದೆ. ಆದರೆ, ಅರ್ಜೆಂಟೀನಾ ಕೂಡ ಜರ್ಮನಿಗೆ ಸರಿಸಾಟಿ ಎದುರಾಳಿಯಾಗಿದ್ದು, ಗೆದ್ದರೆ ಅಚ್ಚರಿಪಡಬೇಕಾಗಿಲ್ಲ. ಅರ್ಜೆಂಟೀನಾ ತಂಡ ಸೆಮಿಫೈನಲ್ ಪೈಪೋಟಿಯಲ್ಲಿ ಹಾಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್ ಅವಕಾಶದ ಮೂಲಕ 4-2 ಗೋಲುಗಳಿಂದ ಮಣಿಸಿ ಈ ಹಂತ ತಲುಪಿದೆ.
ಲಯೋನೆಲ್ ಮೆಸ್ಸಿ ಮೇಲೆ ಅರ್ಜೆಂಟೀನಾ ಭವಿಷ್ಯ ನಿಂತಿದೆ. ಆದರೆ, ಅರ್ಜೆಂಟೀನಾಕ್ಕೆ ಹೋಲಿಸಿದರೆ, ಜರ್ಮನಿ ತಂಡವೇ ಕೊಂಚ ಮೇಲುಗೈ ಹೊಂದಿದೆ ಎಂದೆನಿಸಲಿದೆ. ಏಕೆಂದರೆ, ಜರ್ಮನಿ ತಂಡದಲ್ಲಿ ಸಾಕಷ್ಟು ಅನುಭವಿಗಳಿದ್ದು, ಕನಿಷ್ಠ ಆರು ಮಂದಿಯ ಮೇಲೆ ನಂಬಿಕೆ ಇಡಬಹುದಾಗಿದೆ.
ಮೆಸ್ಸಿ ಹಾಗೂ ಥಾಮಸ್ ಮುಲ್ಲರ್ ಈ ಪಂದ್ಯದ ಕೇಂದ್ರಬಿಂದುವಾಗಿದ್ದು, ಇವರ ಮೇಲೆ ತಂಡಗಳು ಅತಿಯಾದ ನಿರೀಕ್ಷೆ ಇಟ್ಟುಕೊಂಡಿವೆ. ಜರ್ಮನಿ ಕಳೆದ ನಾಲ್ಕು ಮಹತ್ವದ ಟೂರ್ನಿಗಳಲ್ಲಿ ಫೈನಲ್ ಅಥವಾ ಸೆಮಿಫೈನಲ್‌ಗಳಲ್ಲಿ ಸೋತ ಉದಾಹರಣೆ ಇಲ್ಲ. ಹಾಗಾಗಿ, ಇದು ಆ ತಂಡದ ಆತ್ಮವಿಶ್ವಾಸ ಗರಿಗೆದರಲು ಕಾರಣವಾಗಿದೆ.
ಇತಿಹಾಸದ ಮೆಲುಕು
ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳು ಪರಸ್ಪರ 6 ಬಾರಿ ಎದುರಾಗಿವೆ. ಜರ್ಮನಿ 4ರಲ್ಲಿ ಗೆದ್ದು ತನ್ನ ಪ್ರಭುತ್ವ ಸ್ಥಾಪಿಸಿದ್ದರೆ, ಅರ್ಜೆಂಟೀನಾ 1ರಲ್ಲಿ ಮಾತ್ರ ಗೆಲವಿನ ಖುಷಿ ಖಂಡಿದೆ. 1 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ.
ಪ್ರಮುಖವಾಗಿ 1986 ಮತ್ತು 1990ರಲ್ಲಿ ಕ್ರಮವಾಗಿ ನಡೆದ ಈ ಎರಡೂ ವಿಶ್ವಕಪ್‌ಗಳಲ್ಲಿ ಫೈನಲ್ ತಲುಪಿದ್ದು ಈ ಎರಡು ತಂಡಗಳ ವಿಶೇಷವಾಗಿತ್ತು. 1986ರಲ್ಲಿ ಮೆಕ್ಸಿಕೊದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಡೀಗೊ ಮರಡೋನಾ ನೇತೃತ್ವದ ಅರ್ಜೆಂಟೀನಾ ತಂಡ 3-2 ಗೋಲುಗಳಿಂದ ಆಗಿನ ಪಶ್ಚಿಮ ಜರ್ಮನಿ ತಂಡವನ್ನು ಮಣಿಸಿ ಚಾಂಪಿಯನ್ ಎನಿಸಿತ್ತು. ಆದರೆ, ಮರು ಆವೃತ್ತಿಯ ಪಂದ್ಯಾವಳಿಯಲ್ಲಿ (1990ರಲ್ಲಿ) ಅರ್ಜೆಂಟೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವಂತೆ ಆಡಿದ್ದ ಪಶ್ಚಿಮ ಜರ್ಮನಿ ಆಟಗಾರರು ಏಕೈಕ ಗೋಲಿನಿಂದ ಗೆಲವು ದಾಖಲಿಸಿ ಪ್ರಶಸ್ತಿ ಗೆದ್ದುಕೊಳ್ಳುವಲ್ಲಿ ಮಹತ್ಸಾದನೆ ಮಾಡಿದ್ದರು. ಈಗ 7ನೇ ಮುಖಾಮುಖಿಯಲ್ಲಿ ಅದೃಷ್ಟ ಯಾರಿಗಿದೆಯೋ ?
ವಿಶ್ವಕಪ್ ಸಾಧನೆ
ಜರ್ಮನಿ: 1954, 1974, 1990ರಲ್ಲಿ ಚಾಂಪಿಯನ್ 3
ಅರ್ಜೆಂಟೀನಾ: 1978, 1986ರಲ್ಲಿ ಚಾಂಪಿಯನ್ 2
ಪ್ರಶಸ್ತಿ ನಿರ್ಧರಿಸುವ ಅಂಶಗಳು
ಈಡೀ ವಿಶ್ವದ ಗಮನ ಈಗ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದ ಮೇಲೆ ನೆಟ್ಟಿದೆ. ಈ ಮಹತ್ವದ ಪಂದ್ಯದಲ್ಲಿ ಪರಿಣಾಮ ಬೀರುವ ಪ್ರಮುಖ ಅಂಶಗಳ ಬಗ್ಗೆ ಒಂದು ನೋಟ ಇಲ್ಲಿದೆ.
ಮೆಸ್ಸಿ ಮ್ಯಾಜಿಕ್
= ಅರ್ಜೆಂಟೀನಾದ ಯಶಸ್ಸಿನ ಪ್ರಮುಖ ರೂವಾರಿ ಮೆಸ್ಸಿ.
= ಎದುರಾಳಿಗೆ ಏಕಾಂಗಿಯಾಗಿ ಸವಾಲು ನೀಡುವ ಸಾಮರ್ಥ್ಯ.
= ಮಿಂಚಿದರೆ ಎದುರಾಳಿಗೆ ಆಪತ್ತು.
ಜರ್ಮನಿಯ ತ್ರಿಮೂರ್ತಿಗಳು
= ಜರ್ಮನಿಯ ಮಿಡ್‌ಫೀಲ್ಡರ್‌ಗಳಾದ ಖೆಡಿರಾ, ಶ್ವೈನ್‌ಸ್ಟೈಗರ್, ಕ್ರೂಸ್ ತಂಡದ ತಡೆಗೋಡೆಗಳು.
= ಈ ಮೂವರು ಒಟ್ಟಾಗಿ ನಿಂತರೆ ಮೆಸ್ಸಿಗೆ ಕಡಿವಾಣ.
= ಜರ್ಮನಿಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ.
ಸ್ಥಳೀಯರ ಬೆಂಬಲ
= ಸ್ಥಳೀಯರ ಬೆಂಬಲ ಅರ್ಜೆಂಟೀನಾ ಪರ.
= ಬ್ರೆಜಿಲ್ ತಂಡದ ಸೋಲಿಗೆ ಸೇಡು ತೀರಿಸಿಕೊಳ್ಳಲು ಅಭಿಮಾನಿಗಳ ಕಾತುರ.
= ಇದು ಅರ್ಜೆಂಟೀನಾಗೆ ಅನುಕೂಲ.
ಜೇವಿಯರ್ ಮಾಸ್ಕರನೊ ಸ್ಥಿತಿ
= ಹಾಲೆಂಡ್ ವಿರುದ್ಧದ ಪಂದ್ಯದಲ್ಲಿ ಹೆಡ್ ಮಾಡುವಾಗ ಗಾಯದ ಸಮಸ್ಯೆ.
= ಫಿಟ್ ಆದರೆ, ಅರ್ಜೆಂಟೀನಾ ಮಿಡ್‌ಫೀಲ್ಡ್ ವಿಭಾಗಕ್ಕೆ ಹೆಚ್ಚಿನ ಬಲ.
= ಮೆಸ್ಸಿ ತಂಡದ ಹೋರಾಟಕ್ಕೆ ಪ್ರಮುಖ ಅಸ್ತ್ರ.
ಜರ್ಮನಿಯ ಆರಂಭಿಕ ಗೋಲು
= ಈ ಟೂರ್ನಿಯಲ್ಲಿ ಆರಂಭಿಕ ಗೋಲು ಗಳಿಸಿದ ಪಂದ್ಯದಲ್ಲಿ ಜರ್ಮನಿ ಗೆಲವು.
= ಇದು ಅರ್ಜೆಂಟೀನಾ ಮೇಲೆ ಒತ್ತಡ ಹೇರಲಿದೆ.
= ತಂಡದ ಪ್ರಮುಖ ತಂತ್ರಗಳಲ್ಲಿ ಪ್ರಮುಖವಾದದ್ದು.
ವಿಶ್ರಾಂತಿ ಸಮಯ
= ಅರ್ಜೆಂಟೀನಾಗಿಂತ ಜರ್ಮನಿ ಪಂದ್ಯಕ್ಕೂ ಮುನ್ನ ಹೆಚ್ಚು ವಿಶ್ರಾಂತಿ ಪಡೆದಿದೆ.
= ಜರ್ಮನಿಗೆ ಫೈನಲ್‌ಗೂ ಮುನ್ನ 5 ದಿನ ವಿಶ್ರಾಂತಿ.
= ಅಭ್ಯಾಸಕ್ಕೆ ಹಾಗೂ ಕಾರ್ಯ ತಂತ್ರ ರೂಪಿಸಲು ಹೆಚ್ಚಿನ ಅವಕಾಶ.
ಫೈನಲ್‌ಗೆ ನಿಕೋಲಾ ರೆಫರಿ
ಇಟಲಿಯ ನಿಕೋಲಾ ರಿಜಾಲಿ 2014ರ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯೂರೋಪ್ ಮತ್ತು ದಕ್ಷಿಣ ಅಮೆರಿಕ ತಂಡಗಳ ನಡುವಿನ ಈ ಕಾದಾಟಕ್ಕೆ ಏಷ್ಯನ್ ರೆಫರಿಯನ್ನು ಫಿಫಾ ಆಯ್ಕೆ ಮಾಡಬಹುದೆಂಬ ಲೆಕ್ಕಾಚಾರವಿತ್ತು. ಆದರೆ, ಇಟಲಿಯ ನಿಕೋಲಾರಿಗೆ ಈ ಜವಾಬ್ದಾರಿ ನೀಡಿದೆ. ವಿಶ್ವಕಪ್ ಫುಟ್ಬಾಲ್ ಫೈನಲ್‌ನಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಿಕೋಲಾ, ಇಟಲಿಯ ಎರಡನೇಯವರಾಗಿದ್ದಾರೆ. ಈ ಮುನ್ನ ಜಪಾನಿನ ಯೋಕೋಹವುದಲ್ಲಿ ನಡೆದ 2002ರ ಫೈನಲ್ ಪಂದ್ಯದಲ್ಲಿ ಇಟಲಿಯ ಪಿಯರ್ಲುಗಿ ಕೋಲಿನಾಗೆ ಈ ಅವಕಾಶ ಸಿಕ್ಕಿತ್ತು. ಆಗ ಬ್ರೆಜಿಲ್ ತಂಡ 2-0 ಗೋಲುಗಳಿಂದ ಜರ್ಮನಿಯನ್ನು ಮಣಿಸಿ ವಿಶ್ವಕಪ್ ಪಟ್ಟ ಅಲಂಕರಿಸಿತ್ತು.
ಇಂದು ಫೈನಲ್ ಕದನ
ಜರ್ಮನಿ-ಅರ್ಜೆಂಟೀನಾ
ಸ್ಥಳ : ಎಸ್ಟಾಡಿಯೊ ಮಾರಕಾನ
ಸಮಯ : ಭಾನುವಾರ, ಮಧ್ಯರಾತ್ರಿ 12.30
ನೇರ ಪ್ರಸಾರ : ಸೋನಿ-ಸಿಕ್ಸ್
Advertisement