
ಹಾಲೆಂಡ್‌ಗೆ 3ನೇ ಸ್ಥಾನ
ಬ್ರೆಸಿಲಿಯಾ: ಪ್ರತಿಷ್ಠತ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿದ್ದ ಬ್ರೆಜಿಲ್ ತಂಡ ಪಂದ್ಯಾವಳಿಯಲ್ಲಿ ಮತ್ತೊಂದು ಆಘಾತ ಕಂಡಿದೆ. ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ ಸೋತ ನಂತರ 3ನೇ ಸ್ಥಾನಕ್ಕಾಗಿ ಹಾಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅದು 3-0 ಗೋಲುಗಳಿಂದ ಸೋಲನುಭವಿಸಿತು.
ಸೆಮೀಸ್‌ನಲ್ಲಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ದುಃಖದ ಮಡುವಿನಲ್ಲಿ ಮುಳುಗಿದ್ದ ಬ್ರೆಜಿಲ್ ಅಭಿಮಾನಿಗಳು, 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲೂ ಸೋತಾಗ ಗ್ಯಾಲರಿಯಿಂದ ತಂಡದ ಆಟಗಾರರ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಛೇಡಿಸಿದರು.
ಸೆಮಿಫೈನಲ್ ಪಂದ್ಯದಲ್ಲಿ ಜರ್ಮನಿ ವಿರುದ್ಧ 7-1 ಗೋಲುಗಳ ಅಂತರದಿಂದ ಸೋಲನುಭವಿಸಿದ್ದ ಬ್ರೆಜಿಲ್ ವಿಶ್ವಕಪ್ ಫೈನಲ್ ಪ್ರವೇಶಿಸುವುದರಿಂದ ವಂಚಿತವಾಗಿತ್ತು.ಪಂದ್ಯದ 3ನೇ ನಿಮಿಷದಲ್ಲಿ ಹಾಲೆಂಡ್ ನಾಯಕ ರಾಬಿನ್ ವ್ಯಾನ್ ಪರ್ಸಿ, ಡೇಲಿ ಬ್ಲೈಂಡ್ ಪಂದ್ಯದ 17ನೇ ನಿಮಿಷದಲ್ಲಿ ಹಾಗೂ ಜಾರ್ಜಿನಿಯೋ ವಿಜ್ನಾಲ್ಡಮ್ 91ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನೊಂದಿಗೆ ಜರ್ಮನಿ ತಂಡ ಆತಿಥೇಯರ ಮೇಲೆ ಸಂಪೂರ್ಣವಾಗಿ ಪಾರಮ್ಯ ಮೆರೆಯಿತು. ಈ ಸೋಲಿನಿಂದ, ಮೊದಲೇ ಕೊರಗಿನಲ್ಲಿ ಕ್ರೀಡಾಂಗಣಕ್ಕೆ ಬಂದಿದ್ದ ಬ್ರೆಜಿಲ್ ಅಭಿಮಾನಿಗಳು ಮತ್ತಷ್ಟು ನಿರುತ್ಸಾಹದೊಂದಿಗೆ ಮನೆಗೆ ಮರಳುವಂತಾಯಿತು. ಪಂದ್ಯ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ವ್ಯಾನ್ ಪರ್ಸಿ ಗೋಲು ದಾಖಲಿಸುವುದರೊಂದಿಗೆ ಹಾಲೆಂಡ್ ತಂಡ ಬ್ರೆಜಿಲ್ ಮೇಲೆ ನಿಯಂತ್ರಣ ಸಾಧಿಸುತ್ತಲೇ ಸಾಗಿತು.
ಆತಿಥೇಯ ತಂಡದ ನಾಯಕ ಥಿಯಾಗೋ ಸಿಲ್ವಾ ಅವರು ಬೀಳಿಸಿದ್ದರಿಂದ ಹಾಲೆಂಡ್ ತಂಡದ ಆಟಗಾರ ಅರ್ಜೆನ್ ರಾಬೆನ್ ತಮ್ಮ ತಂಡಕ್ಕೆ ಪೆನಾಲ್ಟಿ ಅವಕಾಶವನ್ನು ದೊರಕಿಸಿಕೊಟ್ಟರು. ತುಂಬಾ ಸಂಯಮದ ಆಟ ಪ್ರದರ್ಶಿಸಿದ ಮೆಂಚೆಸ್ಟರ್ ಯುನೈಟೆಡ್ ತಂಡದ ಆಟಗಾರ ಬ್ರೆಜಿಲ್ ಗೋಲ್ ಕೀಪರ್ ಜುಲಿಯೋ ಸಿಸರ್ ಅವರ ಕಣ್ತಪ್ಪಿಸುವ ಮೂಲಕ ಗೋಲು ದಾಖಲಿಸಿದರು. ಇದರೊಂದಿಗೆ ಪಂದ್ಯಾವಳಿಯಲ್ಲಿ ಒಟ್ಟು ಆರು ಪಂದ್ಯಗಳನ್ನಾಡಿದ ವ್ಯಾನ್ ಪರ್ಸಿ ನಾಲ್ಕು ಗೋಲು ದಾಖಲಿಸಿದರು.
ಬ್ರೆಜಿಲ್ ರಕ್ಷಣಾ ವಿಭಾಗದ ಆಟಗಾರರ ವಿವೇಕವಿಲ್ಲದ ಪ್ರದರ್ಶನದೊಂದಿಗೆ, ಹಾಲೆಂಡ್ ಮತ್ತೊಂದು ಗೋಲು ದಾಖಲಿಸಿತು. ಈ ಗೋಲು ದಾಖಲಿಸಿದ ಹಾಲೆಂಡ್ ತಂಡದ ಡೇಲಿ ಬ್ಲೈಂಡ್ ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಗೋಲು ದಾಖಲಿಸುವ ಮೂಲಕ ಹಾಲೆಂಡ್ 2-0 ಅಂತರದಿಂದ ಮುನ್ನಡೆ ಕಂಡುಕೊಳ್ಳುವಂತೆ ನೋಡಿಕೊಂಡರು.ನಂತ ಹೆಚ್ಚುವರಿ ಸಮಯದಲ್ಲಿ ಜಾರ್ಜಿನಿಯೋ ವಿಜ್ನಾಲ್ಡಮ್ ಹಾಲೆಂಡ್ ಪರ ಎರಡನೇ ಗೋಲು ದಾಖಲಿಸಿದ್ದು, ಆತಿಥೇಯ ತಂಡದ ವಿಶ್ವಾಸ ಮತ್ತಷ್ಟು ಕುಂದುವಂತೆ ಮಾಡಿತು. ಬ್ರೆಜಿಲ್ ಪರ ಅಂಗಣದಲ್ಲಿ ಆಸ್ಕರ್ ಅದ್ಭುತ ಪ್ರದರ್ಶನ ತೋರಿದರು. ಆದರೆ, ಅವರನ್ನು ಕಟ್ಟಿಹಾಕುವಲ್ಲಿ ಹಾಲೆಂಡ್‌ನ ಜಾಸ್ಪರ್ ಸಿಲ್ಲೆಸ್ಸೆನ್ ಅವರು ಅಷ್ಟೇ ಜಾಣ್ಮೆಯನ್ನು ಪ್ರದರ್ಶಿಸಿದರು.
14 ಗೋಲು ಬಿಟ್ಟುಕೊಟ್ಟ ಬ್ರೆಜಿಲ್: ವಿಶ್ವಕಪ್‌ನಲ್ಲಿ ಇದುವರೆಗೂ 5 ಬಾರಿ ಪ್ರಶಸ್ತಿ ಮುಡಿಗೇರಿಸಕೊಂಡು ದಾಖಲೆ ಬರೆದಿರುವ ಬ್ರೆಜಿಲ್ ಈ ಬಾರಿ ಪಂದ್ಯಾವಳಿಯಲ್ಲಿ ಒಟ್ಟು 14 ಗೋಲು ಬಿಟ್ಟುಕೊಟ್ಟಿತು.
ಪಂದ್ಯದ 16ನೇ ನಿಮಿಷದಲ್ಲಿ ಬ್ರೆಜಿಲ್ ತಂಡದ ಜೋ ಮತ್ತು ರಾಮೈರ್ಸ್ ಅವರಿಗೆ ಗೋಲು ದಾಖಲಿಸುವ ಅವಕಾಶ ದೊರಕಿತ್ತು. ಆದರೆ, ಗೋಲುಪೆಟ್ಟಿಗೆಯ ಎಡಬದಿಯಿಂದ ಗೋಲು ದಾಖಲಿಸುವಲ್ಲಿ ಅವರು ಸಂಪೂರ್ಣವಾಗಿ ವೈಫಲ್ಯ ಕಂಡರು.
ಮೊದಲಾರ್ಧ ಪಂದ್ಯದಲ್ಲಿ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿದ ಬ್ರೆಜಿಲ್ ಗೋಲು ದಾಖಲಿಸುವ ಹಲವಾರು ಅವಕಾಶಗಳನ್ನು ದೊರಕಿಸಿಕೊಂಡಿತ್ತು. ಆದರೆ, ಆಟಗಾರರ ಹೊಡೆತಗಳು ತುಂಬಾ ದುರ್ಬಲವಾಗಿದ್ದರಿಂದ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಗೋಲು ವಿವರ
ಹಾಲೆಂಡ್ 3
= ರಾಬಿನ್ ವ್ಯಾನ್ ಪರ್ಸಿ 3ನೇ ನಿಮಿಷ
= ಡೇಲಿ ಬ್ಲೈಂಡ್ 17ನೇ ನಿಮಿಷ
= ಜಾರ್ಜಿನಿಯೋ ವಿಜ್ನಾಲ್ಡಮ್91ನೇ ನಿಮಿಷ
ಬ್ರೆಜಿಲ್ 0
Advertisement