ಪೋರ್ಟೊ ಅಲೆಗ್ರೆ: ಈಗಾಗಲೇ ನಾಕೌಟ್ ಸುತ್ತಿಗೆ ತನ್ನ ಸ್ಥಾನ ಭದ್ರಪಡಿಸಿಕೊಂಡಿರುವ ಅರ್ಜೆಂಟೀನಾ ಆಟಗಾರರು ಈಗ ಎಫ್ ಗುಂಪಿನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲೂ ನೈಜೀರಿಯಾವನ್ನು ಮಣಿಸಿ ಸೋಲರಿಯದ ತಂಡವಾಗಿ ಮುಂದಿನ ಹಂತದಲ್ಲಿ ಸೆಣಸುವ ವಿಶ್ವಾಸ ಹೊಂದಿದ್ದಾರೆ.
ಮತ್ತೊಂದೆಡೆ ನೈಜೀರಿಯಾ ಆಟಗಾರರು ಅರ್ಜೆಂಟೀನಾ ವಿರುದ್ಧ ಗೆಲ್ಲಲಾಗದಿದ್ದರೂ, ಕನಿಷ್ಠ ಡ್ರಾ ಫಲಿತಾಂಶವನ್ನಾದರೂ ಪಡೆದು ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾರೆ. ಒಂದು ವೇಳೆ ನೈಜೀರಿಯಾ ಸೋಲನುಭವಿಸಿದರೆ, ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಎದುರಾಗಲಿರುವ ಇರಾನ್ ಮತ್ತು ಬೋಸ್ನಿಯಾ ಆ್ಯಂಡ್ ಹರ್ಜ್ಗೋವಿನ ನಡುವಿನ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ. ಇಲ್ಲಿ ಇರಾನ್ ತಂಡ ಸೋತರೆ, ಅಥವಾ ಡ್ರಾ ಸಾಧಿಸಿದರೆ, ನೈಜೀರಿಯಾ ತಂಡ ಮುಂದಿನ ಸುತ್ತು ಪ್ರವೇಶಿಸುವುದಕ್ಕೆ ಧಕ್ಕೆಯಾಗದು. ಒಂದು ವೇಳೆ ನೈಜೀರಿಯಾ ಸೋತು ಇರಾನ್ ಗೆದ್ದರೆ, ಗೋಲು ಸರಾಸರಿ ಆಧಾರದ ಮೇಲೆ ಈ ಎರಡೂ ತಂಡಗಳ ಮುನ್ನಡೆಯ ಹಾದಿ ನಿರ್ಧಾರವಾಗಲಿದೆ.
ಹಾಗಾಗಿ, ಸ್ಟಾರ್ ಆಟಗಾರ ಲಯೊನೆಲ್ ಮೆಸ್ಸಿಯ ಅರ್ಜೆಂಟೀನಾ ವಿರುದ್ಧದ ಸವಾಲು ನೈಜೀರಿಯಾ ಪಾಲಿಗೆ ಮಹತ್ವದ್ದಾಗಿದೆ.
ಇತಿಹಾಸದ ಪುಟ ತಿರುವಿ ನೋಡಿದರೆ, ಅರ್ಜೆಂಟೀನಾ ಎದುರು ನೈಜೀರಿಯಾದ ಸಾಧನೆ ಕಳಪೆಯಾಗಿದೆ. ಉಭಯ ತಂಡಗಳು ಈವರೆಗೆ ಪರಸ್ಪರ 6 ಬಾರಿ ಮುಖಾಮುಖಿಯಾಗಿದ್ದು, ಅರ್ಜೆಂಟೀನಾ ತಂಡ 4ರಲ್ಲಿ ಗೆದ್ದು ತನ್ನ ಪ್ರಾಬಲ್ಯ ಮೆರೆದಿದೆ. ನೈಜೀರಿಯಾ 1 ಪಂದ್ಯ ಗೆಲ್ಲಲಷ್ಟೇ ಯಶಸ್ವಿಯಾಗಿದೆ.
ಕೇವಲ ವಿಶ್ವಕಪ್ನಲ್ಲಿ ಎರಡೂ ತಂಡಗಳು ನಾಲ್ಕು ಬಾರಿ ಸೆಣಸಿದ್ದು, ಅರ್ಜೆಂಟೀನಾ 3 ಪಂದ್ಯ ಗೆಲವು ದಾಖಲಿಸಿದ್ದು, 1 ಪಂದ್ಯ ಗೋಲುರಹಿತ ಡ್ರಾದಲ್ಲಿ ಅಂತ್ಯಗೊಂಡಿದೆ.
ಅರ್ಜೆಂಟೀನಾ-ನೈಜೀರಿಯಾ
(ಎಫ್- ಗುಂಪು)
ಪಂದ್ಯ ಆರಂಭ:
ರಾತ್ರಿ 9.30 ಗಂಟೆ
5 ರ್ಯಾಂಕ್ 44
ಮುಖಾಮುಖಿ
6 ಪಂದ್ಯ 6
4 ಜಯ 1
1 ಡ್ರಾ 1
1 ಸೋಲು 4
8 ಗೋಲು ಪರ 6