

ಮಾನಸ್ (ಬ್ರೆಜಿಲ್): ಮೊದಲ ಪಂದ್ಯದಲ್ಲಿ ಸೋಲನುಭವಿಸಿರುವ ಕೆಮರೂನ್ ಮತ್ತು ಕ್ರೊವೇಷಿಯಾ ತಂಡಗಳು ಬುಧವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಗೆದ್ದು, ನಾಕೌಟ್ ಹಂತದ ಹಾದಿಯನ್ನು ಜೀವಂತವಾಗಿರಿಸಿಕೊಳ್ಳಲು ಎದುರು ನೋಡುತ್ತಿವೆ. 'ಎ' ಗುಂಪಿನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕ್ರೊವೇಷಿಯಾ ಆತಿಥೇಯ ಬ್ರೆಜಿಲ್ ವಿರುದ್ಧ ಸೋಲನುಭವಿಸಿದರೆ, ಕೆಮರೂನ್ ತಂಡ ಮೆಕ್ಸಿಕೊ ವಿರುದ್ಧ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡಕ್ಕೆ ಪಂದ್ಯಾವಳಿಗಾಗಿ ತಯಾರಿ ನಡೆಸುವಾಗ ಉಂಟಾದ ಸಮಸ್ಯೆಗಳನ್ನು ಮರೆಯುವಂತೆ ಮಾಡಲಿದೆ. ಆದರೆ, ಆಫ್ರಿಕಾ ತಂಡವಾಗಿರುವ ಕೆಮರೂನ್ಗೆ ತಮ್ಮ ಪ್ರಮುಖ ಆಟಗಾರ ಸ್ಟ್ರೈಕರ್ ಮತ್ತು ನಾಯಕ ಸ್ಯಾಮುಯಲ್ ಎಟೊ ಮೊಣಕಾಲಿಗೆ ಗಾಯ ಮಾಡಿಕೊಂಡಿರುವದು ತೊಂದರೆಯನ್ನುಂಟುಮಾಡಿದೆ. 'ದೇವರು ನನಗೆ ಅಚ್ಚರಿಯ ಕೊಡುಗೆಯನ್ನು ನೀಡಲಿದ್ದಾನೆ ಎಂದು ನಾನು ಭರವಸೆಯನ್ನು ಹೊಂದಿದ್ದೇನೆ. ಹಾಗೆನಾದರೂ ಆದರೆ, ನನ್ನ ಪ್ರೀತಿಯ ಸುಂದರ ದೇಶವನ್ನು ಪಂದ್ಯದಲ್ಲಿ ರಕ್ಷಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿದೆ' ಎಂದು ಕೆಮರೂನ್ ಸುದ್ದಿ ವಾಹಿನಿಯೊಂದಕ್ಕೆ ಎಟೊ ಹೇಳಿದ್ದಾರೆ. ಉಭಯ ತಂಡಗಳು ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿರುವುದು ಪಂದ್ಯದ ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಕೆಮರೂನ್ ಬಲ: ಚಾರ್ಲ್ಸ್ ಇಟಾಂಜೆ, ಅಲ್ಲಾನ್ ನ್ಯೂಮ್, ಸೆರಿಕ್ ಜೆಯುಗ್, ಹೆನ್ರಿ ಬೆಡಿಮೊ, ನಿಕೋಲಸ್ ಕಾಲುವು, ಡ್ಯಾನಿ ನೌಂಕೆ, ಜೀನ್ ಮಾಕೌನ್, ಸ್ಟಿಫಾನೆ ಮಾಬಿಯಾ, ಅಲೆಕ್ಸ್ ಸಾಂಗ್, ಇಯಾಂಗ್ ಇನೋ, ಸ್ಯಾಮುಯೆಲ್ ಎಟೊ.
ಕ್ರೊವೇಷಿಯಾ ಶಕ್ತಿ: ಲೂಕಾ ಮಾಡ್ರಿಕ್, ನಿಕೊ ಕ್ರಾಂಜಿಕರ್ ಎಡ್ವರ್ಡೋ, ನಿಕಿಕಾ ಜೊಲಾವಿಚ್.