Warಗಿತ್ತಿಯರು

ಪರಿಚಯವಾಗಿ ಬಹಳ ಬೇಗ ಗೆಳತಿಯರಾಗುವ ಹುಡುಗಿಯರು, ಅಷ್ಟೇ ವೇಗದಲ್ಲಿ ಬೇರೆ ಬೇರೆಯಾಗುತ್ತಾರೆ. ಆದರೆ ಈ ರೀತಿ ದೂರವಾಗುವುದಾದರೂ ಏಕೆ?...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಎರಡು ಜಡೆ ಒಟ್ಟಿಗೆ ಸೇರಲ್ಲ ಎಂಬುದು ಗಾದೆ ಮಾತು. ಇದಕ್ಕೆ ಅಪವಾದಗಳು ಇರಬಹುದು. ಆದರೆ ಬಹುತೇಕ ಸಂದರ್ಭಗಳಲ್ಲಿ ಇದು ಸರಿ ಎನಿಸುತ್ತದೆ. ಇಬ್ಬರು ಗೆಳತಿಯರು ಪರಸ್ಪರ ಜಗಳವಾಡದೇ ಇದ್ದರೆ ಹುಬ್ಬೇರಿಸಿ ನೋಡುವವರಿದ್ದಾರೆ. ಅದ್ಯಾಕೋ ಗೊತ್ತಿಲ್ಲ ಹೆಣ್ಣು ಮಕ್ಕಳಿಬ್ಬರ ನಡುವಿನ ಸ್ನೇಹ ಎಷ್ಟೇ ಗಾಢವಾಗಿದ್ದರೂ ಪುಟ್ಟ ಪುಟ್ಟ ವಿಷ್ಯಗಳಿಂದಲೇ ಮನಸ್ತಾಪಗಳು ಬಂದು ಬಿಡುತ್ತವೆ. ಸ್ನೇಹ ಎಂಬ ಪದ ಕೇಳುವುದಕ್ಕೆ ಹೇಳುವುದಕ್ಕೆ ಎಷ್ಟು ಹಿತಕರವೋ ನಿಭಾಯಿಸುವುದಕ್ಕೂ ಅಷ್ಟೇ ಕಷ್ಟಕರ...
ಸ್ನೇಹ ಎಂಬ ಪದದ ಅರ್ಥ ತಿಳಿದಿರುವವರಿಗೆ ಅದು ಕಷ್ಟಕರವಾಗಿರುವುದಿಲ್ಲ. ಆದರೆ, ಸ್ನೇಹದ ನಿಜವಾದ ಅರ್ಥ ತಿಳಿಯದೇ ಇರುವವರು ಅದನ್ನು ನಿಭಾಯಿಸುವುದಕ್ಕೆ ಒದ್ದಾಡುವುದನ್ನು ನೋಡುವಾಗ ಸುಸ್ತೋ ಸುಸ್ತು.

ಸ್ನೇಹ ಎಂಬುದು ಬಾಂಧವ್ಯವನ್ನು ಮೀರಿಸಬಲ್ಲದು. ಆದರೆ ಇದನ್ನು ಉಳಿಸಿಕೊಳ್ಳಬೇಕಾದರೆ ಕೆಲವು ತ್ಯಾಗಗಳನ್ನು ಮಾಡಬೇಕಾಗುತ್ತದೆ. ಸ್ನೇಹ ಸಂಬಂಧಗಳಲ್ಲಿ  ಅಹಂ ಮತ್ತು ಅಸೂಯೆಗೆ ಜಾಗವಿರಬಾರದು. ಆದಾಗ್ಯೂ, ಗೆಳೆತನದ ವಿಷಯಕ್ಕೆ ಬಂದಾಗ ಹುಡುಗಿ-ಹುಡುಗಿಯರೇ ಬೇಗ ಗೆಳತಿಯರಾಗಿ ಬಿಡುತ್ತಾರೆ. ಆದರೆ, ಅದು ಹೆಚ್ಚಾಗಿ ಬಹಳ ದಿನಗಳು ಉಳಿಯುವುದಿಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದೇ. ಎಲ್ಲೋ ಕೆಲವರ ಸ್ನೇಹ ಮಾತ್ರ ಗಟ್ಟಿಯಾಗಿರುತ್ತವೆ ಹೊರತು, ಬಹಳಷ್ಟು ಸ್ನೇಹಿತೆಯರು ನಾವು ಆತ್ಮೀಯ ಗೆಳತಿಯರು ಎಂದು ಹೇಳುತ್ತಾರೇ ಹೊರತು ಅದು ಅವರ ಮನಸ್ಸಿನ ಮಾತುಗಳಾಗಿರುವುದಿಲ್ಲ.

ಪರಿಚಯವಾಗಿ ಬಹಳ ಬೇಗ ಗೆಳತಿಯರಾಗುವ ಹುಡುಗಿಯರು, ಅಷ್ಟೇ ವೇಗದಲ್ಲಿ ಬೇರೆ ಬೇರೆಯಾಗುತ್ತಾರೆ. ಆದರೆ ಈ ರೀತಿ ದೂರವಾಗುವುದಾದರೂ ಏಕೆ?  ಕಾರಣ ಅಸೂಯೆ. ಹೌದು, ಹುಡುಗಿಯರಲ್ಲಿ ಅಸೂಯೆ ಬಲುಬೇಗನೆ ಹುಟ್ಟಿಕೊಳ್ಳುತ್ತದೆ. ಹಾಗಂತ ಅವರಲ್ಲಿ ಅಸೂಯೆ ಹುಟ್ಟಿನಿಂದಲೇ ಇರುತ್ತದೆ ಎಂದಲ್ಲ. ತಮ್ಮ ಜಾಗಕ್ಕೆ ಇನ್ನೊಬ್ಬರು ಬಂದಾಗ ಅಥವಾ ನನಗಿಂತ ಇವಳು ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾಳೆ ಎಂದಾಗಲೇ ಈ ಅಸೂಯೆ ಉದ್ಭವಿಸುತ್ತದೆ.


ಅವಳಿಗೆ ಯಾಕೆ ಆದ್ಯತೆ?: ಸ್ನೇಹಿತೆಯರು ಹೆಚ್ಚಾಗಿ ಬೇರೆಯಾಗುವುದು ಒಂದೇ ಕಾರಣಕ್ಕೆ ಸ್ನೇಹಿತೆ ನನಗಿಂತ ಬೇರೆಯವರಿಗೆ ಹೆಚ್ಚು ಮಹತ್ವ ನೀಡುತ್ತಾಳೆ ಎಂಬುದಕ್ಕೆ. ಇದು ಸ್ನೇಹಿತೆಯರಿಬ್ಬರ ಪರಸ್ಪರ ಸ್ನೇಹ ಬಾಂಧವ್ಯಕ್ಕೆ ಮೊದಲ ಪೆಟ್ಟು. ಯಾರೊಬ್ಬರ ಸ್ನೇಹವೂ ಒಬ್ಬರ ಮೇಲೆಯೇ ಸೀಮಿತಗೊಂಡಿರುವುದಿಲ್ಲ. ಅವರವರ ಕಾರ್ಯಕ್ಷೇತ್ರ ವಿಸ್ತರಿಸಿದಂತೆ ಹೊಸ ಹೊಸ ಸ್ನೇಹಿತರು ಸಿಗುತ್ತಾರೆ. ಹೊಸ ಗೆಳತಿಗೆ ಹೆಚ್ಚು ಅವಕಾಶ ನೀಡುವ ಸಲುವಾಗಿ ತಮ್ಮಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಾಗ. ತನಗಿಂತ ಹೊಸದಾಗಿ ಬಂದವಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾಳೆ ಎಂಬ ಅನಿಸಿಕೆ ಇಬ್ಬರ ನಡುವಿನ ದೂರಕ್ಕೆ ಕಾರಣವಾಗುತ್ತದೆ.

ಇಬ್ಬರ ನಡುವೆ ಮತ್ತೊಬ್ಬ: ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬುದು ಮುಖ್ಯ. ಮದುವೆಯಾದ ಬಳಿಕ ಹುಡುಗಿಯರ ಮನೆತನ ಬದಲಾಗುತ್ತದೆ. ಹೊಸ ಮನೆ, ಹೊಸ ವಾತಾವರಣ ಅಪ್ಪ ಅಮ್ಮನ ಜಾಗಕ್ಕೆ ಅತ್ತೆ, ಮಾವ, ಅವರ ಪಾಲನೆ. ಹೊಸ ಜವಾಬ್ದಾರಿ ಹೀಗೆ ಬೇರೊಂದು ಪ್ರಪಂಚ ತೆರೆದುಕೊಂಡಾಗ ಗೆಳತಿಯರನ್ನು ಮರೆಯುವುದು ಸಾಮಾನ್ಯ. ತವರು ಮನೆಗೆ ಬರುವುದಕ್ಕೆ ಕಾಲಾವಕಾಶ ಸಿಗದಂತ ಪರಿಸ್ಥಿತಿ ಉದ್ಭವಿದಾಗ ಗೆಳತಿಯರನ್ನು ಭೇಟಿಯಾಗಲು ಸಾಧ್ಯವಾಗುವುದೂ ಇಲ್ಲ. ಅದೇ ವೇಳೆ ಇಬ್ಬರು ಗೆಳತಿಯರ ನಡುವೆ ಇನ್ನೊಬ್ಬ ಹುಡುಗ ಬಂದನೆಂದುಕೊಳ್ಳಿ. ಅಲ್ಲೊಂದು ಪುಟ್ಟ ಅಂತರ ಸೃಷ್ಟಿಯಾಗಿ ಬಿಡುತ್ತದೆ. ನೆಚ್ಚಿನ ಗೆಳತಿ ಬಾಯ್ ಫ್ರೆಂಡ್ ತೆಕ್ಕೆಗೆ ಬೀಳುತ್ತಿದ್ದಂತೆ ಅವಳನ್ಯಾಕೆ ಡಿಸ್ಟರ್ಬ್ ಮಾಡಲಿ ಎಂದು ದೂರ ಸರಿಯುವ ಗೆಳತಿಯರೂ ಇರ್ತಾರೆ. ಇದಲ್ಲದೆ ನನ್ನ ಹುಡುಗನ ಜತೆ ಅವಳ್ಯಾಕೆ ಅಷ್ಟು ಸಲುಗೆಯಿಂದ ಮಾತಾಡ್ತಾಳೆ ಎಂಬ ಚಿಕ್ಕ ಶಂಕೆಯೊಂದು ಮನದಲ್ಲಿ ಮೂಡಿದರೆ ಸಾಕು ಅಲ್ಲಿ ಗೆಳೆತನದಲ್ಲಿ ಬಿರುಕು ಬೀಳಲು ಶುರುವಾಗುತ್ತದೆ.

ನಂಬಿಕೆಯ ಹೆಣ್ಣೇ ಕೇಳು: ಹುಡುಗಿಯರು ತಂದೆ ತಾಯಿಗಳಿಗಿಂತ ಹೆಚ್ಚಾಗಿ ಗೆಳತಿಯ ಜತೆ ಕಷ್ಟ ಸುಖ, ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾರೆ. ಅವರ ಮೇಲೆ ನಂಬಿಕೆ ಇಟ್ಟು ಕೆಲವೊಂದು ಖಾಸಗಿ ವಿಚಾರಗಳನ್ನು ಹೇಳಿಕೊಳ್ಳುತ್ತೇವೆ. ಆ ನಂಬಿಕೆ ಹುಸಿ ಮಾಡಿ ಬೇರೆವರಿಗೆ ಇವಳ ಕಷ್ಟದ ವಿಷಯಗಳನ್ನು ಹೇಳಿಕೊಂಡು ಅಪಹಾಸ್ಯ ಮಾಡಿದಾಗ ನಂಬಿಕೆ ಕರಗುತ್ತದೆ. ಆಗ ಇಬ್ಬರ ಮಧ್ಯೆ ಸ್ನೇಹ ದೂರವಾಗಿ ದ್ವೇಷ ಹುಟ್ಟಿಕೊಳ್ಳುತ್ತದೆ.

ಅಸೂಯೆಯೆಂಬ ಬೆಂಕಿ: ಹುಡುಗಿಯರಲ್ಲಿ ಸೌಂದರ್ಯ ಪ್ರಜ್ಞೆ ಹೆಚ್ಚು. ತಾನು ಚೆನ್ನಾಗಿ ಕಾಣಬೇಕೆಂಬ ಹಂಬಲ ಗೆಳತಿಯರ ನಡುವೆ ಅಸೂಯೆಗೆ ಕಾರಣವಾಗುತ್ತದೆ. ಒಬ್ಬಳನ್ನು ಹೊಗಳಿದಾಗ ಮತ್ತೊಬ್ಬಳಿಗೆ ಸಹಜವಾಗಿಯೇ ಅಸೂಯೆ ಮೂಡುತ್ತದೆ. ಆಗ ವಿನಾಃ ಕಾರಣ ಕೋಪಿಸಿಕೊಳ್ಳುವುದು, ಕಾಲ್ಕೆರೆದು ಜಗಳ ಮಾಡಿ ಮುನಿಸಿಕೊಂಡು ಬೇಗ ದೂರವಾಗುತ್ತಾರೆ.

ದೂರಾವಾಗುವುದಕ್ಕೆ ಕಾರಣಗಳೂ ಹಲವಾರು. ಆದರೆ, ಸ್ನೇಹಿತೆ ಎಂಬುವವಳು ಸ್ನೇಹಿತೆಯೇ. ಅದಕ್ಕಿಂತ ಮೀರಿದ ಪದಗಳಿಲ್ಲ. ಅವಳಿಗಿಂತ ಬಲ್ಲವಳು ಯಾರು ಇರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಮನಸ್ತಾಪ ಮೂಡಿ ದೂರವಾಗುತ್ತಾರೆಯೇ ಹೊರತು, ಮನಸ್ಸಿನಿಂದಲ್ಲ. ಎಷ್ಟೇ ವರ್ಷಗಳ ಬಳಿಕ ಭೇಟಿಯಾದರೂ ಅಷ್ಟೇ, ಅಷ್ಟೇ ಸಲುಗೆ ಪ್ರೀತಿ ಸ್ನೇಹದಿಂದಿರುತ್ತಾರೆ. ಮತ್ತೆ ಬಾಲ್ಯ,ಯೌವನ ಸೇರಿದಂತೆ ನಮ್ಮೊಳಗಿನ ವ್ಯಕ್ತಿತ್ವವನ್ನು ಹೊರತರುವುದೇ ಸ್ನೇಹಿತೆ. ಕೋಪದಲ್ಲಿ ಕಿರುಚಾಡುತ್ತಾಳೆ ಹೊರತು ದ್ವೇಷ ಸಾಧಿಸುವುದಿಲ್ಲ. ನಿಮ್ಮ ವ್ಯಕ್ತಿತ್ವದ ಶಿಲ್ಪಿ ಸ್ನೇಹಿತೆಯೇ, ಒಂದು ಪಟ್ಟು ಹೆಚ್ಚಾಗಿ ತಿಳಿದಿರುವವಳು ಸ್ನೇಹಿತೆಯೇ. ಅವಳ ಮುನಿಸು, ಅವಳ ದ್ವೇಷ, ಅವಳ ಕೋಪ, ಅವಳ ಆಕ್ರೋಶ, ಅವಳ ವ್ಯಂಗ್ಯ ಎಲ್ಲವೂ ಸಲುಗೆಯಿಂದ ಕೂಡಿರುತ್ತದೆ. ಆ ಸಲುಗೆಗೆ ಹತ್ತಿರವಾದವಳು ಸ್ನೇಹಿತೆ. ಆ ಸ್ನೇಹಿತೆ ಎಷ್ಟೇ ದೂರದಲ್ಲಿರಲಿ ನಮ್ಮನ್ನು ಒಂದು ಬಾರಿ ಪ್ರೀತಿಯಿಂದ ನೆನೆದರೆ ಸಾಕು, ಅದೇ ಗೆಳೆತನದ ಸಾರ್ಥಕ ಕ್ಷಣ.

- ಮೈನಾಶ್ರೀ.ಸಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com