ಕರಾವಳಿಯಲ್ಲಿ ಆಷಾಢ ಮಾಸದ ವಿಶೇಷ ಪತ್ರೊಡೆ

ಕರಾವಳಿ ಶೈಲಿಯಲ್ಲಿ ಪತ್ರೊಡೆ ಮಾಡುವ ವಿಧಾನ ಹೀಗಿದೆ...
ಕೆಸುವಿನ ಎಲೆ
ಕೆಸುವಿನ ಎಲೆ
ಆಷಾಢ ಮಾಸದಲ್ಲಿ ಕರಾವಳಿ ಜಿಲ್ಲೆಯ ಮಂದಿ ಪತ್ರೊಡೆ ಮಾಡದಿರುವುದೇ ಇಲ್ಲ. ಪತ್ರೊಡೆ ಇಂದು ನಗರವಾಸಿಗಳ ಅಚ್ಚುಮೆಚ್ಚಿನ ತಿನಿಸು ಕೂಡ ಆಗಿದೆ. ಕೆಸುವಿನ ಎಲೆಯಿಂದ ಪತ್ರೊಡೆಯನ್ನು ಹಲವು ರೀತಿಯಲ್ಲಿ ಮಾಡಲಾಗುತ್ತದೆ. ಇಲ್ಲಿ ಕರಾವಳಿ ಶೈಲಿಯಲ್ಲಿ ಮಾಡುವ ವಿಧಾನವನ್ನು ವಿವರಿಸಲಾಗಿದೆ.
ಬೇಕಾಗುವ ಸಾಮಗ್ರಿಗಳು
1.ಕೆಸುವಿನ ಎಲೆಗಳು-10ರಿಂದ 15ರಷ್ಟು 
 2. ಅರ್ಧ ಕೆಜಿ ಬೆಳ್ತಿಗೆ ಅಕ್ಕಿ 
3. ತುರಿದ ತೆಂಗಿನ ಕಾಯಿ ಒಂದು ಬೌಲ್  
4.  ಕೊತ್ತಂಬರಿ ಬೀಜ - ಐದಾರು ಚಮಚ
5. ಜೀರಿಗೆ ಸ್ವಲ್ಪ
6. ಉದ್ದಿನ ಬೇಳೆ-ಒಂದು ಚಮಚ
7.  ಬ್ಯಾಡಗಿ ಮೆಣಸು ಖಾರಕ್ಕೆ ತಕ್ಕಷ್ಟು
8. ಕಾಲು ಕಪ್ಪಿನಷ್ಟು ತುರಿದ ಅಥವಾ ಪುಡಿ ಮಾಡಿದ ಬೆಲ್ಲ 
9. ದೊಡ್ಡ ನಿಂಬೆ ಗಾತ್ರದ ಹುಣಸೆ ಹಣ್ಣು
10. ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
-ಅಕ್ಕಿಯನ್ನು ಮೂರು ಗಂಟೆಗಳ ಕಾಲ ನೆನೆ ಹಾಕಿ. 
-ಅಕ್ಕಿ, ಉಪ್ಪು ಮತ್ತು ಕೆಸುವಿನೆಲೆಯನ್ನು ಪಕ್ಕಕ್ಕಿಟ್ಟು ಉಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ರುಬ್ಬಿ. 
-ನಂತರ ನೆನೆದ ಅಕ್ಕಿ ಮತ್ತು ಉಪ್ಪು ಸೇರಿಸಿಕೊಂಡು ಸಣ್ಣಗೆ ಗಟ್ಟಿಯಾಗಿ ಹೆಚ್ಚು ನೀರು ಸೇರಿಸದೆ ರುಬ್ಬಿ. ದೋಸೆ ಹಿಟ್ಟಿಗಿಂತ ಸ್ವಲ್ಪ ದಪ್ಪ ಹಿಟ್ಟಾಗುವಂತೆ ನೋಡಿಕೊಳ್ಳಿ. 
-ಎಲೆಯ ಹಿಂಭಾಗದಲ್ಲಿರುವ ದಪ್ಪನೆಯ ನಾರುಗಳನ್ನು ನಯವಾಗಿ ಕಿತ್ತು ತೊಳೆದು ತೆಗೆದು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ರುಬ್ಬಿದ ಅಕ್ಕಿ ಮತ್ತು ಮಸಾಲೆ ಮಿಶ್ರಣಗಳನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
-ನಂತರ ಚೆನ್ನಾಗಿ ತೊಳೆದು ಬಾಡಿಸಿದ ಬಾಳೆ ಎಲೆಯಲ್ಲಿ ಹಿಟ್ಟನ್ನು ಹಾಕಿ ಮಡಚಿಟ್ಟು ಇಡ್ಲಿ ಅಥವಾ ಕುಕ್ಕರ್ ನಲ್ಲಿ ಹಬೆಯಲ್ಲಿ 30ರಿಂದ 40 ನಿಮಿಷ ಬೇಯಿಸಿದರೆ ಪತ್ರೊಡೆ ಸಿದ್ದ
ಇದನ್ನು ನಂತರ  ಪುಡಿ ಮಾಡಿ ಒಗ್ಗರಣೆ ಮಾಡಿಕೊಂಡು ಅದಕ್ಕೆ ಸೇರಿಸಿ ತಿನ್ನಬಹುದು.
-ಇಲ್ಲವೇ ಬಿಸಿಬಿಸಿ ಪತ್ರೊಡೆಯನ್ನು ತುಪ್ಪ ಅಥವಾ ತೆಂಗಿನ ಎಣ್ಣೆ ಹಚ್ಚಿಕೊಂಡು ಹಾಗೇ ತಿನ್ನಬಹುದು. ಕಾಯಿ ಚಟ್ನಿ, ಸಾಂಬಾರು ಜೊತೆ ಸೇರಿಸಿಕೊಂಡು ಸಹ ತಿನ್ನಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com