ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ

ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ...
ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ
ಸ್ವಾತಂತ್ರ್ಯ ಸಂಗ್ರಾಮದ ಐಕ್ಯತೆಯ ಪ್ರತೀಕ ಗಣೇಶ ಚತುರ್ಥಿ

ಆಷಾಢ ಹೊರಳಿತು. ಇನ್ನು ಹಬ್ಬಗಳ ಸಾಲು ಸಾಲು ಆಚರಣೆಗಳು. ಕೃಷ್ಣಾಷ್ಟಮಿ ಮುಗಿದು ಇದೀಗ ಗಣೇಶ ಚತುರ್ಥಿ ನಮ್ಮೆಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ಪ್ರತೀ ವರ್ಷದಂತೆ ಈ  ಬಾರಿಯೂ ಕೂಡ ಹಬ್ಬದ ಸಡಗರಕ್ಕೆ  ಒಂದೆಡೆಯಿಂದ ತಳಿರು ತೋರಣದ ಬಿರುಸು ಪ್ರಾರಂಭಗೊಂಡಿದ್ದರೆ, ಮತ್ತೊಂದೆಡೆಯಿಂದ ತಿಂಗಳುಗಟ್ಟಲೆಯ ಪೂಜೆ ಸ್ವೀಕರಿಸಲು ಗಣೇಶನ  ವಿಗ್ರಹ ಕೂಡ ಭರದಿಂದ ಸಿದ್ಧಗೊಳ್ಳುತ್ತಿದೆ. ಗಣೇಶ ಹಬ್ಬದ ವಿಶೇಷತೆಯೇ ಅದು. ಎಲ್ಲಾ ಹಬ್ಬಗಳ ಆಚರಣೆ ಹೆಚ್ಚೆಂದರೆ ಮೂರ್ನಾಲ್ಕು ದಿನಗಳಿದ್ದರೆ ಈ ಗಣೇಶ ಹಬ್ಬವು ಕೆಲವೆಡೆ  ಬರೋಬ್ಬರಿ ಒಂದು ತಿಂಗಳವರೆಗೂ ಚಾಲ್ತಿಯಲ್ಲಿರುತ್ತದೆ. ಮಣ್ಣಿನ ಗಣಪನಿಗೆ ಅಲಂಕಾರ ಮಾಡಿ ಅದರ ಮುಂದೆ ನಮ್ಮೆಲ್ಲರ ತಾಪತ್ರಯಗಳನ್ನು ತಿಳಿಸಿ ಮನಸ್ಸು ಹಗುರಾಗಿಸಿ ಕೊನೆಗೆ  ಆತನನ್ನು ನೀರಲ್ಲಿ ಲೀನಗೊಳಿಸುವುದು ಗಣೇಶ ಹಬ್ಬದ ವೈಶಿಷ್ಟ್ಯ.

ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಹುಟ್ಟಿ ಬೆಳೆದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಚದುರಿ ಹೋಗಿದ್ದ ಅಂದಿನ  ಅನಕ್ಷರಸ್ಥ ಸಮಾಜದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು ಒಂದೇ ವೇದಿಕೆಯಡಿ ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಜನರೂ ಅಷ್ಟೇ.  ತಿಲಕರ ಕರೆಗೆ ಜಾತಿ-ಮತ ಬೇಧವಿಲ್ಲದೆ ಬಹುಬೇಗನೆ ಸ್ಪಂದಿಸಿದರು. ದೇಶಾದ್ಯಂತ ಭಕ್ತಿಯ ಪ್ರವಾಹ ಹರಿಯುವುದರೊಂದಿಗೆ ಬ್ರಿಟಿಷರಿಗೆ ನಮ್ಮ ಏಕತೆಯ ಬಿಸಿಯನ್ನೂ ಮುಟ್ಟಿಸಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶನ ಹಬ್ಬ ಕೇವಲ ಕುಟುಂಬದ ಆಚರಣೆಯಾಗಿತ್ತು. ಮನೆ-ಮನೆಗಳಲ್ಲಿ ಮಾತ್ರ ಆಚರಣೆಯಲ್ಲಿದ್ದ ಗಣೇಶೋತ್ಸವವನ್ನು ಲೋಕಮಾನ್ಯ ಬಾಲಗಂಗಾಧರ  ತಿಲಕರು ಜನರಲ್ಲಿನ ಸ್ವಾತಂತ್ರ್ಯದ ಕಿಚ್ಚನ್ನು ಹೊರಗೆಡವುವ ಸಾಧನವಾಗಿ ಬಳಸಿಕೊಂಡರು. 1892ರಲ್ಲಿ ಮಹಾರಾಷ್ಟ್ರದಲ್ಲಿ ಬಾವ್ ಸಾಹೆಬ್ ಲಕ್ಷ್ಮಣ್ ಜವೇಲ್ ಅವರು ಪ್ರಪ್ರಥಮ  ಸಾರ್ವಜನಿಕ ಗಣೇಶೋತ್ಸವನ್ನು ಆಚರಣೆ ಮಾಡಿದರಾದರೂ, 1893ರಲ್ಲಿ  ತಿಲಕರು ಅದಕ್ಕೆ ಸಂಪೂರ್ಣ ಸಾರ್ವಜನಿಕ ಸ್ವರೂಪ ನೀಡಿದರು. ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ  ಗಣೇಶೋತ್ಸವದ ಪರಿಕಲ್ಪನೆ ಕುರಿತು ಬರೆದಿದ್ದ ತಿಲಕರು, 1894ರಲ್ಲಿ ಪುಣೆಯ ಕೇಸರಿ ವಾಡದಲ್ಲಿ ಪ್ರಪ್ರಥಮ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು.

ಗಣೇಶ ಚತುರ್ಥಿಯ ಸಾಂಸ್ಕೃತಿಕ ಮಹತ್ವವನ್ನು ಅರಿತಿದ್ದ ಲೋಕಮಾನ್ಯ ತಿಲಕರು, ಬ್ರಾಹ್ಮಣರು ಮತ್ತು ಬ್ರಾಹ್ಮಣೇತರರ ನಡುವಿನ ಅಂತರವನ್ನು ತುಂಬಲು, ಅವರ ನಡುವೆ  ಕೆಳಹಂತದಲ್ಲಿ ಐಕ್ಯತೆ ಮ‌ೂಡಿಸುವುದಕ್ಕೆ ಸೂಕ್ತ ಸಂದರ್ಭವಾಗಿ ಗಣೇಶೋತ್ಸವದ ಆಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಸಮರ್ಪಕವಾಗಿ ಬಳಸಿಕೊಂಡರು. ಆರಂಭದಲ್ಲಿ ಇದು  ಜಾತಿ-ಜಾತಿಗಳ ನಡುವಿನ ಏಕತೆಯ ಪ್ರತೀಕದಂತೆ ಕಂಡು ಬಂದರೂ ಕ್ರಮೇಣ, ಬ್ರಿಟೀಷ್ ದುರಾಡಳಿತದ ವಿರುದ್ಧ ತಿಲಕರು ಆರಂಭಿಸಿದ ಪರೋಕ್ಷ ಹೋರಾಟ ಎಂಬುದು  ಅರ್ಥವಾಯಿತು. ತಿಲಕರು ಬ್ರಿಟಿಷರ ವಿರುದ್ಧ ಭಾರತದ ಪ್ರತಿಭಟನೆಗೆ ಗಣೇಶನನ್ನು ಕೇಂದ್ರ ಬಿಂದುವಾಗಿ ಬಳಸಿಕೊಂಡರು. ಏಕೆಂದರೆ ಗಣೇಶ ಪ್ರತಿಯೊಬ್ಬರ ಪಾಲಿಗೂ  ದೇವಸ್ವರೂಪಿಯಾಗಿದ್ದ.

ಮಹಾರಾಷ್ಟ್ರದಲ್ಲಿ ಪೇಶ್ವೆ ಆಡಳಿತದಲ್ಲಿ ಮುಖ್ಯ ಹಬ್ಬವಾಗಿದ್ದ ಗಣೇಶೋತ್ಸವ, ಸ್ವರಾಜ್ ಆಂದೋಲನದ ಸಂದರ್ಭದಲ್ಲಿ ಸಂಘಟಿತ ಸ್ವರೂಪ ಪಡೆಯಿತು. ಗಣೇಶನ ಬೃಹತ್ ವಿಗ್ರಹಗಳನ್ನು  ಪ್ರತಿಷ್ಠಾಪಿಸಿ 10ನೇ ದಿನ ಎಲ್ಲ ವಿಗ್ರಹಗಳನ್ನು ವಿಸರ್ಜನೆ ಮಾಡುವ ಪ್ರಕ್ರಿಯೆಯನ್ನು ತಿಲಕರು ಆರಂಭಿಸಿದರು. ನೃತ್ಯ, ನಾಟಕಗಳು, ಕವಿತೆ ವಾಚನ, ಸಂಗೀತ ಗೋಷ್ಠಿಗಳು,  ಚರ್ಚಾಗೋಷ್ಠಿಗಳು ಮುಂತಾದವುಗಳ ರೂಪದಲ್ಲಿ ಗಣೇಶೋತ್ಸವವು ಸಮುದಾಯದ ಪಾಲ್ಗೊಳ್ಳುವಿಕೆಗೆ ನೆರವಾಯಿತು. ಜನರ ಮೇಲೆ ನಿಯಂತ್ರಣ ಹೇರಲು ಬ್ರಿಟಿಷ್ ಆಡಳಿತವು  ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಬಹಿಷ್ಕರಿಸಿದ ಸಂದರ್ಭದಲ್ಲಿ ಗಣೇಶೋತ್ಸವವು ಎಲ್ಲಾ ಜಾತಿ, ಸಮುದಾಯಗಳು ಒಂದು ಕಡೆ ಕಲೆಯುವ ತಾಣವಾಯಿತು.

ಬ್ರಿಟೀಷ್ ದಾಳಿಗೆ ಹೆದರಿ ಅರ್ಧ ದಿನಕ್ಕೇ ಗಣೇಶ ವಿಸರ್ಜನೆ
ಇನ್ನು ಬ್ರಿಟೀಶ್ ಕಾಲದ ಕಹಿ ನೆನಪುಗಳು ಹೇಗಿವೆ ಎಂದರೆ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಿಲಕರು ಆರಂಭಿಸಿದ್ದ ಗಣೇಶೋತ್ಸವವನ್ನು ಅದೇ ಕಾರಣದಿಂದಾಗಿ ಅರ್ಧ ದಿನಕ್ಕೆ  ಮೊಟಕುಗೊಳಿಸಿದ ಘಟನೆಯೂ ಕೂಡ ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅದೂ ಕೂಡ ನಮ್ಮ ಕರ್ನಾಟಕದಲ್ಲಿ. ಕರ್ನಾಟಕದ ಒಂದು ಮೂಲೆಯಲ್ಲಿ ಇಂದಿಗೂ ಗಣೇಶ ವಿಗ್ರಹವನ್ನು  ಕೇವಲ ಅರ್ಧ ದಿನಕ್ಕೇ ವಿಸರ್ಜನೆ ಮಾಡಲಾಗುತ್ತಿದೆ. ಸಾಮಾನ್ಯವಾಗಿ ಹುಬ್ಬಳ್ಳಿಯ ಗಣೇಶೋತ್ಸವ ಎಲ್ಲರಿಗೂ ಚಿರಪರಿಚಿತವೇ. ತಿಂಗಳು ಗಟ್ಟಲೆ ಇಲ್ಲಿ ಗಣೇಶೋತ್ಸವ ನಡೆಯುತ್ತದೆ.  ಆದರೆ ಇಂತಹ ಹುಬ್ಬಳ್ಳಿಯಲ್ಲಿ ಕಲಘಟಗಿ ತಾಲೂಕಿನ ಭೋಗೇನಾಗರಕೊಪ್ಪ ಗ್ರಾಮದಲ್ಲಿ ಮಾತ್ರ ಅರ್ಧದಿನ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಭೋಗೇನಾಗರಕೊಪ್ಪದ ದೇಶಕುಲಕರ್ಣಿ ವಾಡೆಯಲ್ಲಿ ಗಣೇಶೋತ್ಸವದ ಬೆಳಗ್ಗೆ ಪ್ರತಿಷ್ಠಾಪನೆಗೊಳ್ಳುವ ಗಣೇಶನನ್ನು ಅದೇ ದಿನ ಮಧ್ಯಾಹ್ನ ವಿಸರ್ಜಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ  ಕಲಘಟಗಿ ಪ್ರದೇಶದಲ್ಲಿ ತೀವ್ರ ಬರಗಾಲ ಆವರಿಸಿದ್ದ ಸಂದರ್ಭದಲ್ಲಿ ಸ್ಥಳೀಯ ಬ್ರಿಟೀಷ್ ಆಡಳಿತ ಉಪ್ಪಿಗೂ ಅಧಿಕ ತೆರಿಗೆ ವಿಧಿಸಿತ್ತು. ಹೀಗಾಗಿ ಅಲ್ಲಿನ ಜನರು ಕಂದಾಯ ಪಾವತಿ  ಮಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ವಿಚಾರವಾಗಿ ಭೋಗೇನಾಗರಕೊಪ್ಪ ದೇಸಾಯಿ ಹಾಗೂ ಬ್ರಿಟೀಷರ ಮಧ್ಯೆ ಭಾರೀ ವಾಗ್ವಾದವಾಗಿತ್ತು. ಇದೇ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿಯಾಗಿದ್ದ  ಲಾರ್ಡ್ ಡಾಲ್ ಹೌಸಿ ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಕಾಯ್ದೆಗೆ ದೇಸಾಯಿ ಸಂಸ್ಥಾನವನ್ನು ಒಳಪಡಿಸಲು ಮುಂದಾದಾಗ ವಿರೂಪಾಕ್ಷ ದೇಸಾಯಿ ಎಂಬುವವರು ಬ್ರಿಟೀಷರ ವಿರುದ್ಧ  ಚಳುವಳಿ ಆರಂಭಿಸಿದರು. ಅದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ ಆಗಮಿಸಿದ್ದ ಲೋಕಮಾನ್ಯ ಬಾಲಗಂಗಾಧರ ತಿಲಕರು ಗಣೇಶ ಚುತುರ್ಥಿ ಮುಂದಿಟ್ಟುಕೊಂಡು ಜನರಲ್ಲಿ ಐಕ್ಯತೆ ಮೂಡಿಸುವ  ನಿಟ್ಟಿನಲ್ಲಿ ಹೋರಾಡುತ್ತಿದ್ದರು. ಅವರ ಕರೆಗೆ ಅನುಗುಣವಾಗಿ ಮೊದಲ ವರ್ಷದ ಆಚರಣೆ 5 ದಿನ ವಿಜೃಂಭಣೆಯಿಂದ ನಡೆದಿತ್ತು. ಜನರು ಕೂಡ ಒಗ್ಗಟ್ಟಿನ ಮಂತ್ರಿ ಜಪಿಸುವುದರೊಂದಿಗೆ  ಬ್ರಿಟೀಷ್ ದುರಾಡಳಿತದ ವಿರುದ್ಧ ಕ್ರಮೇಣ ದಂಗೆದಿದ್ದರು.

ಇದು ಬ್ರಿಟೀಷ್ ಅಧಿಕಾರಿಗಳ ಕೈಕೈ ಹಿಸುಕಿಕೊಳ್ಳುವಂತೆ ಮಾಡಿತ್ತು. ಹೀಗಾಗಿ ಗಣೇಶೋತ್ಸವ ನಡೆಯುತ್ತಿದ್ದ ತಾಲೂಕಿಗೆ ಬ್ರಿಟೀಷ್ ಸೈನಿಕರನ್ನು ನುಗ್ಗಿಸುವ ಕುರಿತು ಬ್ರಿಟೀಷ್  ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದರು. ಈ ವಿಚಾರ ತಿಳಿದ ಗ್ರಾಮಸ್ಥರು ಗಣೇಶ ಮೂರ್ತಿಗೆ ಯಾವುದೇ ಧಕ್ಕೆಯಾಗಬಾರದು ಎಂದು ನಿರ್ಧರಿಸಿ ಅಂದೇ ಮಧ್ಯಾಹ್ನದ ಹೊತ್ತಿಗೇ ಗ್ರಾಮದ  ಹುಡೇದ ಬಾವಿಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು. ಅಂದಿನಿಂದ ಇಲ್ಲಿ ಪ್ರತೀ ವರ್ಷ ಅರ್ಧ ದಿನ ಮಾತ್ರ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಬೆಳಗ್ಗೆ  ಮೂರ್ತಿಯನ್ನು ಪ್ರತಿಷ್ಠಾಪಿಸಿ ಮಧ್ಯಾಹ್ನ ಊಟಕ್ಕೂ ಮೊದಲು ವಿಸರ್ಜಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com