

ಸಾಮಾನ್ಯವಾಗಿ ಪಾಸ್ತಾ ಎಂದರೆ ರೆಸ್ಟೋರೆಂಟ್‌ನಲ್ಲಿ ಮಾತ್ರ ಸಿಗುವ ಖಾದ್ಯ ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕೆಲವೇ ಪದಾರ್ಥಗಳನ್ನು ಬಳಸಿ, ಮನೆಯಲ್ಲೇ ಸುಲಭವಾಗಿ ಕ್ರೀಮಿ ಮತ್ತು ರುಚಿಕರವಾದ ಚಿಕನ್ ಪಾಸ್ತಾ ತಯಾರಿಸಬಹುದು.
ಮೃದುವಾದ ಚಿಕನ್ ತುಂಡುಗಳು, ಚೀಸ್ ಮತ್ತು ಕ್ರೀಮ್‌ನ ಸವಿ ಬೆರೆತ ಈ ಖಾದ್ಯ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಮನ ಗೆಲ್ಲುತ್ತದೆ. ವೀಕೆಂಡ್ ಸ್ಪೆಷಲ್, ಫ್ಯಾಮಿಲಿ ಡಿನ್ನರ್ ಅಥವಾ ವಿಶೇಷ ಸಂದರ್ಭಗಳಿಗೆ ಈ ರೆಸಿಪಿ ಅತ್ಯುತ್ತಮ ಆಯ್ಕೆಯಾಗಿದ್ದು, ಒಮ್ಮೆ ಮಾಡಿದರೆ ಮತ್ತೆ ಮತ್ತೆ ಮಾಡುವಂತೆ ಮಾಡುವ ರುಚಿಯನ್ನು ನೀಡುತ್ತದೆ.
ಬೇಕಾಗುವ ಪದಾರ್ಥಗಳು....
ಪಾಸ್ತಾ ಮಾಡಲು...
ಪಾಸ್ತಾ – 250 ಗ್ರಾಂ
ನೀರು – ಅಗತ್ಯವಿರುವಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – 1 ಚಮಚ
ಚಿಕನ್ ಮ್ಯಾರಿನೇಟ್ ಮಾಡಲು...
ಎಲುಬಿಲ್ಲದ ಚಿಕನ್ – 250 ಗ್ರಾಂ (ಸಣ್ಣ ತುಂಡುಗಳು)
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕಾಳುಮೆಣಸಿನ ಪುಡಿ – ½ ಚಮಚ
ಅಚ್ಚ ಖಾರದ ಪುಡಿ – ½ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಸಾಸ್ ತಯಾರಿಸಲು...
ಬೆಣ್ಣೆ – 2 ಚಮಚ
ಬೆಳ್ಳುಳ್ಳಿ – 5–6 ಎಸಳು (ಸಣ್ಣದಾಗಿ ಹೆಚ್ಚಿದ್ದು)
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಕ್ಯಾಪ್ಸಿಕಂ – ½ ಬಟ್ಟಲು
ಸ್ವೀಟ್ ಕಾರ್ನ್ – ¼ ಬಟ್ಟಲು (ಐಚ್ಛಿಕ)
ಓರೆಗಾನೊ – 1 ಚಮಚ
ಚಿಲ್ಲಿ ಫ್ಲೇಕ್ಸ್ – ½ ಚಮಚ
ಕರಿಮೆಣಸಿನ ಪುಡಿ – ½ ಚಮಚ
ಹಾಲು – 1 ಬಟ್ಟಲು
ಫ್ರೆಶ್ ಕ್ರೀಮ್ – ½ ಬಟ್ಟಲು
ತುರಿದ ಚೀಸ್ – ½ ಬಟ್ಟಲು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ...
ಒಂದು ಪಾತ್ರೆಯಲ್ಲಿ ಸಾಕಷ್ಟು ನೀರು ಕುದಿಸಿ ಅದಕ್ಕೆ ಉಪ್ಪು ಹಾಗೂ ಎಣ್ಣೆ ಹಾಕಿ ಪಾಸ್ತಾವನ್ನು 8–10 ನಿಮಿಷ ಬೇಯಿಸಿ. ನಂತರ ನೀರು ಸೋಸಿ ಸ್ವಲ್ಪ ಎಣ್ಣೆ ಬೆರೆಸಿ ಬದಿಗಿಡಿ.
ಚಿಕನ್‌ಗೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಖಾರದ ಪುಡಿ, ಕಾಳು ಮೆಣಸಿನ ಪುಡಿ ಹಾಗೂ ನಿಂಬೆ ರಸ ಹಾಕಿ 20 ನಿಮಿಷ ಮ್ಯಾರಿನೇಟ್ ಮಾಡಿ.
ಪ್ಯಾನ್‌ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಮ್ಯಾರಿನೇಟ್ ಮಾಡಿದ ಚಿಕನ್ ಅನ್ನು ಚೆನ್ನಾಗಿ ಬೇಯಿಸಿ ಬದಿಗಿಡಿ.
ಅದೇ ಪ್ಯಾನ್‌ಗೆ ಬೆಣ್ಣೆ ಹಾಕಿ, ಕರಗಿದ ನಂತರ ಬೆಳ್ಳುಳ್ಳಿ ಹಾಗೂ ಈರುಳ್ಳಿ ಹಾಕಿ ಹುರಿಯಿರಿ.
ನಂತರ ಕ್ಯಾಪ್ಸಿಕಂ ಮತ್ತು ಸ್ವೀಟ್ ಕಾರ್ನ್ ಸೇರಿಸಿ 2–3 ನಿಮಿಷ ಹುರಿಯಿರಿ.
ಈಗ ಹಾಲು ಸೇರಿಸಿ ಕುದಿಯಲು ಬಿಡಿ. ನಂತರ ಫ್ರೆಶ್ ಕ್ರೀಮ್ ಹಾಗೂ ತುರಿದ ಚೀಸ್ ಹಾಕಿ ಚೆನ್ನಾಗಿ ಕಲಸಿ.
ಓರೆಗಾನೊ, ಚಿಲ್ಲಿ ಫ್ಲೇಕ್ಸ್, ಕಾಳು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ ಸಾಸ್ ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ.
ಬಳಿಕ ಬೇಯಿಸಿದ ಚಿಕನ್ ಮತ್ತು ಪಾಸ್ತಾವನ್ನು ಸೇರಿಸಿ ಸಾಸ್‌ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ.
2–3 ನಿಮಿಷ ನಿಧಾನ ಸಣ್ಣ ಉರಿಯಲ್ಲಿ ಬೇಯಿಸಿ ಬಿಸಿ ಬಿಸಿಯಾಗಿ ಬಡಿಸಿ.
ಟಿಪ್ಸ್...
ಹೆಚ್ಚು ಕ್ರೀಮಿ ರುಚಿಗಾಗಿ ಮೊಝರೆಲ್ಲಾ ಅಥವಾ ಚೆಡರ್ ಚೀಸ್ ಬಳಸಬಹುದು.
ಬ್ರೊಕೋಲಿ, ಅಣಬೆ ಅಥವಾ ಬೇಬಿ ಕಾರ್ನ್ ಸೇರಿಸಿದರೆ ಇನ್ನಷ್ಟು ರುಚಿ ಹಾಗೂ ಪೌಷ್ಟಿಕತೆ ಹೆಚ್ಚುತ್ತದೆ.
ಖಾರ ಇಷ್ಟವಿದ್ದರೆ ಚಿಲ್ಲಿ ಫ್ಲೇಕ್ಸ್ ಅಥವಾ ಕಾಳು ಮೆಣಸಿನ ಪುಡಿ ಹೆಚ್ಚಿಸಬಹುದು.
ಸಾಸ್ ತುಂಬಾ ಗಟ್ಟಿಯಾದರೆ ಸ್ವಲ್ಪ ಬೆಚ್ಚಗಿನ ಹಾಲು ಸೇರಿಸಿ ತೆಳುವಾಗಿಸಬಹುದು.