ಸ್ವಿಸ್‌ಗೆ ಗೆಲವಿನ ಸ್ವೀಟ್

ಸ್ವಿಸ್‌ಗೆ ಗೆಲವಿನ ಸ್ವೀಟ್
Updated on: 

ಮಾನೌಸ್: ಹೆರ್ಡಾನ್ ಶಾಕಿರಿ ಅವರ ಆಕರ್ಷಕ ಹ್ಯಾಟ್ರಿಕ್ ಗೋಲಿನ ನೆರವಿನೊಂದಿಗೆ ಸ್ವಿಜರ್ಲೆಂಡ್ ತಂಡ ಫಿಫಾ ವಿಶ್ವಕಪ್‌ನ ಇ ಗುಂಪಿನ ಪಂದ್ಯದಲ್ಲಿ ಹೊಂಡುರಾಸ್ ವಿರುದ್ಧ ಗೆಲವಿನ ಸಿಹಿ ಸವಿದಿದೆ.
ಗುರುವಾರ ನಡೆದ ಪಂದ್ಯದಲ್ಲಿ ಸ್ವಿಜರ್ಲೆಂಡ್ ತಂಡ 3-0 ಗೋಲುಗಳ ಅಂತರದಲ್ಲಿ ಹೊಂಡುರಾಸ್ ತಂಡವನ್ನು ಮಣಿಸಿದ್ದು, ಈ ಗೆಲವಿನೊಂದಿಗೆ ಸ್ವಿಜರ್ಲೆಂಡ್ ನಾಕೌಟ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸ್ವಿಸ್ ತಂಡ, ನಾಕೌಟ್ ಹಂತದಲ್ಲಿ ಲಯೊನೆಲ್ ಮೆಸ್ಸಿ ತಂಡದ ಅರ್ಜೆಂಟೀನಾ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯ ಮಂಗಳವಾರ ಸೌ ಪೋಲೊನಲ್ಲಿ ನಡೆಯಲಿದೆ.
ಇ ಗುಂಪಿನಲ್ಲಿ ಫ್ರಾನ್ಸ್ ಅಗ್ರ ಸ್ಥಾನ ಪಡೆಯುವ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶಿಸಿತ್ತು. ಹಾಗಾಗಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಲು ಸ್ವಿಜರ್ಲೆಂಡ್ ಹಾಗೂ ಈಕ್ವೆಡಾರ್ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಗಾಗಿ ಸ್ವಿಸ್‌ಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಪಂದ್ಯವಾಗಿ ಪರಿಣಮಿಸಿತ್ತು. ಪಂದ್ಯದ ಆರಂಭದಿಂದಲೂ ಅತ್ಯುತ್ತಮ ಪ್ರದರ್ಶನ ತೋರಿದ ಹೆರ್ಡಾನ್ ಶಾಕಿರಿ, ಸ್ವಿಸ್ ಪಾಲಿಗೆ ಹೀರೋ ಆದರು. ಪಂದ್ಯದ 6ನೇ ನಿಮಿಷದಲ್ಲಿ ಎಡಗಾಲಿನಿಂದ ಒದ್ದ ಚೆಂಡು ನೇರವಾಗಿ ಗೋಲು ಪೆಟ್ಟಿಗೆ ಸೇರಿತು, ಈ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ನಂತರ 31ನೇ ನಿಮಿಷದಲ್ಲಿ ಮತ್ತೊಮ್ಮೆ ಮಿಂಚಿನ ಪ್ರದರ್ಶನ ನೀಡಿದ ಶಾಕಿರಿ, ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸುವಂತೆ ನೋಡಿಕೊಂಡರು.
ಈ ಮೂಲಕ ಮೊದಲಾರ್ಧದಲ್ಲೇ 2-0 ಮುನ್ನಡೆ ಕಾಯ್ದುಕೊಂಡ ಸ್ವಿಸ್, ಎರಡನೇ ಅವಧಿಯಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿತು. 71ನೇ ನಿಮಿಷದಲ್ಲಿ ಹೊಂಡುರಾಸ್ ಆಟಗಾರರ ರಣತಂತ್ರವನ್ನು ಮೆಟ್ಟಿನಿಂತ ಹೆರ್ಡಾನ್ ಹ್ಯಾಟ್ರಿಕ್ ಗೋಲು ದಾಖಲಿಸಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮದಾಗಿಸಿಕೊಂಡರು.  ಹೊಂಡುರಾಸ್ ತಂಡದ ಆಟಗಾರರು ತೀವ್ರ ಪೈಪೋಟಿ ನೀಡುವ ಪ್ರಯತ್ನ ನಡೆಸಿದರಾದೂ, ಸ್ವಿಸ್ ರಕ್ಷಣಾತ್ಮಕ ವಿಭಾಗವನ್ನು ಭೇದಿಸುವಲ್ಲಿ ವಿಫಲರಾದರು. ಶಾಕಿರಿ ಹ್ಯಾಟ್ರಿಕ್ ಗೋಲಿನ ನೆರವಿನಿಂದ 1954ರ ನಂತರ, ಇದೇ ಮೊದಲ ಬಾರಿಗೆ ಸ್ವಿಸ್ ಆಟಗಾರನೊಬ್ಬ ವಿಶ್ವಕಪ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಗೋಲು ದಾಖಲಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಗೋಲು ವಿವರ
ಸ್ವಿಜರ್ಲೆಂಡ್ 3
 ಹೆರ್ಡಾನ್ ಶಾಕಿರಿ
6ನೇ ನಿಮಿಷ, 31 ನೇ ನಿಮಿಷ 71ನೇ ನಿಮಿಷ,
ಹೊಂಡುರಾಸ್-0

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com