ಅಮೆರಿಕಕ್ಕೆ ಘಾನಾ ಶರಣು

ಪಂದ್ಯದ 90 ನಿಮಿಷಗಳ ಆಟದಲ್ಲಿ ಘಾನಾ ಆಟಗಾರರೇ ಚೆಂಡಿನ ಮೇಲೆ...
ಅಮೆರಿಕಕ್ಕೆ ಘಾನಾ ಶರಣು
Updated on: 

ನಟಾಲ್: ಪಂದ್ಯದ 90 ನಿಮಿಷಗಳ ಆಟದಲ್ಲಿ ಘಾನಾ ಆಟಗಾರರೇ ಚೆಂಡಿನ ಮೇಲೆ ಬಹುತೇಕ ನಿಯಂತ್ರಣ ಹೊಂದಿದ್ದರೂ ಅದೃಷ್ಟ ಮಾತ್ರ ಅವರ ಬೆನ್ನಿಗಿರಲಿಲ್ಲ. ಬದಲಾಗಿ, ಎದುರಾಳಿ ಅಮೆರಿಕನ್ನರು ಅಚ್ಚರಿ ಎನ್ನುವಂತೆ ಘಾನಾ ಕೋಟೆಯೊಳಗೆ ನುಗ್ಗಿ ಸಫಲತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಟಾಡಿಯೊ ಡಾಸ್ ಡುನಾಸ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಗ್ಗೆ ನಡೆದ 'ಜಿ' ಗುಂಪಿನ ಪಂದ್ಯದಲ್ಲಿ ಅಮೆರಿಕ ತಂಡ 2-1 ಗೋಲುಗಳಿಂದ ಘಾನಾ ತಂಡದ ವಿರುದ್ಧ ಜಯಭೇರಿ ಬಾರಿಸಿತು.
ಕಳೆದ ಎರಡು ವಿಶ್ವಕಪ್‌ಗಳಲ್ಲಿ ಅಮೆರಿಕರನ್ನು ಬಗ್ಗುಬಡಿಯುವ ಮೂಲಕ ಅವರನ್ನು ಸ್ಪರ್ಧಾ ಅಖಾಡದಿಂದ ಹೊರದಬ್ಬಿದ್ದ ಘಾನಾ ಆಟಗಾರರು ಇಲ್ಲಿ ಮಾತ್ರ ಅದಕ್ಕೆ ಭಾರಿ ಬೆಲೆ ತೆರಬೇಕಾಯಿತು. ಅಮೆರಿಕನ್ನರ ಗೆಲವು ಆ ದೇಶದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಪಂದ್ಯದಾರಂಭದ ಮೊದಲ ನಿಮಿಷದಲ್ಲಿಯೇ ಅಮೆರಿಕಕ್ಕೆ ಗೋಲು ಲಭಿಸಿತು. ಸಹ ಆಟಗಾರರು ನೀಡಿದ ಅದ್ದೂರಿ ಪಾಸ್‌ನಲ್ಲಿ ಕ್ಲೈಂಟ್ ಡಿಂಪ್ಸೆ ಸೊಗಸಾದ ಗೋಲು ಬಾರಿಸಿ ಅಮೆರಿಕ ತಂಡಕ್ಕೆ 1-0 ಗೋಲಿನಿಂದ ಮುನ್ನಡೆ ತಂದುಕೊಟ್ಟರು. ಆದರೆ ಈ ಮಹತ್ವದ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ಅಮೆರಿಕನ್ನರು ವಿಫಲರಾದರು ಪಂದ್ಯದ 82ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಅಸಾಮೋಹ್ ಗ್ಯಾನ್‌ರಿಂದ ಚೆಂಡನ್ನು ಪಡೆದ ಆ್ಯಂಡ್ರ್ಯೂ ಅಯೀವ್ ಚೆಂಡನ್ನು ಗೋಲಿನ ಬಲೆಯೊಳಕ್ಕೆ ಬಾರಿಸುವಲ್ಲಿ ಯಶಸ್ವಿಯಾಗಿ ಘಾನಾ ತಂಡಕ್ಕೆ 1-1ರಿಂದ ಸಮಗೌರವ ತಂದುಕೊಟ್ಟರು.
ಇನ್ನೇನು ಪಂದ್ಯ ಡ್ರಾದಲ್ಲಿ ಅಂತ್ಯಗೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿರುವಾಗಲೇ ಅಮೆರಿಕನ್ನರಿಗೆ ಮತ್ತೊಂದು ಗೋಲು ಬಾರಿಸುವ ಅದೃಷ್ಟ ಲಭಿಸಿತು. ಆಟ ಮುಗಿಯಲು ಕೇವಲ ನಾಲ್ಕು ನಿಮಿಷಗಳಿದ್ದಾಗ ಗ್ರಹಾಂ ಜೂಸೀ ಅವರು 8 ಗಜ ದೂರದಿಂದ ಕಾರ್ನರ್ ಕಿಕ್ ಬಾರಿಸಿದರು. ಆಗ ಎದುರಾಳಿ ಕೋಟೆಯೊಳಗೆ ನುಗ್ಗಿಬಂದ 20ರ ಜಾನ್ ಬ್ರೂಸ್ ಹೆಡ್ ಮಾಡುವ ಮೂಲಕ ಚೆಂಡನ್ನು ಘಾನಾ ಗೋಲ್‌ಕೀಪರ್‌ನನ್ನು ವಂಚಿಸಿ ಗುರಿ ಸೇರಿಸಿಯೇ ಬಿಟ್ಟರು. ಅಮೆರಿಕದ ಪರ 84 ವರ್ಷಗಳ ಇತಿಹಾಸದಲ್ಲಿ 30 ವಿಶ್ವಕಪ್ ಪಂದ್ಯಗಳ ನಂತರ ಬದಲಿ ಆಟಗಾರನೊಬ್ಬ ಗೋಲು ಗಳಿಸಿದ ಸಾಧನೆ ಬ್ರೂಸ್ ಅವರದ್ದಾಯಿತು.
ೆಅವರ ಅಭೂತಪೂರ್ವ ಗೋಲಿನ ನೆರವಿನಿಂದ 2-1 ಗೋಲುಗಳಿಂದ ಮುನ್ನಡೆ ಸಾಧಿಸಿದ ಅಮೆರಿಕನ್ನರು ಉಳಿದ ಕೆಲವೇ ನಿಮಿಷಗಳ ಆಟದಲ್ಲಿ ಎಚ್ಚರಿಕೆಯಿಂದ ಮುನ್ನುಗ್ಗಿ ಕೊನೆಗೆ ಗೆಲವಿನ ಕೇಕೆ ಹಾಕುವಲ್ಲಿ ಯಶಸ್ವಿಯಾದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com