ಪ್ರೊಟೆಸ್ಟ್ ಮ್ಯಾಚ್

ಪ್ರೊಟೆಸ್ಟ್ ಮ್ಯಾಚ್
Updated on: 

ನಾಲ್ಕು ವರ್ಷಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟ ಎಷ್ಟರಮಟ್ಟಿಗೆ ಯಶಸ್ವಿಯಾಯಿತು ಎಂಬುದಕ್ಕೆ, ಕ್ರೀಡಾ ಆಯೋಜಕರು ಸಾಲುಗಟ್ಟಿ ಜೈಲಿಗೆ ಹೋಗಿದ್ದೇ ನಿದರ್ಶನ. ಮೊನ್ನೆಯ ಐಪಿಎಲ್ ಬೆಟ್ಟಿಂಗ್ ಎಂಬ ಪೆಡಂಭೂತಕ್ಕೆ ಬಲಿಯಾದವರೆಷ್ಟು? ಪ್ರಾಣ ಕಳೆದುಕೊಂಡವರೆಷ್ಟು? ಸಾಲ ಮಾಡಿ ಅಪ್ಪ, ಅಮ್ಮನಿಗೂ ತಿಳಿಸದೇ ಊರುಬಿಟ್ಟವರೆಷ್ಟು? ಇವೆಲ್ಲ ಲೆಕ್ಕ ಬದಿಗಿಟ್ಟು ನಾವು ಮತ್ತೆ ಮತ್ತೆ ಕ್ರೀಡಾಭಿಮಾನ ಮೆರೆಯುತ್ತೇವೆ. ಕ್ರಿಕೆಟ್‌ನಲ್ಲಿ ಮುಳುಗಿ ಏಳುತ್ತೇವೆ. ಅದೆಷ್ಟೇ ಹಗರಣಗಳು ನಡೆಯಲಿ, ಸಾರ್ವಜನಿಕರ ದುಡ್ಡು ಅದೆಷ್ಟೇ ಖರ್ಚಾಗಲಿ, ಮತ್ತೊಂದು ದೊಡ್ಡ ಕ್ರೀಡಾಕೂಟದ ಆತಿಥ್ಯ ಸಿಕ್ಕರೆ ನಾವು ಮತ್ತೆ ಕುಣಿದು ಕುಪ್ಪಳಿಸುತ್ತೇವೆ. ಕಾನೂನಿಗೆ ವಿರುದ್ಧವಾದ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಮ್ಮಲ್ಲಿ ತಾಂಡವವಾಡುತ್ತವೆ. ಆದರೆ, ಈಗ ಫುಟ್ಬಾಲ್ ವಿಶ್ವಕಪ್‌ನ ಆತಿಥ್ಯ ವಹಿಸಿಕೊಂಡಿರುವ ಬ್ರೆಜಿಲ್ ಸರ್ಕಾರದ ವಿರುದ್ಧ ಅಲ್ಲಿನವರು ತಿರುಗಿಬಿದ್ದಿರುವುದನ್ನು ನೋಡಿದರೆ, ಅದರಿಂದ ನಾವು ಕಲಿಯಬೇಕಾದ ಪಾಠಗಳು ಸಾಕಷ್ಟಿವೆ ಅಂತನ್ನಿಸುತ್ತದೆ.
ಫುಟ್ಬಾಲ್ ವಿಶ್ವಕಪ್‌ನಿಂದಾಗಿ ಇಡೀ ಬ್ರೆಜಿಲ್ ಮಹಾ ಸಂಭ್ರಮದಲ್ಲಿ ಮುಳುಗಬೇಕಿತ್ತು. ಆದರೆ, ಅಲ್ಲಿನ ಪ್ರಮುಖ ನಗರಗಳಾದ ರಿಯೋ ಡಿ ಜನೈರೋ, ಸಾವೋ ಪೊಲೊ ಸೇರಿದಂತೆ ದೇಶಾದ್ಯಂತ ತಮ್ಮದೇ ದೇಶದ ಪ್ರಜೆಗಳಿಂದ ವಿರೋಧ ಮತ್ತು ಪ್ರತಿಭಟನೆಯ ಜ್ವಾಲೆಗಳು ಮುಗಿಲುಮುಟ್ಟಿವೆ. ಕ್ರೀಡಾಕೂಟ ಯಶಸ್ವಿಯಾಗುವುದೇ ಎಂಬ ಚಿಂತೆಯಲ್ಲಿ ಬ್ರೆಜಿಲ್ ಸರ್ಕಾರವಿದೆ. ಆಟಗಾರರೂ ಗೊಂದಲಕ್ಕೆ ಸಿಲುಕಿದ್ದಾರೆ.
ಕಳೆದೊಂದು ವರ್ಷದಿಂದ ದೇಶಾದ್ಯಂತ ನಡೆಯುತ್ತಿದ್ದ ಪ್ರತಿಭಟನೆಗಳು ಕ್ರೀಡಾಕೂಟ ಸಮೀಪಿಸುತ್ತಿದ್ದಂತೆ ಮತ್ತಷ್ಟು ಕಾವು ಪಡೆದಿವೆ. ಬ್ರೆಜಿಲ್‌ನಲ್ಲಿ ಪ್ರತಿಭಟನೆಯಿಂದ ಅಪರಾಧ, ಹತ್ಯೆ, ಬಡಿದಾಟಗಳು ಹೆಚ್ಚಾಗುತ್ತಿವೆ. ಇತ್ತೀಚೆಗಷ್ಟೇ ಬ್ರೆಜಿಲ್‌ನಲ್ಲಿ ವಿಶ್ವಕಪ್ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು. ಆದರೆ, ಅಲ್ಲಿಯೂ ಕೇವಲ ಶೇ. 48ರಷ್ಟು ಜನರು ಮಾತ್ರ ಕ್ರೀಡಾಕೂಟ ಬೇಕು ಎಂಬ ಧ್ವನಿ ಎತ್ತಿದರು. 2008ರಲ್ಲಿ ಶೇ. 78ರಷ್ಟು ಜನ ಕ್ರೀಡಾಕೂಟ ಬೇಕು ಎಂದಿದ್ದರು. ಈಗ ಅದರಲ್ಲೇ ಶೇ. 30ರಷ್ಟು ಜನರು ಬೇಡವೆನ್ನುತ್ತಿದ್ದಾರೆ.
ಈ ಎಲ್ಲ ಪ್ರತಿಭಟನಾಕಾರರದೂ ಒಂದೇ ವಾದ, ಫುಟ್ಬಾಲ್ ವಿಶ್ವಕಪ್‌ಗೆ ಬಳಸುತ್ತಿರುವ ಹಣ ದೇಶಕ್ಕೆ ದೊಡ್ಡ ಆರ್ಥಿಕ ಹಿನ್ನಡೆಯನ್ನು ತಂದೊಡ್ಡಲಿದೆ ಎಂಬುದು!
ಇದೆಲ್ಲದರ ನಡುವೆಯೇ ಕ್ರೀಡಾಂಗಣಗಳನ್ನು ನಿರ್ಮಿಸುತ್ತಿರುವಾಗ ಉಂಟಾದ ಅವಘಡಗಳಿಂದ ಮೂವರು ಕಾರ್ಮಿಕರು ಮೃತಪಟ್ಟಿದ್ದು ಮತ್ತು ನಿಗದಿತ ಸಮಯದಲ್ಲಿ ಕ್ರೀಡಾಂಗಣಗಳ ನಿರ್ಮಾಣ ಸಾಧ್ಯವಾಗದಿರುವುದು ಆಯೋಜಕರಲ್ಲಿ ಮುಜುಗರ ಸೃಷ್ಟಿಸಿದೆ.
ವಿಶ್ವ ಫುಟ್ಬಾಲ್ ಫೆಡರೇಷನ್‌ಗೂ ಬ್ರೆಜಿಲ್‌ನಲ್ಲಿ ಉಂಟಾಗಿರುವ ಸಮಸ್ಯೆ ನುಂಗಲಾರದ ತುತ್ತಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ರೀಡಾಂಗಣಗಳಿಗೆ ಭದ್ರತೆಯನ್ನು ಒದಗಿಸಲು ಆಗತ್ಯಬಿದ್ದರೆ, ಹೊರಗಿನಿಂದ ಭದ್ರತಾ ಪಡೆ ತರಿಸಿಕೊಳ್ಳಲೂ ಬ್ರೆಜಿಲ್ ಚಿಂತನೆ ನಡೆಸಿದೆ. ಆದರೆ, ಒಂದು ಬಾರಿ ಪಂದ್ಯಾವಳಿ ಆರಂಭವಾದರೆ ಪ್ರತಿಭಟನೆಗಳು ತನ್ನಿಂದ ತಾನೇ ತಣ್ಣಗಾಗುತ್ತವೆ ಎಂಬುದು ಫುಟ್ಬಾಲ್ ವೃತ್ತಿಪರ ವಿಶ್ಲೇಷಕರ ಅಭಿಪ್ರಾಯ. ಆದರೆ, ಬ್ರೆಜಿಲ್‌ನಲ್ಲಿ ಹೊತ್ತಿ ಉರಿಯುತ್ತಿರುವ ಪ್ರತಿಭಟನೆಗಳನ್ನು ನೋಡಿ ಕ್ರಮವಾಗಿ 2018 ಮತ್ತು 2022ರ ವಿಶ್ವಕಪ್ ಆತಿಥ್ಯ ವಹಿಸಿಕೊಡಿರುವ ರಷ್ಯಾ ಮತ್ತು ಕತಾರ್ ಫುಟ್ಬಾಲ್ ಆಯೋಜಕರು ಈಗಲೇ ಮುಖದ ಮೇಲಿನ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಿದ್ದಾರಂತೆ.
ಕ್ರೀಡೆ ಎಲ್ಲ ರಾಷ್ಟ್ರಗಳಿಗೂ ಬೇಕು. ದೇಶದ ಮಹತ್ವದ ಕ್ಷೇತ್ರಗಳಲ್ಲಿ ಕ್ರೀಡೆಯೂ ಒಂದು. ಆದರೆ, ಅದು ದುಬಾರಿಯಾಗಬಾರದು. ಆರೋಗ್ಯಕರವಾಗಿರಬೇಕು ಎಂಬುದು ಬ್ರೆಜಿಲ್ ಅಭಿಮಾನಿಗಳ ವಾದ ತಪ್ಪಲ್ಲ. ಬ್ರೆಜಿಲ್‌ನೊಂದಿಗೆ ನಮ್ಮ ಆರ್ಥಿಕತೆಯನ್ನು ಹೋಲಿಸಿಕೊಂಡರೆ ನಾವು ಅವರಿಗಿಂತ ತುಂಬಾ ಹಿಂದಿದ್ದೇವೆ. ನಮಗಿಂತ ಮುಂದುವರಿದರುವ ರಾಷ್ಟ್ರವೊಂದು ತನ್ನ ಮೂಲಭೂತ ಸೌಕರ್ಯಗಳನ್ನು ಮೊದಲು ಒದಗಿಸಿಕೊಡುವಂತೆ ಬೇಡಿಕೆ ಇಟ್ಟು ಹೋರಾಟಕ್ಕೆ ಬೀದಿಗಿಳಿದಿದೆ. ಆದರೆ, ನಮ್ಮ ದೇಶದಲ್ಲಿ ಕ್ರೀಡೆಯ ಹೆಸರಿನಲ್ಲಿ ಹಲವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಹೀಗಿದ್ದಾಗ ನಾವು ಬ್ರೆಜಿಲ್ ಪ್ರಜೆಗಳನ್ನು ನೋಡಿ ಕಲಿಯಬೇಕಿರುವುದು ಸಾಕಷ್ಟಿದೆ ಎನಿಸವುದಿಲ್ಲವೇ?

ಪ್ರತಿಭಟನೆ ಯಾಕೆ?
ಬ್ರೆಜಿಲ್ ಇದುವರೆಗೂ ಐದು ಸಲ ವಿಶ್ವಕಪ್ ಫುಟ್ಬಾಲ್ ಗೆದ್ದು ಬೀಗಿದೆ. ಅಲ್ಲಿ ಫುಟ್ಬಾಲ್ ದ್ವೇಷಿಸುವವರಿಗಿಂತ ಪ್ರೀತಿಸುವವರು ಹೆಚ್ಚಾಗಿದ್ದಾರೆ. ಆದಾಗ್ಯೂ, ವಿಶ್ವಕಪ್ ವಿರುದ್ಧ ಪ್ರತಿಭಟನೆ ಕೂಗೂ ಬಾನಿಗೆ ತಲುಪಿದೆ. ವಿಶ್ವ ಫುಟ್ಬಾಲ್ ಫೆಡರೇಷನ್ ದರ್ಜೆಯಲ್ಲಿ ಸ್ಟೇಡಿಯಂಗಳನ್ನು ನಿರ್ಮಿಸುವುದು ಸಾಮಾನ್ಯವೇನಲ್ಲ. ಅಷ್ಟೊಂದು ಪ್ರಮಾಣದ ಹಣವನ್ನು ನಾವು ದೇಶ ಅನುಭವಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಖರ್ಚು ಮಾಡಬಹುದು ಎನ್ನುವುದು ಪ್ರತಿಭಟನಾಕಾರರ ಲೆಕ್ಕಾಚಾರ. ಉತ್ತಮ ಸಾರಿಗೆ ವ್ಯವಸ್ಥೆ, ಗುಣಮಟ್ಟದ ಶಿಕ್ಷಣ, ಅತ್ಯಾಧುನಿಕ ವೈದ್ಯಕೀಯ ಹಾಗೂ ಸೂಕ್ತ ಭದ್ರತೆಯನ್ನು ಜನತೆಗೆ ಸರ್ಕಾರ ಜನತೆಗೆ ಒದಗಿಸಲಿ. ನಮಗೆ ವಿಶ್ವಕಪ್ ಬೇಡವೇ ಬೇಡ ಎಂಬ ಗಟ್ಟಿ ಕೂಗು ಬ್ರೆಜಿಲ್ ಮಂದಿಯದ್ದು.
ಬ್ರೆಜಿಲ್ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದು ಹೇಳುತ್ತಿದ್ದಾರೆ. ಆದರೆ, ಇಲ್ಲಿ ಯಾವ ಬೆಳವಣಿಗೆಗಳು ಕಾಣುತ್ತಿಲ್ಲ. ಬ್ರೆಜಿಲ್ ಶಿಕ್ಷಣದಲ್ಲಿ ವಿಶ್ವದ 88ನೇ ಸ್ಥಾನದಲ್ಲಿದೆ. ಆದರೆ, ಫುಟ್ಬಾಲ್ ವಿಶ್ವಕಪ್‌ಗೆ ವ್ಯಯವಾಗುತ್ತಿರುವ ಒಟ್ಟು ಹಣದಲ್ಲಿ ಶೇ.70ರಷ್ಟು (900 ಅಮೆರಿಕನ್ ಮಿಲಿಯನ್ ಡಾಲರ್) ಸಾರ್ವಜನಿಕ ಸೇವೆಯ ಹಣವಾಗಿದೆ.

- ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com