
ಹುಡುಗ-ಹುಡುಗಿಯ ಕಥೆ ಬಿಡಿ, ಸದ್ಯದ ಪರಿಸ್ಥಿತಿಯಲ್ಲಿ ಯಾವ ವ್ಯಕ್ತಿಯೂ ತುಂಬಾ ಭಾವುಕವಾಗಿ ಮತ್ತೊಬ್ಬ ವ್ಯಕ್ತಿಯನ್ನು ಹಚ್ಚಿಕೊಳ್ಳಲಾರ. ನಮ್ಮ ಸುತ್ತಮುತ್ತಲಿನ ಸ್ವಾರ್ಥ, ದುರಾಸೆ, ಮೋಸ, ಅಪರಾಧಗಳನ್ನು ನೋಡಿ ನಮ್ಮ ಮನಸ್ಸು ಎಚ್ಚೆತ್ತುಕೊಂಡಿರುತ್ತದೆ. ಯಾರಾದರೂ ಪ್ರಮಾಣಿಕವಾಗಿ ಸ್ನೇಹಹಸ್ತ ಚಾಚಿದರೂ, ಮೊಸರಿನಲ್ಲಿ ಕಲ್ಲು ಹುಡುಕುವಂತೆ ಸುಖಾಸುಮ್ಮನೆ ಯಾರನ್ನೊ ಏಕೆ ಫ್ರೆಂಡ್ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸುತ್ತೇವೆ.
ಇಂಥಹ ಪರಿಸ್ಥಿತಿಯಲ್ಲಿ ಒಂದು ಗಂಡು-ಹೆಣ್ಣಿನ ನಡುವೆ, ಅಪ್ಪಟ ಸ್ನೇಹ ಹುಡುಕಲು ಸಾಧ್ಯವೆ? ಸಾಧ್ಯ ಇದೆ. ಅದರೆ ಅವುಗಳ ಸಂಖ್ಯೆ ತೀರಾ ಕಡಿಮೆ ಇರಬಹುದು. ಗಂಡು-ಹೆಣ್ಣಿನಲ್ಲಿ ಪರಸ್ಪರ ನಂಬಿಕೆ ಮತ್ತು ವಿಶ್ವಾಸವಿದ್ದರೆ ಕೊನೆತನಕ ಗೆಳಯರಾಗಿರಬಹುದು.
ಶಾಲಾ ದಿನಗಳಲ್ಲಿ ಆರಂಭವಾಗುವ ನಮ್ಮ ಸ್ನೇಹ ಅಪ್ಪಟವಾಗಿರುತ್ತದೆ. ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೆ ಅಲ್ಲಿ ಎರಡು ಮುಗ್ಧ ಮನಸುಗಳ ಬೆರೆಯುತ್ತವೆ. ಆದರೆ ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಪರಸ್ಪರ ಆಕರ್ಷಣೆಗೆ ಒಳಗಾಗುತ್ತೇವೆ. ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳುವುದು ಒಟ್ಟಿಗೆ ಅಡ್ಡಾಡುವುದು, ಇಬ್ಬರು ಗಿಫ್ಟ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು ಇವೆಲ್ಲಾ ನಡೆಯುತ್ತ ಸ್ನೇಹದ ಬಳ್ಳಿಯಲ್ಲಿ ಆತ್ಮೀಯತೆ ಬೆಳೆಯುತ್ತದೆ. ಅವರು ಕೆಲ ಕಾಲ ನಮ್ಮ ಕಣ್ಣಿಗೆ ಕಾಣದಿದ್ದರೆ ಚಡಪಡಿಕೆ ಶುರುವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರು ಪ್ರೀತಿ ಅಂದುಕೊಳ್ಳುತ್ತಾರೆ. ಆದರೆ ಅದು ಪ್ರೀತಿನೋ ಅಥವಾ ಗೆಳತನವೋ ಎಂಬುದನ್ನು ನಿರ್ಧರಿಸುವ ವಯಸ್ಸು ಅದಲ್ಲ. ಹೀಗಾಗಿ ಈ ದಿನಗಳಲ್ಲಿ ಗಂಡು-ಹೆಣ್ಣಿನ ಗೆಳೆತನ ಗಟ್ಟಿಯಾಗುವುದು ಬಹಳ ಅಪರೂಪ.
ಆದರೆ ವೃತ್ತಿ ಜೀವನದಲ್ಲಿ ಬೆಳೆಯುವ ಗೆಳೆತನ ಗಟ್ಟಿಯಾಗಿ ನಿಲ್ಲುವ ಸಾಧ್ಯತೆ ಹೆಚ್ಚು. ಈ ಹಂತದಲ್ಲಿ ನಾವು ನಮ್ಮ ಸಂಬಂಧದ ವ್ಯಾಪ್ತಿಯನ್ನು ನಿರ್ಧರಿಸಬಹುದು. ಯಾವ ಆಶಯಗಳಿಗೆ ನಮ್ಮ ಪರಿಚಯವಾಯ್ತೋ ಆ ಆಶಯಗಳಿಗೆ ಮಾತ್ರ ಸಂಬಂಧವನ್ನು ಸೀಮಿತಗೊಳಿಸುತ್ತವೇ ಮತ್ತು ಇಂಥಹ ಸಂಬಂಧಗಳು ದೀರ್ಘಕಾಲ ಬಾಳುತ್ತವೆ.
ಇನ್ನು ಮದುವೆಯ ನಂತರವೂ ನಮ್ಮ ಗೆಳೆತನವನ್ನು ಉಳಿಸಿಕೊಂಡು ಹೋಗುವುದು ಸ್ವಲ್ಪ ಕಷ್ಟ. ಇಲ್ಲಿಂದಾಚೆಗೆ ಇರೋದೆ ಸಂಬಂಧಗಳನ್ನು ನಿರ್ಧರಿಸೋ ನಿಜವಾದ ಹಂತ. ಇಲ್ಲಿ ನಾವು ಸ್ವಲ್ಪ ಯಾಮಾರಿದರೂ ಇಬ್ಬರ ದಾಂಪತ್ಯಗಳು ಮುರಿದು ಬೀಳುವ ಹಂತಕ್ಕೆ ಹೋಗುತ್ತದೆ. ಹೀಗಾಗಿ ಗೆಳಯ/ಗೆಳತಿಯೊಂದಿಗೆ ಅತಿಯಾತ ಸಲಿಗೆ, ಆತ್ಮೀಯತೆ ತೋರಿಸುವಾಗ ಎಚ್ಚರಿಕೆಯ ಹೆಜ್ಜೆಯಿಡಬೇಕು.
ಗಂಡು-ಹೆಣ್ಣಿನ ಗೆಳೆತನ ಕ್ಷಣಿಕ, ಹುಡುಗ-ಹುಡುಗನ ಹಾಗೂ ಹುಡುಗಿ-ಹುಡುಗಿಯ ನಡುವಿನ ಗೆಳೆತನ ಮಾತ್ರ ಶಾಶ್ವತ ಮತ್ತು ಗಂಡು-ಹೆಣ್ಣಿನ ನಡುವೆ ಬರೀ ಸ್ನೇಹ ನಿರಂತರವಾಗಿರಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಸಾಮಾನ್ಯವಾಗಿ ಕೇಳಿ ಬರುತ್ತವೆ. ಆದರೆ, ಇದನ್ನು ನಾವು ಸಂಪೂರ್ಣ ಸುಳ್ಳು ಅಂತ ಹೇಳಲು ಬರುವುದಿಲ್ಲ. ಎಷ್ಟೋ ಕಡೆ ಹುಡುಗರಿಗೆ ಹುಡುಗಿಯರೇ ಹೆಚ್ಚು ಸ್ನೇಹಿತರು ಮತ್ತು ಹುಡುಗಿಯರಿಗೆ ಹುಡುಗರೇ ಹೆಚ್ಚು ಸ್ನೇಹಿತರಿರುವುದನ್ನು ನಾವು ನೋಡಿದ್ದೇವೆ. ಸಾಮಾನ್ಯವಾಗಿ ಗಂಡು ಹೆಣ್ಣಿನ ಭಾವನೆಗಳನ್ನು, ಹೆಣ್ಣು, ಗಂಡಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಬೇರೆ ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ. ಆದರೆ ಹುಡುಗ ಹುಡುಗಿ ಸೇರಿದರೆ ಕೆಲವೊಂದು ಸಂದರ್ಭದಲ್ಲಿ ಸ್ನೇಹ ಪ್ರೇಮವಾಗಿ ಮಾರ್ಪಡುತ್ತದೆ. ಹಾಗೆಂದು ಎಲ್ಲಾ ಹುಡುಗ, ಹುಡುಗಿಯರು ಪ್ರೇಮಿಗಳಾಗಲು ಸಾಧ್ಯವಿಲ್ಲ. ಪ್ರೀತಿಯ ಮೊದಲ ಪರಿಚಯ ಆರಂಭವಾಗುವುದು ಸ್ನೇಹದಿಂದಲೇ ಆದರೂ ಅದು ನಮ್ಮ ವ್ಯಕ್ತಿತ್ವದ ಮೇಲೆ ನಿಂತಿರುತ್ತದೆ. ಗೆಳತನದಲ್ಲಿ ನಂಬಿಕೆ ಮುಖ್ಯ. ನಂಬಿಕೆ ಎನ್ನುವ ಪದ ಗಂಡು ಹೆಣ್ಣಿನ ನಡುವೆ ಬೇರೂರಿದರೆ ಸಾಕು ನಮ್ಮ ಸ್ನೇಹ ಕೊನೆತನಕ ಉಳಿಯುತ್ತದೆ.
- ಲಿಂಗರಾಜ್ ಬಡಿಗೇರ್
Advertisement