
ಜಾಗತಿಕ ಫುಟ್ಬಾಲ್ ಮೇಳಕ್ಕೆ ಭವ್ಯ ತೆರೆ ಬಿದ್ದಿದೆ. ಬ್ರೆಜಿಲ್‌ನ ರಿಯೋ ಡಿ ಜನೈರೋದ ಮಾರಕಾನ ಕ್ರೀಡಾಂಗಣದಲ್ಲಿ ಭಾನುವಾರ 2014ರ ವಿಶ್ವಕಪ್ ಫುಟ್ಬಾಲ್ ಉತ್ಸವಕ್ಕೆ ವರ್ಣಮಯ ಸಮಾರಂಭದ ಮೂಲಕ ತೆರೆ ಎಳೆಯಲಾಯಿತು. ಕೊಲಂಬಿಯಾದ ಖ್ಯಾತ ಪಾಪ್ ಗಾಯಕಿ ಶಕೀರಾ, ಬ್ರೆಜಿಲ್‌ನ ಗಾಯಕರಾದ ಐವೆಟೆ ಸ್ಯಾಂಗಾಲೊ, ಕರ್ಲಿನ್‌ಹೋಸ್ ಬ್ರೌನ್ ಮೆಕ್ಸಿಕೊದ ಗಿಟಾರು ವಾದಕ ಸಾಂಟಾನ, ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯವಾಗಿ ಶಕೀರಾ ಅವರು ವಿಶ್ವಕಪ್‌ನ ಲಾ...ಲಾ...ಲಾ... ಗೀತೆ ಹಾಡುವ ಮೂಲಕ ಕ್ರೀಡಾಂಗಣದಲ್ಲಿ ತುಂಬಿ ತುಳುಕುತ್ತಿದ್ದ ಅಭಿಮಾನಿಗಳನ್ನು ಸಂಗೀತ ಸಾಗರದಲ್ಲಿ ತೇಲಿಸಿದರು. ಶಕೀರಾರ ಕಂಠದಿಂದ ಹರಿದುಬಂದ ಗಾನ ಸುಧೆ ವಿಶ್ವಕಪ್ ಫುಟ್ಬಾಲ್ ಉತ್ಸವದ ಮುಕ್ತಾಯಕ್ಕೆ ಕಳೆ ತಂದಿತು. ಉಳಿದಂತೆ, ಬ್ರೆಜಿಲ್‌ನ ಸಾಂಪ್ರದಾಯಿಕ ನೃತ್ಯ 'ಸಾಂಬಾ ಡ್ಯಾನ್ಸ್' ಹಾಗೂ ಅಲ್ಲಿನ ಪರಂಪರೆ ಬಿಂಬಿಸುವ ಕಾರ್ಯಕ್ರಮಗಳು ಅನಾವರಣಗೊಂಡವು. ಅಸಂಖ್ಯಾತ ಕಲಾವಿದರು ವಿವಿಧ ಬಗೆಯ ಕಲಾ ಪ್ರದರ್ಶನ ನೀಡುವ ಮೂಲಕ ಹೊಸ ಮೆರಗು ತಂದರು.
Advertisement