

ಖಾರ ಮತ್ತು ಮಸಾಲೆಯುಕ್ತ ಚಿಕನ್ ಖಾದ್ಯಗಳನ್ನು ಇಷ್ಟಪಡುವವರಿಗೆ ಆಂಧ್ರ ಶೈಲಿಯ ಚಿಲ್ಲಿ ಚಿಕನ್ ಅತ್ಯುತ್ತಮ ಆಯ್ಕೆ. ಖಾರ ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಹಾಗೂ ವಿಶೇಷ ಮಸಾಲೆಗಳ ಸಮ್ಮಿಶ್ರಣ ಈ ಖಾದ್ಯಕ್ಕೆ ವಿಭಿನ್ನ ರುಚಿ ನೀಡುತ್ತದೆ. ಹೋಟೆಲ್‌ನಲ್ಲಿ ಸಿಗುವ ರುಚಿಯಲ್ಲೇ ಮನೆಯಲ್ಲೂ ಸುಲಭವಾಗಿ ಮಾಡುವ ವಿಧಾನ ಇಲ್ಲಿದೆ..
ಬೇಕಾಗುವ ಪದಾರ್ಥಗಳು...
ಚಿಕನ್ ಮ್ಯಾರಿನೇಟ್ ಮಾಡಲು...
ಚಿಕನ್ – 500 ಗ್ರಾಂ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಅಚ್ಚ ಖಾರದ ಪುಡಿ – 1 ಚಮಚ
ಅರಿಶಿನ ಪುಡಿ – ಕಾಲು ಚಮಚ
ಚಿಲ್ಲಿ ಸಾಸ್ – 1 ಚಮಚ
ಕಾರ್ನ್ ಫ್ಲೋರ್ – 2 ಚಮಚ
ಅಕ್ಕಿ ಹಿಟ್ಟು – 1 ಚಮಚ
ಮೊಟ್ಟೆ – 1
ಉಪ್ಪು – ರುಚಿಗೆ ತಕ್ಕಷ್ಟು
ನಿಂಬೆ ರಸ – 1 ಚಮಚ
ಮಸಾಲೆ ತಯಾರಿಸಲು...
ಎಣ್ಣೆ – 3 ಚಮಚ
ಈರುಳ್ಳಿ – 2
ಹಸಿಮೆಣಸಿನಕಾಯಿ – 5–6
ಒಣಗಿದ ಮೆಣಸಿನಕಾಯಿ – 4
ಬೆಳ್ಳುಳ್ಳಿ – 8 ಎಸಳು
ಶುಂಠಿ – 1 ಇಂಚು
ಕರಿಬೇವು – 2 ಎಸಳು
ಸೋಯಾ ಸಾಸ್ – 1 ಚಮಚ
ಟೊಮೆಟೊ ಸಾಸ್ – 1 ಚಮಚ
ಕಾಳು ಮೆಣಸಿನ ಪುಡಿ – ಅರ್ಧ ಚಮಚ
ಅಚ್ಚಖಾರದ ಪುಡಿ – ಅರ್ಧ ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ...
ಮೊದಲು ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ನೀರು ಬಸಿದುಕೊಳ್ಳಿ. ಬಳಿಕ ಒಂದು ಪಾತ್ರೆಯಲ್ಲಿ ಚಿಕನ್, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಅರಿಶಿನ, ಉಪ್ಪು, ನಿಂಬೆ ರಸ, ಕಾರ್ನ್ ಫ್ಲೋರ್, ಅಕ್ಕಿ ಹಿಟ್ಟು ಮತ್ತು ಮೊಟ್ಟೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. 30 ನಿಮಿಷ ಮ್ಯಾರಿನೇಟ್ ಮಾಡಲು ಬಿಡಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಮ್ಯಾರಿನೇಟ್ ಮಾಡಿದ ಚಿಕನ್ ತುಂಡುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ನಂತರ ಅವುಗಳನ್ನು ತೆಗೆದು ಪ್ರತ್ಯೇಕವಾಗಿಡಿ.
ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ.
ನಂತರ ಒಣಗಿದ ಮೆಣಸಿನಕಾಯಿ, ಕರಿಬೇವು ಮತ್ತು ಉದ್ದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಸ್ವಲ್ಪ ಮೃದುವಾದ ಬಳಿಕ ಖಾರದ ಪುಡಿ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ.
ಈಗ ಸೋಯಾ ಸಾಸ್ ಮತ್ತು ಟೊಮೆಟೊ ಸಾಸ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ಮಸಾಲೆ ಹದಕ್ಕೆ ಬರುವವರೆಗೆ ಬೇಯಿಸಿ.
ಹುರಿದ ಚಿಕನ್ ತುಂಡುಗಳನ್ನು ಮಸಾಲೆಗೆ ಸೇರಿಸಿ ಚೆನ್ನಾಗಿ ಕಲಸಿ. ಕಡಿಮೆ ಉರಿಯಲ್ಲಿ 5–7 ನಿಮಿಷ ಬೇಯಿಸಿ, ಮಸಾಲೆ ಚಿಕನ್‌ಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಮಾಡಿ.
ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ ಒಲೆಯಿಂದ ಇಳಿಸಿ. ಇದೀಗ ಬಿಸಿಬಿಸಿಯಾದ ಆಂಧ್ರ ಶೈಲಿಯ ಚಿಲ್ಲಿ ಚಿಕನ್ ಸವಿಯಲು ಸಿದ್ಧ.
ಟಿಪ್ಸ್...
ಖಾರ ಹೆಚ್ಚಿಸಲು ಹಸಿಮೆಣಸಿನಕಾಯಿ ಮತ್ತು ಒಣ ಮೆಣಸಿನಕಾಯಿಯ ಪ್ರಮಾಣವನ್ನು ನಿಮ್ಮ ರುಚಿಗೆ ತಕ್ಕಂತೆ ಹೊಂದಿಸಿಕೊಳ್ಳಿ.
ಚಿಕನ್ ತುಂಡುಗಳನ್ನು ಹೆಚ್ಚು ಹೊತ್ತು ಹುರಿಯಬೇಡಿ; ಇಲ್ಲದಿದ್ದರೆ ಗಟ್ಟಿಯಾಗಬಹುದು.
ಕರಿಬೇವು ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿಯುವುದರಿಂದ ವಿಶೇಷ ಸುವಾಸನೆ ಬರುತ್ತದೆ.
ಒಣ ರೂಪದಲ್ಲಿ ಬೇಕಿದ್ದರೆ ನೀರು ಸೇರಿಸದೆ ಮಸಾಲೆಯನ್ನು ಚಿಕನ್‌ಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಹುರಿಯಿರಿ.
ಈ ಚಿಲ್ಲಿ ಚಿಕನ್ ಅನ್ನು ಬಿಸಿ ಅನ್ನ, ತುಪ್ಪದ ಅನ್ನ, ಪಲಾವ್ ಅಥವಾ ಚಪಾತಿಯೊಂದಿಗೆ ಸವಿಯಬಹುದು.