

ಮೊಟ್ಟೆಯಿಂದ ಮಾಡುವ ವಿಭಿನ್ನ ಹಾಗೂ ರುಚಿಕರವಾದ ಖಾದ್ಯಗಳಲ್ಲಿ ಎಗ್ ಕೈಮಾ ಉಂಡೆ ಸಾರು ಕೂಡ ಒಂದು. ತುರಿದ ಮೊಟ್ಟೆ, ಸುವಾಸನೆ ಭರಿತ ಮಸಾಲೆ ಪದಾರ್ಥಗಳು ಮತ್ತು ತೆಂಗಿನಕಾಯಿ ಮಿಶ್ರಣದಿಂದ ತಯಾರಿಸಿ, ಬೇಯಿಸಿದ ಈ ಉಂಡೆ ವಿಶಿಷ್ಟ ರುಚಿಯನ್ನು ಹೊಂದಿರುತ್ತದೆ. ಅನ್ನ, ಚಪಾತಿ, ರೊಟ್ಟಿ ಅಥವಾ ಪರೋಟದೊಂದಿಗೆ ಸವಿಯಲು ಇದು ಅತ್ಯುತ್ತಮ ಆಯ್ಕೆ. ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಎಗ್ ಕೈಮಾ ಉಂಡೆ ಸಾರು ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು...
ಮೊಟ್ಟೆ- 6
ಈರುಳ್ಳು-1
ಬೆಳ್ಳುಳ್ಳಿ-ಸ್ವಲ್ಪ
ಶುಂಠಿ- ಸ್ವಲ್ಪ
ಬೆಳ್ಳುಳ್ಳು-ಸ್ವಲ್ಪ
ಚಕ್ಕೆ-ಸ್ವಲ್ಪ
ಲವಂಗ- ಸ್ವಲ್ಪ
ಖಾರದ ಪುಡಿ- 2 ಚಮಚ
ದನಿಯಾ ಪುಡಿ- 1 ಚಮಚ
ಕೊತ್ತಂಬರಿ ಸೊಪ್ಪೃ- ಸ್ವಲ್ಪ
ತೆಂಗಿಕಾಯಿ- ಸ್ವಲ್ಪ
ಹುರಿಗಡಲೆ ಪುಡಿ- ಸ್ವಲ್ಪ
ಮಾಡುವ ವಿಧಾನ...
ಮೊದಲಿಗೆ ಪಾತ್ರೆಯೊಂದಕ್ಕೆ ನೀರು ಹಾಕಿ 5 ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ, ಸಿಪ್ಪೆ ತೆಗೆದು ತುರಿದಿಟ್ಟುಕೊಳ್ಳಿ.
ಇದೀಗ ಮಿಕ್ಸಿ ಜಾರ್'ಗೆ ತೆಂಗಿನಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಖಾರದ ಪುಡಿ, ದನಿಯಾ ಪುಡಿ, ಕೊತ್ತಂಬರಿ ಸೊಪ್ಪ ಹಾಗೂ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇದೀಗ ಈ ಮಸಾಲೆಯಲ್ಲಿ ಅರ್ಧ ಭಾಗವನ್ನು ತುರಿದಿಟ್ಟುಕೊಂಡ ಮೊಟ್ಟೆಗೆ ಹಾಕಿ, ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಹುರಿಗಡಲೆ ಪುಡಿ, ಸ್ವಲ್ಪ ದನಿಯಾ ಪುಡಿ, ಕೊತ್ತಂಬರಿ ಸೊಪ್ಪು ಹಾಕಿ ಹಾಗೂ 1 ಮೊಟ್ಟೆಯನ್ನು ಹೊಡೆದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 5 ನಿಮಿಷ ನೆನೆಯಲು ಬಿಡಿ. ಬಳಿಕ ಇದನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.
ಇದೀಗ ಒಲೆಯ ಮೇಲೆ ಒಂದು ಪಾತ್ರೆಯಿಟ್ಟು, ಕಾದ ನಂತರ ಎಣ್ಣೆ ಹಾಕಿ, ಬಳಿಕ ಸಣ್ಣಗೆ ಕತ್ತರಿಸಿಕೊಂಡ ಈರುಳ್ಳಿ ಹಾಕಿ ಕೆಂಪಗೆ ಹುರಿದುಕೊಳ್ಳಿ. ಇದೀಗ ಉಳಿದ ಮಸಾಲೆಯನ್ನು ಇದಕ್ಕೆ ಸೇರಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ, ಬಳಿಕ ಉಂಡೆ ಮಾಡಿಕೊಂಡ ಮೊಟ್ಟೆಗಳನ್ನು ಸೇರಿಸಿ, ಮಧ್ಯಮ ಉರಿಯಲ್ಲಿ 5-10 ನಿಮಿಷ ಬೇಯಿಸಿದರೆ ರುಚಿಕರವಾದ ಮೊಟ್ಟೆ ಕೈಮಾ ಉಂಡೆ ಸವಿಯಲು ಸಿದ್ಧ.
Advertisement