

ರಿಯೋ ಡಿ ಜನೈರೋ: ಪಂದ್ಯದುದ್ದಕ್ಕೂ ರಷ್ಯಾ ಅದ್ಭುತ ಹೋರಾಟ ನೀಡಿತು. ಆದರೆ, ಅದೃಷ್ಟ ಮಾತ್ರ ಬೆಲ್ಜಿಯಂ ಪರವಾಗಿತ್ತು. ಹೀಗಾಗಿ ರಷ್ಯಾ ಪಂದ್ಯಾವಳಿಯಿಂದ ಹೊರಬಿತ್ತು. ಕಾರಣ, ಡಿವೋಕ್ ಓರಿಗಿ ಅವರು ರಷ್ಯಾ ವಿರುದ್ಧ ಬೆಲ್ಜಿಯಂ ಗೆಲ್ಲಿಸಿಕೊಟ್ಟರು. 88ನೇ ನಿಮಿಷದಲ್ಲಿ ಈಡನ್ ಹೆಜಾರ್ಡ್ ಅವರು ಪಾಸ್ ಮಾಡಿದ ಚೆಂಡನ್ನು ಗೋಲ್ಪೆಟ್ಟಿಗೆ ಸೇರಿಸುವಲ್ಲಿ ಓರಿಗಿ ಯಶಸ್ವಿಯಾದರು.
ಪಂದ್ಯದ 57ನೇ ನಿಮಿಷದಲ್ಲಿ ರೋಮೆಲು ಲೂಕಾಕು ಅವರ ಬದಲಾಗಿ ಅಂಗಣಕ್ಕಿಳಿದ ಒರಿಗಿ ಅವರು ಪಂದ್ಯದುದ್ದಕ್ಕೂ ಒದ್ದಾಡಿದ್ದ ಬೆಲ್ಜಿಯಂಗೆ ಅದೃಷ್ಟ ತಂದರು.
ಅಲ್ಲದೆ, 2006ರಲ್ಲಿ ಸರ್ಬಿಯಾ ವಿರುದ್ಧ ಅರ್ಜೆಂಟೀನಾದ ಲಯೋನೆಲ್ ಮೆಸ್ಸಿ ಅವರು ಗೋಲು ದಾಖಲಿಸಿದ ನಂತರ, ವಿಶ್ವಕಪ್ ಪಂದ್ಯಾವಳಿಯಲ್ಲಿ ಗೋಲು ದಾಖಲಿಸಿದ ಅತಿ ಕಿರಿಯ ಆಟಗಾರ ಎನಿಸಿದರು 19 ವರ್ಷದ ಓರಿಗಿ. ಇದರೊಂದಿಗೆ ಪಂದ್ಯಾವಳಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 1ರಲ್ಲಿ ಡ್ರಾ ಸಾಧಿಸಿ ಎರಡರಲ್ಲಿ ಗೆದ್ದಿರುವ ಬೆಲ್ಜಿಯಂ ಒಟ್ಟು 7 ಅಂಕಗಳೊಂದಿಗೆ ನಾಕೌಟ್ ಅಂತ ಪ್ರವೇಶಿಸಿತು.
ಆದರೆ, ಈ ಮೊದಲು ನಡೆದ ಪಂದ್ಯದಲ್ಲಿ ಕೊರಿಯಾ ವಿರುದ್ಧ ಡ್ರಾ ಸಾಧಿಸಿದ್ದ ರಷ್ಯಾ, ಈ ಸೋಲಿನೊಂದಿಗೆ ಮೊದಲ ಸುತ್ತಿನಿಂದಲೇ ಪಂದ್ಯಾವಳಿಯಿಂದ ಹೊರಬಿದ್ದಿತು. ಬರುವ ವಿಶ್ವಕಪ್ ಪಂದ್ಯಾವಳಿಯ ಆತಿಥ್ಯ ವಹಿಸಿರುವ ರಷ್ಯಾಕ್ಕೆ ನಾಕೌಟ್ ಹಂತ ತಲುಪುವ ಅವಕಾಶವೂ ದೊರಕಲಿಲ್ಲ. ಕೂಗಾಡಿದ ಅಭಿಮಾನಿಗಳು: ಪಂದ್ಯದ ಆರಂಭದಿಂದಲೂ ತಮ್ಮ ತಂಡವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗುತ್ತಿದ್ದ ಬೆಲ್ಜಿಂಯ ಅಭಿಮಾನಿಗಳು. ಪಂದ್ಯದ ಅಂತ್ಯ ಸಮೀಪಿಸುತ್ತಿದ್ದರೂ, ಗೋಲು ದಾಖಲಾಗದ್ದನ್ನು ನೋಡಿ ಕೂಗಾಡತೊಡಗಿದರು. ಚೆಂಡನ್ನು ಎಳೆದಾಡುವುದನ್ನು ಬಿಟ್ಟು ಗೋಲು ದಾಖಲಿಸುವಂತೆ ತಮ್ಮ ತಂಡದ ಆಟಗಾರರಿಗೆ ಸಲಹೆಗಳನ್ನು ನೀಡಿದರು. ಕೊನೆಗೂ ಅವರ ಸಲಹೆಗಳು ಫಲಿತಾಂಶ ನೀಡಿದವು. ಕಾರಣ, ಮೊದಲಾರ್ಧ ಪಂದ್ಯದಲ್ಲಿ
ಬಲಿಷ್ಠವೆನಿಸಿದ್ದ ಬೆಲ್ಜಿಯಂ ತಂಡ ಎದುರಾಳಿ ರಷ್ಯಾವನ್ನು ದುರ್ಬಲಗೊಳಿಸುವುದರಲ್ಲೇ ಕಾಲ ಕಳೆಯಿತು. ಆದರೆ, ಇಟಲಿ ಮೂಲದ ಕೋಚ್ ಫ್ಯಾಬಿಯೋ ಕ್ಯಾಪೆಲ್ಲೋಸ್ ಅವರ ಗರಡಿಯಲ್ಲಿ ಪಳಗಿದ ರಷ್ಯಾ ಅದಕ್ಕೆ ಅವಕಾಶವನ್ನೇ ಮಾಡಿಕೊಡಲಿಲ್ಲ. ಅಲ್ಲದೆ, ಮೊದಲಾರ್ಧ ಪಂದ್ಯದ ಅಂತ್ಯದಲ್ಲಿ ರಷ್ಯಾದ ಅಲೆಗ್ಜಾಂಡರ್ ಕೊಕೊರಿನ್ ಅವರು ಗೋಲು ದಾಖಲಿಸುವ ಸುವರ್ಣಾವಕಾಶವನ್ನು ಹೊಂದಿದ್ದರು. ಆದರೆ, ಡೆನಿಸ್ ಗ್ಲುಶಾಕೋವ್ಸ್ ತಲೆಯಿಂದ ಪಾಸ್ ಮಾಡಿದ ಚೆಂಡನ್ನು ಅಲೆಗ್ಜಾಂಡರ್ ಗೋಲ್ಪೆಟ್ಟಿಗೆಯತ್ತ ಅಟ್ಟಿದಾಗ, ಅದು ಕೂದಲೆಳೆ ಅಂತರದಲ್ಲಿ ನೆಟ್ನಿಂದ ಹೊರಬಿದ್ದಿತು.
ಇದಕ್ಕೂ ಮುನ್ನ ಮಕ್ಸಿಮ್ ಕನುನ್ನಿಕೋವ್ ಅವರು ಪೆನಾಲ್ಟಿ ಅವಕಾಶವನ್ನು ಹೊಂದಿದ್ದರು. ಆದರೆ, ಅದನ್ನು ತಡೆಗಟ್ಟುವಲ್ಲಿ ಬೆಲ್ಜಿಂಯನ ಟೋಬಿ ಅಲ್ಡೆರ್ವೈರೆಲ್ಡ್ ಯಶಸ್ವಿಯಾದರು. ಬೆಲ್ಜಿಯಂನ ಸ್ಟಾರ್ ಆಟಗಾರರಾದ ಡ್ರೈಸ್ ಮೆರ್ಟೆನ್ಸ್ ಮತ್ತು ಕೆವಿನ್ ಡಿ ಬ್ರ್ಯುನೆ ಹಲ ಬಾರಿ ಗೋಲ್ಗಾ ಯತ್ನಿಂದರು. ಆದರೆ, ರಷ್ಯಾ ಅದನ್ನು ಸಮರ್ಥವಾಗಿ ತಡೆಗಟ್ಟಿತ್ತು.